ಕುಂಡದ ಬೇರು

ಕುಂಡದ ಬೇರು

ಪುಸ್ತಕದ ಲೇಖಕ/ಕವಿಯ ಹೆಸರು
ಎಡೆಯೂರು ಪಲ್ಲವಿ
ಪ್ರಕಾಶಕರು
ಮಿಲಿಟರಿ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೬೦.೦೦, ಮುದ್ರಣ: ೨೦೨೫

“ಹರಯದ ದಿನಗಳಲ್ಲಿ ಕವಿತೆಯ ಮೂಲಕ ಬರವಣಿಗೆ ಆರಂಭಿಸುವುದು ಮಾಮೂಲು. ನಂತರದ ದಿನಗಳಲ್ಲಿಯೂ ಕವಿತೆ ಕೈ ಹಿಡಿದರೆ ಬರವಣಿಗೆ ಮುಂದುವರೆಯುತ್ತದೆ, ಇಲ್ಲವಾದರೆ ಇಲ್ಲ. ಆದರೆ ಮಕ್ಕಳ ಸಾಹಿತ್ಯದ ಮೂಲಕ ಸಾಹಿತ್ಯ ಪ್ರವೇಶಿಸಿದ ಎಡೆಯೂರು ಪಲ್ಲವಿ ಅವರು 'ಭೂಮ್ತಾಯಿ ಅಜ್ಜಿ ಆದ್ಲಾ' ಮಕ್ಕಳ ಕತೆಗಳ ಸಂಕಲನ ಪ್ರಕಟಣೆಯ ಮೂಲಕ ತಾವು ಬೇರೆಯವರಿಗಿಂತ ಭಿನ್ನ ಎಂದು ಸಾಬೀತು ಪಡಿಸಿದ್ದರು. ಈಗ ಪ್ರಕಟವಾಗುತ್ತಿರುವ 'ಕುಂಡದ ಬೇರು ಕಥೆಗಳು' ಸಂಕಲನ ಪಲ್ಲವಿ ಅವರ ಸಾಹಿತ್ಯ ಚಟುವಟಿಕೆಗಳ ವಿಸ್ತರಣೆಯಂತಿದೆ. ಈ ಸಂಕಲನದ ಒಂಬತ್ತೂ ಕತೆಗಳು ಒಂದಕ್ಕಿಂತ ಮತ್ತೊಂದು ಭಿನ್ನವಾಗಿವೆ. ಈ ಭಿನ್ನತೆಯು ಕೇವಲ ಕತೆಗಳ ವಸ್ತುವಿಗೆ ಮಾತ್ರ ಸೀಮಿತವಾಗಿಲ್ಲ. ಕತೆ ಹೇಳುವುದಕ್ಕಾಗಿ ಬಳಸಿದ ತಂತ್ರ ಮತ್ತು ಕಟ್ಟುವುದಕ್ಕಾಗಿ ಬಳಸಿದ ಭಾಷೆಯಲ್ಲಿಯೂ ವೈವಿಧ್ಯ ಕಂಡು ಬರುತ್ತದೆ. ಪ್ರತಿಯೊಂದು ಕತೆಯನ್ನೂ ಒಂದು 'ಪ್ರಯೋಗ' ಎಂಬಂತೆ ಭಾವಿಸಿ ಕಟ್ಟಿರುವುದು ವಿಶೇಷ. ಈ ಪ್ರಯೋಗಶೀಲತೆಯೇ ಕತೆಗಳು ವಿಶಿಷ್ಟವಾಗಿ ಕಾಣಿಸುವುದಕ್ಕೆ ಕಾರಣವಾಗಿದೆ. ಕತೆಯ ಅಗತ್ಯಕ್ಕೆ ಅನುಗುಣವಾಗಿ ಬಳಕೆಯಾಗುವ ಭಾಷೆ ಗಮನ ಸೆಳೆಯದೇ ಇರಲಾರದು. ಅನುಭವದ ಲೋಕವನ್ನು ವಿಸ್ತರಿಸುವ ಈ ಕತೆಗಳು ಕನ್ನಡ ಕಥಾಲೋಕಕ್ಕೆ ಹೊಸ ಸೇರ್ಪಡೆ ಎನ್ನಲಡ್ಡಿಯಿಲ್ಲ.

