ಕುಂಡೆ ಕುಸ್ಕ - ಇದೆಂತಾ ಹಕ್ಕಿ...?
ಗುಡ್ಡದ ಮೇಲೊಂದು ಶಾಲೆ, ನಾನು ಅಲ್ಲಿ ಲೆಕ್ಕದ ಮೇಷ್ಟ್ರು. ಮಧ್ಯಾಹ್ನದ ಮೊದಲ ಅವಧಿಯಲ್ಲಿ ನನಗೆ ಕೆಲವೊಮ್ಮೆ ಬಿಡುವು ಇರುತ್ತಿತ್ತು. ಶಾಲೆಯ ವಾಚನಾಲಯದ ಕಿಟಕಿಯ ಹತ್ತಿರ ಕುಳಿತು ಪುಸ್ತಕ ಓದುವುದು ನನ್ನ ಅಭ್ಯಾಸ. ಪಕ್ಷಿಗಳ ಬಗ್ಗೆ ಆಸಕ್ತಿ ಆರಂಭವಾದ ಹೊಸತರಲ್ಲಿ ಏನೇ ಹಾರಿದರೂ, ಯಾವ ಹಕ್ಕಿಯ ಶಬ್ದ ಕೇಳಿದರೂ ಆ ಕಡೆ ಗಮನಹರಿಸುವ ಅಭ್ಯಾಸ ಶುರುವಾಗಿತ್ತು.
ಅಷ್ಟರಲ್ಲಿ ಯಾವುದೋ ಹಕ್ಕಿಯ ಶಬ್ದ ಹತ್ತಿರದಲ್ಲೇ ಕೇಳಿಸಿತು. ಕಣ್ಣು ಬಿಟ್ಟು ಆಕಡೆ ತಿರುಗಿ ನೋಡಿದರೆ ಗುಬ್ಬಚ್ಚಿ ಗಾತ್ರದ ಪುಟಾಣಿ ಹಕ್ಕಿಯೊಂದು ನೆಲದಮೇಲೆ ಓಡಾಡುತ್ತಿತ್ತು. ಬೂದು ಬಣ್ಣದ ಬೆನ್ನು, ತಿಳಿ ಹಳದಿ ಬಣ್ಣದ ಹೊಟ್ಟೆ, ಕಪ್ಪು ಬಣ್ಣದ ಉದ್ದನೆಯ ಬಾಲದ ಹಕ್ಕಿಯೊಂದು ಕಾಣಿಸಿತು. ದೇಹದಿಂದ ತುಸು ಉದ್ದವಾದ ಬಾಲವನ್ನು ಸೆಕೆಂಡಿಗೆ ಎರಡು ಬಾರಿಯಂತೆ ಕುಣಿಸುತ್ತಾ ಓದಾಡುತ್ತಿತ್ತು. ಶಾಲೆಯ ಮಕ್ಕಳು ಕೈತೊಳೆದ ನೀರು ಹರಿದು ಹೋಗಿ ಸಣ್ಣ ಹೊಂಡವೊಂದರಲ್ಲಿ ನಿಂತಿತ್ತು. ಅದರ ಸುತ್ತಲೂ ಓಡಾಡುತ್ತಾ, ಬಾಲ ಕುಣಿಸುತ್ತಾ, ಕೆಸರಿನ ಒಳಗೆ ಕೊಕ್ಕು ಹಾಕಿ ಸಣ್ಣ ಹುಳುಗಳನ್ನು ಹಿಡಿದು ತಿನ್ನುತ್ತಿತ್ತು.
ಇಂತಹ ಅವಕಾಶಕ್ಕಾಗಿಯೇ ಕಾಯುತ್ತಿದ್ದ ನಾನು ನಿಧಾನವಾಗಿ ಕ್ಯಾಮರಾ ತಂದು ಒಂದೆರಡು ಸುಂದರವಾದ ಫೋಟೋ ತೆಗೆದುಕೊಂಡೆ. ಅಷ್ಟು ಹೊತ್ತಿಗೆ ಸರಿಯಾಗಿ ಅಲ್ಲಿಗೆ ಒಂದು ನಾಯಿ ಉಳಿದ ಅನ್ನದ ಚೂರುಗಳನ್ನು ತಿನ್ನಲು ಅಲ್ಲಿಗೆ ಬಂತು. ಹಕ್ಕಿ ಹಾರಿ ಹೋಯಿತು. ಕೂಡಲೇ ನನ್ನ ಬಳಿ ಇದ್ದ ಪಕ್ಷಿತಜ್ಙ ಸಲೀಂ ಅಲಿಯವರ ʼThe Book Of Indian Birds’ ತೆಗೆದು ಹಕ್ಕಿಯ ಹೆಸರು ಹುಡುಕಿದೆ.. ತನ್ನ ಬಾಲವನ್ನು ಸದಾ ಕುಣಿಸುತ್ತಾ ಓಡಾಡುವ ಕಾರಣದಿಂದ Wagtail ಎಂಬ ಹೆಸರು ಈ ಹಕ್ಕಿಯದ್ದು.
ಈ ಹಕ್ಕಿಯ ಬಗ್ಗೆ ಹೆಚ್ಚಿನ ಮಾಹಿತಿ ಓದುತ್ತಾ ಹೋದಂತೆ ಇದರ ಬಗ್ಗೆ ವಿಶೇಷ ಒಂದು ತಿಳಿಯಿತು. ಈ ಹಕ್ಕಿ ಪ್ರತಿ ವರ್ಷ ಚಳಿಗಾಲದಲ್ಲಿ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾದ ಊರುಗಳಿಗೆ ವಲಸೆ ಬರುತ್ತದೆ... ಬೇಸಗೆ ಕಾಲ ಬಂದರೆ ಉತ್ತರದ ಬಲೂಚಿಸ್ತಾನ್, ಲಧಾಕ್, ಹಿಮಾಲಯದ 1800 ರಿಂದ 4300 ಮೀ ಎತ್ತದರ ಪ್ರದೇಶಗಳಿಗೆ ಮತ್ತೆ ಹಿಂದೆ ಹೋಗುತ್ತದೆ.
