ಕೀಟನಾಶಕ ಬಳಕೆ ಜ್ಞಾನ ರೈತರನ್ನು ತಲುಪಲಿ

ನಾಡಿಗೆ ಅನ್ನ- ಆಹಾರ ನೀಡುವ, ಆಹಾರ ಭದ್ರತೆ ಕೊಡುಗೆ ನೀಡುವ ರೈತ ಹಾಗೂ ಅವರ ಮಕ್ಕಳು ತಮ್ಮದೇ ಗದ್ದೆಯಲ್ಲಿ ಬೆಳೆದ ತರಕಾರಿ ಸೇವಿಸಿ ಮೃತಪಟ್ಟ ರಾಯಚೂರು ಜಿಲ್ಲೆಯ ಕಟ್ಟೋಣಿ ತಿಮ್ಮಾಪುರದ ಘಟನೆ ದುರಂತವೇ ಸರಿ. ಇದು ಎಚ್ಚರಿಕೆಯ ಗಂಟೆಯಲ್ಲದೆ, ಕಣ್ಣೆರೆಸುವ ಘಟನೆಯೂ ಹೌದು. ಕೀಟನಾಶಕಗಳನ್ನು ಅವೈಜ್ಞಾನಿಕವಾಗಿ ನಂಬಿದರ ಪರಿಣಾಮದ ಫಲ ಇದು ಎನ್ನುವುದು ಕಟುಸತ್ಯ.
ಬೆಳೆಗೆ ರೋಗ-ಕೀಟ ಬಾಧೆ ಕಾಣಿಸಿಕೊಂಡಾಗ ರೈತರು ಯಾರಿಂದ ಮಾಹಿತಿ, ಸಲಹೆ ಪಡೆಯುತ್ತಾರೆ? ತಾವು ಕಷ್ಟಪಟ್ಟು ಬೆಳೆದ ಬೆಳೆ ಉಳಿಸಿಕೊಳ್ಳುವ, ನಷ್ಟದಿಂದ ಪಾರಾಗುವ ಉದ್ದೇಶದಿಂದ ಸ್ಥಳೀಯ ರಸಗೊಬ್ಬರ ಮಳಿಗೆಗೆ ಭೇಟಿ ನೀಡಿ ಅವರು ಕೊಟ್ಟ ಔಷಧವನ್ನೇ ಸಿಂಪಡಿಸುತ್ತಾರೆ, ದಶಕಗಳ ಹಿಂದೆ ಕೇಂದ್ರ ಸರಕಾರ ಕೈಗೊಂಡ ಸರ್ವೆಯಲ್ಲೇ ಈ ಅಂಶ ದೃಢವಾಗಿತ್ತು. ಹೀಗಾಗಿ ಕೃಷಿ ಪರಿಕರ ಮಾರಾಟಗಾರರಿಗೆ ಔಷಧ, ರಸಗೊಬ್ಬರ ಜ್ಞಾನ ನೀಡಲು, ಕೃಷಿ ಪರಿಕರ ಮಾರಾಟಗಾರರಿಗೆ ಕೃಷಿ ವಿಸ್ತರಣೆ ಡಿಪ್ಲೊಮಾ (ದೇಸಿ) ಕೋರ್ಸ್ ರೂಪಿಸಿ ಕಡ್ಡಾಯಗೊಳಿಸಲಾಗಿದೆ. ಜತೆಗೆ, ಕೃಷಿ ಪರಿಕರ ಮಾರಾಟ ಮಾಡುವ ಅಂಗಡಿ ಮಾಲೀಕರು ಕಡ್ಡಾಯವಾಗಿ ಬಿಎಸ್ಸಿ ಕೆಮಿಸ್ಟ್ರಿ ಅಥವಾ ಬಿಎಸ್ಸಿ ಅಗ್ರಿ ಓದಿರಬೇಕು ಅಥವಾ ಅವರು ದೇಸಿ ಡಿಪ್ಲೋಮಾ ಕೋರ್ಸ್ ಪಡೆಯಬೇಕು ಎಂಬ ನಿಯಮವಿದೆ. ತಾಂತ್ರಿಕತೆ, ಜ್ಞಾನವನ್ನು ರೈತರಿಗೆ ತಲುಪಿಸಲು ಇದರಿಂದ ಸಾಧ್ಯ.
ಸಿಂಪಡಿಸಿದ ರಾಸಾಯನಿಕವು ತರಕಾರಿ ಬೆಳೆಗಳಲ್ಲಿ ಸಾಮಾನ್ಯವಾಗಿ ವಾರಗಳ ಕಾಲ ಸಕ್ರಿಯವಾಗಿರುತ್ತದೆ. ಕೆಲವು ರಾಸಾಯನಿಕವಂತೂ ಇನ್ನೂ ಹೆಚ್ಚಿನ ಅವಧಿವರೆಗೆ ಕ್ರಿಯಾಶೀಲ. ಪೀಡೆನಾಶಕ ಸಿಂಪಡಿಸಿ ೧೦ ರಿಂದ ೧೫ ದಿನಗಳ ಬಳಿಕವೇ ತರಕಾರಿ ಸೇವನೆಗೆ ಸೂಕ್ತ. ಇದಕ್ಕೆ 'ಸೇಫ್ಟ್ ವೇಟಿಂಗ್ ಪಿರಿಯಡ್' ಎಂದೂ ಹೇಳಲಾಗುತ್ತದೆ. ಈ ಅವಧಿಯಲ್ಲಿ ರಾಸಾಯನಿಕ ಗುಣಧರ್ಮ ಕ್ಷೀಣಿಸಿರುತ್ತದೆ. ರಾಸಾಯನಿಕ ಶೇಷ ಉಳಿಕೆ ಸಾಧ್ಯತೆ ಕಡಿಮೆಯಾಗುತ್ತದೆ.
