ಕುಡಿತದ ಆವಾಂತರ

ಕುಡಿತದ ಆವಾಂತರ

ನಾನು ನಿರೂಪಿಸುತ್ತಿರುವ ವ್ಯಕ್ತಿ ಬಹಳ ಮಿದು ಸ್ವಭಾವಿ. ಹೆಸರು ರಂಗ. ಎಲ್ಲರಿಗೂ ಸಹಾಯ ಮಾಡುತ್ತಾನೆ ಮತ್ತು ಸಹಾಯ ಪಡೆಯುತ್ತಾನೆ. ನನಗೆ ಬಹಳ ಪರಿಚಿತ ಮತ್ತು ಆಪ್ತ. ಒಂದು ದಿನ ಕಾರ್ಯಾರ್ಥವಾಗಿ ಪಕ್ಕದೂರಿಗೆ ಹೋಗಿದ್ದೆ. ಆ ಊರ ಗಣ್ಯರು ಆ ಊರಿನ ಒಂದು ಖಾಲಿ ಮನೆಯಲ್ಲಿ ನನಗೆ ಮತ್ತು ನನ್ನ ಜೊತೆಗಿದ್ದ ಸ್ನೇಹಿತರಿಗೆ ಉಳಕೊಳ್ಳಲು ವ್ಯವಸ್ಥೆಯನ್ನು ಮಾಡಿದ್ದರು. ಆದರೆ ಊಟ ಉಪಾಹಾರಗಳಿಗೆ ಹತ್ತಿರದ ಪೇಟೆಯಲ್ಲಿರುವ ಹೋಟೆಲಿಗೆ ಹೋಗುವುದು ಅನಿವಾರ್ಯವಾಯಿತು. ರಾತ್ರಿಯ ಊಟಕ್ಕೆಂದು ಹೋಟೆಲಿಗೆ ಹೋಗಿದ್ದೆವು. ನಮಗೇ ಆಶ್ಚರ್ಯ! ರಂಗನೂ ಅದೇ ಹೋಟೆಲಿಗೆ ಬಂದಿದ್ದ. ನಮ್ಮ ಹತ್ತಿರದ ಟೇಬಲ್ ಮುಂದೆ ಕುರ್ಚಿಯಲ್ಲಿ ಕುಳಿತ. ಪರಸ್ಪರ ನಮಸ್ಕಾರದ ಉಪಚಾರ ನಮ್ಮೊಳಗೆ ನಡೆಯಿತು. ಆತ ಸ್ವಲ್ಪ ಮದ್ಯ ಸೇವಿಸಿದ್ದ. ದೊಡ್ಡ ಮಟ್ಟಿನ ಕುಡುಕರಿಗೆ ಹೋಲಿಸಿದರೆ ಅವನು ಕುಡಿದ ಮದ್ಯ ಏನೇನೂ ಅಲ್ಲ. ಆದರೂ ಕುಡಿದಿದ್ದ ಮದ್ಯ ರಂಗನನ್ನು ಅಸ್ತವ್ಯಸ್ತಗೊಳಿಸಿತ್ತು. ಯಾಕೆಂದರೆ ಇದು ಮದ್ಯದ ಬಾಟಲಿಗೆ ಅವನ ಪ್ರಥಮ. ಚುಂಬನ. ಆತ ಹಿಂದೆ ಕುಡಿದ ಬಗ್ಗೆ ಚರಿತ್ರೆಯೇ ಇಲ್ಲ.

