ಕಿರಿದೆಂದು ನಿರ್ಲಕ್ಷಿಸದಿರಿ

ಕಿರಿದೆಂದು ನಿರ್ಲಕ್ಷಿಸದಿರಿ

ಇತ್ತೀಚೆಗೆ ನನಗೆ ಆತ್ಮೀಯರೊಬ್ಬರು ಜಾಲ ಬಂಧದ ಮೂಲಕ ಒಂದು ವೀಡಿಯೋವನ್ನು ಕಳುಹಿಸಿದ್ದರು. ನಮ್ಮ ದೇಶದ ಘಟನೆಯದಲ್ಲ. ಯಾಕೋ ನೋಡುವ ಆಸಕ್ತಿಯಾಯಿತು. ವೀಡಿಯೋವನ್ನು ನೋಡ ನೋಡುತ್ತಿದ್ದಂತೆಯೇ ಕುತೂಹಲ ಹೆಚ್ಚುತ್ತಾ ಹೋಯಿತು. ಪೂರ್ತಿ ವೀಡಿಯೋ ನೋಡಿ ಮುಗಿಯಿತು.

ವೀಡಿಯೋದ ಚಿತ್ರಣ ಹೀಗಿದೆ. ನೀಳನೆಯ ಹಾವೊಂದು ವಿದ್ಯುತ್ ಕಂಬವನ್ನೇರಿ ವಿದ್ಯುತ್ ತಂತಿಯನ್ನು ದಾಟಿ ಕಂಬದ ತುದಿಯಲ್ಲಿ ಜೇಡನೊಂದು ಕಟ್ಟಿದ್ದ ಬಲೆಯತ್ತ ಹೋಗುತ್ತಿತ್ತು. ಚಿಕ್ಕ ಜೇಡ! ಅದೂ ಆಹಾರದ ಹೊಂಚಿನಲ್ಲಿತ್ತು. ಹಾವಿಗೂ ಹಸಿವೆಯಾಗಿರಲೇ ಬೇಕು. ಆಹಾರಕ್ಕಾಗಿಯೇ ಅದು ಕಂಬವೇರಿದ್ದು ಮತ್ತು ಜೇಡನನ್ನ ತಿನ್ನಲೇ ಬೇಕೆಂಬುದು ಅದರ ಉದ್ದೇಶವೂ ಆಗಿತ್ತು. ಹಾವು ಬಲೆಯೊಳಗೆ ಪ್ರವೇಶಿಸುತ್ತಿದ್ದಂತೆ ಆಹಾರ ಬೇಟೆಯಲ್ಲಿರುವ ಜೇಡ ಸಹಜವಾಗಿಯೇ ಹಾವಿನ ಮೇಲೆರಗಿತು. ಹಾವನ್ನು ಕೊಲ್ಲಲು ಜೇಡ, ಜೇಡನನ್ನು ಕೊಲ್ಲಲು ಹಾವು ಹೋರಾಡುತ್ತಲೇ ಇತ್ತು. ಕಥೆಯ ರೋಚಕ ಕೊನೆಯೇ ನನ್ನನ್ನು ಬೆಚ್ಚಿ ಬೀಳಿಸಿತು. ಹಾವು ಜೇಡನಿಂದ ಕೊಲ್ಲಲ್ಪಟ್ಟಿತು. ಹೊರನೋಟಕ್ಕೆ ಇಲ್ಲಿ ಕಾಣುವುದು ಹಿಂಸೆ. ಅದೂ ಕೊಲೆ ಮಾಡುವ ರೀತಿಯ ಹೋರಾಟ. ಕೊನೆಗೆ ಬಲಿಷ್ಠವಾದ ಹಾವಿನ ಸಾವು. ಕಥೆಯೊಳಗೆ ಮತ್ತೂ ಇಳಿದೆ. ನನಗೊಂದು ಜೀವನ ಸಂದೇಶ ಕಥೆಯೊಳಗೆ ಕಾಣಿಸಿತು. ಕಿರಿದೆಂದು ಯಾರನ್ನೂ ಯಾವುದನ್ನೂ ನಿರ್ಲಕ್ಷಿಸಬಾರದು. ಉಳಿಸುವ ಸಾಯಿಸುವ ತಾಕತ್ತು ಕಿರಿದಾದುವುಗಳಿಗೂ ಇದೆ. ಇರುವೆಯೊಂದು ಆನೆಯನ್ನೇ ಉರುಳಿಸಬಲ್ಲದಲ್ಲವೇ? ಕಿರಿದರ ಜಾಣತನ ಹಿರಿದಾದುದನ್ನೂ ಪಂಜರಕ್ಕೆ ಬೀಳಿಸಬಹುದು ಅಥವಾ ಸೋಲಿಸ ಬಹುದು. 

ಹಿರಿಯರ ಆಸ್ತಿಯನ್ನು ಪಾಲು ಮಾಡಲಿತ್ತು. ಕುಟುಂಬದೊಳಗಿನ ಅತ್ಯಂತ ವಿಶ್ವಾಸಿ ಮತ್ತು ಬುದ್ಧಿವಂತ ಕಿರಿಯನೊಬ್ಬನಿಗೆ ಆಸ್ತಿಯನ್ನು ಪಾಲು ಪಟ್ಟಿಗೆ ದಾಖಲೆ ಸಿದ್ಧಗೊಳಿಸಲು ಹಿರಿಯರು ಸೂಚಿಸಿದರು. ಆ ಆಸ್ತಿಯ ಒಟ್ಟು ವಿಸ್ತೀರ್ಣ ಒಂಭತ್ತು ಎಕರೆಯಿತ್ತು. ಭೂ ಹಂಚಿಕೆ ದಾಖಲೆಗಳ ನೋಂದಣಿಗೆ ಪೂರ್ವಭಾವಿಯಾಗಿ ಬರವಣಿಗೆದಾರರಿಗೆ ದಾಖಲೆ ಹೇಗಿರಬೇಕೆಂದು ಕರಡು ಬರೆದು ಮೇಲೆ ಹೇಳಿದ “ಕಿರಿಯ” ಸಿದ್ಧಗೊಳಿಸಿದ. ತನಗೆ ದಾಖಲೆ ಸಿದ್ಧಗೊಳಿಸಲು ಜವಾಬ್ದಾರಿ ನೀಡಿದ ಹಿರಿಯರಿಗೆ ಕರಡನ್ನೂ ಕಳಿಸಿದ. ಹಿರಿಯರು ನೋಡಿದರು, ಓದಿದರು. ಸರಿಯಿದೆಯೆಂದನಿಸಿತು. ಸ್ವಲ್ಪ ಸಮಯದ ನಂತರ ಮತ್ತೊಮ್ಮೆ ಓದಿ ಬಿಡುವೆವೆಂದು ಬಹಳ ಜಾಗರೂಕವಾಗಿ ನಿಧಾನವಾಗಿ ಓದಿದರು. ಅದರಲ್ಲಿ ಬರೆಯಲಾಗಿದ್ದುದು ಹೀಗೆ, “ಜಮೀನನ್ನು ಸಮನಾದ ಒಂಭತ್ತು ಭಾಗ ಮಾಡಬೇಕು. ಒಂಭತ್ತರಲ್ಲಿ ಒಂದು ಭಾಗವನ್ನು ಗಂಡು ಮಕ್ಕಳಿಗೂ ಉಳಿದ ಭಾಗವನ್ನು ಒಬ್ಬಳೇ ಮಗಳಿಗೆ ನೀಡುವುದಕ್ಕೂ ನಮ್ಮ ಸಹಮತವಿದೆ.” ಎಂದಿತ್ತು. ಮೊದಲು ಓದಿ ಸರಿಯಿದೆಯೆಂಬ ಅಭಿಪ್ರಾಯ ತಳೆದಿದ್ದ ಹಿರಿಯರಿಗೆ ಆಕಾಶವೇ ಮೈಮೇಲೆ ಬಿದ್ದಂತಾಯಿತು. ಒಂಭತ್ತು ಮಂದಿಗೆ ಒಂಭತ್ತರಲ್ಲಿ ಒಂದು ಭಾಗದ ಅವಕಾಶ ಮಾತ್ರವನ್ನು ನೀಡಿದ ದಾಖಲೆಯ ಕರಡಿನ ದೋಷದ ಅರಿವಾಗಿಹೋಯಿತು.

ಒಬ್ಬ ಸಾಲಕ್ಕೆ ಜಾಮೀನು ನೀಡಿದ. ಸಾಲಗಾರನೇ ಸಾಲವನ್ನು ಮರಳಿಸುತ್ತಾನೆ. ಅವನಿಗೆ ಮರಳಿಸಲಾಗದಿದ್ದರೆ ನಾನೇನು ಮರಳಿಸುತ್ತೇನೆ ಎಂದು ಬರೆದಿದ್ದ. ಸಾಲಗಾರ ಸಾಲ ಮರುಪಾವತಿಸಲಿಲ್ಲ. ಜಾಮೀನುದಾರನ ಮೇಲೆ ವ್ಯಾಜ್ಯ ಹೂಡಿದರೆ ಅವನ ವಕೀಲರು ಈ ಜಾಮೀನುದಾರ ಸಾಲವನ್ನು ಮರಳಿಸುವ ವಾಗ್ದಾನ ಮಾಡಿಲ್ಲ. ನಾನು ಮರಳಿಸಲು ಹೇಗೆ ಸಾಧ್ಯ ಎಂಬರ್ಥದ ಒಕ್ಕಣೆ ಕರಾರಿನಲ್ಲಿದೆಯಲ್ಲ! ಎನ್ನ ಬೇಕೇ. ಅಕ್ಷರ ಸಣ್ಣದು. “ನು” ಹೇಗೆ ಎಲ್ಲವನ್ನೂ ಕಬಳಿಸಿಬಿಟ್ಟಿತು ನೋಡಿ! ಆದುದರಿಂದ ಕಿರಿಯದೆಂದು ನಿರ್ಲಕ್ಷಿಸದಿರಿ. ಸರಿಯಾಗಿ ಕಣ್ಣು ಬಿಟ್ಟು ನೋಡದೇ ನಿರ್ಧಾರಕ್ಕೆ ಬಂದರೆ ಆಪತ್ತು ಖಚಿತ.

-ರಮೇಶ ಎಂ. ಬಾಯಾರು, ಬಂಟ್ವಾಳ 

ಚಿತ್ರ ಕೃಪೆ: ಇಂಟರ್ನೆಟ್ ತಾಣ