ಕಿವುಡರಾದರೆ...

ಕಿವುಡರಾದರೆ...

ಎರಡು ಪಾರಿವಾಳಗಳು ಮತ್ತು ಒಂದು ಕಪ್ಪೆ ಬಹಳ ಆತ್ಮೀಯ ಗೆಳೆಯರಾಗಿದ್ದುವು. “A friend in need is a friend indeed” ಎನ್ನುವ ಮಾತಿಗೆ ಅರ್ಥ ನೀಡುವ ಗೆಳೆತನವದು. ಪಾರಿವಾಳಗಳು ಹಾರಬಲ್ಲುವು. ಕಪ್ಪೆಗೆ ಜಿಗಿತ ಮಾತ್ರ ಗೊತ್ತು. ತನಗೂ ಹಾರಬೇಕೆಂಬ ಬಯಕೆಯಾಗಿದೆ ಎಂದು ಕಪ್ಪೆಯು ಆಗಾಗ ಸ್ನೇಹಿತರಾದ ಪಾರಿವಾಳಗಳೊಡನೆ ಹೇಳುತ್ತಲೇ ಇತ್ತು. ಒಂದು ದಿನ ಪಾರಿವಾಳಗಳು, “ನೀನು ನಾವು ಹೇಳಿದಂತೆ ಕೇಳುವೆಯಾದರೆ ಎತ್ತರದಲ್ಲಿ ಹಾರಬಹುದು” ಎಂದು ಹೇಳಿದುವು. “ನೀವು ಹೇಳಿದಂತೆ ಕೇಳುವೆ” ಎಂದು ಕಪ್ಪೆ ಪಾರಿವಾಳಗಳೊಡನೆ ಒಪ್ಪಿತು.

ಪಾರಿವಾಳಗಳು ಒಂದಡಿ ಉದ್ದದ ಗಟ್ಟಿಯಾದ, ಕೋಲೊಂದನ್ನು ತಂದುವು. ಆ ಕೋಲನ್ನು ಮಧ್ಯ ಭಾಗದಲ್ಲಿ ಕಚ್ಚಿ ಹಿಡಿಯಲು ಕಪ್ಪೆಗೆ ತಿಳಿಸಿದುವು. ಎತ್ತರದಲ್ಲಿ ಹಾರುವಾಗ ನೀನು ಬಾಯಿ ಬಿಟ್ಟರೆ ಕೆಳಗೆ ಬಿದ್ದು ಸಾಯುವೆ, ಹಿಂದೆ ಆಮೆಗಾದ ಗತಿ ನಿನಗೂ ಬರಬಹುದು, ಹುಷಾರು! ಎಂದು ಪಾರಿವಾಳಗಳು ಎಚ್ಚರಿಸಿದುವು. ನಿಗದಿಯಾದಂತೆ ಹಾರಾಟ ಆರಂಭವಾಯಿತು. ಎತ್ತರದಲ್ಲಿ ಹಾರುವ ಕಪ್ಪೆಯನ್ನು ನೋಡಿದ ಪೋಕರಿಗಳಿಗೆ ಆಮೆಯ ಕಥೆ ನೆನಪಾಯಿತು. ಕಪ್ಪೆಯನ್ನು ಮೂದಲಿಸಿದುವು. ಪಾರಿವಾಳಗಳ ಬಾಯಿಯಲ್ಲಿರುವ ಕಡ್ಡಿಯಿಂದ ಕಪ್ಪೆಯ ಬಾಯಿಯ ಹಿಡಿತ ತಪ್ಪಿಸಲು ಬೇರೆ ಬೇರೆ ಗೇಲಿಯ ಮಾತುಗಳನ್ನು ಆಡತೊಡಗಿದರು. ಆದರೆ ಕಪ್ಪೆ ಅಲುಗಲಿಲ್ಲ, ಬಾಯಿ ಬಿಡಲಿಲ್ಲ, ಹಾರಾಟ ಮುಗಿದು ಧರೆಗಿಳಿದ ಕಪ್ಪೆಗೆ ಬಹಳ ಖುಷಿಯಾಯಿತು. ಚುಡಾಯಿಸಿದ್ದ ಪೋಕರಿಗಳು ಕಪ್ಪೆಯೊಡನೆ ಮಾತಿಗಿಳಿದರು. “ನಿನಗೆ ನಮ್ಮ ಬೈಗಳಿಂದ ಕೋಪ ಬರಲಿಲ್ಲವೇ?” ಎಂದು ಪ್ರಶ್ನಿಸಿದುವು. ಆದರೆ ಕಪ್ಪೆ ಮಾತನಾಡಲೇ ಇಲ್ಲ. ಮೌನವಾಗಿಯೇ ಉಳಿಯಿತು.

