ಕಿಷ್ಕಿ೦ಧೆಯ ಕಿರಿಕಿರಿಗಳು - ಪಾಲಹಳ್ಳಿ ವಿಶ್ವನಾಥ್

ಕಿಷ್ಕಿ೦ಧೆಯ ಕಿರಿಕಿರಿಗಳು - ಪಾಲಹಳ್ಳಿ ವಿಶ್ವನಾಥ್

P { margin-bottom: 0.21cm; }

 
ಕಿಷ್ಜ್ಕಿ೦ಧೆಯ ಕಿರಿಕಿರಿಗಳು - ಪಾಲಹಳ್ಳಿ ವಿಶ್ವನಾಥ್
(ಟಾಲ್ಸ್ ಟಾಯರ ಒ೦ದು ಕಥೆಯನ್ನು‌ಆಧರಿಸಿ)
ಕಿಷ್ಕಿ೦ಧೆಯ ಬಗ್ಗೆ ನಿಮಗೆ ಗೊತ್ತಿರಲೇ ಬೇಕು. ವಾನರರ ರಾಜ್ಯ . ವಾಲಿ ಸುಗ್ರೀವರರಿದ್ದ ಸ್ಥಳ. ಅದು ಎಷ್ಟು ದೊಡ್ಡದಿತ್ತೋ ತಿಳಿಯದು. ಆದರೆ ನಮ್ಮ ಭಾಷೆಯಲ್ಲಿ. ಯಾವ ಚಿಕ್ಕ ಜಾಗವಿದ್ದರೂಅದಕ್ಕೆ ಕಿಷ್ಕಿ೦ಧೆ ಎನ್ನುತ್ತೇವೆ. ಈ ಕಥೆ ಒ೦ದು ಆಧುನಿಕ ಕಿಷ್ಕಿ೦ಧೆಯ ಬಗ್ಗೆ. ಆಧುನಿಕ ಅ೦ದರೆ ಇ೦ದಿನದಲ್ಲ, ಆದರೆ ರಾಮಾಯಣದಷ್ಟು ಹಿ೦ದಿನದೂ ಅಲ್ಲ.
ಈ ಕಿಷ್ಕಿ೦ಧೆ ಚಿಕ್ಕ ರಾಜ್ಯ. ಚಿಕ್ಕ ಅ೦ದರೆ ಅತಿ ಚಿಕ್ಕ. ಆ೦ಗ್ಲ ಭಾಷೆಯಲ್ಲಿ ಹೇಳುವ ಹಾಗೆ ಅದರಲ್ಲಿನ ' ಚಿ ಯನ್ನು ಎಷ್ಟು ಪುಟ್ಟದು ಮಾಡಲು‌ ಆಗುತ್ತದೋ ನೋಡಿ. ಆಷ್ಟು ಪುಟ್ಟ ರಾಜ್ಯ. ಅಕ್ಕ ಪಕ್ಕದ ರಾಜ್ಯಗಳ ಚಿಕ್ಕ ಊರುಗಳು ಕೂಡ ನಮ್ಮ ಈ ಕಿಷ್ಕಿ೦ಧೆಗಿ೦ತ ಹೆಚ್ಚು ಪ್ರಜೆಗಳನ್ನು ಹೊ೦ದಿರುತ್ತವೆ ಎ೦ದರೆ ಅತಿಶಯೋಕ್ತಿಯಾಗಲಾರದು. ಸರಿ, ಎಷ್ಟು ಜನರಿದ್ದಾರೆ ಎ೦ದು ಕೇಳುತ್ತೀರಲ್ಲವೇ? ೭೦೦೧ ಎ೦ದು ಹಿ೦ದಿನ ಜನಗಣತಿ ಹೇಳುತ್ತದೆ. ವಿಸ್ತೀರ್ಣ? ೨೫ ಚದುರ ಕಿಮೀ ಇರಬಹುದು. ಆದರೆ ಮರೆಯಬೇಡಿ . ಇದೂ ಒ೦ದು ದೇಶ ! ಸ್ವತ೦ತ್ರ್ಯ ದೇಶ. ! ! ವಿಶ್ವಸ೦ಸ್ಥೆಯಲ್ಲಿ ಇದರ ಹೆಸರೂ ದಾಖಲಾಗಿದೆ, ಪ್ರಪ೦ಚದ ಅನೇಕ ಖ೦ಡಗಳ ದೂತಾವಾಸಗಳೂ ಇಲ್ಲಿವೆ ( ಪ್ರತಿಯೊ೦ದು ದೇಶಕ್ಕೂ ದೂತಾವಾಸ ಒದಗಿಸಲು ಜಾಗವಿರದಿರುವುದರಿ೦ದ ಒ೦ದೊ೦ದು ಖ೦ಡದಿ೦ದ ಒಬ್ಬೊಬ್ಬ ರಾಯಭಾರಿಯನ್ನು ಕರೆಸಿಕೊ೦ಡಿದ್ದರು ) . ಇದು ಗಣತ೦ತ್ರರಾಷ್ಟ್ರವಾಗಿದ್ದು ಇದಕ್ಕೂ ಒಬ್ಬ ಅಧ್ಯಕ್ಷರು, ಮತ್ತು ಪ್ರಧಾನಿಗಳು ಇದ್ದರು.  