ಕುಡಿಯುವ ನೀರು : ಸ್ಥಳೀಯ ಆಡಳಿತಗಳ ನಿಗಾ ಅತ್ಯಗತ್ಯ

ಕುಡಿಯುವ ನೀರು : ಸ್ಥಳೀಯ ಆಡಳಿತಗಳ ನಿಗಾ ಅತ್ಯಗತ್ಯ

ಮೈಸೂರಿನಲ್ಲಿ ಕಲುಷಿತ ನೀರು ಕುಡಿದು ಒಬ್ಬ ವ್ಯಕ್ತಿ ಮೃತಪಟ್ಟು, ಕೆಲವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಘಟನೆಯ ಬೆನ್ನಲ್ಲೇ ಮುಖ್ಯಮಂತ್ರಿಗಳು ಈ ಬಗ್ಗೆ ಎಚ್ಚೆತ್ತುಕೊಂಡು ಪ್ರತಿನಿತ್ಯ ಸ್ಥಳೀಯಾಡಳಿತಗಳು ಕುಡಿಯುವ ನೀರಿನ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಬೇಕೆಂದು ತಾಕೀತು ಮಾಡಿದ್ದಾರೆ. ಕಲುಷಿತ ನೀರಿನಿಂದ ಕಾಲರಾ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚುತ್ತಿವೆ. ಕೆಲ ದಿನಗಳ ಹಿಂದೆ ಬೆಂಗಳೂರಿನ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ನಲ್ಲಿ ಕಲುಷಿತ ನೀರು ಸೇವಿಸಿ ೫೦ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಆಸ್ಪತ್ರೆಗೆ ದಾಖಲಾಗಿದ್ದರು. ಚಿತ್ರದುರ್ಗ, ರಾಯಚೂರು ಮುಂತಾದ ಜಿಲ್ಲೆಗಳಲ್ಲಿ ತಿಂಗಳ ಹಿಂದೆ ಇಂತಹ ಪ್ರಕರಣಗಳು ವರದಿಯಾಗಿದ್ದವು. ಬಡತನ ಹಾಗೂ ಅನಕ್ಷರತೆ ಹೆಚ್ಚಿರುವ ಪ್ರದೇಶಗಳಲ್ಲಿ ಜನರಿಗೆ ಕುಡಿಯುವ ನೀರಿನ ಬಗ್ಗೆ ಜಾಗೃತಿ ಕಡಿಮೆಯಿರುತ್ತದೆ. ಅಂತಹ ಕಡೆ ಗ್ರಾಮ ಪಂಚಾಯಿತಿಗಳು ಅಥವಾ ನಗರಾಡಳಿತಗಳು ಹೆಚ್ಚಿನ ನಿಗಾ ವಹಿಸಬೇಕಾಗುತ್ತದೆ. ಆದರೆ ನೀರು ಪೂರೈಕೆಯ ಜವಾಬ್ದಾರಿ ಹೊತ್ತಿರುವವರು ನಿರ್ಲಕ್ಷ್ಯ ವಹಿಸಿದಾಗ ಸಾಂಕ್ರಾಮಿಕ ರೋಗಗಳು ಹರಡತೊಡಗುತ್ತವೆ ಅಥವಾ ಜನರೇ ಸ್ವತಂತ್ರವಾದ ಜಲಮೂಲದಿಂದ ನೀರು ಬಳಸುತ್ತಿದ್ದರೆ, ಅಲ್ಲಿ ಸ್ವಚ್ಛತೆಯ ಕೊರತೆಯಿದ್ದರೂ ಅದು ಅನಾರೋಗ್ಯಕ್ಕೆ ದಾರಿ ಮಾಡಿಕೊಡುತ್ತದೆ.