ಕಥೆಯು ಬಹಳ ಸ್ವಾರಸ್ಯವಾಗಿದೆ ತಾನೇ? ಕಪ್ಪೆ ಏಕೆ ತುಟಿ ಪಿಟಿಕೆನ್ನಲಿಲ್ಲ? ಅದಕ್ಕೆ ಪೋಕರಿಗಳ ಮೇಲೆ ಕೋಪವೇಕೆ ಬರಲಿಲ್ಲ? ಈ ಪ್ರಶ್ನೆಗಳು ನಿಮ್ಮೆಲ್ಲರನ್ನು ಕಾಡಬಹುದೆಂದು ನನಗೂ ಗೊತ್ತು. ಕಪ್ಪೆ ಕಿವುಡಾಗಿತ್ತು. ಅದು ಪಾರಿವಾಳಗಳ ಜೊತೆ ಹೃದಯದ ಭಾಷೆಯಲ್ಲಷ್ಟೇ ಮಾತನಾಡುತ್ತಿತ್ತು. ಕಪ್ಪೆ ಕಿವುಡಾದುದರಿಂದ ಅದು ಅದರ ಬಯಕೆಯನ್ನು ಈಡೇರಿಸಿಕೊಂಡಿತು. ಪ್ರಪಂಚದ ಸ್ಥಿತಿಯೇ ಹಾಗೆ. ಒಬ್ಬ ಏರುತ್ತಾ ಇದ್ದಾಗ, ಅವನನ್ನು ಬೀಳಿಸಲು ಪ್ರಯತ್ನಿಸುವವರೇ ಅಧಿಕ. ನಾನಾ ರೀತಿಯ ಋಣಾತ್ಮಕ ಮಾತುಗಳ ಮೂಲಕ ಏರುವವರನ್ನು ನಿರುತ್ಸಾಹಿಸುತ್ತಾರೆ. ನಿರುತ್ಸಾಹ ಬಂದೊಡನೆ ಮಾಡುವ ಸಾಧನೆಗೆ ತಿಲಾಂಜಲಿ ಕೊಡುವುದು ಮನುಷ್ಯ ಸ್ವಭಾವ. ನಮಗೆ ಕಥಾ ನಾಯಕ ಕಪ್ಪೆಯ ಕಿವುಡುತನ ಬೇಡದೇ ಇದ್ದರೂ ಎಲ್ಲ ಋಣಾತ್ಮಕ ಸಲಹೆಗಳಿಗೆ ಕಿವುಡುತನ ತೋರುವ ಜಾಣ್ಮೆ ಬದುಕಿನಲ್ಲಿ ಅತ್ಯಗತ್ಯ. ಕೇಳಿದರೂ ಕೇಳಿಸದ ಕಿವುಡರಾದರೆ.... ನಾವು ಗುರಿ ಮುಟ್ಟುವುದರಲ್ಲಿ ಸಂಶಯವಿಲ್ಲ. ಧನಾತ್ಮಕ ಮತ್ತು ಪೂರಕ ಸಲಹೆಗಳಿಗೆ ಮಣೆ ಹಾಕುವುದರಲ್ಲಿ ತಪ್ಪಿಲ್ಲ. ಆದರೆ ಸಲಹೆಗಳು ಋಣಾತ್ಮಕವಾಗಿವೆಯೋ ಧನಾತ್ಮಕವಾಗಿವೆಯೋ ಎಂಬುದನ್ನು ಅರಿಯುವುದಾದರೂ ಹೇಗೆ? ಋಣಾತ್ಮಕವಾದ ಸಲಹೆಗಳನ್ನೂ ಧನಾತ್ಮಕ ಸಲಹೆಯಂತೆ ಬಿಂಬಿಸುವವರು ಬಹಳಷ್ಟು ಮಂದಿ ಇದ್ದಾರೆ. ಆದುದರಿಂದ ನಮ್ಮ ಜಾಣ್ಮೆ ಕುರುಡಾಗಬಾರದು. ಜಾಗೃತರಾಗಿ ಹೆಜ್ಜೆಯಿಡಬೇಕು. ಸಲಹೆಗಳನ್ನು ಆಲಿಸಬೇಕು, ಪಾಲಿಸುವಾಗ ಎಚ್ಚರಿಕೆ...... ಉತ್ತಮ.

-ರಮೇಶ ಎಂ. ಬಾಯಾರು, ಬಂಟ್ವಾಳ 

ಚಿತ್ರ ಕೃಪೆ: ಇಂಟರ್ನೆಟ್ ತಾಣ