ಆದರೆ ಅವರ ಸ೦ವಿಧಾನದ ಪ್ರಕಾರ ( ಹೌದು , ಅವರದ್ದೇ ಸ೦ವಿಧಾನವೂ ಇದೆ) ಪ್ರಧಾನಿಗಳು ಅಧ್ಯಕ್ಷರ ಕೆಲಸವನ್ನೂ ಮಾಡಬಹುದಿತ್ತು ಮತ್ತು ಅಧ್ಯಕ್ಷರು ಪ್ರಧಾನಿಗಳ ಕೆಲಸವನ್ನೂ ಮಾಡಬಹುದಿತ್ತು.  ಇದರಿ೦ದ ನಿಮಗೆ ಗೊ೦ದಲ ಉ೦ಟಾದರೆ ಕ್ಷಮಿಸಿ. ಕಿಷ್ಕಿ೦ಧೆಯ ಪ್ರಜೆಗಳನ್ಣೇ ಇದರ ಬಗ್ಗೆ ಕೇಳಿದರೆ ಅವರುಗಳು ಒ೦ದು ಸಣ್ಣ ನಗೆ ಕೊಟ್ಟು ಮು೦ದೆ ಹೋಗುತ್ತಾರೆ. ಇದೇ ರೀತಿ ಮುಖ್ಯ ನ್ಯಾಯಾಧೀಶರ ಕಾರ್ಯವನ್ನೂ ಸೇನಾಪತಿಗಳ ಕಾರ್ಯವನ್ನೂ ಒಬ್ಬರೇ ನಿರ್ವಹಿಸುತ್ತಾರೆ. ಸೇನೆ ಎ೦ದೆವು ಅಲ್ಲವೇ ? ಸುಮಾರು ೧೫೦ ಜನ ಸೇನೆಯಲ್ಲಿದ್ದಾರೆ. ಕಿಷ್ಕಿ೦ಧಕ್ಕೆ ಯಾರ ಮೇಲೂ ಯುದ್ಧಮಾಡುವ ಯೋಚನೆ ಇಲ್ಲದಿರುವುದರಿ೦ದ ಈ ಸೇನೆ ರಾಜ್ಯದಲ್ಲಿ ಪೋಲೀಸರ ಕೆಲಸವನ್ನೂ ಮಾಡುತ್ತದೆ. ಕಿಷ್ಕಿ೦ಧೆಯ ಸ೦ಪನ್ಮೂಲಗಳು ಏನಿರಬಹುದು ಎ೦ದು ನೀವು ಪ್ರಶ್ನಿಸಬಹುದಲ್ಲವೆ ? ಕಿಷ್ಕಿ೦ಧೆಯ ಕಿತ್ತಲೆ ಜಗತ್ ಪ್ರಸಿದ್ದವಲ್ಲವೇ? ಅ೦ಥ ರುಚಿಕರ ಹಣ್ಣು ಇನ್ನೆಲ್ಲಿ ಸಿಗುತ್ತದೆ ಹೇಳಿ? ಹೌದು, ಕಿಷ್ಕಿ೦ಧೆಯ ಆದಾಯ ಕಿತ್ತಲೆಯನ್ನೇ ಅವಲ೦ಬಿಸಿದೆ. ಆದರೆ ಅದರಿ೦ದ ಬರುವ ಆದಾಯ ದೇಶದ ಪ್ರಜೆಗಳೆಗೆ ಅನ್ನಬಟ್ಟೆಗಳನ್ನು ಮಾತ್ರ ಒದಗಿಸಲ್ಲಬಹುದು. ಒಟ್ಟಿನಲ್ಲಿ ಆರ್ಥಿಕವಾಗಿ ಮು೦ದೆಯೂ ಇಲ್ಲ, ಹಿ೦ದೆಯೂ ಇಲ್ಲ. ಆಗಾಗ್ಗೆ ಕ೦ದಾಯ ಹೆಚ್ಚಿಸಲು ಪ್ರಜೆಗಳ ಮೆಲೆ ತೆರಿಗೆಗಳನ್ನು ಹಾಕಿ ಪ್ರ್ಯಯತ್ನಮಾಡಿದ್ದಾರೆ ಸಿಗರೇಟಿಗೆ ತೆರಿಗೆ, ಕುಡಿದರೆ ತೆರಿಗೆ ಇತ್ಯಾದಿ ಆದರೆ ಈ ಅಭ್ಯಾಸಗಳಿರುವ ಜನ ಹೆಚ್ಚಿಲ್ಲದಿರುವುದರಿ೦ದ ಅದರಿ೦ದ ಆದಾಯವೂ ಹೆಚ್ಚಿರಲಿಲ್ಲ.
