ಕೀಟ ಜಗತ್ತಿನ ಅಚ್ಚರಿ- ಜಿರಾಫೆ ಜೀರುಂಡೆ
ಡಾರ್ವಿನ್ ನ ವಿಕಾಸವಾದಕ್ಕೆ ಉತ್ತಮ ಉದಾಹರಣೆಯೆಂದರೆ ಜಿರಾಫೆ ಎಂಬ ಪ್ರಾಣಿ. ಅದರ ಉದ್ದದ ಕತ್ತು ಎಲ್ಲರ ಆಕರ್ಷಣೆಯ ಕೇಂದ್ರ ಬಿಂದು. ಸಹಸ್ರಾರು ವರ್ಷಗಳ ಹಿಂದೆ ಜಿರಾಫೆಯ ಕತ್ತು ಬೇರೆಲ್ಲಾ ಪ್ರಾಣಿಗಳಂತೆಯೇ ಇತ್ತಂತೆ. ನಂತರದ ದಿನಗಳಲ್ಲಿ ನೆಲದಲ್ಲಿನ ಆಹಾರದ ಕೊರತೆಯಿಂದಾಗಿ ಎತ್ತರದ ಮರಗಳ ಎಲೆಗಳನ್ನು ತಿನ್ನಲು ಪ್ರಯತ್ನಿಸಿದಾಗ ಜಿರಾಫೆಯ ಕತ್ತು ಉದ್ದವಾಗುತ್ತಾ ಹೋಯಿತೆಂದು ಡಾರ್ವಿನ್ ವಾದ. ಇದೇನೇ ಇರಲಿ. ಕೀಟ ಜಗತ್ತಿನಲ್ಲೊಂದು ಜಿರಾಫೆ ಕತ್ತಿನ ಕೀಟವಿದೆ. ಜಿರಾಫೆ ಪ್ರಾಣಿಯಂತೆಯೇ ಉದ್ದವಾದ ಕತ್ತನ್ನು ಹೊಂದಿರುವುದರಿಂದಲೇ ಈ ಕೀಟಕ್ಕೆ ಆ ಹೆಸರು ಬಂದಿದೆ.
ಜಿರಾಫೆ ಜೀರುಂಡೆ ಅಥವಾ ಜಿರಾಫೆ ವೀವೆಲ್ (Giraffe Weevil) ಎಂದು ಕರೆಯಲ್ಪಡುವ ಈ ಕೀಟಗಳು ತಮ್ಮ ಉದ್ದದ ಕತ್ತು ಹಾಗೂ ಆಕರ್ಷಕ ಮೈಮಾಟದಿಂದಾಗಿ ಗಮನ ಸೆಳೆಯುತ್ತವೆ. ಇದರ ವೈಜ್ಞಾನಿಕ ಹೆಸರು ಟ್ರಾಕಲೋಫೋರಸ್ ಜಿರಾಫ (Trachelophorus giraffa). ಆಟ್ಟೆಲಬಿಡ ಕೀಟ ಕುಟುಂಬಕ್ಕೆ ಸೇರಿದ ಇದನ್ನು ಬೀಟೆಲ್ ಅಥವಾ ಜೀರುಂಡೆ ಎಂದು ಕರೆಯುತ್ತಾರೆ. ಆಫ್ರಿಕಾದ ಮಡಗಾಸ್ಕರ್ ಪ್ರದೇಶದಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಅಲ್ಪ ಪ್ರಮಾಣದಲ್ಲಿ ನ್ಯೂಜಿಲ್ಯಾಂಡ್ ನಲ್ಲೂ ಕಂಡು ಬಂದಿವೆ. ಉಳಿದಂತೆ ವಿಶ್ವದ ಎಲ್ಲಿಯೂ ಇವುಗಳ ಇರುವಿಕೆಯು ಪತ್ತೆಯಾಗಿಲ್ಲ.
