ಕುಚುಕು

ಕುಚುಕು

ಪುಸ್ತಕದ ಲೇಖಕ/ಕವಿಯ ಹೆಸರು
ಫೌಜಿಯಾ ಸಲೀಂ
ಪ್ರಕಾಶಕರು
ಹರಿವು ಬುಕ್ಸ್, ಬಸವನಗುಡಿ, ಬೆಂಗಳೂರು -೫೬೦೦೦೪
ಪುಸ್ತಕದ ಬೆಲೆ
ರೂ. ೧೭೦.೦೦, ಮುದ್ರಣ: ೨೦೨೫

“ಪೌಝಿಯಾ ಸಲೀಂರವರ 'ಕುಚುಕು' ಕಥೆ ಹೆಸರಿನಲ್ಲಿಯೇ ಇದೆ. ಸ್ನೇಹಿತರ ಸಾಲುಗಳಲ್ಲಿ ಭಾವನೆಗಳ ಜೊತೆ ಉಕ್ಕಿದ, ಅನುಮಾನದ ನೆರಳಿನಲ್ಲಿ ಮನಸ್ಸನ್ನು ಚಂಚಲಿಸುವ ಗೋಡೆಗಳಿಗೆ ಕಡಿವಾಣ ಹಾಕದೆ ಬದುಕನ್ನು ಬರಡು ಮಾಡಿಕೊಳ್ಳುವುದರ ಜೊತೆಗೆ ಮನಸನ್ನು ಮೌನವಾಗುವ ಪ್ರಶ್ನೆಗಳಾಗಿ ಉಳಿದುಕೊಂಡಿರುತ್ತವೆ. ಈ ಕಥೆಯಲ್ಲಿ ಬರುವ ಸನ್ನಿವೇಶಗಳು ಹೃದಯದ ಅಂತರಂಗಕ್ಕೆ ಹೋಗಿ ಬಡಿಯುವ ಅಲೆಗಳಂತಿವೆ. ಓದುಗರ ಮನಸ್ಸಿನಲ್ಲಿ ಹಾಗೇ ಉಳಿದು ಬಿಡುವ ಪಾತ್ರಗಳು ಯೋಚನೆ ಮಾಡದೆ ತೆಗೆದುಕೊಂಡ ನಿರ್ಧಾರ ಅಂತ್ಯದ ದಾರಿಗೆ ಹತ್ತಿರ... ಮೋಸದ ಪ್ರೀತಿಯ ಬಲೆಯಲ್ಲಿ ಬೀಳುವ ಮೊದಲು ಸಾವಿರ ಬಾರಿ ಯೋಚಿಸುವ ಅಗತ್ಯ ಪ್ರತಿಯೊಬ್ಬರಿಗೂ ಬೇಕು. ಈಗಿನ ಪ್ರಪಂಚಕ್ಕೆ ಇದು ತುಂಬಾ ಹತ್ತಿರವಾದ ಕಥೆ ಎಂದರೂ ತಪ್ಪಾಗಲಾರದು.
ಇಂಥದೊಂದು ಪಯಣದಲಿ ಕಥೆಗಾರರ ಪ್ರಯಾಣ ಇನ್ನೂ ಹೆಚ್ಚೆಚ್ಚು ದಾರಿಯಲಿ ಸುಗಮವಾಗಿ ಸಾಗಲಿ. ಅವರ ಬರಹದ ಕ್ಷೇತ್ರದಲ್ಲಿ ಸಮುದ್ರದ ಆಳಕ್ಕೆ ಇಳಿದು ಅವರ ಪಯಣದಲ್ಲಿ ಬರಹದ ದಿಕ್ಕು ಬದಲಾಯಿಸುವ ಅದೃಷ್ಟ ಸಿಗಲಿ”ಎಂದು ಬೆನ್ನುಡಿ ಬರೆದು ಶುಭ ಹಾರೈಸಿದ್ದಾರೆ ದಿವ್ಯ ದೇವೇಂದ್ರ.