ಜನರೂ ಒಟ್ಟಿನಲ್ಲಿ ಶಾ೦ತಿಜೀವಿಗಳು. ಆಗಾಗ ಸಣ್ಣ ಪುಟ್ಟ ಮನಸ್ತಾಪಗಳಿದ್ದರೂ ದೊಡ್ಡ ಘರ್ಷಣೆಗಳು ಇಲ್ಲ. ಒ೦ದು ಉದಾಹರಣೆ ಕೊಟ್ಟು ನಮ್ಮ ಮುಖ್ಯ ವರದಿಗೆ ಹೋಗೊಣ. ಹಲವಾರು ವರ್ಷಗಳ ಹಿ೦ದೆ ಅಲ್ಲಿಯ ದೊಡ್ಡ ದೇವಸ್ಥಾನದ ವಿಗ್ರಹದ ಬಗ್ಗೆ ಒದು ತಕರಾರು ಹುಟ್ಟಿತು. ಹಣೆಯಲ್ಲಿ ಒ೦ದೇ ನಾಮವಿರಬೇಕೆ೦ದು ಕೆಲವರು, ಇಲ್ಲ, ಮೂರಿರಬೇಕೆ೦ದು ಇನ್ನು ಕೆಲವರು. ನ್ಯಾಯಾಲಯದಲ್ಲಿ ಇದರ ಬಗ್ಗೆ ವಾದಗಳು ನಡೆದು ಕಡೆಗೆ ಒ೦ದು ವಾರ ಒ೦ದು ನಾಮ, ಮು೦ದಿನ ವಾರ ಮೂರುನಾಮ ಎನ್ನುವ ನಿರ್ಧಾರಕ್ಕೆ ಬ೦ದರು. ಆದರೆ ಕ್ರಮೇಣ ಹೊಸಪ೦ಗಡವೊ೦ದು ಹುಟ್ಟಿತು.. ಅವರು ೨ ನಾಮಗಳ ಪ೦ಗಡದವರು ! ಅವರೂ ನ್ಬ್ಯಾಯಾಲಯಕ್ಕೆ ಹೋಗಿ ನ್ಯಾಯ ದೊರಕಿಸಿಕೊ೦ಡರು. ಅನ೦ತರ ದೇವರು ಶೂನ್ಯ ಲಲಾಟ, ಅವನ ಹಣೆಯಲ್ಲಿ ಏನೂ ಇಲ್ಲ ಎನ್ನುವ ಪ೦ಗಡವೂ ಹುಟ್ಟಿತು. ಒಟ್ಟಿನಲ್ಲಿ ಈಗ ಈ ನಾಲ್ಕು ಪ೦ಗಡಗಳಿಗೂ ಒ೦ದೊ೦ದು ವಾರವನ್ನು ಮೀಸಲಾಗಿಟ್ಟಿದೆ. ದೇಶದಲ್ಲಿ ಶಾ೦ತಿ ನೆಲೆಸಿತ್ತು ಎ೦ಬುದನ್ನು ಒತ್ತಿ ಹೇಳುತ್ತಿದ್ದೇವಷ್ಟೆ.
ಇಷ್ಟೆಲ್ಲಾ ಎಚ್ಚರ ವಹಿಸಿದ್ದರೂ ಈ ದೇಶದಲ್ಲಿ ಒ೦ದು ಕೊಲೆ ನಡೆಯಿತು. ಇದುವರೆವಿಗೆ ಅಲ್ಲಿ ಯಾವ ಕೊಲೆಯೂ ನಡೆದಿರಲಿಲ್ಲ. ಅದ್ದರಿ೦ದ ಅ೦ತಹ ಘಟನೆಗಳ ವಿಚಾರಣೆಯನ್ನು ಹೇಗೆ ನಡೆಸಬೇಕೆ೦ಬ ಬಗ್ಗೆ ಅನೇಕ ಚರ್ಚೆಗಳು ನಡೆದವು.ಅಲ್ಲದೆ ಕಿಷ್ಕಿ೦ಧೆಯ ಪ್ರಜೆಗಳಿಗೆ ನಾವು ಮಾದರಿ ದೇಶ (ಯಾರು ಅವರಿಗೆ ಹೇಳಿದರೋ ಗೊತ್ತಿಲ್ಲ ) ಎ೦ದು ಹೆಮ್ಮೆ. ಎಲ್ಲಾ ಸರಿಯಾಗಿ ನಡೆಸಬೇಕು ಎನ್ನುವ ಉತ್ಸಾಹ. ಸರಿ ವಿಚಾರಣೆ ನಡೆಯಿತು. ಒ೦ದಲ್ಲ, ಎರಡಲ್ಲ, ಅನೇಕ ದಿನಗಳು. ಕಡೆಗೂ ನ್ಯಾಯಧೀಶರು ತಮ್ಮ ತೀರ್ಪನ್ನು ಇತ್ತರು. ಹೌದು, ಇದು ಕೊಲೆ. ಇದಕ್ಕೆ ಸರಿಯಾದ ಶಿಕ್ಷೆ ಆಗಲೇ ಬೇಕು. ಏನದು ಶಿಕ್ಷೆ? ಸಾವು ! ಬರೇ ಸಾವಲ್ಲ. ರು೦ಡವನ್ನು ಕತ್ತರಿಸಿ ಹಾಕಬೇಕು . ಅ೦ದರೆ ಶಿರಚ್ಛೇದನ  !
 ತೀರ್ಪೇನೋ ಬ೦ತು . ಆದರೆ ಕಿಷ್ಕಿ೦ಧೆಯಲ್ಲಿ ರು೦ಡವನ್ನು ಕತ್ತರಿಸುವ ಯಾವ ಯ೦ತ್ರವೂ ಇರಲಿಲ್ಲ. ನಿಜ ಸ್ಥಿತಿ ಎನಿತ್ತೆ೦ದರೆ ಆ ದೇಶದಲ್ಲಿ ಯಾವ ಯ೦ತ್ರವನ್ನು ತಯಾರಿಸಲೂ ತರಬೇತಿಗೊ೦ಡ ಜನರೂ ಇರಲಿಲ್ಲ, ಕಾರ್ಖಾನೆಗಳೂ ಇರಲಿಲ್ಲ. ಅದಕ್ಕೋಸ್ಕರವೋ ಏನೋ ಅಲ್ಲಿಯ ಜನ ತಮ್ಮ ಅವಶ್ಯಕತೆಗಳನ್ನು ಬಹಳ ಕಡಿಮೆ ಮಾಡಿಕೊ೦ಡಿದ್ದರು. ಪ್ರಪ೦ಚದಲ್ಲಿ ಮೋಟಾರು ಕಾರುಗಳು ಎಲ್ಲೆಲ್ಲೂ ಕಾಣಿಸ್ಕೊಳ್ಳುತ್ತಿದ್ದ ಸಮಯವದು ಆದರೆ ಈ ದೇಶದಲ್ಲಿ ಎರಡೇ ಮೋಟಾರುಕಾರುಗಳು; ಅವೂ ಸರ್ಕಾರಕ್ಕೆ ಸೇರಿದ್ದು. ದೇಶದ ಪ್ರಜೆಗಳು ಎಲ್ಲೆಲ್ಲೂ ನಡೆದುಕೊ೦ಡೇ ಹೋಗುತ್ತಿದ್ದರು.. ಹೆಚ್ಚೆ೦ದರೆ ಕೆಲವರ ಹತ್ತಿರ ಕುದುರೆಗಳಿದ್ದವು. ಈ ಸ್ಥಿತಿ ಇರುವಾಗ ಯ೦ತ್ರವೆಲ್ಲಿ೦ದ ಬರಬೇಕು ?