ಜಿರಾಫೆ ಜೀರುಂಡೆಯ ದೇಹ ರಚನೆಯ ಬಗ್ಗೆ ನೋಡಿದರೆ, ಗಂಡು ಜೀರುಂಡೆಯು ಹೆಣ್ಣು ಜೀರುಂಡೆಗಿಂತ ಸ್ವಲ್ಪ ಉದ್ದವಾದ ಕತ್ತನ್ನು ಹೊಂದಿರುತ್ತದೆ. ಪ್ರೌಢಾವಸ್ತೆಯ ಕೀಟವು ಸುಮಾರು ಎರಡುವರೆಯಿಂದ ಮೂರು ಸೆಂ. ಮೀ ಉದ್ದವಿರುತ್ತದೆ. ಜಿರಾಫೆ ಜೀರುಂಡೆಯ ಮೈ ಬಣ್ಣವು ಕಪ್ಪಾಗಿದ್ದು. ರೆಕ್ಕೆಗಳು ಮಾತ್ರ ಕೆಂಪು ವರ್ಣ ಹೊಂದಿರುತ್ತವೆ. ಇದರಿಂದ ಇವುಗಳು ನೋಡಲು ಆಕರ್ಷಕವಾಗಿರುತ್ತವೆ. ಉದ್ದದ ಕತ್ತು ಹೇಗೆ ಬಂತು ಎನ್ನುವುದು ಮಾತ್ರ ನಿಗೂಢ. ಸ್ವಾಭಾವಿಕವಾಗಿ ಈ ಕೀಟಗಳು ಆಕ್ರಮಣಕಾರಿಯಾಗಿರುವುದಿಲ್ಲ. ಸಂಗಾತಿಯನ್ನು ಒಲಿಸಿಕೊಳ್ಳಲು ಮಾತ್ರ ಗಂಡು ಜೀರುಂಡೆ ಮತ್ತೊಂದು ಗಂಡು ಜೀರುಂಡೆ ಜೊತೆ ಕಾದಾಡುತ್ತದೆ. ಈ ಕಾಳಗದ ಸಮಯದಲ್ಲಿ ಹೆಣ್ಣು ಜೀರುಂಡೆಯು ತೀರ್ಪುಗಾರನಂತೆ ಕೆಲಸ ಮಾಡುತ್ತದೆ. ಕಾಳಗದಲ್ಲಿ ಯಾರು ಗೆದ್ದವರು ಎಂದು ಹೆಣ್ಣು ನಿರ್ಧಾರ ಮಾಡಿ ಸಂಗಾತಿಯನ್ನು ಅದು ಆಯ್ಕೆ ಮಾಡುತ್ತದೆ.
ಎಲೆಗಳನ್ನು ಸುರುಳಿಯಾಗಿ ಸುತ್ತಿ ಹೆಣ್ಣು ಜೀರುಂಡೆ ಅದರಲ್ಲಿ ಒಂದೇ ಒಂದು ಮೊಟ್ಟೆಯನ್ನು ಇಡುತ್ತದೆ. ಸುಮಾರು ಅರ್ಧ ಗಂಟೆಗಳ ಸಮಯವನ್ನು ಹೆಣ್ಣು ಜೀರುಂಡೆ ಎಲೆಯನ್ನು ಸುರುಳಿ ಸುತ್ತಲು ತೆಗೆದುಕೊಳ್ಳುತ್ತದೆ. ಆ ಸುರುಳಿ ಸುತ್ತಿದ ಎಲೆಯನ್ನು ಅದು ಗಿಡದಿಂದ ಕೆಳಗೆ ಬೀಳಿಸುತ್ತದೆ. ಮೊಟ್ಟೆಗಳ ಬೆಳವಣಿಗೆಯವರೆಗೆ ಅವುಗಳಿಗೆ ಹಾನಿಯಾಗಬಾರದೆಂದು ಇದು ಗಿಡದ ಎಲೆಯನ್ನು ಸುರುಳಿ ಸುತ್ತುತ್ತದೆ ಎಂದು ವಿಜ್ಞಾನಿಗಳ ಅನಿಸಿಕೆ.
