ಕುಂದಾಪ್ರ ಕನ್ನಡ ನಿಘಂಟು

ಕರ್ನಾಟಕದ ಅಧಿಕೃತ ಭಾಷೆ ಕನ್ನಡವೇ ಆದರೂ ಹಲವಾರು ಬಗೆಯ ಕನ್ನಡ ಮಾತನಾಡುವ ಜನರಿದ್ದಾರೆ. ಉತ್ತರ ಕರ್ನಾಟಕದ ಕನ್ನಡ, ಬೆಂಗಳೂರು ಕನ್ನಡ, ಮಂಗಳೂರು ಕನ್ನಡ, ಅರೆ ಭಾಷೆ ಕನ್ನಡ, ಕುಂದಾಪುರದಲ್ಲಿ ಮಾತನಾಡುವ ಕುಂದಪ್ರ ಕನ್ನಡ ಹೀಗೆ ಹತ್ತು ಹಲವು ವಿಧಗಳಿವೆ. ಪ್ರತಿಯೊಂದು ಕನ್ನಡದ ಸೊಗಡೇ ಅದ್ಭುತ. ಕುಂದಾಪ್ರ ಕನ್ನಡದಲ್ಲಿನ ಪದಗಳ ಬಗ್ಗೆ ಮತ್ತಷ್ಟು ವಿವರಗಳನ್ನು ನೀಡುವ ಕನ್ನಡ ನಿಘಂಟನ್ನು ಖ್ಯಾತ ವ್ಯಂಗ್ಯ ಚಿತ್ರಕಾರರಾದ ಪಂಜು ಗಂಗೊಳ್ಳಿಯವರು ಸಂಪಾದಿಸಿದ್ದಾರೆ.
‘ಕುಂದಾಪ್ರ ಕನ್ನಡ ನಿಘಂಟು’ ಈ ಕೃತಿಯು ವ್ಯಂಗ್ಯಚಿತ್ರಕಾರ ಲೇಖಕ ಪಂಜು ಗಂಗೊಳ್ಳಿ ಅವರ ಪ್ರಧಾನ ಸಂಪಾದಕತ್ವದಲ್ಲಿ ಪ್ರಕಟವಾಗಿದೆ. ಪ್ರೊ-ಡಿಜಿ ಪ್ರಿಂಟಿಂಗ್ ಪ್ರಕಾಶನದಿಂದ ಪ್ರಕಟವಾಗುತ್ತಿರುವ ಈ ಕೃತಿ ಪಂಜು ಗಂಗೊಳ್ಳಿ ಅವರ ೨೦ ವರ್ಷಗಳ ಸುದೀರ್ಘ ತಪಸ್ಸಿನ ಫಲ, ಈ ಕೃತಿಗೆ ಅಕ್ಷರಗಳು, ಶಬ್ದಗಳು, ನುಡಿಗಟ್ಟುಗಳು, ಅರ್ಥಗಳಿಗೆ ಮಿಗಿಲಾದ ಒಂದು ಭಾವನಾತ್ಮಕ ಮಗ್ಗುಲೂ ಇದೆ ಎನ್ನುತ್ತಾರೆ ಪ್ರಕಾಶಕ ರಾಜಾರಾಂ ತಲ್ಲೂರು. ಕಲ್ಯಾಣಪುರ ಹೊಳೆಯಿಂದ ಶಿರೂರು ಭಟ್ಕಳ ತನ್ನಕ ಕೇಳಿಬರುವ ಒಂದು ವಿಶಿಷ್ಟ ಉಪಭಾಷೆ- ಕುಂದಾಪ್ರ ಕನ್ನಡ. ಇದು ಸೀಮಿತ ಪ್ರದೇಶದ ಭಾಷೆಯಾಗಿದ್ದರೂ ಕುಂದಾಪ್ರ ಕನ್ನಡದ ಆಳ ವಿಸ್ತಾರ ಅಗಾಧವಾದುದು. ಸಿದ್ಧಾಪುರದ ಕನ್ನಡಕ್ಕಿಂತ ಕೋಟ-ಕೋಟೇಶ್ವರ ಕನ್ನಡ ಭಿನ್ನವಾದುದು. ತಲ್ಲೂರು, ಹೆಮ್ಮಾಡಿ, ಗಂಗೊಳ್ಳಿ ಕನ್ನಡದಂತೆ ನಾವುಂದ, ಉಪ್ಪುಂದ, ಬೈಂದೂರು ಕನ್ನಡವಿಲ್ಲ. ವರ್ಷದ ಹನ್ನೆರಡು ತಿಂಗಳುಗಳಿಗೆ ತನ್ನದೇ ಆದ ಪ್ರತ್ಯೇಕ ಹೆಸರನ್ನೂ ಕುಂದಾಪ್ರ ಕನ್ನಡ ಹೊಂದಿದೆ. ಶಿಷ್ಟ ಅಥವಾ ಗ್ರಾಂಥಿಕ ಕನ್ನಡದಲ್ಲಿ ಕಂಡುಬಾರದ ಹಳಗನ್ನಡದ ಎಷ್ಟೋ ಪದಪ್ರಯೋಗಗಳು ಕುಂದಾಪ್ರ ಕನ್ನಡದಲ್ಲಿ ಇನ್ನೂ ಚಾಲ್ತಿಯಲ್ಲಿವೆ. ಪ್ರಾಚೀನತೆ ಹಾಗೂ ಭಾಷಾ ಸಿರಿವಂತಿಗೆಯಲ್ಲಿ ಕುಂದಾಪ್ರಕನ್ನಡ ಎಂಬ ಈ ಉಪಭಾಷೆ ತನ್ನ ಮುಖ್ಯಭಾಷೆಗೆ ಸರಿಮಿಗಿಲೆಂಬಂತಿದೆ. ಈ ಭಾಷೆಯ ನಿಘಂಟು ಆಗಿರುವ ಮಹತ್ವದ ಕೃತಿಯ ಸಂಪಾದಕರಾಗಿ ಸಿ.ಎ. ಪೂಜಾರಿ, ಹಾಗೂ ರಾಮಚಂದ್ರ ಉಪ್ಪುಂದ ಅವರು ಕಾರ್ಯನಿರ್ವಹಿಸಿದ್ದಾರೆ.
‘ಕುಂದಾಪ್ರ ಕನ್ನಡ ನಿಘಂಟು’ ಕೃತಿಯ ಸಹ ಲೇಖಕರಾದ ನರೇಂದ್ರ ಪೈ ಅವರು ತಮ್ಮ ಮಾತಿನಲ್ಲಿ ಹೀಗೆ ಬರೆದಿದ್ದಾರೆ… “ನಮ್ಮ ನಮ್ಮ ಬಾಲ್ಯದಲ್ಲಿ ನಾವು ಆಡುತ್ತಿದ್ದ ಭಾಷೆ ಏನಿದೆ, ಅದಕ್ಕೆ ನಿತ್ಯ ಓಡಾಡುತ್ತಿದ್ದ ಒಂದು ಊರಿನ ಹಾದಿ ಬೀದಿ, ಓಣಿಗಳು, ಕಲಿಯುತ್ತಿದ್ದ ಶಾಲೆ, ಹತ್ತಾರು ನೆನಪುಗಳ ದಿಬ್ಬಗಳು, ಕುರುಚಲು ಕಾಡು, ಗದ್ದೆಗಳು, ಅವುಗಳ ಅಂಚಿನ ಕಾಲ್ದಾರಿ, ನದಿ, ಅಲ್ಲಿನ ದೋಣಿ, ಅದರ ನೀರಿನ ಪರಿಮಳ, ಸಣ್ಣಪುಟ್ಟ ಹಳ್ಳಗಳು, ಸಮುದ್ರ, ಗೋಲಿ, ಲಗೋರಿ, ಕಳ್ಳಪೋಲೀಸ್ ಆಟ ಆಡುತ್ತಿದ್ದ ನೆಲದ ಮಣ್ಣು, ತಿನ್ನುತ್ತಿದ್ದ ಹಣ್ಣು, ಹತ್ತಿಳಿಯುತ್ತಿದ್ದ ಮರಗಳು, ಕಲ್ಲೆಸೆದು ಹಣ್ಣು ಬೀಳಿಸುತ್ತಿದ್ದ ಬುಗುರಿ, ಪೇರಲೆ ಮರಗಳು, ಬಯ್ಯುತ್ತಿದ್ದ ಆಯಾ ಮರಗಳ ಮನೆಯವರು, ಹಗ್ಗ ಹಿಡಿದು ನೀರೆಳೆಯುತ್ತಿದ್ದ ಬಾವಿ, ನಜ್ಜುಗುಜ್ಜಾದ ಅಲ್ಯುಮಿನಿಯಂ ಕೊಡಪಾನ, ಉಯ್ಯಾಲೆ, ಕದ್ದು ಈಜುತ್ತಿದ್ದ ಕೆರೆ, ನಮ್ಮೊಂದಿಗೆ ಬದುಕುತ್ತಿದ್ದ ನಾಯಿ, ಬೆಕ್ಕು, ಕೋಳಿ, ಗುಬ್ಬಚ್ಚಿ, ಕಾಗೆಗಳ ಜೊತೆಗೆಲ್ಲ ಒಂದು ನಂಟಿರುತ್ತದೆ. ನಾವು ಬೆಳೆಯುತ್ತ ಬೆಳೆಯುತ್ತ ಇವುಗಳಿಂದ ದೂರವಾಗುತ್ತೇವೆ, ಊರಿನಿಂದಲೂ ಬೇರೆಯಾಗುತ್ತೇವೆ. ಹಾಗೆಯೇ ಬಳಸುತ್ತಿದ್ದ ಭಾಷೆಯೂ ಬದಲಾಗುತ್ತದೆ. ಗೌರವಕ್ಕೆ ಅಂತ ಇಂಗ್ಲೀಷನ್ನು ತಪ್ಪು ತಪ್ಪಾಗಿಯಾದರೂ ಬಳಸಿ ಮೆರೆಯುವ ಚಟ ಹತ್ತುತ್ತದೆ. ಕೆಲವು ವರ್ಷಗಳ ಹಿಂದೆ ನಾವು ಆಡುತ್ತಿದ್ದ ಗೋಲಿಯಾಟಕ್ಕೆ ಬಳಸುತ್ತಿದ್ದ ಬೆಂದ (ಚೌಕ ಬರೆದು ಅದರ ಅಂಚುಗಳಲ್ಲಿ ಗೋಲಿ ಇಟ್ಟು ಅದನ್ನು ಅಲ್ಲಿಂದ ಎಬ್ಬಿಸುವ ಆಟ), ಕೂಚ್ ನಹಿ ಸರ್ಫೀಟ್ ನಹಿ ತರದ ಕೆಲವು ಶಬ್ದಗಳನ್ನು ನೆನಪಿಸಿಕೊಳ್ಳಲು ಸ್ನೇಹಿತರಿಗೆ ಕರೆ ಮಾಡಿದರೆ ನನಗಿದ್ದಷ್ಟೂ ನೆನಪು ಅವರಿಗಿರಲಿಲ್ಲ.
ಭಾಷೆಗಳು ಸಾಯುವುದೆಂದರೆ ಇದೇ. ಬಳಕೆಯಿಂದ ಕೆಲವೊಂದು ಶಬ್ದಗಳು ಶಾಶ್ವತವಾಗಿ ಕಣ್ಮರೆಯಾಗಿ, ಅವುಗಳ ಬದಲಿಯಾಗಿ ಬೇರೆ ಭಾಷೆಯ ಶಬ್ದಗಳು ಬಳಕೆಗೆ ಬರುವುದು ಅಥವಾ ಕೆಲವು ಶಬ್ದಗಳ ಅಗತ್ಯವೇ ನಮಗಿಲ್ಲವಾಗಿ ಬಿಡುವುದು. ದಿನ ಬಳಕೆಯ ವಸ್ತುಗಳು, ಮಾಪಕಗಳು, ಸಂಬಂಧಗಳು, ಆಟಗಳು ಬದಲಾದಂತೆಲ್ಲ ಇದು ನಮಗರಿವಿಲ್ಲದೇ ನಡೆಯುತ್ತಿರುತ್ತದೆ.