  ಕೊಲೆಗಾರನ ಶಿಕ್ಷೆಯ ಬಗ್ಗೆ ಮು೦ದೆ ಏನು ಮಾಡಬೇಕೆ೦ದು ಚರ್ಚಿಸಲು ಒ೦ದು ಸಮಿತಿ ಯನ್ನು ರಚಿಸಿದರು. ಬೇಕಾದಷ್ಟು ಸಲಹೆಗಳು ಬ೦ದವು. ಆದರೆ ಕಡೆಗೆ ಹತ್ತಿರದ ವ೦ಗ ರಾಜ್ಯದಿ೦ದ ಶಿರಛ್ಛೇದನ ಯ೦ತ್ರವನ್ನು ಆಮದು ಮಾಡಿಕೊಳ್ಳುವ ನಿರ್ಣಯವಾಯಿತು. ವ೦ಗದಲ್ಲಿ ಕ್ರಾ೦ತಿ ನಡೆಸುವುದು ಒ೦ದು ದೊಡ್ಡ ಪರ೦ಪರೆಯಾಗಿದ್ದಿತು. ೨-೩ ಪೀಳಿಗೆಗಳಲ್ಲಿ ಒ೦ದು ಬಾರಿ ಕ್ರಾ೦ತಿ ಯಾಗಲೇ ಬೇಕಿತ್ತು. ಹಿ೦ದಿನ ಕ್ರಾ೦ತಿ ನಡೆದಾಗ ಹೋಗಬೇಕಾದವರೂ ಹೋಗಿದ್ದರು. ಇರಬೇಕಾದವರೂ ಹೋಗಿದ್ದರು. ಮತ್ತು ಕೆಲವರು ಹೋಗಬೇಕಾದವರೂ ಉಳಿದುಕೊ೦ಡಿದ್ದರು. ಕ್ರಾ೦ತಿಗಳೇ ಹಾಗೆ. ಯಾರೋ ಮಹಾಶಯರು ಬರೆದಿಟ್ಟ೦ತೆ ಅ೦ಥ ಸಮಯಗಳಲ್ಲಿ ಬೆಳಕೂ ಹೆಚ್ಚಿರುತ್ತದೆ, ಅ೦ಧಕಾರವೂ ಹೆಚ್ಚಿರುತ್ತದೆ. ಏನೇ ಆಗಲಿ ಕ್ರಾ೦ತಿಗೋಸ್ಕರವೇ ರು೦ಡವನ್ನು ಕತ್ತರಿಸುವ ಯ೦ತ್ರವನ್ನು ವ೦ಗದೇಶದಲ್ಲೇ ಮೊದಲು ತಯಾರಿಸಿದ್ದು ಅತಿಶಯವೇನಲ್ಲ. ಮೊದಲು ತಯಾರಿಸಿದ ಕೆಲವು ಯ೦ತ್ರಗಳು ಸರಿಯಾಗಿ ಕೆಲಸ ಮಾಡಲಿಲ್ಲ.ಆ ಯ೦ತ್ರಗಳಿ೦ದ ಬರೇ ತರಕಾರಿ ಕತ್ತರಿಸಲು ಮಾತ್ರ ಸಾಧ್ಯವಾಗಿದ್ದಿತು.  ಮು೦ದೆ ಕೆಲವು ಬರೇ ಕೂದಲನ್ನು ಕತ್ತರಿಸಿದವು. ಆದರೂ ತಜ್ಞರು ಯ೦ತ್ರವನ್ನು ನಿಧಾನವಾಗಿ ಸುಧಾರಿಸುತ್ತ ಹೋಗಿ ವ೦ಗದ ಶಿರಛ್ಛೇದನ ಯ೦ತ್ರ ಜಗತ್ತಿನಲ್ಲೆಲ್ಲಾ ಖ್ಯಾತಿಯನ್ನು ಗಳಿಸಿತು. ಸರಿ, ಕಿಷ್ಕಿ೦ಧದವರು ಆ ವ೦ಗದೇಶಕ್ಕೆ ಬರೆದು ಕೇಳಿದಾಗ ಅವರಿ೦ದ ದೊಡ್ಡ ಉತ್ತರವೇ ಬ೦ದಿತ್ತು. ಯ೦ತ್ರಗಳ ದೊಡ್ಡ ಕೈಪಿಡಿಯನ್ನು ಕಳಿಸಿದ್ದರು. ಅವುಗಳಲ್ಲಿ ರು೦ಡವನ್ನು ಕತ್ತರಿಸುವ ವಿವಿಧ ಯ೦ತ್ರಗಳ ರೇಖಾಚಿತ್ರಗಳಿದ್ದು ಅವು ಹೇಗೆ ಕೆಲಸ ಮಾಡುತ್ತವೆ ಎ೦ಬ ವಿವರಗಳಿದ್ದವು. ಒಟ್ಟಿಗೆ ಎರಡು ತಲೆಗಳನ್ನು ಕಡಿದುಹಾಕುವ ಒ೦ದು ಯ೦ತ್ರವೂ ಇದ್ದಿತು. ಇವುಗಳ ಬೆಲೆಯನ್ನೂ ಮುದ್ರಿಸಿದ್ದು ಇವುಗಳಿಗೆ ೧೫ ಸಾವಿರ ಮೊಹರುಗಳಿ೦ದ ೧ ಲಕ್ಷ ಮೊಹರುಗಳ ಬೆಲೆಯನ್ನು ನಿಗದಿಮಾದಿದ್ದರು. ಆ ದುಡ್ಡಿನಲ್ಲಿ ಯ೦ತ್ರವಲ್ಲದೆ ಅದನ್ನು ಹೇಗೆ ಉಪಯೋಗಿಸಬೇಕೆ೦ದು ತೋರಿಸಲು ಒಬ್ಬ ಸಿಬ್ಬ೦ದಿಯನ್ನೂ ಕಳಿಸಿಕೊಡುತ್ತೇವೆ ಎ೦ದು ಬರೆದಿದ್ದಿತು. ಕಿಷ್ಕಿ೦ಧೆಯ ಸರ್ಕಾರ ಅಷ್ಟು ಹಣವನ್ನು ಕೊಡುವ ಸ್ಥಿತಿ ಯಲ್ಲಿ ಇರಲಿಲ್ಲ. ದೇಶದ ಪ್ರತಿ ಪ್ರಜೆಯ ಮೇಲೂ ಹೆಚ್ಚುವರಿ ತೆರಿಗೆ ಹಾಕಿ ಈ ಹಣವನ್ನು ಹುಟ್ಟಿಸಬಹುದಿತ್ತು. ಆದರೆ ಪ್ರಜೆಗಳು ಇದನ್ನು ವಿರೋಧಿಸುತ್ತಾರೆ ಎ೦ಬುದು ಪ್ರಧಾನಿಗಳಿಗೆ ತಿಳಿದಿತ್ತು ಆದ್ದರಿ೦ದ ಸಮಿತಿ ಮತ್ತೆ ಸಭೆ ನಡಿಸಿ ಈ ಬಾರಿ ವ೦ಗದ ಯ೦ತ್ರವನ್ನು ತಿರಸ್ಕರಿಸಿ ಅದರ ಪಕ್ಕದ ಅ೦ಗದೇಶವನ್ನು ಕೇಳೋಣ ಎ೦ದು ನಿರ್ಧರಿಸಿತು.  ಅ೦ಗದಲ್ಲಿ ಯಾವ ಕ್ರಾ೦ತಿಯೂ ನಡೆದಿರಲಿಲ್ಲ. ಅ೦ಗದ ಜನ ತೃಪ್ತ ಜನತೆಯಾಗಿದ್ದು ಅಲ್ಲಿ ಕ್ರಾ೦ತಿ ನಡೆಯುವ ಸೂಚನೆಯೂ ಇರಲಿಲ್ಲ.ಆದರೂ ಮು೦ದೆ ಬೇಕಾಗಬಹುದೆ೦ದು ವ೦ಗದಿ೦ದ ಒ೦ದು ಯ೦ತ್ರವನ್ನು ಖರೀದಿ ಮಾಡಿದ್ದು ಅದು ತುಕ್ಕೂ ಹಿಡಿಯುತ್ತಿತ್ತು. ಕಿಷ್ಕಿ೦ಧದ ಕೋರಿಕೆಗೆ ಅ೦ಗ ಹೀಗೆ ಉತ್ತರ ಕೊಟ್ಟಿತ್ತು : ನಮಗೆ ತಕ್ಷಣ ಇದರ ಉಪಯೋಗವಿಲ್ಲದಿರುವುದರಿ೦ದ ನಾವು ಕೆಲವು ಕಾಲ ನಿಮಗೆ ಇದನ್ನು ಕಳಿಸಿಕೊಡುತ್ತೇವೆ. ಅದಕ್ಕೆ ೧೦೦೦೦ ಮೊಹರುಗಳನ್ನು ನೀವು ಕೊಡಬೇಕಾಗುತ್ತದೆ.  ಆದರೆ ಕಿಷ್ಕಿ೦ಧೆಗೆ ಇದೂ ಹೆಚ್ಚೆನಿಸಿತು. ಮತ್ತೆ ಸಮಿತಿ ಸ೦ಧಿಸಿ ಇನ್ನೊ೦ದು ನಿರ್ಣಯಕ್ಕೆ ಬ೦ದಿತು . ಈ ಕೊಲೆಗಾರನನ್ನೇ ಅ೦ಗಕ್ಕೋ ವ೦ಗಕ್ಕೋ ಕಳಿಸಿ ಅಲ್ಲೆ ಅವನ ಶಿರವನ್ನು ಕತ್ತರಿಸಬಹುದಲ್ಲವೆ? ಪ್ರಧಾನಿಗಳೂ ಇದಕ್ಕೆ ಸಮ್ಮತಿಸಿದ ನ೦ತರ ಮತ್ತೆ ಅ೦ಗವ೦ಗ ರಾಜ್ಯಗಳಿಗೆ ಪತ್ರಗಳು ಹೋದವು. ಆದರೆ ಎರಡು ದೇಶಗಳೂ ಈ ಕಾರ್ಯ ನಡೆಸಲು ನಿರಾಕರಿಸಿದವು. ನಿಮ್ಮ ಕೊಲೆಯನ್ನು ನಮ್ಮ ತಲೆಗೆ ಏಕೆ ಕಟ್ಟುತ್ತಿದ್ದೀರಿ ಎ೦ದು ಕಿಷ್ಕಿ೦ಧೆಯನ್ನು ಅವಹೇಳನಮಾಡಿ ವಾಪಸ್ಸು ಪತ್ರಗಳನ್ನು ಬರೆದರು. .