ಈ ೧೩೬ ಪುಟಗಳ ಪುಟ್ಟ ಕಾದಂಬರಿಗೆ ಮುನ್ನುಡಿಯನ್ನು ಬರೆದಿದ್ದಾರೆ ಟಿ ಮೋಹನ್ ಕುಮಾರ್. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಸಾರ…”ಫೌಝಿಯ ಸಲೀಂ ಅವರು ಬರೆದಿರುವ ಕುಚುಕು ಕಾದಂಬರಿಯಲ್ಲಿ ಸ್ನೇಹ ಅಂದರೆ ಸುಂದರ ಸಂಬಂಧ ಅಷ್ಟೇ ಅಲ್ಲ, ಸ್ನೇಹವೆಂದರೆ ಭರವಸೆ, ನಂಬಿಕೆ ಮತ್ತು ನಿಷ್ಠೆ ಎಂಬುದರ ಬಗ್ಗೆ ತಿಳಿಸುತ್ತಾ ಹೋಗುತ್ತಾರೆ. ಒಬ್ಬರ ಮೇಲೆ ಒಬ್ಬರು ನಂಬಿಕೆ ಇಡುವುದು, ನಿಷ್ಠೆಯಿಂದ ಇರುವುದು, ಭವಿಷ್ಯದ ದಿನಗಳನ್ನು ಭರವಸೆಯ ದಿನಗಳನ್ನಾಗಿ ಮಾಡಿಕೊಳ್ಳುವುದೇ ಸ್ನೇಹವೆನ್ನುತ್ತಾರೆ.

ಶಾಲಾ ದಿನಗಳಿಂದ ಕೊನೆಯ ಉಸಿರಿನ ತನಕ ಜೊತೆಯಾಗಿರುವುದು ಸ್ನೇಹದ ಅಸ್ಮಿತೆ, ಆಟ, ಪಾಠ, ಊಟದ ಜೊತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಒಬ್ಬ ವ್ಯಕ್ತಿ ಹಂಚಿಕೊಳ್ಳುವುದು ಸ್ನೇಹಿತರೊಂದಿಗೆ ಮಾತ್ರ. ಜೀವನದ ಸಂತೋಷ, ಸಂಭ್ರಮ, ನೋವು, ನಲಿವು ಎಲ್ಲವನ್ನು ಯಾವುದೇ ಮುಚ್ಚುಮರೆ ಇಲ್ಲದೆ ಹಂಚಿಕೊಳ್ಳುವುದು ಮತ್ತು ಕಷ್ಟದ ದಿನಗಳಿಗೆ ಹೆಗಲು ನೀಡುವವರೇ ಸ್ನೇಹಿತರು.

ಕಥಾ ನಾಯಕಿಯ ಜೀವನ ಯಾವ ರೀತಿ ಬದಲಾಗುತ್ತದೆ? ಅವಳು ಇಷ್ಟಪಟ್ಟ ಜೀವನ ಅವಳಿಗೆ ಸಿಗುತ್ತದೆಯೋ? ಎನ್ನುವ ಪ್ರಶ್ನೆಗಳೊಂದಿಗೆ ಅನೇಕ ಕವಲು ದಾರಿಗಳಿಂದ ಕೂಡಿದ ಅವಳ ರೋಚಕ ಕತೆಯ ಮೂಲಕ, ಒಂಟಿ ಹೆಣ್ಣು ತನ್ನ ಜೀವನವನ್ನು ಯಾವ ರೀತಿ ನಡೆಸಬೇಕು ಎಂಬುದನ್ನು ಈ ಕಾದಂಬರಿಯಲ್ಲಿ ಅದ್ಭುತವಾಗಿ ತಿಳಿಸಿಕೊಟ್ಟಿದ್ದಾರೆ ಲೇಖಕಿ. ಬಿದ್ದಾಗ ಮೇಲೆಳಲು ಕೈ ಕೊಡುವ, ಗೆದ್ದಾಗ ಬೆನ್ನು ತಟ್ಟಿ ಬೆಂಬಲಿಸುವ ಗೆಳೆಯರಿದ್ದರೆ ಅದುವೇ ನಾವು ಜೀವನದಲ್ಲಿ ಗಳಿಸುವ ಆಸ್ತಿ ಎಂದರೆ ತಪ್ಪಾಗಲ್ಲ. ಕಷ್ಟಕ್ಕೆ ಯಾರು ಬರುತ್ತಾರೋ ಗೊತ್ತಿಲ್ಲ. ಆದರೆ ಗೆಳೆಯರಂತೂ ಖಂಡಿತವಾಗಿಯು ಬಂದೇ ಬರುತ್ತಾರೆ ಅನ್ನೋದು ನೂರಕ್ಕೆ ನೂರು ಸತ್ಯ.”