ಕುಂಬಳಕಾಯಿಯಿಂದ ಹೊರತೆಗೆದ ಪುಟ್ಟ ಪುಸ್ತಕ

ಕುಂಬಳಕಾಯಿಯಿಂದ ಹೊರತೆಗೆದ ಪುಟ್ಟ ಪುಸ್ತಕ

ನವಂಬರ್ ೧೩, ೨೦೧೬ರ ಭಾನುವಾರ ಮಂಗಳೂರಿನ ಪಂಜೆ ಮಂಗೇಶರಾವ್ ರಸ್ತೆಯ ಸಾಹಿತ್ಯ ಕೇಂದ್ರದ ಎದುರು ಎಂದಿನಂತೆ ಸಾವಯವ ಹಣ್ಣುತರಕಾರಿಧಾನ್ಯ ಸಂತೆಗಾಗಿ ಮೇಜುಗಳಿರಲಿಲ್ಲ. ಬದಲಾಗಿ, ಸಾಹಿತ್ಯ ಕೇಂದ್ರದ ಪಕ್ಕದಲ್ಲೊಂದು ವೇದಿಕೆ. ಅಲ್ಲೊಂದು ಸಣ್ಣ ಪೀಠ. ಅದರಲ್ಲಿ ಸಿಂಗರಿಸಿದ್ದ ಕುಂಬಳಕಾಯಿ ಮತ್ತು ಬಾಡಿಸಿದ್ದ ಬಾಳೆಲೆಯ ಪೊಟ್ಟಣ. ಇವೆಲ್ಲ ಸಾವಯವ ಕೃಷಿಕ ಗ್ರಾಹಕ ಬಳಗ ಪ್ರಕಟಿಸಿದ ಪುಸ್ತಕ ಬಿಡುಗಡೆಗಾಗಿ ತಯಾರಿ. ಅಲ್ಲಿ ಜಮಾಯಿಸುತ್ತಿದ್ದ ಜನರಿಗೆ ಏನಿದು ಹೊಸ ನಮೂನೆ ಎಂಬ ಕುತೂಹಲ.ಬೆಳಗ್ಗೆ ೮.೩೦ ಗಂಟೆಗೆ ಪ್ರಾರ್ಥನೆ ಹಾಗೂ ಬಳಗದ ಅಧ್ಯಕ್ಷ ಅಡ್ಡೂರು ಕೃಷ್ಣ ರಾಯರಿಂದ ಪ್ರಾಸ್ತಾವಿಕ ಮಾತುಗಳು. ನಂತರ ವೇದಿಕೆಯಲ್ಲಿದ್ದ ಜಾನಪದ ವಿದ್ವಾಂಸ ದಯಾನಂದ ಕತ್ತಲಸಾರ್ ಆ ಕುಂಬಳಕಾಯಿಗೆ ಬಿಗಿದಿದ್ದ ಬಣ್ಣದ ಬಳ್ಳಿಗಳನ್ನು ಬಿಚ್ಚಿ, ಕುಂಬಳಕಾಯಿಯ ಮೇಲಿನರ್ಧ ಭಾಗವನ್ನು ಎತ್ತಿ, ಹೊರತೆಗೆದದ್ದು ಐದು ಪುಟ್ಟ ಪುಸ್ತಕಗಳನ್ನು. ಹಾಗೆಯೇ, ಮಂಗಳೂರಿನ ಉತ್ತರವಲಯದ ರೋಟರಿ ಕ್ಲಬ್ ಅಧ್ಯಕ್ಷರಾದ ಕೆ. ವೇಣುಗೋಪಾಲ್ ಆ ಬಾಳೆಲೆಯ ಪೊಟ್ಟಣ ಬಿಚ್ಚಿದಾಗ ಹೊರಬಂದದ್ದು ಐದು ಪುಸ್ತಕಗಳು.

“ವಿಷಮುಕ್ತ ಊಟದ ಬಟ್ಟಲು ಆಂದೋಲನ: ೨೦೧೫-೧೬ ಕಥನ” ಎಂಬ ಆ ಪುಸ್ತಕದಲ್ಲಿದೆ ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗದ ಎರಡನೇ ವರುಷದ ಸಾಧನೆಗಳ ದಾಖಲೀಕರಣ.

