ಕುಟ್ಟವಲಕ್ಕಿ

ಕುಟ್ಟವಲಕ್ಕಿ

ಪುಸ್ತಕದ ಲೇಖಕ/ಕವಿಯ ಹೆಸರು
ಪ್ರಶಾಂತ ಆಡೂರ
ಪ್ರಕಾಶಕರು
ಛಂದ ಪುಸ್ತಕ, ಬೆಂಗಳೂರು
ಪುಸ್ತಕದ ಬೆಲೆ
ರೂ.೧೦೦/-

ಉತ್ತರ ಕರ್ನಾಟಕದ ಕನ್ನಡ ಭಾಷೆಯ ಸೊಗಡು ತಿಳಿಯಬೇಕಾದರೆ ಓದಬೇಕು ಈ ಪುಸ್ತಕ. ಸರಾಗವಾಗಿ, ಸುಲಲಿತವಾಗಿ ಆಡುಮಾತಿನಲ್ಲಿ ಹಲವು ಸಂಗತಿಗಳ ಬಗ್ಗೆ ಬರೆದಿದ್ದಾರೆ ಪ್ರಶಾಂತ ಆಡೂರ.

ಈಗಲೂ ಈ ಧಾಟಿಯಲ್ಲಿ ದಿನಪತ್ರಿಕೆಯಲ್ಲಿ ಅಂಕಣ ಬರೆಯುತ್ತಿರುವ ಪ್ರಶಾಂತ ಆಡೂರ, ತಾನು ಹೇಗೆ ಬರೆಯಲು ಶುರು ಮಾಡಿದೆ ಎಂದು ಪುಸ್ತಕದ ಕೊನೆಯ ಬರಹ "ಭಿಡೆ ಬಿಟ್ಟ ಬರದಿದ್ದೆ ಬರಹ"ದಲ್ಲಿ ಹೀಗೆ ಹಂಚಿಕೊಂಡಿದ್ದಾರೆ: "ನನ್ನ ಜೀವನದಾಗ ನಾ ಕನ್ನಡದಾಗ ಬರಿತೇನಿ ಎಂತ ಎಂದೂ ಅನ್ಕೊಂಡಿದ್ದಿಲ್ಲ……. ಒಂದ ದಿವಸ ಮಧ್ಯಾಹ್ನ ನಾನೂ ಏನರ ಇವತ್ತ ಬರದ ಬಿಡಬೇಕು ಅಂತ ನನ್ನ ಹಿಂದಿನ ದಿವಸದ್ದ ಗ್ರಹಣದ್ ಆನುಭವವನ್ನ ಒಂದ ಪೇಪರ್ ಮ್ಯಾಲೆ ಪೆನ್ಸಿಲ್‌ನಿಂದ ನಾಲ್ಕ ಅಕ್ಷರದಾಗ ಗೀಚಿಲಿಕತ್ತೆ. ಬರೀತಾ ಬರೀತಾ ಎರಡ ಪೇಜ್ ತುಂಬಿ ಬಿಟ್ಟಿತು. ಅರೇ ಇಷ್ಟ ಬರದನೆಲಾ ಅಂತ ನನಗ ಆಶ್ಚರ್ಯ ಆತ, ಒಂದ ಎರಡ ಸರತೆ ನಾ ಬರದಿದ್ದನ್ನ ಓದಿ ನೋಡಿದೆ. ಏ, ಏನ್ ಅಡ್ಡಿ ಇಲ್ಲಾ ಅನಸ್ತು. ಇರಲಿ ಯಾರರ ಶಾಣ್ಯಾರಿಗ ತೋರಸೋಣ ಅಂತ ಹಾಳಿ ಹರಿಲಾರದ ಹಂಗ ಇಟಗೊಂಡೆ…… ಕಡಿಕೆ ನಮ್ಮ ಗ್ರೂಪ್‌ನಾಗ ಇದ್ದಿದ್ದಾರಾಗ ಭಾಳ ಶಾಣ್ಯಾ….. ಅವಂಗ ಫೋನ್ ಮಾಡಿ,”ಮಗನ, ನಾನು ಕನ್ನಡದಾಗ ಒಂದ ಲೇಖನಾ ಬರದೇನಲೆ” ಅಂತ ಹೇಳಿದೆ…… “ನೀ ಫ್ರೀ ಇದ್ದರ ಓದಿ ಹೇಳ್ತೇನಿ” ಅಂದೆ….. ರಾತ್ರಿ ಹನ್ನೊಂದುವರಿ ಸುಮಾರ ಫೋನ್ ಮಾಡಿ, ಪಾಪ ಮಲ್ಕೊಂಡಿದ್ದ ದೇಸಾಯರನ ಎಬಿಸಿ “ಗ್ರಹಣ ಭೂಮಿ ಮ್ಯಾಲೆ, ಅದರ ಫಲಾ ನನ್ನ ರಾಶಿ ಮ್ಯಾಲೆ” ಲೇಖನ ಓದಿ ಹೇಳಿದೆ…..ಅಂವ ಒಂದ ಮಾತ ಹೇಳಿದಾ: “ದೋಸ್ತ, ದಿಸ್ ಆರ್ಟಿಕಲ್ ಈಸ್ ವರ್ಥ್ ಟೇಕಿಂಗ್ ಟ್ರಬಲ್ ಆಫ್ ಟೈಪಿಂಗ್” ಅಂತ ತನ್ನ ವ್ಯಾವಸಾಯಿಕ ಭಾಷಾದಾಗ ಹೇಳಿ…. ನಾನೂ ಫುಲ್ ಖುಷ್ ಆಗಿ “ಬರಹಗಾರ" ಆಗೋ ಕನಸ ಕಾಣಲಿಕ್ಕೆ ತುಂಬ ಹೊಚಗೊಂಡ ಮಲ್ಕೊಂಡೆ….."

