ಕೀಟ ವೀಕ್ಷಣೆಯ ಹವ್ಯಾಸ ಬೆಳೆಸಿಕೊಳ್ಳೋಣ !
ಕೀಟವನ್ನು ನೋಡುವುದಾ? ಇದೆಂಥಾ ಹವ್ಯಾಸ? ಸುಮ್ಮನೇ ಟೈಂ ವೇಸ್ಟ್ ಅಂತೀರಾ? ಆದರೂ ಒಮ್ಮೆ ಯಾವುದಾದರೂ ಒಂದು ಕೀಟವನ್ನು ಗಮನಿಸಿ ನೋಡಿ, ಅದರ ಅಂಗ ರಚನೆ, ಕಾಲುಗಳ ಸಂಖ್ಯೆ, ಆಂಟೇನಾ, ಆಹಾರ ಪದ್ಧತಿ, ಬಣ್ಣ, ಗಂಡು - ಹೆಣ್ಣಿನಲ್ಲಿರುವ ವ್ಯತ್ಯಾಸ ಇತ್ಯಾದಿಗಳನ್ನು ಗಮನಿಸುತ್ತಾ ಹೋದಾಗ ನಿಮಗೆ ಈ ಹವ್ಯಾಸದಲ್ಲಿ ಆಸಕ್ತಿ ಕುದುರುತ್ತಾ ಹೋಗುತ್ತದೆ. ಈ ಹವ್ಯಾಸವನ್ನು ಮಕ್ಕಳು ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿರುವಾಗಲೇ ಬೆಳೆಸಿಕೊಳ್ಳುವುದು ಉತ್ತಮ. ಏಕೆಂದರೆ ಆಗ ಮಕ್ಕಳಲ್ಲಿ ಕುತೂಹಲದ ಕಾವು ಬಹಳ ಇರುತ್ತದೆ. ಮತ್ತಷ್ಟು, ಇನ್ನಷ್ಟು ತಿಳಿದುಕೊಳ್ಳುವ ಗುಣ ಇರುತ್ತದೆ.
ಮೊದಲಿಗೆ ಒಂದು ಪುಸ್ತಕ, ಪೆನ್ಸಿಲ್ ಹಿಡಿದುಕೊಂಡು ನಿಮ್ಮ ಮನೆಯ ತೋಟವನ್ನು ತಿರುಗಾಡಿ. ಹತ್ತಿರ ಗುಡ್ದಗಾಡು ಪ್ರದೆಶ ಅಥವಾ ಗದ್ದೆಗಳಿದ್ದರೆ ಅವುಗಳಿಗೆ ಒಂದು ಸುತ್ತು ಹಾಕಿ. ನಿಮ್ಮ ಕಣ್ಣಿಗೆ ಕಾಣಿಸುವ ನೊಣ, ಸೊಳ್ಳೆ, ಜಿರಳೆ, ದುಂಬಿಗಳು, ಚಿಟ್ಟೆಗಳು, ಮಿಡತೆಗಳು ಇವುಗಳನ್ನು ಸೂಕ್ಸ್ಮವಾಗಿ ಗಮನಿಸಿ. ಅವುಗಳ ಆಕಾರ, ಆಹಾರ ಬಗ್ಗೆ ತಿಳಿಯಲು ಪ್ರಯತ್ನಿಸಿ. ಗುಣಲಕ್ಷಣಗಳನ್ನು ಪಟ್ಟಿ ಮಾಡಿ. ನಿಮಗೆ ಸುಲಭವಾಗಿ ದೊರೆಯುವ ಕೀಟವೆಂದರೆ ಚಿಟ್ಟೆ. ನೋಡಲೂ ಸುಂದರ, ಅದರ ಜೀವನ ಕ್ರಮವೂ ಆಸಕ್ತಿದಾಯಕ.
ನಿಮ್ಮ ಮನೆಯ ಸುತ್ತಲೂ ಹೂವಿನ ಗಿಡಗಳನ್ನು ಬೆಳೆಸಿದರೆ ನಾನಾ ವಿಧದ, ಬಣ್ಣದ ಚಿಟ್ಟೆಗಳು ತಕ್ಷಣ ಹಾಜರಾಗುತ್ತವೆ. ಆ ಹೂವುಗಳ ಮಕರಂದವನ್ನು ಹೀರಲು ಬರುತ್ತವೆ. ಅಲ್ಲಿನ ಗಿಡದಲ್ಲೇ ಮೊಟ್ಟೆ ಇಟ್ಟು, ಆ ಮೊಟ್ಟೆ ಕಂಬಳಿ ಹುಳುವಾಗಿ ನಂತರ ಕೋಶಾವಸ್ಥೆಗೆ ಜಾರಿ, ನಿಧಾನವಾಗಿ ಚಿಟ್ಟೆಯಾಗಿ ಬದಲಾಗುವ ಪರಿ ವಿಭಿನ್ನ ಮತ್ತು ಆಸಕ್ತಿದಾಯಕ. ಕೀಟಗಳ ಸಣ್ಣ ಸಣ್ಣ ಭಾಗಗಳನ್ನು ಗಮನಿಸಲು ಒಂದು ಭೂತ ಕನ್ನಡಿಯನ್ನು ಬಳಸುವುದು ಅಪೇಕ್ಷನೀಯ. ನೀವು ಸಣ್ಣ ಮಕ್ಕಳಾಗಿರುವುದರಿಂದ ಕ್ಯಾಮರಾ ಬಳಕೆ ಅಷ್ಟೊಂದು ಸೂಕ್ತವಲ್ಲ. ಆದರೂ ಪ್ರೌಢ ಶಾಲಾ ವಿದ್ಯಾರ್ಥಿಗಳು ಕ್ಯಾಮರಾ ಬಳಸಬಹುದು. ಈಗಂತೂ ಪ್ರತೀ ಮೊಬೈಲ್ ನಲ್ಲೂ ಉತ್ತಮ ದರ್ಜೆಯ ಕ್ಯಾಮರಾ ಇವೆ. ಇದರ ಜೊತೆಗೆ ಫ್ಲಾಷ್ ಲೈಟ್ ಸಹಾ ಇರುವುದರಿಂದ ರಾತ್ತಿ ಹಾರಾಡುವ ಕೀಟಗಳ ಚಿತ್ರಗಳನ್ನೂ ತೆಗೆಯಬಹುದಾಗಿದೆ. ಕೆಲವು ಕೀಟಗಳು ತಮ್ಮ ಆಹಾರದ ವಿಷಯದಲ್ಲಿ ಬಹಳ ‘ಚೂಸಿ' ಆಗಿರುತ್ತವೆ. ಅವುಗಳ ರುಚಿಯನ್ನು ಗಮನಿಸಿ ಅದಕ್ಕೆ ಸೂಕ್ತವಾದ ಗಿಡಗಳನ್ನು ನೆಡುವುದು ಉತ್ತಮ.
ಉದಾಹರಣೆಗೆ ನೀವು ಚಿಟ್ಟೆಯ ಜೀವನ ಕ್ರಮವನ್ನು ಗಮನಿಸುತ್ತೀರಿ ಎಂದಾದಲ್ಲಿ, ಮೊದಲಿಗೆ ಗಿಡದ ರೆಂಬೆಯಲ್ಲಿ ಮೊಟ್ಟೆಯಿಡುತ್ತದೆ. ಈ ಮೊಟ್ಟೆ ಸ್ವಲ್ಪ ದಿನಗಳಲ್ಲಿ ಕಂಬಳಿಹುಳುವಾಗಿ ಬದಲಾಗುತ್ತದೆ. ಮಕ್ಕಳು ಈ ಕಂಬಳಿಹುಳುವಿನಿಂದ ದೂರವಿರಬೇಕು. ಇದನ್ನು ಮುಟ್ಟುವುದಾಗಲೀ, ಹಿಡಿಯುವುದಾಗಲಿ ಮಾಡಲೇ ಬಾರದು. ಇದು ಮೈ ಮೇಲೆ ಹತ್ತಿದರೆ ತುರಿಕೆಯನ್ನು ಉಂಟು ಮಾಡುತ್ತದೆ. ಗಿಡದ ಎಲೆಗಳನ್ನು ತಿಂದು ಇವು ತಮ್ಮ ಹಸಿವನ್ನು ತಣಿಸುತ್ತವೆ. ಕ್ರಮೇಣ ಇವು ತಮ್ಮ ಸುತ್ತ ಒಂದು ರೀತಿಯ ಕೋಶವನ್ನು ಕಟ್ಟಲು ಪ್ರಾರಂಭಿಸುತ್ತವೆ. ಕೋಶ ಕಟ್ಟಿದ ನಂತರ ಕೆಲವೇ ದಿನಗಳಲ್ಲಿ ಆ ಕೋಶದಿಂದ ಪುಟ್ಟದಾದ ಚಿಟ್ಟೆ ಹೊರಬರುತ್ತದೆ. ಈ ಕಂಬಳಿ ಹುಳುಗಳನ್ನು ತಿನ್ನಲು ಕೆಲವು ಪಕ್ಷಿಗಳು ಕಾದು ಕುಳಿತುಕೊಂಡಿರುತ್ತವೆ. ಜೇಡಗಳೂ ತಮ್ಮ ಬಲೆಯನ್ನು ನೇಯ್ದು ಕೀಟಗಳನ್ನು ಬಲೆಗೆ ಬೀಳಿಸುತ್ತವೆ. ಇವೆಲ್ಲವನ್ನು ಮಕ್ಕಳು ಸೂಕ್ಸ್ಮವಾಗಿ ಗಮನಿಸುತ್ತಾ ಹೋದರೆ ತುಂಬಾನೇ ವಿಷಯಗಳನ್ನು ಕಲಿಯಬಹುದು.
ಕೆಲವು ಅಪರೂಪದ ಕೀಟಗಳು ನಿಮ್ಮ ವೀಕ್ಷಣೆಯ ಸಮಯದಲ್ಲಿ ಕಣ್ಣಿಗೆ ಬೀಳಬಹುದು. ಅವುಗಳ ಬಗ್ಗೆ ನೀವು ಹಿರಿಯರಿಂದ ಅಥವಾ ನಿಮ್ಮ ಅಧ್ಯಾಪಕರಿಂದ ತಿಳಿದುಕೊಳ್ಳಬಹುದು. ಈಗಂತೂ ಅಂತರ್ಜಾಲ ತಾಣ (Internet) ಗಳಲ್ಲಿ ಎಲ್ಲಾ ಮಾಹಿತಿಗಳು ದೊರೆಯುತ್ತವೆ. ನೀವು ಮೊಬೈಲ್ ಅಥವಾ ಕ್ಯಾಮರಾದಲ್ಲಿ ಚಿತ್ರಗಳನ್ನು ತೆಗೆದಿದ್ದರೆ ಅವುಗಳನ್ನು www.inaturalist.org ಅಥವಾ www.indiabiodiversity.org ತಾಣಗಳಲ್ಲಿ ಹಂಚಿಕೊಂಡರೆ, ಅಲ್ಲಿ ನುರಿತ ಕೀಟ ಶಾಸ್ತ್ರಜ್ಞರು ನಿಮಗೆ ಆ ಚಿತ್ರದ ಬಗ್ಗೆ ಅಧಿಕ ಮಾಹಿತಿಯನ್ನು ನೀಡುತ್ತಾರೆ. ನೀವು ಕೀಟ ವೀಕ್ಷಣೆಯನ್ನು ಮೊದಲು ಪ್ರಾರಂಭಿಸುವಾಗ ನಿಮಗೆ ಕೀಟಗಳ ಬಗ್ಗೆ ಗೊಂದಲವಾಗಬಹುದು. ಕ್ರಮೇಣ ನಿಮಗೆ ಈ ವಿಷಯದಲ್ಲಿ ಆಸಕ್ತಿ ಕುದುರಿ, ನಂತರ ನೀವೇ ಆ ಕೀಟದ ಬಗ್ಗೆ ಹೇಳಲು ಶುರು ಮಾಡುವಿರಿ.
ಹಲವಾರು ಕೀಟಗಳ ಬಗ್ಗೆ ಪ್ರಮುಖವಾಗಿ ಚಿಟ್ಟೆಗಳ ಬಗ್ಗೆ ಭಾರತೀಯ ಅಂಚೆ ಇಲಾಖೆ ಅಂಚೆ ಚೀಟಿ (stamps) ಯನ್ನು ಹೊರತಂದಿವೆ. ನೀವು ಈ ಅಂಚೆ ಚೀಟಿಗಳನ್ನು ಕೊಳ್ಳುವಾಗ ಅದರ ಜೊತೆ ಆ ಅಂಚೆ ಚೀಟಿಯ ಜೊತೆಗೆ ಬರುವ ವಿವರಗಳ ಪಟ್ಟಿಯನ್ನೂ ಖರೀದಿಸಿ. ಇದರಲ್ಲಿ ಆ ಅಂಚೆ ಚೀಟಿಯಲ್ಲಿರುವ ಕೀಟಗಳ ಬಗ್ಗೆ ಮಾಹಿತಿ ಸಿಗುತ್ತದೆ. ಚಿಟ್ಟೆಗಳ ಬಗ್ಗೆಯೇ ಅಂಚೆ ಚೀಟಿಗಳನ್ನು ಸಂಗ್ರಹ ಮಾಡಬಹುದು. ಮೊದಲಿಗೆ ದೇಶೀಯ, ನಂತರ ವಿದೇಶೀ ಚೀಟಿಗಳನ್ನು ಸಂಗ್ರಹಿಸಿ. ಅಂಚೆ ಕಚೇರಿಗಳಲ್ಲಿ ‘ಫಿಲಟೆಲಿ' ಎಂಬ ವಿಭಾಗವಿರುತ್ತದೆ. ಅಲ್ಲಿ ಹೊಸದಾಗಿ ಬಿಡುಗಡೆಯಾದ ಅಂಚೆ ಸಾಮಾಗ್ರಿಗಳು ದೊರೆಯುತ್ತವೆ. ಅಂಚೆ ಚೀಟಿ ಸಂಗ್ರಹ ಮಾಡುವ ಕೆಲವು ಹವ್ಯಾಸಿ ಸಂಘಗಳಿವೆ. ಇವುಗಳ ಜೊತೆ ಸೇರಿಕೊಂಡು ನಿಮಗೆ ಬೇಕಾದ ಮಾಹಿತಿಯನ್ನು ಪಡೆದುಕೊಳ್ಳಬಹುದು .
(ಆಧಾರ) ಚಿತ್ರ ಕೃಪೆ: ಅಂತರ್ಜಾಲ ತಾಣ