ಅಷ್ಟು ಹೊತ್ತಿಗೆ ಸರಿಯಾಗಿ ನನ್ನ ಕೆಲವು ವಿದ್ಯಾರ್ಥಿಗಳು ಬಂದರು. ನನ್ನ ಫೋಟೋಗ್ರಫಿ ಹವ್ಯಾಸದ ಬಗ್ಗೆ ಚೆನ್ನಾಗಿ ತಿಳಿದಿದ್ದ ಅವರು ಯಾವುದಾದ್ರೂ ಹಕ್ಕಿ ಫೋಟೋ ಸಿಕ್ತಾ ಸಾರ್ ಎಂದು ವಿಚಾರಿಸಿದ್ರು. ಕ್ಯಾಮರಾದಲ್ಲಿ ತೆಗೆದ ಹಕ್ಕಿಯ ಫೋಟೋ ತೋರಿಸಿದೆ. ಮಕ್ಕಳು ತಕ್ಷಣ ಇದಕ್ಕೆ ನಮ್ಮಲ್ಲಿ ಕುಂಡೆ ಕುಸ್ಕ ಅಂತಾರೆ ಸಾರ್ ಎನ್ನಬೇಕೇ.. ನಾವು ದಿನಾ ಬರುವ ದಾರಿಯಲ್ಲಿ, ಹೊಳೆಯ ಬದಿಯಲ್ಲಿ ನಾವು ಈ ಹಕ್ಕಿಯನ್ನು ನೋಡಿದ್ದೇವೆ ಸಾರ್. ಬಾಲ ಕುಣಿಸುವ ಹಕ್ಕಿ ಎನ್ನುವುದು, ಕುಂಡೆ ಕುಣಿಸುವ ಹಕ್ಕಿ ಎಂದಾಗಿ, ಆಡುಮಾತಿನಲ್ಲಿ ಕುಂಡೆ ಕುಸ್ಕ ಆಗಿರಬೇಕು ಎಂದು ಆಮೇಲೆ ತಿಳಿಯಿತು.
ಕನ್ನಡದಲ್ಲಿ ಈ ಹಕ್ಕಿಗೆ ಸಿಪಿಲೆ ಎಂಬ ಸುಂದರವಾದ ಹೆಸರೂ ಇದೆ. ಮುಂದೆ ಪಕ್ಷಿ ವೀಕ್ಷಣೆಯ ಹವ್ಯಾಸ ಬೆಳೆದಂತೆ ಹಲವಾರು ಕಡೆ ಈ ಹಕ್ಕಿಯನ್ನು ನೋಡಿದ್ದೇನೆ.. ಇದರ ಹಲವು ಸೋದರ ಸಂಬಂಧಿಗಳೂ ಇದ್ದಾರೆ.. ಎಲ್ಲರೂ ಬಾಲ ಕುಣಿಸುವವರೇ..
ಹಿಮಾಲಯದ 1800 ರಿಂದ 4300 ಮೀ ಎತ್ತರದ ಬಲೂಚಿಸ್ತಾನ್, ಲಧಾಕ್, ಕಡೆ ಎಪ್ರಿಲ್ ನಿಂದ ಜುಲೈ ತಿಂಗಳ ನಡುವೆ ಸಂತಾನೋತ್ಪತ್ತಿ ಮಾಡುವ ಈ ಹಕ್ಕಿ, ಅಲ್ಲಿ ಚಳಿಗಾಲ ಪ್ರಾರಂಭವಾಗುತ್ತಿದ್ದಂತೆ ದಕ್ಷಿಣದ ಬೆಚ್ಚಗಿನ ಪ್ರದೇಶಗಳಿಗೆ ವಲಸೆ ಬರುತ್ತದೆ. ಇಲ್ಲಿ ಬೇಸಗೆ ಪ್ರಾರಂಭವಾದಾಗ ಮತ್ತೆ ಸಂತಾನೋತ್ಪತ್ತಿಗೆ ಉತ್ತರದ ಪ್ರದೇಶಗಳಿಗೆ ವಲಸೆ ಹೋಗುತ್ತದೆ... ಈ ಬಾರಿ ಮಳೆಗಾಲ ಮುಗಿದು ಚಳಿ ಪ್ರಾರಂಭವಾಗುವ ಹೊತ್ತಿಗೆ ಈ ಪುಟಾಣಿ ಹಕ್ಕಿ ನಿಮ್ಮ ಆಸುಪಾಸಿನಲ್ಲೂ ಕಾಣಲು ಸಿಗಬಹುದು... ಹುಡುಕ್ತೀರಲ್ಲ..
ಕನ್ನಡ ಹೆಸರು: ಬೂದು ಸಿಪಿಲೆ, ಕುಂಡೆ ಕುಸ್ಕ, ಬಾಲ ಕುಣಿಸುವ ಹಕ್ಕಿ
ಇಂಗ್ಲೀಷ್ ಹೆಸರು: GREY WAGTAIL
ವೈಜ್ಙಾನಿಕ ಹೆಸರು: Motacilla cinerea
-ಅರವಿಂದ ಕುಡ್ಲ, ಬಂಟ್ವಾಳ