ಮೇಲ್ನೋಟಕ್ಕೆ ತೆಳುವಾದ ಸಾಧಾರಣ ಎನ್ನಿಸುವ ಸಂಗತಿ-ಘಟನೆಗಳನ್ನು ಲೇಖಕಿಯು ತನ್ನ ಬರವಣಿಗೆಯ ಮೂಲಕ ವಿಶಿಷ್ಟಗೊಳಿಸಿದ್ದಾರೆ. ಮೊದಲ ಎರಡು ಕತೆಗಳಾದ 'ಕುಂಡದ ಬೇರು' 'ತಿರುವು' ಕತೆಗಳು ಲಘುವಾದ ವಸ್ತುವನ್ನು ಒಳಗೊಂಡಿವೆ. ನಂತರದ 'ರದ್ದಿ' ಮತ್ತು ಕಣಗಿಲೆ' ಕತೆಗಳು ಅನುಭವದ ತೀವ್ರತೆಯನ್ನು ಪದಗಳಲ್ಲಿ ಹಿಡಿಯುವಲ್ಲಿ ಯಶಸ್ವಿಯಾಗಿವೆ. 'ಎಜುಕೇಟೆಡ್ ಗರ್ಲ್ಸ್, 'ಬಿಲ್' ಮತ್ತು 'ಯುರೋಪ್ಲೊಮೆಟ್ರಿ' ಕತೆಗಳು ತನ್ನ ಗಂಭೀರ ವಸ್ತುವಿನ ಕಾರಣಕ್ಕಾಗಿ ಗಮನ ಸೆಳೆಯುತ್ತವೆ. 'ಹುಳಿತೇಗು' ಮತ್ತು 'ಮಾಯದ ಗಾಯ' ಕತೆಗಳಲ್ಲಿನ ಒಳತೋಟಿ, ಅಸಹಾಯಕತೆಗಳು ಮೆಚ್ಚುಗೆಗೆ ಪಾತ್ರವಾಗದೇ ಇರವು. ಈ ಕತೆಗಳ ಓದು ಸದ್ಯದ ಕನ್ನಡ ಕತೆಯ ಸ್ವರೂಪ ವಿವರಿಸುವ ಹಾಗೆ ಅನ್ನಿಸಿದರೆ ಅಚ್ಚರಿಯಿಲ್ಲ. ಅಲ್ಲಲ್ಲಿ ಕವಿತೆಯ ಸಾಲುಗಳಂತೆ ಬರುವ ಗದ್ಯವು ಕತೆಗಳ ಓದನ್ನು ಪ್ರಿಯವಾಗಿಸುತ್ತದೆ. ಪಲ್ಲವಿಯವರ ರಚನೆಗಳಿಗೆ ಸಾಹಿತ್ಯಕ್ಷೇತ್ರದಲ್ಲಿ ವಿಶೇಷ ಮನ್ನಣೆ ದೊರೆಯಲಿ ಎಂಬ ಸದಾಶಯ ನನ್ನದು.” ಈ ಸಾಲುಗಳು ಕಂಡುಬಂದದ್ದು ಎಡೆಯೂರು ಪಲ್ಲವಿ ಬರೆದ ‘ಕುಂಡದ ಬೇರು’ ಎನ್ನುವ ಕಥಾಸಂಕಲನದ ಬೆನ್ನುಡಿಯಲ್ಲಿ. ಇದನ್ನು ಬರೆದು ಬೆನ್ನು ತಟ್ಟಿದವರು ಖ್ಯಾತ ಸಾಹಿತಿ ದೇವು ಪತ್ತಾರ.