“ರಂಗಣ್ಣ ಯಾಕೆ ಮದ್ಯ ಕುಡಿದಿರಬಹುದು!” ಎಂಬ ಸಂದೇಹದ ಹುಳ ನನ್ನ ತಲೆಗೆ ಹತ್ತಿತು. ಮನೆಯಲ್ಲಿ ಜಗಳವೇ? ಸಾಲ ಸೋಲವೇ? ವ್ಯವಹಾರದಲ್ಲಿ ನಷ್ಟವೇ? ರುಚಿ ಸವಿಯುವ ಉದ್ದೇಶವೇ? ಪ್ರಶ್ನೆಗಳಿಗೆ ಉತ್ತರ ಪಡೆಯಲು ರಂಗಣ್ಣ ಅಮಲಿನಲ್ಲಿದ್ದುದರಿಂದ ಆತನನ್ನು ಪ್ರಶ್ನೆ ಮಾಡುವಂತಿಲ್ಲ. ಅಷ್ಟರಲ್ಲಿ ಹೋಟೆಲ್ ಸಪ್ಲಾಯರ್ ಬಂದರು. ರಂಗಣ್ಣನಲ್ಲಿ, “ಏನು ಬೇಕು?” ಎಂದು ಕೇಳಿದರು. ಅವನು ಒಮ್ಮೆ ನಮ್ಮನ್ನು ಇನ್ನೊಮ್ಮೆ ಸಪ್ಲಾಯರ್ ನನ್ನು ದುರುಗುಟ್ಟಿ ನೋಡಿದನೇ ಹೊರತು ಮಾತನಾಡಲೇ ಇಲ್ಲ. “ಸಾದಾ ಊಟ” ಎಂದು ನಾವು ಹೇಳಿದೆವು. ರಂಗಣ್ಣನಿಗೂ ಹಸಿವಾಗಿರಬಹುದೆಂದು ಅವನಿಗೂ ಊಟ ಕೊಡಲು ಹೇಳಿದೆವು. ಎಲ್ಲರಿಗೂ ಊಟ ಬಂತು. ನಮ್ಮ ಊಟ ಮುಗಿಯಿತಾದರೂ ರಂಗಣ್ಣ ಮಾತ್ರ ನೆಟ್ಟಗೆ ಕುಳಿತೇ ಇದ್ದ. ನಾವೆದ್ದು ಕೈತೊಳೆದು ಬಿಲ್ ಪಾವತಿಸಿ ಹೋಟೆಲ್ ಹೊರಗಿನ ಸೋಫಾ ಮೇಲೆ ಎರಗಿದೆವು. ರಂಗಣ್ಣನೂ ಹೊರಗೆ ಬಂದ. ಬರುವಾಗ ಊಟದ ತಟ್ಟೆಯನ್ನು ಎತ್ತಿಕೊಂಡೇ ಬಂದಿದ್ದ. ನಮಗೆ ಆಶ್ಚರ್ಯ! “ಯಾಕೆ ಊಟ ಹೊರಗೆ ತಂದ? ಮುಕ್ತವಾತಾವರಣದಲ್ಲಿ ಉಣ್ಣುವ ಉದ್ದೇಶವೇ? ಮನೆಗೆ ಒಯ್ಯುವನೇ? ಹೋಟೆಲಿನವರ ತಟ್ಟೆಯಲ್ಲವೇ?” ಹೀಗೆ ಯೋಚನೆಯ ಸುರಿಮಳೆ ನಮ್ಮೊಳಗೆ ಬಂದವನೇ ಹೊರಗಡೆ ಒಂದು ಬದಿಯಲ್ಲಿ ಕುಳಿತ. ತಟ್ಟೆ ಅಲ್ಲೇ ಇಟ್ಟ. ಸಂಕಲೆಗೆ ಕಟ್ಟಿದ್ದ ಹೋಟೆಲಿನವರ ನಾಯಿ ಘರ್ರ್ ಎಂದಿತು. ಒಳಗಡೆ ಹೋದ. ಒಂದು ಬಾಳೆ ಎಲೆ ತಂದ. ನಾಯಿಯ ಮುಂದೆ ಎಲೆ ಇಟ್ಟ. ತಟ್ಟೆಯಲ್ಲಿದ್ದ ಎಲ್ಲವನ್ನೂ ಆ ಎಲೆಗೆ ಸುರಿದ. ಅಮಲಿನಲ್ಲೇ ನಾಯಿಗೆ, ಇ...ಇ...ನ್..ನ್....ನ್ನ್...ಉ… ತಿ..ತಿ..ನ್...ನ್ನು ಎಂದು ಓಲಾಡುತ್ತಾ ಆಜ್ಞೆ ಮಾಡಿದ. ನಾಯಿ ತಿಂದಿತು. ಇದೆಲ್ಲವನ್ನೂ ಕಣ್ಣು ಪಿಳಿ ಪಿಳಿ ಮಾಡಿ ನೋಡುತ್ತಾ, ಕೆಕ್ಕರಿಸುತ್ತಾ, ಅವನಷ್ಟಕ್ಕೆ ನಗುತ್ತಾ, ತಲೆ ಕುಕ್ಕರಿಸುತ್ತಾ ರಂಗಣ್ಣ ನೋಡುತ್ತಿದ್ದನು. ಅನ್ನವನ್ನು ತಿಪ್ಪೆಗೆಸೆಯದೆ ನಾಯಿಗಾದರೂ ತಿನ್ನಿಸಿದನಲ್ಲಾ ಎಂಬ ಸಮಾಧಾನ ನಮಗೆ. ಮಲಗಲಿರುವ ಮನೆಗೆ ಮೌನದಿಂದ ನಾವು ಸ್ವಯಂ ರವಾನೆಯಾದೆವು.

ಮಲಗಲು ಆಗಮಿಸಿ ಸರಿ ಸುಮಾರು ಒಂದು ಗಂಟೆ ಕಳೆದಿರಬಹುದು. ಹೊರಗನಿಂದ ಯಾರೋ ಬಾಗಿಲು ಬಡಿದ ಧ್ವನಿ. ಮನೆಯ ಯಜಮಾನರಿರಬಹುದು ಎಂದು ಬಾಗಿಲು ತೆಗೆದರೆ, ಪ್ರತ್ಯಕ್ಷನಾಗಿದ್ದಾನೆ ರಂಗಣ್ಣ. ವಾಲುತ್ತಾ ಒಳಗೆ ಬಂದ. ಹೊರಗೆ ಕಳುಹಿಸುವಂತಿಲ್ಲ. ಇರಲಿ ಎಲ್ಲಾದರೂ ಮಲಗಲಿ ಎಂದು ನಮ್ಮ ಚಾಪೆಯತ್ತ ಹೋದೆವು. ಸ್ವಲ್ಪ ಹೊತ್ತಿನಲ್ಲಿ ಅಲ್ಲಿಂದ ಎದ್ದು ಬಂದವನೇ ನನ್ನ ಚಾಪೆ ಹತ್ತಿರ ಬಂದ. ಚಾಪೆಯ ಬದಿಯಲ್ಲಿ ಮಲಗುತ್ತಾ ದಿಂಬಿನಲ್ಲಿಯೂ ಪಾಲು ತೆಗೆದುಕೊಂಡ. ಸ್ನಾನ ಮಾಡಿಲ್ಲ. ಬೆವರು ವಾಸನೆ ಮತ್ತು ಮದ್ಯ ವಾಸನೆ. ದೂರ ಹೋಗಿ ಮಲಗೋಣ ಎಂದರೆ ಬೇರೆ ಚಾಪೆಯಿಲ್ಲ. ಉಳಿದವರು ಎದ್ದು ಬಂದು ಅವನನ್ನು ಎಬ್ಬಿಸಲು ಪ್ರಯತ್ನಿಸಿದರು. ಅವನು ನನ್ನನ್ನು ಗಟ್ಟಿಯಾಗಿ ತಬ್ಬಿ ಹಿಡಿದುಕೊಂಡ. ಅವನ ಕಾಲುಗಳೆರಡನ್ನೂ ನನ್ನ ಮೇಲಿಟ್ಟ. ನನಗೂ ರೋಸಿ ಹೋಯಿತು. ಅವನನ್ನು ದೂರ ದೂಡಿ ಹೊರಗೆ ನಡೆದೆ. ಕುಡಿದ ನಶೆಯಲ್ಲಿಯೇ ವಿಜೃಂಭಿಸುತ್ತಿದ್ದ ರಂಗಣ್ಣ ಮತ್ತು ನನ್ನ ಸ್ನೇಹಿತರ ನಡುವೆ ನೂಕು ನುಗ್ಗಾಟ ನಡೆಯಿತು. ಎಲ್ಲರೂ ಹೊರ ಬಂದರು. ರಂಗಣ್ಣನೂ ಛಲ ಬಿಡಲಿಲ್ಲ. ಹೊರಗೆ ಬಂದೇ ಬಿಟ್ಟ. ಕಲ್ಲೆತ್ತಿದ, ನಮ್ಮತ್ತ ಎಸೆಯಲಾರಂಭಿಸಿದ. ಗುರಿಯಿರದ ಅವನೆಸೆದ ಕಲ್ಲುಗಳು ಅಲ್ಲಲ್ಲ್ಲಿ ಬಿದ್ದುವು. ನಮ್ಮ ಮೈಗೆ ಬೀಳದಂತೆ ಸ್ವರಕ್ಷಣೆ ಮಾಡಿಕೊಂಡೆವು. 

ಅಷ್ಟರಲ್ಲಿ ಎಲ್ಲಿ ಸಿಕ್ಕಿತೋ ಏನೋ?. ಅವನ ಕೈಯಲ್ಲೊಂದು ಉದ್ದದ ಗಡುಸಾದ ದೊಣ್ಣೆ. ನಮ್ಮನ್ನು ಓಡಿಸುತ್ತಾ ಬಂದ. ಎಲ್ಲರೂ ಓಡಿ ಅಡಗಿದರು. ಈಗ ಓಡುವ ಸರದಿ ನನ್ನದು. ನಾನೂ ಓಡಿದೆ. ಒಂದು ಮರದ ಸಂದಿನಲ್ಲಿ ಅವಿತು ಕುಳಿತೆ. ಅವನಿಗೆ ಕಾಣಿಸಲಿಲ್ಲ. ಅಲ್ಲೇ ಕುಸಿದು ಬಿದ್ದ. ನಾನು ಅವನನ್ನು ಉಪಚರಿಸಲು ಹೋಗುವಂತಿಲ್ಲ. ಯಾಕೆಂದರೆ ದೊಣ್ಣೆ ರುಚಿ ಸಿಕ್ಕಿದರೆ..!

"ಕುಡುಕರು ಅಮಲಿನಲ್ಲಿ ಪೂರ್ವಾ ಪರ ಯೋಚಿಸುವುದಿಲ್ಲ. ಕಟುಕರಾಗುತ್ತಾರೆ. ತಾವು ಮಾಡುವ ಆವಾಂತರ ಅನಾಹುತಗಳ ದುಷ್ಪರಿಣಾಮಗಳನ್ನು ತಿಳಿಯುವುದಿಲ್ಲ. ಅವರು ಮೃಗಗಳಾಗುತ್ತಾರೆ. ಸಂಸ್ಕಾರವೇ ಮುಚ್ಚಿ ಹೋಗುತ್ತದೆ. ನೆರೆಯವನು, ಸ್ನೇಹಿತ, ಉಪಕರಿಸಿದವನು ಎಂಬಿತ್ಯಾದಿ ಪ್ರಜ್ಜೆಯನ್ನು ಹೊಂದಿರುವುದಿಲ್ಲ" ಎಂದು ಯೋಚಿಸುತ್ತಾ ರಾತ್ರಿಯ ಚಳಿ ಮತ್ತು ರಂಗಣ್ಣನ ದೊಣ್ಣೆಯ ಭಯದಿಂದ ನಡುಗುತ್ತಿದ್ದೆ. ನಿದ್ದೆಯೇ ಬರಲಿಲ್ಲ. ನನ್ನ ಎದೆಯ ಡಬ್ ಡಬ್ ಸಪ್ಪಳ ನನ್ನ ಕಿವಿಗೆ ಕೇಳುವಷ್ಟು ಬಿರುಸಾಗಿತ್ತು. ಅಷ್ಟರಲ್ಲಿ ಫಕ್ಕನೆ ಎಚ್ಚರಿಗೆಯಾಯಿತು. ಸುತ್ತ ಮುತ್ತ ನೋಡಿದೆ. ಹಾಸಿಗೆಯ ಮೇಲೆ ಸಕತ್ತಾಗಿ ಮಲಗಿದ್ದೆ. ಸಮಾಧಾನವಾಯಿತು. ಬೆಳಗ್ಗೆ ರಂಗಣ್ಣ ಮನೆಗೆ ಹಾಲು ಹಿಡಿದು ಬಂದಿದ್ದ. ಅವನನ್ನು ನೋಡಿದೊಡನೆ ನಾನು ನಾಚಿ ನೀರಾದೆ.

-ರಮೇಶ ಎಂ. ಬಾಯಾರು, ಬಂಟ್ವಾಳ 

ಚಿತ್ರ ಕೃಪೆ: ಇಂಟರ್ನೆಟ್ ತಾಣ