ಸರ್ಕಾರ ಎಚ್ಚರಿಕೆ ನೀಡುವುದು, ಕಲುಷಿತ ಜನರಿಗೆ ಸಮಸ್ಯೆಯಾದರೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳೇ ಹೊಣೆ ಎಂದು ಹೇಳುವುದು, ಜಿಲ್ಲಾ ಮಟ್ಟದ ಅಧಿಕಾರಿಗಳು ನಗರ ಸ್ಥಳೀಯ ಸಂಸ್ಥೆ ಹಾಗೂ ಗ್ರಾ.ಪಂ. ಗಳಿಗೆ ಇದೇ ಎಚ್ಚರಿಕೆಯನ್ನು ರವಾನಿಸಿ ಕೈತೊಳೆದುಕೊಳ್ಳುವುದು ಹಿಂದಿನಿಂದಲೂ ಇದೆ. ಜನರ ಆರೋಗ್ಯದ ಬಗ್ಗೆ ನಿಜವಾದ ಕಾಳಜಿಯಿದ್ದರೆ ಮತ್ತು ನೀರು ಪೂರೈಕೆಯ ಹೊಣೆ ಹೊತ್ತವರು ತಮ್ಮ ಜವಾಬ್ದಾರಿಯನ್ನು ಪ್ರಾಮಾಣಿಕತೆಯಿಂದ ನಿಭಾಯಿಸಿದರೆ ಮಾತ್ರ ಸ್ವಚ್ಛ ಕುಡಿಯುವ ನೀರಿನ ಪೂರೈಕೆ ಸಾಧ್ಯ. ಸದ್ಯ ನಮ್ಮ ರಾಜ್ಯದಲ್ಲಿ ಇನ್ನೂ ಪೂರ್ಣ ಪ್ರಮಾಣದಲ್ಲಿ ಮನೆಮನೆಗೂ ಶುದ್ಧ ಕುಡಿಯುವ ನೀರಿನ ಪೂರೈಕೆಯೇ ಸಾಧ್ಯವಾಗಿಲ್ಲ.

ಕೇಂದ್ರ ಸರ್ಕಾರದ ಯೋಜನೆಯಡಿ ಪ್ರತಿ ಮನೆಗೆ ಕುಡಿಯುವ ನೀರು ಪೂರೈಸಬೇಕು ಎಂಬ ಕಾರ್ಯಕ್ರಮ ಜಾರಿಯಲ್ಲಿದೆಯಾದರೂ, ಹೆಚ್ಚಿನ ಕಡೆ ಪೈಪ್ ಲೈನ್ ಮಾತ್ರ ಅಳವಡಿಸಲಾಗಿದೆ, ಅದರಲ್ಲಿ ನೀರು ಬರುತ್ತಿಲ್ಲ, ಹೀಗಾಗಿ ಕುಡಿಯುವ ನೀರಿಗಾಗಿ ಜನರು ಪರದಾಡುವ ಪರಿಸ್ಥಿತಿಯಂತೂ ಇದ್ಡೇ ಇದೆ. ಅದರ ಜೊತೆಗೆ, ಸೀಮಿತವಾಗಿ ಪೂರೈಕೆಯಾಗುವ ಕುಡಿಯುವ ನೀರು ಕೂಡ ಅಶುದ್ಧವಾಗಿದ್ದರೆ ಅದು ಆಡಳಿತ ವ್ಯವಸ್ಥೆಯದೇ ಲೋಪ. ನೀರಿನಂತಹ ಮೂಲಭೂತ ಅಗತ್ಯವನ್ನೂ ಆಡಳಿತ ವ್ಯವಸ್ಥೆಯಿಂದ ಪೂರೈಸಲು ಸಾಧ್ಯವಾಗದಿದ್ದರೆ ಹೇಗೆ? ಸ್ಥಳಿಯಾಡಳಿತಗಳು ಈ ವಿಚಾರವನ್ನು ಆದ್ಯತೆಯಾಗಿ ತೆಗೆದುಕೊಳ್ಳಬೇಕಿದೆ.

ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೨೫-೦೫-೨೦೨೪

ಚಿತ್ರ ಕೃಪೆ: ಅಂತರ್ಜಾಲ ತಾಣ