ಮೊಟ್ಟೆಯೊಡೆದು ಹೊರಬಂದ ಮರಿಗಳನ್ನು ಹೆಣ್ಣು ಕೀಟವು ಪಾಲನೆ ಮಾಡುತ್ತದೆ. ಅವುಗಳು ಸ್ವತಂತ್ರವಾಗಿ ಆಹಾರ ಅರಸುವ ತನಕ ಹೆಣ್ಣು ಕೀಟವೇ ಅವುಗಳಿಗೆ ಆಹಾರವನ್ನು ಒದಗಿಸುತ್ತವೆ. ಸುರುಳಿ ಸುತ್ತಿದ ಎಲೆಯ ಒಳಗಡೆ ನುಸುಳಿ ಆಹಾರವನ್ನು ಮರಿಗಳಿಗೆ ನೀಡುತ್ತವೆ.
ಜಿರಾಫೆ ಜೀರುಂಡೆಗಳು ನಿರುಪದ್ರವಿಗಳು. ಮಾನವನಿಗೆ ಅವುಗಳು ಇಷ್ಟರವರೆಗೆ ಹಾನಿ ಮಾಡಿಲ್ಲ. ಮಾನವನ ಸಂಪರ್ಕದಿಂದ ಅವುಗಳು ದೂರವೇ ಉಳಿಯ ಬಯಸುತ್ತವೆ. ಇವುಗಳು ಮಾನವನಿಗೆ ವಿಷಕಾರಿಯಲ್ಲ. ಕಚ್ಚುವುದೂ ಇಲ್ಲ. ಜಿರಾಫೆ ಜೀರುಂಡೆಗಳು ಸುಮಾರು ಒಂದು ವರ್ಷ ಬದುಕುತ್ತವೆ. ತಾವು ವಾಸವಾಗಿರುವ ಮರ-ಗಿಡಗಳನ್ನು ಬಿಟ್ಟು ದೂರಕ್ಕೆ ಹೋಗುವುದಿಲ್ಲ. ಕೆಲವು ಸಣ್ಣ ಸಣ್ಣ ಜೀವಿಗಳಿಂದ ಇವುಗಳ ಮೊಟ್ಟೆಗಳಿಗೆ ಹಾನಿಯಾಗುವುದರ ಹೊರತು ಪಡಿಸಿ ಈ ಜಾತಿಯ ಕೀಟಗಳಿಗೆ ಬೇರೆ ಶತ್ರುಗಳಿಲ್ಲ.
೧೮೬೦ರಲ್ಲಿ ಫ್ರೆಂಚ್ ಕೀಟ ಶಾಸ್ತ್ರಜ್ಞರಾದ ಹೆನ್ರಿ ಜಾಕೆಲ್ ಎಂಬವರು ಈ ಜಿರಾಫೆ ಕತ್ತಿನ ಜೀರುಂಡೆಗಳನ್ನು ಮಡಗಾಸ್ಕರ್ ನಲ್ಲಿ ಪತ್ತೆ ಹಚ್ಚಿದ್ದರೆಂದು ಮಾಹಿತಿ ಇದೆ. ಜಿರಾಫೆ ಕತ್ತಿನ ಜೀರುಂಡೆಗಳ ಬಗ್ಗೆ ತುಂಬಾ ಸಂಶೋಧನೆಗಳು ನಡೆಯದೇ ಇದ್ದರೂ, ಇತ್ತೀಚಿನ ವರ್ಷಗಳಲ್ಲಿ ಅವುಗಳ ಪ್ರಭೇಧಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ. ಅವುಗಳು ಅಪರೂಪದ ಕೀಟ ಪ್ರಭೇಧಗಳಾಗಿದ್ದರೂ ಅಳಿವಿನಂಚಿನಲ್ಲಿ ಇಲ್ಲ ಎಂಬುದೇ ಸಮಾಧಾನದ ಸಂಗತಿ. ಈ ಜಗತ್ತಿನ ಅಪರೂಪದ ಜಿರಾಫೆ ಕತ್ತಿನ ಜೀರುಂಡೆಗಳ ಬಗ್ಗೆ ಇನ್ನಷ್ಟು ಮಾಹಿತಿಗಳು ಬರಬೇಕಾಗಿವೆ.
ಚಿತ್ರ ಕೃಪೆ: ಅಂತರ್ಜಾಲ ತಾಣ