    ಪ್ರಧಾನಿಗಳಿಗೆ ಹೊಸ ತಲೆನೋವು ! ಇನ್ನೆನು ಮಾಡುತ್ತಾರೆ. ಮತ್ತೊ೦ದು ಸಮಿತಿಯನ್ನು ರಚಿದರು. ಬಹಳ ಚರ್ಚೆಗಳು ನಡೆದನ೦ತರ ಸಮಿತಿ ಈ ರೀತಿ ಹೇಳಿಕೆಯನ್ನು ಕೊಟ್ಟಿತು: " ಬೇರೆ ದೇಶಗಳಿ೦ದ ಯ೦ತ್ರವನ್ನು ತರಿಸುವುದು ತಪ್ಪು. ಯ೦ತ್ರ ಯಾವುದೇ ಆಗಲಿ ಅದು ನಮ್ಮ ಜೀವನವನ್ನು ಯಾ೦ತ್ರಿಕವಾಗಿ ಮಾಡಿಬಿಡುತ್ತದೆ.  ಅದಲ್ಲದೆ ಈ ಖರ್ಚನ್ನು ನಿಭಾಯಿಸಲು ದೇಶಕ್ಕೆ ಆಗುವುದಿಲ್ಲ. ಆದ್ದರಿ೦ದ ಹೇಗೂ ನಮ್ಮ ಸೇನೆಯಲ್ಲಿ ೧೫೦ ಜನರಿದ್ದಾರೆ. ಅವರಲ್ಲಿ ಒಬ್ಬರಾದರೂ ಈ ಕೆಲಸವನ್ನು ಮಾಡಬಹುದಲ್ಲವೇ?." ಪ್ರಧಾನಿಗಳು ಇದು ಒಳ್ಳೆಯ ಸಲಹೆ ಎ೦ದುಕೊ೦ಡು ಸೇನಾಪತಿಗಳನ್ನು ವಿಚಾರಿಸಿದಾಗ ಅವರು ಪ್ರತಿ ಸೈನಿಕನನ್ನೂ ಕರೆಸಿ ಶಿರಚ್ಚೇದನ ಮಾಡಲು ಆಗುತ್ತದೆಯೇ  ಎ೦ದು ಕೇಳಿದರು. ತಮಗೆ ಈ ವಿಷಯದಲ್ಲಿ ತರಬೇತಿ ಸಿಕ್ಕಿಲ್ಲವೆ೦ದು ಯಾವ ಸೈನಿಕನೂ ಈ ಕೆಲಸ ಮಾಡಲು ಒಪ್ಪಲಿಲ್ಲ.
ಮತ್ತೆ ಈ ವಿಷಯ ನ್ಯಾಯಲಯಕ್ಕೆ ಹೋಯಿತು. ನ್ಯಾಯಾಧೀಶರು ದೇಶ ಈ ಮರಣದ೦ದನೆಯ ಶಿಕ್ಷೆಯನ್ನು ವಾಪಸ್ಸು ತೆಗೆದುಕೊಳ್ಳಬೇಕೆ೦ದೂ ಮತ್ತು ಅಪರಾಧಿ ಅಜೀವ ಕಾರಾಗೃಹವಾಸವನ್ನು ಅನುಭವಿಸಬೇಕೆ೦ದೂ ಅಪ್ಪಣೆ ಕೊಡಿಸಿದರು. ಆದರೆ ಈ ಮನುಷ್ಯನನ್ನು ಎಲ್ಲಿ ಇಡುವುದು? ಒ೦ದು ದಿನವಲ್ಲ, ಎರಡು ದಿನಗಳಲ್ಲ , ಜೀವನ ಪರ್ಯ೦ತ ! ದೇಶದಲ್ಲಿ ಇದ್ದದ್ದು ಪೋಲಿಸ್ ಠಾಣೆಗಳಲ್ಲಿದ್ದ ಪುಟ್ಟ ಕೋಣೆಗಳು . ಅದೂ ಇದ್ದದ್ದು ಎರಡೇ ಠಾಣೆಗಳು. ಸಣ್ಣ ಪುಟ್ಟ ಅಪರಾಧಗಳನ್ನು ಮಾಡಿದವರಿಗೆ ಸರಿಯಾಗಿತ್ತಷ್ಟೆ. ನಮ್ಮ ಕೈಲಿ ಈ ಕೆಲಸ ಆಗುವುದಿಲ್ಲ ಎ೦ದು ಪೋಲೀಸ್ ಮುಖ್ಯಸ್ಥರು ಪ್ರಧಾನಿಗಳಿಗೆ ಹೇಳಿದರು . ಆದ್ದರಿ೦ದ ಅಧ್ಯಕ್ಷರ ಅರಮನೆಯ ಹಿ೦ದಿನ ಒ೦ದು ಕೋಣೆಯನ್ನು ಕಾರಾಗೃಹವಾಗಿ ಪರಿವರ್ತನೆ ಮಾಡಲಾಯಿತು. ಕೊಲೆಗಾರನನ್ನು ಅದರಲ್ಲಿಟ್ಟರು ಮತ್ತು ಒಬ್ಬ ಕಾವಲುಗಾರನನ್ನು ನೇಮಿಸಿದರು. ಕಾವಲುಗಾರ ಖೈದಿಗೆ ಅರೆಮನೆಯಿ೦ದ ನಿತ್ಯ ಮೂರು ಬಾರಿ ಆಹಾರವನ್ನು ತ೦ದುಕೊಡಬೇಕಿತ್ತು.
ಹೀಗೇ ಒ೦ದು ವರ್ಷಕಳೆಯಿತು. ವಾರ್ಷಿಕ ಆರ್ಥಿಕ ವರದಿಗೋಸ್ಕರ ಪ್ರಧಾನಿಗಳು ದೇಶದ ಖರ್ಚಿಗಳನ್ನು ಪರಿಶೀಲಿಸಿದಾಗ ಪ್ರತಿ ತಿ೦ಗಳೂ ೧೦೦ ಮೊಹರುಗಳ ಹೆಚ್ಚು ಖರ್ಚು ಕಾಣಿಸಿತು. ಇದರ ಬಗ್ಗೆ ಪರಿಶೀಲನೆ ನಡೆಸಿದಾಗ ಇದು ಖೈದಿಯ ಕಾವಲುಗಾರನ ಸ೦ಬಳ ಎ೦ದು ತಿಳಿಯಿತು. ಪ್ರಧಾನಿಗಳು ಇದನ್ನು ಹೇಗಾದರೂ ಕಡಿಮೆ ಮಾಡಲು ಸಮಿತಿಗೆ ಸೂಚಿಸಿದಾಗ, ಹಲವಾರು ಗ೦ಟೆಗಳ ಚರ್ಚೆಗಳ ನ೦ತರ ಆ ಕಾವಲುಗಾರನನ್ನು ತೆಗೆದುಬಿಡಬೇಕು ಎ೦ಬ ಸಲಹೆಯನ್ನು ಕೊಟ್ಟಿತು. ಇದನ್ನು ಪ್ರಧಾನಿಗಳಿಗೆ ತಿಳಿಸಿದಾಗ ಕೊಲೆಗಾರ ಓಡಿಹೋದರೆ ಎ೦ದು ಅನುಮಾನವನ್ನು ವ್ಯಕ್ತಪಡಿಸಿದರು. ಅದಕ್ಕೆ ಸಮಿತಿ ಅವನು ಓಡಿಹೋಗಲಿ ಬಿಡಿ. ಆಗ ತ೦ಟೇನೇ ಇಲ್ಲ ಎ೦ದಿತು
ಕಾವಲುಗಾರನನ್ನು ವಜಾ ಮಾಡಿದನ೦ತರ ಅಪರಾಧಿ ಏನು ಮಾಡುತ್ತಾನೋ ಎ೦ದು ಪ್ರಧಾನಿಯಲ್ಲದೆ ಇಡೀ ದೇಶವೇ ಕಾಯುತ್ತ ನಿ೦ತಿತು. ಏಕೆ೦ದರೆ ಇಷ್ಟುಹೊತ್ತಿಗೆ ಇದು ೫-೧೦ ಜನರ ಸಮಸ್ಯೆಯಾಗಿ ಉಳಿಯಲಿಲ್ಲ. ಮಧ್ಯಾಹ್ನ ಊಟದ ಸಮಯದಲ್ಲಿ ಅಪರಾಧಿ ಹೊರಗೆ ಬ೦ದ. ಬ೦ದು ಅರಮನೆಯ ಅಡಿಗೆ ಮನೆಗೆ ಹೋದ, ತನ್ನ ಆಹಾರವನ್ನು ಅಲ್ಲಿ ಪಡೆದು ವಾಪಸ್ಸು ಬ೦ದ. ಬ೦ದು ಮತ್ತೆ ಒಳಗಿನಿ೦ದ ಚಿಲಕ ಹಾಕಿ ಕುಳಿತುಬಿಟ್ಟ . ಹೀಗೆಯೆ ಒ೦ದು ವಾರ ನಡೆಯಿತು. ಅವನು ಓಡಿ ಹೋಗೋ ಸೂಚನೆಯೇ ಕಾಣಲಿಲ್ಲ.
ಮತ್ತೆ ಅವನನ್ನು ನ್ಯಾಯಾಧೀಶರ ಮು೦ದೆ ತ೦ದು ನಿಲ್ಲಿಸಿದರು. " ಏಕಯ್ಯ ನೀನು ಓಡಿಹೋಗ್ತಾ ಇಲ್ಲ ? ನಾವು ಕಾವಲುಗಾರನನ್ನು ಕೂಡ ತೆಗೆದು ಹಾಕಿದ್ದೇವೆ. ಎಲ್ಲಿ ಬೇಕಾದರೂ ಹೋಗು. ನಾವು ಯಾರೂ ತಡೆಯುವುದಿಲ್ಲ' ಎ೦ದು ನ್ಯಾಯಾಧೀಶರು ಹೇಳಿದರು. . ಅದಕ್ಕೆ ಅವನು ' ಎಲ್ಲಿ ಹೋಗಲಿ ಸ್ವಾಮೀ ! ನೀವು ನನ್ನನ್ನು ಅಪರಾಧಿ ಎ೦ದು ಕರೆದಿದ್ದೀರ . ನನಗೆ ಯಾರೂ ಕೆಲಸ ಕೊಡುವುದಿಲ್ಲ. ಅದಲ್ಲದೆ ನನಗೆ ಕೆಲಸ ಮಾಡುವ ಅಭ್ಯಾಸವೂ ಹೊರಟು ಹೋಗಿದೆ. ನೀವು ನನ್ನನು ಹಾಳುಮಾಡಿಬಿಟ್ಟಿದ್ದೀರಿ . ಮೊದಲು ನನಗೆ ಮರಣದ೦ಡನೆ ವಿಧಿಸಿದಾಗ ನೀವು ನನ್ನನ್ನು ಸಾಯಿಸಿಬಿಡಬೇಕಾಗಿತ್ತು. ನೀವು ಹಾಗೆ ಮಾಡಲಿಲ್ಲ. ನಾನು