ಕೀಟಗಳ ನಿಯಂತ್ರಣಕ್ಕೆ ಮೈನಾ ಹಕ್ಕಿ

ಕೀಟಗಳ ನಿಯಂತ್ರಣಕ್ಕೆ ಮೈನಾ ಹಕ್ಕಿ

ಪಾರಿವಾಳಕ್ಕಿಂತ ಚಿಕ್ಕದು ಆದರೆ ಬುಲ್ ಬುಲ್‌ ಹಕ್ಕಿಗಿಂತ ಸ್ವಲ್ಪವೇ ದೊಡ್ಡದಾದ ಈ ಹಕ್ಕಿಯನ್ನು ನೀವೆಲ್ಲ ನೋಡಿರಬಹುದು. ಕಡು ಕಂದು ಬಣ್ಣದ ದೇಹ, ಕಪ್ಪು ಬಣ್ಣದ ತಲೆ, ಹಳದಿ ಬಣ್ಣದ ಕೊಕ್ಕು ಮತ್ತು ಕಾಲುಗಳು, ಜೊತೆಗೆ ಕಣ್ಣಿನ ಸುತ್ತಲೂ ಇರುವ ಹಳದಿ ಬಣ್ಣದ ಸುಂದರ ಅಲಂಕಾರ ಈ ಹಕ್ಕಿಯನ್ನು ಕಂಡಕೂಡಲೇ ಗುರುತಿಸಲು ಸಹಾಯ ಮಾಡುತ್ತವೆ.

ಒಂಟಿಯಾಗಿ ಅಥವಾ ಗುಂಪಿನಲ್ಲಿ ವಾಸಿಸುವ ಈ ಹಕ್ಕಿ ಪೇಟೆ ಪಟ್ಟಣಗಳಲ್ಲಿ ಸಾಮಾನ್ಯವಾಗಿ ನೋಡಲು ಸಿಗುತ್ತದೆ. ಒಂದೆರಡು ಅಂಗಡಿಗಳು ಇರುವ ಜಾಗ ಇದ್ದರೆ ಅಲ್ಲಿ ಒಂದಷ್ಟು ಕಸ ಬಿದ್ದಿರುವುದು ಸಾಮಾನ್ಯ ಅಲ್ಲಿ ಮನುಷ್ಯರಾದ ನಾವು ಒಂದಿಷ್ಟು ಆಹಾರ ಪದಾರ್ಥಗಳನ್ನು ಎಸೆದಿರುತ್ತೇವೆ. ಅಂತಹ ಆಹಾರವನ್ನು ಹುಡುಕಿ ತಿನ್ನಲು ಬರುವ ಹಕ್ಕಿಗಳಲ್ಲಿ ಈ ಹಕ್ಕಿಯೂ ಒಂದು. ಹಣ್ಣುಗಳು, ಕಾಳು, ಹುಳ ಹುಪ್ಪಟೆಗಳು ಮೊದಲಾದ ಎಲ್ಲ ರೀತಿಯ ಆಹಾರ ತಿನ್ನುವ ಈ ಹಕ್ಕಿಯ ಹೆಸರು ಮೈನಾ.