ಕುಂದಾಪುರ ಕನ್ನಡ ನನಗೆ ನನ್ನ ಬಾಲ್ಯದ ಭಾಷೆ. ನನಗೆ ನನ್ನ ಬಾಲ್ಯವನ್ನು ನೆನಪಿಸಿಕೊಳ್ಳಲು ಬೇಕೇ ಬೇಕಾದ ಭಾಷೆ. ಆದರೆ ಆ ಭಾಷೆಯ ಶಬ್ದಗಳನ್ನು ನೆನಪಿಸಿಕೊಳ್ಳುವ, ಈಗ ಇಷ್ಟು ತಡವಾಗಿ ಮತ್ತೆ ಬಳಕೆಗೆ ತರುವ, ಉಳಿಸಿಕೊಳ್ಳುವ ಮಾರ್ಗವೇನಿದೆ ಎಂದು ಮತ್ತೆ ಮತ್ತೆ ಅನಿಸುತ್ತಿತ್ತು.
ಪಂಜು ಗಂಗೊಳ್ಳಿ ಅವರ ಪ್ರಧಾನ ಸಂಪಾದಕತ್ವದಲ್ಲಿ "ಕುಂದಾಪ್ರ ಕನ್ನಡ ನಿಘಂಟು" ಬಂದಾಗ, ಇಂಥ ಒಂದು ನಿಘಂಟು ಆ ಕೆಲಸವನ್ನು ಮಾಡಿತ್ತು. ಇಲ್ಲಿನ ಕೆಲವು ಶಬ್ದಗಳೇ ರಂಗೋಲಿಯ ಚುಕ್ಕಿಗಳಂತೆ ನಮ್ಮ ನೆನಪುಗಳ ನಂಟಿನ ಗೆರೆಗಳನ್ನು ಚುಕ್ಕಿಯಿಂದ ಚುಕ್ಕಿಗೆ ಎಳೆಯುತ್ತ ನಮ್ಮ ಬಾಲ್ಯವನ್ನು, ಯೌವನವನ್ನು ಜೋಡಿಸುತ್ತ ಕಟ್ಟಿಕೊಡುವಷ್ಟು ಶಕ್ತವಾಗಿರುವುದನ್ನು ಕಾಣುವಾಗ ಭಾಷೆಯ ನಿಜವಾದ ತಾಕತ್ತು ಏನೆಂಬುದರ ಅರಿವು ಹುಟ್ಟುತ್ತದೆ. ಇದನ್ನು ಗಮನಿಸುವಾಗ ಇದೊಂದು ಪುಸ್ತಕ ಇಲ್ಲದೇ ಹೋಗುತ್ತಿದ್ದರೆ ಎಂಬ ಕಲ್ಪನೆಯೂ ಹುಟ್ಟಿ, ಅದೆಷ್ಟು ಭಾಷೆಗಳು ಇಂಥ ಪ್ರಯತ್ನಗಳೆಲ್ಲ ಇಲ್ಲದೆ ಇಲ್ಲವಾಗಿರಬಹುದು ಎಂದೂ ಅನಿಸುತ್ತದೆ. ಐದಾರು ವರ್ಷಗಳ ಹಿಂದೆ ಹೀಗೆ ನಶಿಸುತ್ತಿರುವ ಭಾಷೆಗಳದ್ದೇ ಒಂದು ದ್ವಿಭಾಷಾ ಕವನ ಸಂಕಲನ ಬಂದಿತ್ತು. ಅಷ್ಟರಮಟ್ಟಿಗೆ ಕುಂದಾಪ್ರ ಕನ್ನಡ ಭಾಗ್ಯಶಾಲಿ ಎನ್ನಬೇಕು.
ಈಗ ಇದರ ಪರಿಷ್ಕೃತ-ವಿಸ್ತೃತ ಎರಡನೆಯ ಆವೃತ್ತಿ ಬರುತ್ತಿದೆ. ಕುಂದಾಪ್ರ ಕನ್ನಡದೊಂದಿಗೆ ಒಂದಿಲ್ಲಾ ಒಂದು ಬಗೆಯ ನಂಟು ಹೊಂದಿರುವ ಎಲ್ಲರ ಸ್ಮೃತಿಯನ್ನೂ ಶ್ರೀಮಂತಗೊಳಿಸಬಲ್ಲ ಈ ಅಪರೂಪದ ನಿಘಂಟು ನಮಗೆಲ್ಲರಿಗೂ ಒಂದು ಅಪೂರ್ವ ನಿಧಿ; ಪ್ರಾದೇಶಿಕ ಸೊಗಡಿನ ವಿಭಿನ್ನ ಕನ್ನಡಾವೃತ್ತಿಗಳ ಮಂದಿಗೂ ಇದೊಂದು ಮಾದರಿ.”