ಕುಂಭ ಮೇಳ
ಕವನ
(ಲಲಿತ ಲಯ ಚೌಪದಿ)
ನಂಬಿರುವ ದೈವ ಭಕ್ತರು ಭರತ ಖಂಡದಲಿ
ತುಂಬ ಹುರುಪಿನಲಿ ಯಾತ್ರೆಯ ನಡೆಸುತ|
ಮುಂಬರುವ ದಿನಗಳಲಿ ಜೊತೆಗೆ ಸೇರುತ ಮಹಾ
ಕುಂಭ ಮೇಳದಲುತ್ಸುಕತೆ ತೋರುತ ||೧||
ತುಂಬಿರಲು ಕೋಟಿ ಜನ ಜಂಗುಳಿಯು ಸಂತಸದಿ
ತುಂಬಿ ಹರಿಯುತಿಹ ನದಿಯಲ್ಲಿ ಮಿಂದು|
ಚೆಂಬಿನಲಿ ಪಾವನದ ತೀರ್ಥವಂ ಶ್ರದ್ಧೆಯಲಿ
ತುಂಬುವರು ತಲೆಯಲ್ಲಿ ನಡೆದು ಮುಂದು ||೨||
ನಂಬಿಕೆಯ ಸಮ್ಮಿಲನವಾಗಿರಲು ದೇಶದೊಳು
ಕುಂಭ ಮೇಳವು ವಿಶೇಷವೆನಿಸುತಲಿ|
ಬೆಂಬಲಿಸುತಲಿ ಮಂದಿ ನಡೆದಾಡಿ ಹಗಲಿರುಳು
ತುಂಬು ಹೃದಯದಲಿ ಸಹಕರಿಸುತ್ತಲಿ||೩||
ಅಂಬರವನುಟ್ಟಿರುವ ಸಂನ್ಯಾಸಿಗಳ ಕೂಟ
ಹೊಂಬಿಸಿಲಿನಲಿ ಮೆರೆವಣಿಗೆ ನಡೆಸುತ|
ಅಂಬಿಗರು ನಾವೆಯ ವಿಹಾರ ನಡೆಸುವ ನೋಟ
ತುಂಬುವುದು ಹೃನ್ಮನಗಳನು ಸಂತತ||೪||
ಕೊಂಬು ಕಹಳೆಯ ಜೊತೆಗೆ ಶಂಖ ಜಾಗಟೆ ನಾದ
ಬಿಂಬಿಸುತ ಕ್ಷೇತ್ರ ಪ್ರಯಾಗದಲ್ಲಿ|
ಕುಂಭಮೇಳದ ವೈಭವಕ್ಕೆ ಸರಿಸಾಟಿಯ ವಿ-
-ಜೃಂಭಣೆಯು ಬೇರಿಲ್ಲ ವಿಶ್ವದಲ್ಲಿ ||೫||
- ಎ. ಕೇಶವರಾಜ್
ಚಿತ್ರ ಕೃಪೆ: ಎ. ಮುರಳೀಧರ
ಚಿತ್ರ್