ರಾಸಾಯನಿಕದ ವಿಷತ್ವ ಅಪಾಯ ತಿಳಿಸಲು ಕೀಟನಾಶಕ, ಕಳೆನಾಶಕದ ಬಾಟಲ್ ಮೇಲೆ ೪ ಬಣ್ಣಗಳ ಪೈಕಿ ಒಂದು ಲೇಬಲ್ ಮುದ್ರಿಸಲಾಗಿರುತ್ತದೆ. ಕೆಂಪು ಬಣ್ಣ ಇದ್ದರೆ ಅತ್ಯಂತ ವಿಷ ಕಾರಿಯಾಗಿದ್ದು ಗರಿಷ್ಠ ಎಚ್ಚರಿಕೆ ಅಗತ್ಯ. ಹಳದಿ ಇದ್ದರೆ ವಿಷತ್ವದಲ್ಲಿ ೨ನೇ ಸ್ಥಾನ, ಇದೂ ಅಪಾಯಕಾರಿಯೇ. ಇನ್ನು ೩ನೇ ಕ್ರಮಾಂಕದಲ್ಲಿ ನೀಲಿ ಬಣ್ಣ ಸಾಧಾರಣ ವಿಷ ಪ್ರಮಾಣ. ಕೊನೆಯದಾಗಿ ಹಸಿರು ಬಣ್ಣ. ಇದು ಕನಿಷ್ಠ ವಿಷತ್ವದ ಗುರುತು. ಈ ತಾಂತ್ರಿಕ ಮಾಹಿತಿಯನ್ನು ರೈತ ವಲಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ತಲುಪಬೇಕಿದೆ. ಸಿಂಪಡಿಸುವಾಗ ಕೈಗೆ ಗೌಸ್, ಮುಖಕ್ಕೆ ಮಾಸ್ಕ್ ಧರಿಸಬೇಕು ಹಾಗೂ ಮೈಗೆ ಸೂಟ್ ಧರಿಸಲು ಸಲಹೆ ನೀಡಲಾಗಿದೆ. ಇದೂ ರೈತ ವಲಯದಲ್ಲಿ ಅನುಷ್ಠಾನವಾದದ್ದು ಅಲ್ಪ. ಕೈಯಿಂದಲೇ ಕೀಟನಾಶಕ ಬಾಟಲ್‌ನ ಮುಚ್ಚಳ ತೆಗೆಯುವುದು, ಕೈಯಿಂದಲೇ ರಾಸಾಯನಿಕವನ್ನು ನೀರಿನಲ್ಲಿ ಮಿಶ್ರ ಮಾಡುವುದು ರೂಢಿ.
ಇಷ್ಟೆಲ್ಲ ಕ್ರಮಗಳು ಇದ್ದರೂ ಔಷಧ ಜ್ಞಾನವು ಕೃಷಿ ವಿವಿಯಿಂದ, ಲ್ಯಾಬ್‌ನಿಂದ ಹೊಲಕ್ಕೆ ತಲುಪಿಲ್ಲವೇ? ಈ ಪ್ರಶ್ನೆ ಈಗ ಉದ್ಭವಿಸಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಇಂಥ ಔಷಧಯುಕ್ತ ತರಕಾರಿಗಳ ಬಳಕೆ ಬಗ್ಗೆಯೂ ಜನರಲ್ಲಿ ಸಾಕ್ಷರತೆ ಕಡಿಮೆ. ಹೋಟೆಲ್, ಸಮಾರಂಭಗಳಲ್ಲಿ ತರಕಾರಿ ಶುಚಿಗೊಳಿಸದೆ ಬಳಸಲಾಗುತ್ತಿದೆ. ಹೀಗೆ ಬಳಸಿದಾಗ ಜನರ ಆರೋಗ್ಯದ ಕತೆಯೇನು? ಈ ಪ್ರಶ್ನೆಯೂ ಕಾಡುತ್ತದೆ. ಉಪ್ಪು, ಅರಿಶಿಣ ಬೆರೆಸಿದ ತುಸು ಬಿಸಿ ನೀರಿನಲ್ಲಿ ಅರ್ಧ ತಾಸು ತರಕಾರಿ ತೊಳೆದ ಬಳಿಕವಷ್ಟೇ ಔಷಧ ನಿರ್ಮೂಲನೆ ಸಾಧ್ಯ. ಕಡೋಣಿ ತಿಮ್ಮಾಪುರ ಘಟನೆ ಎಲ್ಲರ ಕಣ್ತೆರೆಸಲಿ.
ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೨೪-೦೭-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