ಪುಸ್ತಕದ ೨೯ ಪ್ರಬಂಧಗಳಲ್ಲಿ ಕೆಲವದರ ಶೀರ್ಷಿಕೆಗಳು ಹೀಗಿವೆ:
ಇಲ್ಲಾ… ಆಕೆ ಬರೋಹಂಗ ಇದ್ದಿದ್ದಿಲ್ಲಾ
ಸುಖ ಸಂಸಾರಕ್ಕ ಒಂದ ಸೂತ್ರ… ಗಂಡಸರಿಗೆ ಅಷ್ಟ ಮತ್ತ
ನೀ ಫೇಸ್‌ಬುಕ್‌ನಾಗ್ ಇಲ್ಲಾ?…!
ನೀವು ಬಾಣಂತನಾ ಮಾಡ್ತೇನೀ ಅಂದರ… ನಾ ಇನ್ನೊಂದ ಹಡಿತೇನಿ
ಗಂಡಾ ಅನ್ನೋ ರಂಡೆಗಂಡಾ…
ನಂದ “ಡೇ" ಅದ, ನಾ ಬರೋದ “ಡೌಟ್"
ಡ್ಯಾಡಿ, ಯಾರೋ ಕಂಬಾರ ಅಂಕಲ್ ನಿಂಗ ಕನ್ನಡದಾಗ ಬೈಲಿಕತ್ತಾರ…
ಸೆನ್ಸೆಕ್ಸ ಬಿತ್ತ್… ಇವನ ಶುಗರ್ ಎತ್ತ್…
ಮಾಮಾನ ಯಾಕ? ಕಾಕಾ ಯಾಕ ಅಲ್ಲಾ?
ಒಂದು ಅಪ್ರಸ್ತುತ “ಪ್ರಸ್ಥ"ದ ಪ್ರಸ್ತಾವನೆ

ನಾವು ಮುಜುಗರವಿಲ್ಲದೆ ಮಾತಾಡುವ ಹಲವಾರು ಸಂಗತಿಗಳನ್ನು ಬರಹದಲ್ಲಿ ಇಳಿಸಲು ಮುಜುಗರ ಪಡುತ್ತೇವೆ. ಆದರೆ, ಪ್ರಶಾಂತ ಆಡೂರ ಅಂತಹ ಸಂಗತಿಗಳನ್ನೂ ಸರಾಗವಾಗಿ ಬರೆಯುತ್ತಾರೆ. ಒಂದು ಉದಾಹರಣೆ: “ಇದಾದ ಒಂದ ಎರಡ ದಿವಸಕ್ಕ ನಮ್ಮ ಕಾಕಾನ ಮಗಾ - ತಮ್ಮಾ ವಿಶಾಲ ಮತ್ತ ಅವನ ಹೆಂಡತಿ "ಬನು" ಸಂಜಿ ಮುಂದ ಪಂಚಮಿ ಉಂಡಿ ತೊಗೊಂಡ ಮನಿ ಕಡೆ ಬಂದಿದ್ರು. ಅವರಿಗೆ ಸದ್ಯೇಕ ಮೂರ ವರ್ಷದ ಒಬ್ಬ ಮಗಾ ಇದ್ದಾನ, ನಾ ಅಂದೆ, “ನೋಡಪಾ ವಿನಾಯಕ (ಇನ್ನೊಬ್ಬ ಸಂಬಂಧಿಕ) ಎರಡನೇದ ತಯಾರ ಮಾಡ್ಯಾನ. ನಿಂದ ಯಾವಾಗ ಮತ್ತ? ಲಗೂನ ಇನ್ನೊಂದ ಹಡದ ಕೋಟಾ ಮುಗಿಸಿ ಕೈ ತೊಳ್ಕೊಂಡ ಬಿಡು” ಅಂದೆ. “ಏ, ನಾ ಏನ್ ಇವತ್ತ ರೆಡಿ ಇದ್ದೇನಿ, ನನ್ನ ಹೆಂಡತಿನ ನನ್ನ ಮಾತ ಕೇಳವಳ್ಳು" ಅಂದಾ. ಅದು ಖರೇನ ನಾವೇನ ಹುಡುಗುರು ದಿವಸಾ ರೆಡಿ ಇರತೇವಿ, ಹಡಿಯೋರು ಗಟ್ಟಿ ಇರಬೇಕಲ್ಲಾ. ನನ್ನ ಮಾತಿಗೆ ನಮ್ಮವ್ವನೂ ಸೋ ಅಂದ್ಲು, ವಿಶಾಲನ ಹೆಂಡತಿಗೆ, "ಬನು ನಿಂದೂ ಇನ್ನೊಂದು ಆಗಿ ಬಿಡಲಿವಾ, ಹೆಂಗಿದ್ದರೂ ಒಂದನೇದು ದೊಡ್ಡದ ಆಗ್ಯಾದ” ಅಂದ್ಲು.

ತೊಗೊ ನಮ್ಮವ್ವ ಇಷ್ಟ ಅಂದಿದ್ದ ತಡಾ, ನಮ್ಮ ಬನುಗ ಪಿತ್ತಾ ಗರ್ಭಕೋಶಕ್ಕ ಏರಿ ಬಿಟ್ಟತ, “ಎಲ್ಲೀದರೆ ಅತ್ಯಾ? ಒಂದ ಗಂಡಾ, ಮಗನ್ ಸಾಕೋದ್ರಾಗ ರಗಡ ಆಗೇದ, ಇನ್ನೊಂದ ಎಲ್ಲಿಂದ ತರತೀರಿ? ನಮ್ಮ ಮನೆಯವರಿಗೇ ಬ್ಯಾರೆ ಕೆಲಸ ಇಲ್ಲಾ. ಯಾವಾಗಲೂ ರೆಡಿನ ಇರತಾರ. ಅದರಾಗ ನಮ್ಮವ್ವಗೂ ಈಗ ವಯಸ್ಸಾತು, ಪಾಪ, ನಮ್ಮ ಇಬ್ಬರ ಅಕ್ಕಂದರದು, ನಂದು ಬಾಣಂತನ ಮಾಡಿ ರಗಡ ಆಗೇದ, ಇನ್ನ ಅವರಿಗೆ ಬಾಣಂತನ ಮಾಡಲಿಕ್ಕೆ ಆಗಂಗಿಲ್ಲಾ. ಇನ್ನ ನಮ್ಮತ್ತಿಗಂತೂ (ಅಂದರ ನಮ್ಮ ಕಾಕು) ನಾ ಸೀತರ ಸಾಕು, ಅವರದ್ ಶುಗರ್ ಜಾಸ್ತಿ ಆಗಿ ಬಿಡತದ, ಅವರು ಬಾಣಂತನ ಮಾಡಿದಂಗ, ಇನ್ನ ಎರಡನೇದ ಬಾಣಂತನ ಯಾರ ಮಾಡೋರು?... ನೀವ ಹೇಳರೀ? ನೀವ ಏನರ ಬಾಣಂತನ ಮಾಡತೇನಿ ಅಂದ್ರ… ನಾ ಇನ್ನೊಂದ ಹಡಿತೇನಿ ನೋಡ್ರಿ” ಅಂತ ನಮ್ಮವ್ವನ ಮ್ಯಾಲೇ ಬಂದ್ಲು.”

ಲೋಕಾಭಿರಾಮದ ಸಂಗತಿಗಳ, ದೈನಂದಿನ ಬದುಕಿನ ಆಗುಹೋಗುಗಳ ಬಗ್ಗೆ ನಾವೆಲ್ಲರೂ ಮಾತಾಡುತ್ತಲೇ ಇರುತ್ತೇವೆ. ಆದರೆ ನಮ್ಮ ಆಡುಭಾಷೆಯಲ್ಲಿ, ನಮ್ಮ ಮಾತುಗಳನ್ನು "ಮಾತಾಡಿದ್ದು ಮಾತಾಡಿದ ಹಾಗೆ" ಬರಹದಲ್ಲಿ ಇಳಿಸುವವರು ಅಪರೂಪ. ಈ ದೃಷ್ಟಿಯಿಂದ, ಪ್ರಶಾಂತ ಆಡೂರರ ಬರಹಗಳು ಅಪರೂಪದ ಬರಹಗಳ ಸಾಲಿಗೆ ಸೇರುತ್ತವೆ. ಮನೆಮನೆಗಳ ಮಾತುಕತೆಗಳಲ್ಲಿ ತುಂಬಿರುವ ಬದುಕಿನ ಅನುಭವಗಳನ್ನು ದಾಖಲಿಸಬೇಕೆಂಬ ಆಸಕ್ತಿ ಇರುವವರಿಗೊಂದು ಪ್ರೇರಣೆ ಈ ಬರಹಗಳಲ್ಲಿದೆ ಎಂಬುದಂತೂ ಖಂಡಿತ.