ಎಡೆಯೂರು ಪಲ್ಲವಿಯವರ ಮೊದಲ ಕಥಾಸಂಕಲನ "ಕುಂಡದ ಬೇರು" ಒಂಭತ್ತು ವೈವಿಧ್ಯಮಯ ಕಥೆಗಳ ಸಂಗ್ರಹವಾಗಿದೆ. ಪ್ರತಿಯೊಂದು ಕಥೆಯೂ ತನ್ನದೇ ಆದ ವಿಶಿಷ್ಟ ಕಥಾವಸ್ತುವಿನೊಂದಿಗೆ ಸಾಮಾಜಿಕ ಸಂವೇದನೆ, ಮಾನವೀಯ ತಲ್ಲಣಗಳು ಮತ್ತು ವ್ಯವಸ್ಥೆಯ ವಿರುದ್ಧ ಧ್ವನಿಯಾಗಿ ಎದ್ದು ಕಾಣುತ್ತದೆ. ಈ ಕಥೆಗಳು ಸಮಾಜದ ವಿವಿಧ ಆಯಾಮಗಳನ್ನು, ವಿಶೇಷವಾಗಿ ಸ್ತ್ರೀ ಜೀವನದ ಸಂಕೀರ್ಣತೆಯನ್ನು ಸೂಕ್ಷ್ಮವಾಗಿ ಚಿತ್ರಿಸುತ್ತವೆ.

ಕುಂಡದ ಬೇರು: ಈ ಕಥೆಯ ಚಿನ್ನಿಯ ಒಡನಾಟವು ಸಾಮಾಜಿಕ ಕಟ್ಟುಪಾಡುಗಳಿಂದ ಬಂಧಿತವಾದ ಹೆಣ್ಣಿನ ಒಡಾಟವನ್ನು ಚಿತ್ರಿಸುತ್ತದೆ. ತಂದೆಯ ಕಠಿಣ ನಿಯಮಗಳ ಚೌಕಟ್ಟಿನಲ್ಲಿ ಸಿಕ್ಕಿರುವ ಚಿನ್ನಿಯ ಅಕ್ಷರಗಳ ಮೂಲಕ ಸ್ವಾತಂತ್ರ್ಯದ ಹೋರಾಟವು ಕಾಣಿಸುತ್ತದೆ. ಆದರೆ, ಪುರುಷ ಕ್ರೌರ್ಯದ ಎದುರು ಅವಳ ರೆಕ್ಕೆಗಳು ಮುದುಡಿಕೊಂಡು ನಿರಾಸೆಯ ಸಂಕೇತವಾಗುತ್ತವೆ.

ತಿರುವು: ಈ ಕಥೆಯಲ್ಲಿ ಪುರುಷ ನಿರೂಪಕನ ಬಾಲ್ಯದ ನೆನಪುಗಳು ಮತ್ತು ಪ್ರೀತಿಯ ತವಕ ತಲ್ಲಣಗಳು ಸೂಕ್ಷ್ಮವಾಗಿ ಬಿಚ್ಚಿಕೊಳ್ಳುತ್ತವೆ. ಚಂದ್ರಿಯ ದುರಂತದಿಂದ ಕೊನೆಗೊಳ್ಳುವ ಈ ಕಥೆ, ಪುರುಷ ಸಹಜತೆಯ ಒಂದು ಚಿತ್ರಣವನ್ನು ಒಡ್ಡುತ್ತದೆ. ಕಾಲದ ತಿರುವು ಜೀವನದ ಅನಿರೀಕ್ಷಿತ ರೂಪವನ್ನು ತೋರಿಸುತ್ತದೆ.

ರದ್ದಿ: ಜಾತಿ ವ್ಯವಸ್ಥೆಯ ಕುರಿತಾದ ಈ ಕಥೆಯಲ್ಲಿ, ಪ್ರೇಮ ವಿವಾಹದ ಹೆಮ್ಮೆಯೊಂದಿಗೆ ಬದುಕುವ ನಿರೂಪಕಿಯ ಅನುಭವವು ಸಮಾಜದ ತಿರಸ್ಕಾರದ ಎದುರು ನಿಂತು ಹೋರಾಡುತ್ತದೆ. ಗೆಳತಿಯ ಮನೆಯಲ್ಲಿ ಎದುರಾದ ಅವಮಾನವು ಜಾತಿಯ ಶಾಶ್ವತ ಗಾಯವನ್ನು ಒಡ್ಡುತ್ತದೆ.