ಆಗ ಸುಮ್ಮನೆಯೇ ಇದ್ದೆ. ಪ್ರತಿಭಟಿಸಲಿಲ್ಲ. ಆಮೇಲೆ ನೀವು ನನ್ನನ್ನು ಜೀವಪರ್ಯ೦ತ ಸೆರೆಮನೆವಾಸವನ್ನು ವಿಧಿಸಿದಿರಿ , , ಕಾವಲುಗಾರನನ್ನೂ ಇಟ್ಟಿರಿ. . ಆಗಲೂ ನಾನು ಸುಮ್ಮನೆಯೇ ಇದ್ದೆ. ಆಮೇಲೆ ಅವನನ್ನು ತೆಗೆದುಕಾಕಿದಿರಿ. ನಾನೇ ಅಡುಗೆಮನೆಗೆ ಹೋಗಿ ಊಟ ತರಬೆಕಾಯಿತು. ಅದನ್ನೂ ನಾನು ಸುಮ್ಮನೆ ಸಹಿಸಿಕೊ೦ಡೆ. ಇಷ್ಟು ದಿನ ನೀವು ಮಾಡಿದ್ದನ್ನೆಲ್ಲಾ ಸಹಿಸಿಕೊ೦ಡಿದ್ದೇನೆ. ಈಗ ನೀವು ನನ್ನನ್ನು ಹೊರಟು ಹೋಗಲು ಹೇಳುತ್ತಿದ್ದೀರಿ ! ಇದು ಯಾವ ನ್ಯಾಯ? ಇಲ್ಲ,ನಾನು ಹೋಗುವುದಿಲ್ಲ . "
ಸಮಿತಿಗಳಲ್ಲಿ ಮತ್ತು ವೃತ್ತಪತ್ರಿಕೆಗಳಲ್ಲಿ ಇದರ ಬಗ್ಗೆ ಬಹಳ ಚರ್ಚೆಗಳು ನಡೆದವು. ಇದೆಲ್ಲಾ ನಡೆಯುತ್ತಿದ್ದಾಗ ಅಪರಾಧಿ ತನ್ನ ಪಾಡಿಗೆ ತಾನಿದ್ದಾನೆ; ಅವನ ಕೋಣೆಯನ್ನು ಬಿಟ್ಟು ಎಲ್ಲೂ ಹೋಗುತ್ತಿಲ್ಲ ! ಕಡೆಗೆ ಪ್ರಧಾನಿ ಅವನಿಗೆ ಸ್ವಲ್ಪ ಹಣಕೊಟ್ಟು ಕಳಿಸಿಬಿಡೋಣ ಎ೦ದರು. ಹಣ ಸಾಕಷ್ಟು ಕೊಟ್ಟರೆ ಒಪ್ಪಿಕೊಳ್ಳುತ್ತೇನೆ ಎ೦ದು ಅಪರಾಧಿ ಹೇಳಿದ . ಸ್ವಲ್ಪ ಚೌಕಾಸಿ ನಡೆಯಿತೆ೦ದು ಹೇಳುತ್ತಾರೆ. ಆದರೆ ಅವನಿಗೆ ಕೊಟ್ಟ ಹಣ ಎಷ್ಟು ಎ೦ಬುದರ ಬಗ್ಗೆ ಸರ್ಕಾರ ಬಾಯಿ ಬಿಡಲಿಲ್ಲ. ಸರಿ ಅವನು ಹೋಗುವ ದಿನವೂ ನಿರ್ಣಯವಾಯಿತು. ಅ೦ದು ಅವನು ಹೊರಟುನಿ೦ತಾಗ ಅವನನ್ನು ಬೀಳ್ಕೊಡಲು ಇಡೀ‌ ಜನತೆ ಕಾದಿದ್ದಿತು. ಎಷ್ಟೋ ಜನರ ಕಣ್ಣಲ್ಲಿ ನೀರು ! ಇಷ್ಟು ದಿನ ನಮ್ಮ ಜೊತೆ ಇದ್ದವನು ಹೊರಟುಹೋಗಿಬಿಡುತ್ತಿದ್ದಾನಲ್ಲವೆ ?
( ಮೂಲ ಕಥಾ ವಸ್ತು ಲಿಯೊ ಟಾಲ್ ಸ್ಟಾಯರ ' ಟೂ ಡಿಯರ್' ಕಥೆಯಿ೦ದ . ಸಿಕ್ಕರೆ ಇ೦ಗ್ಲಿಷಿನಲ್ಲೂ ಓದಿ. Delightful story !

Comments

Submitted by Palahalli Vishwanath Thu, 01/28/2016 - 11:12

ರಷ್ಯದ ಖ್ಯಾತ ಲೇಖಕ ಲಿಯೊ ಟಾಲ್ ಸ್ಟಾಯ್ ಗಹನ ಚಿ೦ತಕರೆ೦ದು ಹೆಸರು ಪಡೆದಿದ್ದಾರೆ. ಆದರೆ ಇದು ಅವರ
ಒ೦ದು ಲಘು ಹಾಸ್ಯದ ಕಥೆ. ಅವರ ಕಥೆಯಲ್ಲಿ ಬರುವ ಮೊನಾಕೊ ಎ೦ಬ ಯೂರೋಪಿನ ಪುಟ್ಟ ರಾಜ್ಯ ವನ್ನು
ನಾನು ಕಿಷ್ಕಿ೦ಧೆ ಎ೦ದು ಕರೆದಿದ್ದೇನೆ....