ಕುಡಿತದ ಬಾಳು ಜೀವನ ಗೋಳು
ಕವನ
ಒಡಲತುಂಬ ಕುಡಿದುಬಂದು
ಹೆಂಡತಿಯ ಹೊಡೆದುಬಡಿದು
ನಾನು ಗಂಡಸೆಂದು ಕುಣಿದು
ದಿನವು ಜಗಳ ತೆಗೆಯುತಿದ್ದನು
ಕೂಲಿ ಮಾಡಿ ಬದುಕದೂಡಿ
ಹಡೆದ ಮಕ್ಕಳ ಹಸಿವನೋಡಿ
ಕುಡುಕನೊಡನೆ ಜಗಳವಾಡಿ
ಕಷ್ಟದಿಂದ ಎಲ್ಲರನ್ನು ಸಲಹುತಿದ್ದಳು
ದಿನವು ಕುಡಿದು ಜಗಳವಾಡಿ
ಹಾದಿಬೀದಿ ರಂಪ ಮಾಡಿ
ದುಡಿದು ಬಂದ ಮಡದಿಯನ್ನು
ಹೀನಮಾನವಾಗಿ ಬೈಯುತಿದ್ದನು
ಕುಡುಕನೊಡನೆ ನೊಂದುಬೆಂದು
ಒಡಲತುಂಬ ನೋವನುಂಡು
ಹಡೆದಸುತರ ನೋಡಿಕೊಂಡು
ಬಾಳಬಂಡಿಯನ್ನು ನೂಕುತಿದ್ದಳು
ಅತಿಕುಡಿತ ಪ್ರತಿದಿನ ಜೋರಾಯ್ತು
ಯಕೃತ್ತಿನ ರೋಗವು ಅತಿಯಾಯ್ತು
ಇದ್ದಬದ್ದ ಆಸ್ತಿಯೆಲ್ಲ ಕಳೆದೆಬಿಟ್ಟ
ತಾನು ಮಸಣದೆಡೆಗೆ ಹೊರಟೆಬಿಟ್ಟ
ತಾಳಿಗೆ ಕೊರಳೊಡ್ಡಿದ ತಪ್ಪಿಗಾಗಿ
ಬದುಕತುಂಬ ಬವಣೆ ಸಹಿಸಿ
ನೊಂದುಬೆಂದು ಅನಾಥಳಂತೆ
ಬವಣೆಬದುಕ ದೂಡುತಿರುವಳು
-ಬೋರೇಗೌಡ, ಅರಸೀಕೆರೆ
ಚಿತ್ರ್