ಕಣಗಿಲೆ: ಚಂದ್ರಿಯ ದುರಂತದ ಕಥೆಯು ಲೈಂಗಿಕ ದೌರ್ಜನ್ಯದ ಭೀಕರತೆಯನ್ನು ಚಿತ್ರಿಸುತ್ತದೆ. ರೂಪೇಶನಂತಹ ಸಹಾನುಭೂತಿಯ ಪಾತ್ರದೊಂದಿಗೆ, ಈ ಕಥೆಯು ಸ್ತ್ರೀ ಸಂವೇದನೆಯನ್ನು ಜಾಗೃತಗೊಳಿಸುತ್ತದೆ, ಆದರೆ ಸಂಪೂರ್ಣ ಪುರುಷ ದ್ವೇಷವನ್ನು ತೋರದೆ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ.

ಎಜುಕೇಟೆಡ್ ಗರ್ಲ್ಸ್: ಈ ಕಥೆಯು ಡಾಂಭಿಕ ಪ್ರೀತಿಯಿಂದಾಗಿ ಸಾಗರಿಯ ಜೀವನದ ವಿಘಟನೆಯನ್ನು ಚಿತ್ರಿಸುತ್ತದೆ. ರಾಜೇಶನಂತಹ ಪಾತ್ರಗಳು ಆಧುನಿಕ ಸಮಾಜದಲ್ಲಿ ಗಂಭೀರತೆಯ ಕೊರತೆಯನ್ನು ಬಿಂಬಿಸುತ್ತವೆ.

ಬಿಲ್: ಸಾವಿತ್ರಿಯ ಕಥೆಯು ದಾಂಪತ್ಯದಲ್ಲಿ ಅಪನಂಬಿಕೆಯಿಂದ ಉಂಟಾಗುವ ಒಡಕನ್ನು ಚಿತ್ರಿಸುತ್ತದೆ. ಕೊರೋನಾದ ದುರಂತದ ನಂತರ, ಸಾವಿತ್ರಿಯ ನಿರ್ಧಾರವು ನೈತಿಕತೆಯ ಪ್ರಶ್ನೆಯನ್ನು ಎತ್ತುತ್ತದೆ, ಆದರೆ ತನ್ನ ಮಗನ ಭವಿಷ್ಯಕ್ಕಾಗಿ ತೆಗೆದುಕೊಂಡ ನಿರ್ಧಾರವು ಸಹಜವೆನಿಸುತ್ತದೆ.

ಹುಳಿತೇಗು: ಮಾಯಾನಗರಿಯ ಯಾಂತ್ರಿಕ ಬದುಕಿನಲ್ಲಿ ಸಿಲುಕಿರುವ ಕಥಾನಾಯಕಿಯ ತುರ್ತು ಮತ್ತು ತವಕವನ್ನು ಈ ಕಥೆ ಚಿತ್ರಿಸುತ್ತದೆ. ಗೆಳತಿಯ ಸಾಂತ್ವನದಿಂದ ಬದುಕಿನ ಹೊಸ ದಿಕ್ಕನ್ನು ಕಾಣುವ ಅವಳ ಯೋಚನೆಯು ಜೀವನದ ನೆಮ್ಮದಿಯ ಹುಡುಕಾಟವನ್ನು ಒತ್ತಿಹೇಳುತ್ತದೆ.

ಕಥೆಗಾರ್ತಿ ಎಡೆಯೂರು ಪಲ್ಲವಿಯವರ ನಿರೂಪಣೆಯ ಶೈಲಿಯು ಸರಳವಾದರೂ ಗಾಢವಾಗಿದೆ. ಕಥೆಗಳಲ್ಲಿನ ಸಾಮಾಜಿಕ ಚಿಂತನೆ, ಸ್ತ್ರೀ ಸಂವೇದನೆ ಮತ್ತು ವ್ಯವಸ್ಥೆಯ ವಿರುದ್ಧ ಧ್ವನಿಯಾಗಿ, ಈ ಸಂಕಲನವು ಕನ್ನಡ ಸಾಹಿತ್ಯದಲ್ಲಿ ಒಂದು ಮಹತ್ವದ ಕೊಡುಗೆಯಾಗಿದೆ. ೧೦೮ ಪುಟಗಳ ಈ ಪುಟ್ಟ ಕಥಾ ಸಂಕಲನ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ.