ಕೀ ಯಾವದು?
ಗಂಗಾವತಿಯ ಎಂ ಪರಶುರಾಮ ಪ್ರಿಯರ ಚೊಚ್ಚಲ ಹನಿ ಕವನಗಳ ಸಂಕಲನವೇ ‘ಕೀ ಯಾವದು?’ ಈ ಹನಿಗವನಗಳ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಉಪನ್ಯಾಸಕರಾದ ಬಿ.ಎನ್. ನಾಯಕ ಇವರು. ಇವರು ತಮ್ಮ ಮುನ್ನುಡಿಯಲ್ಲಿ “ಎಂ. ಪರಶುರಾಮ ಪ್ರಿಯ ಅವರು ತಮ್ಮ ಪ್ರಥಮ ಹನಿಗವನಗಳ ಸಂಕಲನ ‘ಕೀ ಯಾವದು?' ವನ್ನು ಸಹೃದಯರೆದುರು ಬಿಡುಗಡೆಗೊಳಿಸಲು ಉತ್ಸುಕರಾಗಿದ್ದಾರೆ. ಪ್ರಸ್ತುತ ಸಂಗ್ರಹದಲ್ಲಿ ಅನೇಕ ಚಿಕ್ಕ ಚಿಕ್ಕ ಹನಿಗವನಗಳಿವೆ. ಮೊದಲೇ ತರುಣ ಕವಿ ತಮ್ಮ ವಯಸ್ಸಿಗನುಗುಣವಾಗಿ ಪ್ರೀತಿ ಪ್ರೇಮಗಳ ವಿವಿಧ ಸ್ತರಗಳ ವಿಚಾರಗಳನ್ನು ಪ್ರಾಮಾಣಿಕವಾಗಿ ತಿಳಿಸಿದ್ದಾರೆ. ನಲ್ಲೆಯಾದವಳು ನಲ್ಲನ ಮನವನ್ನು ಸರಿಯಾಗಿ ತಿಳಿದು ಪವಿತ್ರವಾದ ವಿವಾಹ ಬಂಧನದಲ್ಲಿ ಒಂದಾಗಬೇಕೆಂಬುದು ಕವಿಯ ಆಶಯ ಹಿರಿದಾಗಿದೆ" ಎಂದಿದ್ದಾರೆ.
ಶಿಕ್ಷಕರಾದ ವಿಜಯ ವೈದ್ಯ ಇವರು ಪುಸ್ತಕಕ್ಕೆ ಹಿನ್ನುಡಿ (ಬೆನ್ನುಡಿ) ಬರೆದಿದ್ದಾರೆ. ಕವಿ ಅಲ್ಲಾಗಿರಿರಾಜು ಅವರು ತಮ್ಮ ‘ಮೊದಲ ಅನಿಸಿಕೆ'ಯಲ್ಲಿ ಪರಶುರಾಮ ಪ್ರಿಯರ ಕೆಲವು ಹನಿಗಳನ್ನು ವಿಮರ್ಶಿಸಿದ್ದಾರೆ. “ಕವಿಯ ಹೃದಯದಲ್ಲಿ ರಸದ ಕಾವು ಉಂಟಾದಾಗಲೇ ಅವನ ಪ್ರತಿಭೆ ಉಜ್ವಲಿಸುವುದು, ಅದರಂತೆ ಕವಿ ಪರಶುರಾಮ ‘ಪ್ರಿಯ' ಈಗ ತಾನೇ ಸಾಹಿತ್ಯ ಕ್ಷೇತ್ರದಲ್ಲಿ ಅರಳುವ ಪ್ರತಿಭೆ. ಕಾವ್ಯದ ಅಭ್ಯಾಸ ಚೆನ್ನಾಗಿ ಮಾಡಿದರೆ ಮುಂದೆ ಉತ್ತಮವಾದ ಕವಿತೆಗಳಿಗೆ ಜನ್ಮನೀಡಬಲ್ಲರೆಂದೇಳಬಹುದು.” ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಕವಿ ಪರಶುರಾಮ ಪ್ರಿಯರು ತಮ್ಮ ಮಾತಿನಲ್ಲಿ ಈ ಹನಿಗವನ ಸಂಕಲನ ಹೊರಬರಲು ಸಹಕಾರ ನೀಡಿದವರಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. ಜಯಶ್ರೀ ಪ್ರಕಾಶನದ ಎಂ.ಕೃಷ್ಣಯ್ಯ ಇವರೂ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದ್ದಾರೆ.
ಹನಿಗವನಗಳ ಬಗ್ಗೆ ಗಮನಿಸುವುದಾದರೆ, ಪುಸ್ತಕದ ಶೀರ್ಷಿಕೆಯಾದ ‘ಕೀ ಯಾವದು?’ ಹನಿಯಲ್ಲಿ…
ಹೆಣ್ಣೇ
ನಿನ್ನ ಹೃದಯ ಲಾಕರಿನ
ಕೀ ಯಾವದು? ತಿಳಿಸು
ಅಲ್ಲಿ ನನ್ನ ಪ್ರೇಮವೆಂಬ
ಬಂಗಾರವ ಸೇಫಾಗಿಡಬೇಕಾಗಿದೆ
*
ಒಂದು ಸುಳ್ಳು
ಹೆಣ್ಣೇ
ಸಾವಿರ ಸುಳ್ಳು ಹೇಳಿ
ಮದುವೆ ಮಾಡು ಎಂದಿದ್ದಾರೆ ಹಿರಿಯರು
ಆದರೆ ! ನಾನು
ಯಾರನ್ನೂ ಪ್ರೀತಿಸುತ್ತಿಲ್ಲ ? ಎಂಬ
ಒಂದೇ ಸುಳ್ಳು ಹೇಳಿ ನಿನ್ನ ಪ್ರೀತಿಸಿದೆ.
*
ಮಾರುತಿ ಕಾರು
ಅವಳನ್ನು ಮದುವೆಯಾಗಲು
ನನ್ನದೇನು ಇಲ್ಲ ತಕರಾರು
ಆದರೆ ಕರಾರಿನಂತೆ
ಕೊಡಿಸುತ್ತಿಲ್ಲವೇಕೆ ಅವರಪ್ಪ
ನನಗೊಂದು ಮಾರುತಿ ಕಾರು
ಹೀಗೆ ೪೦ ಪುಟಗಳ ಕಿರು ಪುಸ್ತಕದಲ್ಲಿ ತಮ್ಮ ಮನದಾಳದ ಹನಿಗವನಗಳನ್ನು ಕಟ್ಟಿಕೊಟ್ಟಿದ್ದಾರೆ ಪರಶುರಾಮ ಪ್ರಿಯರು.