ಅನಂತರ ಕೆ. ವೇಣುಗೋಪಾಲ್ ಮಾತನಾಡಿ, ಸಾವಯವ ಕೃಷಿಕ ಗ್ರಾಹಕ ಬಳಗವು ಮಂಗಳೂರಿನ ಜನರಿಗೆ ವಿಷಮುಕ್ತ ಹಣ್ಣುತರಕಾರಿಧಾನ್ಯ ಒದಗಿಸಲು ೨೦೧೪ರಿಂದ ವ್ಯವಸ್ಥೆ ಮಾಡಿರುವುದರಿಂದ ನೂರಾರು ಜನರಿಗೆ ಪ್ರಯೋಜನವಾಗಿದೆ. ಇಂದು ನಮ್ಮ ಬಹುಪಾಲು ಆಹಾರದಲ್ಲಿ ವಿಷ ಸೇರುತ್ತಿರುವ ಅಪಾಯದಿಂದ ಪಾರಾಗಲು ಇಂತಹ ಒಂದು ವ್ಯವಸ್ಥೆ ಅಗತ್ಯ ಎಂದರು. ಇದೇ ಸಂದರ್ಭದಲ್ಲಿ, ದಯಾನಂದ ಕತ್ತಲಸಾರ್ ಮಾತನಾಡುತ್ತಾ ನಮ್ಮ ಪಾರಂಪರಿಕ ಆಹಾರದ ಬಗ್ಗೆ ಜನಜಾಗೃತಿಗಾಗಿ ಬಳಗವು ಸಂಘಟಿಸಿದ್ದ ಆಯುರ್ ಊಟ ಇತ್ಯಾದಿ ಕಾರ್ಯಕ್ರಮಗಳ ಮಹತ್ವವನ್ನು ತಮ್ಮ ಮಾತಿನಲ್ಲಿ ಪ್ರಸ್ತಾಪಿಸಿದರು. ಅವರು  ನಮ್ಮ ಪಾರಂಪರಿಕ ಆಚರಣೆಗಳ ಪ್ರಾಮುಖ್ಯತೆಯನ್ನು ವಿವರಿಸುತ್ತಾ ಹೀಗೆಂದರು, "ನಮ್ಮ ಕರಾವಳಿ ಭತ್ತ ಬೆಳೆಯುವ ಪ್ರದೇಶ. ಇಲ್ಲಿ ದೀಪಾವಳಿಯನ್ನು ದೀಪಗಳನ್ನು ಹಚ್ಚಿಡುವ ಮೂಲಕ ಆಚರಿಸುವ ಸಂಪ್ರದಾಯ. ಮನೆಯೆದುರು ಸಾಲಾಗಿ ಹಣತೆಗಳನ್ನು ಬೆಳಗಿಸುತ್ತಿದ್ದರು. ಭತ್ತದ ಗದ್ದೆಗೆ ಹೋಗಿ, ಬಲೀಂದ್ರನಿಗೆ ಪೂಜೆ ಸಲ್ಲಿಸಿ, ಅಲ್ಲಿಯೂ ದೊಂದಿ ಹಚ್ಚುತ್ತಿದ್ದರು. ಅಂದರೆ ಉದ್ದದ ಕೋಲಿಗೆ ಎಣ್ಣೆಯಲ್ಲಿ ಅದ್ದಿದ ಬಟ್ಟೆ ಸುತ್ತಿ, ಅದಕ್ಕೆ ಬೆಂಕಿ ಹಚ್ಚಿ, ಅದನ್ನು ಭತ್ತದ ಗದ್ದೆಯ ಪಕ್ಕದಲ್ಲಿ ಮಣ್ಣಿನಲ್ಲಿ ಊರುತ್ತಿದ್ದರು. ಇದಕ್ಕೊಂದು ವೈಜ್ನಾನಿಕ ಕಾರಣವಿದೆ. ಭತ್ತದ ಬೆಳೆಗೆ ಬಹಳ ಕಾಟ ಕೊಡುವ ಕೀಟ ಬಂಬುಚ್ಚಿ. ಹೀಗೆ ದೀಪ ಉರಿಸಿದಾಗ, ನೂರಾರು ಬಂಬುಚ್ಚಿಗಳು ದೀಪದ ಬೆಳಕಿಗೆ ಆಕರ್ಷಿತವಾಗಿ ಹಾರಿ ಬಂದು ಸಾಯುತ್ತವೆ. ಇದರಿಂದಾಗಿ ಭತ್ತದ ಬೆಳೆಗೆ ಕೀಟದ ಬಾಧೆ ಕಡಿಮೆಯಾಗುತ್ತದೆ.”

ಅರ್ಧ ತಾಸಿನ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಬಳಿಕ, ಅತಿಥಿಗಳು ಗದಗಿನ ಜೋಳದರೊಟ್ಟಿಯ ಉಪಾಹಾರ ಸವಿದರು. ರೂಪಾಯಿ ಮೂವತ್ತು ಬೆಲೆಯ ೧೨೦ ಪುಟಗಳ ಆ ಪುಸ್ತಕವನ್ನೂ ವಾರಕ್ಕೆ ಬೇಕಾದಷ್ಟು ಸಾವಯವ ಹಣ್ಣುತರಕಾರಿ ಧಾನ್ಯಗಳನ್ನೂ ಸಂತೆಯಲ್ಲಿ ಖರೀದಿಸಿ ಒಯ್ದರು.

ಪುಸ್ತಕ ತರಿಸಿಕೊಳ್ಳಲಿಕ್ಕಾಗಿ ಬಳಗದ ಕಾರ್ಯದರ್ಶಿ ರತ್ನಾಕರ ಕುಳಾಯಿ (ಮೊಬೈಲ್ 9448835606) ಸಾಹಿತ್ಯ ಕೇಂದ್ರ, ಪಂಜೆ ಮಂಗೇಶರಾವ್ ರಸ್ತೆ, ಮಂಗಳೂರು ಅವರನ್ನು ಸಂಪರ್ಕಿಸಬಹುದು.