ಕೀಟಲೆಯ ದಿನಗಳು
ಖ್ಯಾತ ಲೇಖಕ ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ ಇವರು “ಕೀಟಲೆಯ ದಿನಗಳು" ಎಂಬ ೪೫೬ ಪುಟಗಳ ಬೃಹತ್ ಪುಸ್ತಕವನ್ನು ಬರೆದಿದ್ದಾರೆ. ಈ ಕೃತಿಯನ್ನು ಅವರು “ಹೀಗೊಂದು ಆಕಸ್ಮಿಕ ಆತ್ಮಕಥನ" ಎಂದು ಹೆಸರಿಸಿದ್ದಾರೆ. ಈ ಕೃತಿಗೆ ಲೇಖಕ ಅಗ್ರಹಾರ ಕೃಷ್ಣ ಮೂರ್ತಿ ಇವರು ಬೆನ್ನುಡಿಯನ್ನು ಬರೆದಿದ್ದಾರೆ. ಅವರು ತಮ್ಮ ಬೆನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವಗಳು ಹೀಗಿವೆ…
“ತುಂಟತನ, ಕೀಟಲೆ ಬಾಲ್ಯದಲ್ಲಿ ಅಲಂಕಾರಗಳೇ ಆಗಿರುತ್ತವೆ. ಸಹಜ ಮುಗ್ಧತೆ, ಸತ್ಯ ಶುದ್ಧತೆ ಸುತ್ತಮುತ್ತಲವರಿಗೆ ಅಪೇಕ್ಷಣೀಯವೂ, ಕ್ಷಮಾರ್ಹವೂ, ಚುರುಕು ಎಂಬಂತೆಯೂ ಕಾಣುವುದುಂಟು. ಈ ಅಲಂಕಾರಗಳು ಆಗಾಗ ಶಿಕ್ಷೆಗೊಳಗಾದರೂ ಮತ್ತಷ್ಟು ಶುದ್ಧತೆಯ ಹೊಳಪು ಪಡೆಯುತ್ತವೆ. ಬಾಲ್ಯ ಕಳೆದಂತೆಲ್ಲ ಈ ಗುಣಗಳು ಕಳೆದುಹೋಗುವುದು ಸಹಜ. ಹಾಗಲ್ಲದೇ ಬೆಳೆದು ನಿಂತಾಗಲೂ ಉಳಿದೇಬಿಟ್ಟರೆ ಅಷ್ಟೇನೂ ಸಹನೀಯ ಅನಿಸುವುದಿಲ್ಲ. ಆದರೆ ಲಕ್ಷ್ಮೀನಾರಾಯಣ ಅಂಥವರಲ್ಲಿ ಮಾತ್ರ ಅವು ಅಪೇಕ್ಷಣೀಯ ಅಪವಾದವಾಗಿ ನಿಂತು ಮತ್ತಷ್ಟು ಪ್ರಖರತೆಯನ್ನು ಪಡೆದು ಒಂದು ವಿಶಿಷ್ಟ ಮೌಲ್ಯವಾಗಿ ರೂಪಾಂತರಗೊಳ್ಳುತ್ತದೆ. ಮನುಷ್ಯ ಮಾತ್ರದವನಿಗೆ ನ್ಯಾಯನಿಷ್ಠ ಜೀವನೋತ್ಸಾಹದ ಒಂದು ಮಾದರಿಯಾಗುತ್ತದೆ. ಈ ಕೃತಿ ನೀಡಿರುವ ಸ್ವಯಂ ಅನಾವರಣ ನನ್ನ ಮಾತಿಗೆ ಸಾಕ್ಷಿ ಎಂದು ತಿಳಿಯುತ್ತೇನೆ.
ಈ ಬರಹವನ್ನು Satirical Autobiography ಅಥವಾ Autobiographical Satire ಎಂದು ಗುರುತಿಸಬೇಕೆನಿಸುತ್ತಿದೆ. ವಿಶೇಷ ಪ್ರತಿಭಾಶಕ್ತಿ ಇಲ್ಲದಿದ್ದಲ್ಲಿ ಇಂಥ ರಚನೆ ಸಾಧ್ಯವಿಲ್ಲ. ಇಲ್ಲಿನ ಭಾವುಕ ಕ್ಷಣಗಳು ಆರ್ದ್ರಗೊಳಿಸುತ್ತವೆ. ಕೌಟುಂಬಿಕ ಮತ್ತು ಸಾಮಾಜಿಕ ಬಾಂಧವ್ಯಗಳ ಸಾವಯವ ಸಮಗ್ರೀಕರಣವನ್ನು ತಮ್ಮ ಅಮ್ಮ ಮತ್ತು ಇತರ 'ಅಮ್ಮಂದಿರ' ಮೂಲಕ ಕಂಡರಿಸಿದ್ದಾರೆ. ಗೆಳೆಯರ, ಗುರುವೃಂದದ ಗುಣ, ಸ್ವಭಾವ, ಸ್ವರೂಪಗಳನ್ನು ಹಿಡಿದಿಡುವ ಕೌಶಲ, ವೈಚಾರಿಕ ಮತ್ತು ರೈತಚಳವಳಿಯ ಧೀರಗಳಿಗೆಗಳ ದಾಖಲೆ ಇಲ್ಲಿದೆ.
ವ್ಯಕ್ತಿಗಳಿಗೆ ಇರುವಂತೆಯೇ ನಗರಗಳಿಗೂ, ಕೆಲವು ಜಾಗಗಳಿಗೂ 'ವ್ಯಕ್ತಿತ್ವ'ವಿರುತ್ತದೆ ಎನ್ನುವ ಮಾತಿದೆ. ಲೇಖಕರು ಇಲ್ಲಿ ಹಾಸನ ಮತ್ತು ಹಾಸನದ ಬೆಂಗಳೂರಿನ ವಿಸ್ತರಣೆಯೇ ಆದ ಕೆಂಚಾಂಬಾ ಲಾಡ್ಜ್, ಜಿಕೆವಿಕೆ ಕ್ಯಾಂಪಸ್ _ ಇವುಗಳ 'ವ್ಯಕ್ತಿತ್ವ'ವನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ.
ಈ ಬರವಣಿಗೆ ನನ್ನನ್ನು ಸೆಳೆದದ್ದು ಇಲ್ಲಿಯ ಭಾಷಾ ಪ್ರಯೋಗದಿಂದಾಗಿ. ಅತ್ಯಂತ ವಿಶಿಷ್ಟರೀತಿಯಲ್ಲಿ ನಮ್ಮನುಡಿಯನ್ನು ಬಳಸಿರುವ ಇವರನ್ನು 'ಶ್ಲೇಷಶಾಸ್ತ್ರೀಯ' ಎಂದು ಕರೆಯಬೇಕೆನಿಸುತ್ತದೆ!
ತಮ್ಮ 65 ವರ್ಷಗಳ ಜೀವನವನ್ನು ನಿರೂಪಿಸುವ ಹೊತ್ತಿನಲ್ಲಿ ಸಮಕಾಲೀನ ಆಗುಹೋಗುಗಳ ಅಪಾಯಸಾಗರವನ್ನು ತಮ್ಮ ಶ್ಲೇಷಾಕ್ಷರ ಬಿಂದುಗಳಲ್ಲಿ ದರ್ಶನಗೊಳಿಸುತ್ತಾರೆ. ಇದನ್ನೂ ಕಾಣುವ ಕಣ್ಣುಗಳು ಇವರ ಓದುಗರಿಗಿರುತ್ತವೆಂಬ ಭರವಸೆ ನನಗಿದೆ.”