ಭಾರತೀಯ ಮೂಲದ ಮೈನಾ ಹಕ್ಕಿ ಏಷ್ಯಾ ಖಂಡದ ಹಲವಾರು ದೇಶಗಳಲ್ಲಿ ನೋಡಲು ಸಿಗುತ್ತದೆ. ಈ ಹಕ್ಕಿಯನ್ನು ಕೆನಡಾ, ಅಮೇರಿಕಾ,‌ ಯುರೋಪ್ ಮತ್ತು ಆಸ್ಟ್ರೇಲಿಯಾ ಮೊದಲಾದ ಕಡೆಗಳಲ್ಲಿಯೂ ನೋಡಬಹುದು. 1968 ರಿಂದ 1971 ನೇ ಇಸವಿಯ ನಡುವೆ ಕೀಟಗಳ ನಿಯಂತ್ರಣಕ್ಕಾಗಿ ಕೇವಲ 110 ಮೈನಾ ಹಕ್ಕಿಗಳನ್ನು ಆಸ್ಟ್ರೇಲಿಯಾದ ಕ್ಯಾನ್‌ ಬೆರಾ ಪಟ್ಟಣದಲ್ಲಿ ಬಿಡಲಾಯಿತಂತೆ. 1995 ರ ಸುಮಾರಿಗೆ  ಅಧ್ಯಯನ ಮಾಡಿದಾಗ ಪ್ರತಿ ಚದರ ಕಿಲೋಮೀಟರ್‌ ಪ್ರದೇಶದಲ್ಲಿ 75 ಕ್ಕೂ ಹೆಚ್ಚು ಹಕ್ಕಿಗಳು ಇರುವುದು ಅಧ್ಯಯನದಿಂದ ತಿಳಿದುಬಂತು. ತನ್ನ ಧಾಳಿಕೋರ ಸ್ವಭಾವ, ಪರಿಸ್ಥಿತಿಗೆ ಹೊಂದಿಕೊಳ್ಳುವ ಗುಣ ಮತ್ತು ಯಾವುದೇ ಆಹಾರ ತಿಂದು ಬದುಕುವ ಸಾಧ್ಯತೆಗಳಿಂದಾಗಿ ಯಾವೆಲ್ಲ ದೇಶಗಳಲ್ಲಿ ಇದನ್ನು ಬಿಡಲಾಯಿತೋ ಅಲ್ಲೆಲ್ಲಾ ತನ್ನ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿದೆ

ಇದರ ಗುಣ ಮತ್ತು ಸ್ವಭಾವಗಳನ್ನು ಗಮನಿಸಿದ ನಮ್ಮ ಹಿರಿಯರು ಇದನ್ನು ಹಲವಾರು ಹೆಸರುಗಳಿಂದ ಕತೆಯುತ್ತಾರೆ. ಸಂಸ್ಕೃತದಲ್ಲಿ ಈ ಹಕ್ಕಿಗೆ ಸಾರಿಕಾ ಎಂಬ ಹೆಸರಿದೆ. ಕಣ್ಣಿನ ಸುತ್ತಲೂ ಇರುವ ಸುಂದರ ಹಳದಿ ಬಣ್ಣದಿಂದಾಗಿ ಚಿತ್ರ ನೇತ್ರ, ಪೀತ ನೇತ್ರ ಎಂಬ ಹೆಸರುಗಳಿವೆ. ತನ್ನ ಜಗಳಗಂಟ ಸ್ವಭಾವದ ಕಾರಣದಿಂದ ಕಲಹರಪ್ರಿಯ ಎನ್ನುವ ಹೆಸರೂ ಇದಕ್ಕಿದೆ.

ಅಚ್ಚ ಕನ್ನಡದಲ್ಲಿ ಈಹಕ್ಕಿಯನ್ನು ಗೊರವಂಕ ಎಂದು ಕರೆಯುತ್ತಾರೆ. ಮೈಲಾರಲಿಂಗನನ್ನು ಆರಾಧಿಸುವ ಗೊರವರ ಕುಣಿತ ನೀವೆಲ್ಲ ನೋಡಿರಬೇಕಲ್ಲ. ಅವರೂ ಈ ಹಕ್ಕಿಯಂತೆ ಕಣ್ಣಿನ ಕೆಳಗೆ ಬಣ್ಣ ಬಳಿದುಕೊಳ್ಳುತ್ತಾರೆ. ಈ ಹಕ್ಕಿಗೆ ಪುರ್ಲೆ ಹಕ್ಕಿ ಎಂಬ ಹೆಸರೂ ಇದೆ. ನಿಮ್ಮ ಸುತ್ತಮುತ್ತ ಈ ಹಕ್ಕಿ ನಿಮಗೆ ಖಂಡಿತಾ ನೋಡಲು ಸಿಗಬಹುದು. ಇಲ್ಲದೇ ಇದ್ರೆ ಹುಡುಕ್ತೀರಲ್ಲ? 

ಕನ್ನಡ ಹೆಸರು: ಮೈನಾ ಹಕ್ಕಿ, ಪುರ್ಲೆ ಹಕ್ಕಿ, ಗೊರವಂಕ

English Name: Common Myna or Indian Myna

Scientific Name : Acridotheres tristis

ಚಿತ್ರ ಬರಹ : ಅರವಿಂದ ಕುಡ್ಲ, ಬಂಟ್ವಾಳ