ಕುಣಿಗಲ್ ಟು ಕಂದಹಾರ್

ಕುಣಿಗಲ್ ಟು ಕಂದಹಾರ್

ಪುಸ್ತಕದ ಲೇಖಕ/ಕವಿಯ ಹೆಸರು
ಮಂಜುನಾಥ ಕುಣಿಗಲ್
ಪ್ರಕಾಶಕರು
ವೀರಲೋಕ ಬುಕ್ಸ್, ಚಾಮರಾಜಪೇಟೆ, ಬೆಂಗಳೂರು-560018
ಪುಸ್ತಕದ ಬೆಲೆ
ರೂ. 260.00, ಮುದ್ರಣ: 2022

“ಪುಸ್ತಕದ ಉದ್ದಕ್ಕೂ ಸಾಕಷ್ಟು ಭೌಗೋಳಿಕ ವಿವರಗಳಿದ್ದು, ಬರೆಯುವ ಮುನ್ನ ಇವರು ಮಾಡಿರಬಹುದಾದ ತತ್ಸಂಬಂಧಿ ಅಧ್ಯಯನ ಸ್ಪಷ್ಟವಾಗಿ ಗೋಚರಿಸುತ್ತದೆ. ಓದುಗನಿಗೆಷ್ಟು ಗೊತ್ತಾದೀತು ಮಹಾ ಎಂಬ ಉದಾಸೀನ, ಉಡಾಫೆಯಿಂದ ಬರೆಯುವವರ ನಡುವೆ ಇವರು ಭಿನ್ನವಾಗಿ ನಿಲ್ಲುತ್ತಾರೆ. ಬಹಳ ಕಡಿಮೆ ಓದಿರುವ ನನ್ನ ಜ್ಞಾನದ ಪರಿಧಿಯನ್ನು ಈ ಪುಸ್ತಕ ವಿಸ್ತರಿಸಿದೆ” ಎನ್ನುವುದು ನನ್ನ ಅನಿಸಿಕೆ. ಲೇಖಕ ಮಂಜುನಾಥ್‌ ಕುಣಿಗಲ್‌ ಅವರ ಕುಣಿಗಲ್‌ ಟು ಕಂದಹಾರ್‌ ಕೃತಿಗೆ ಬರೆದಿರುವ ನಾನು ಬರೆದ ವಿಮರ್ಶೆ ನಿಮ್ಮ ಓದಿಗಾಗಿ...

“ಶಾಲೆ ಕಾಲೇಜು ಓದುತ್ತಿದ್ದ ಹೊತ್ತಿನಲ್ಲಿ ಓದಿದ ಇತಿಹಾಸದ ತುಂಬೆಲ್ಲ ದಿನಾಂಕ ಇಸವಿಗಳೇ ತುಂಬಿ ಓದುವ ಆಸಕ್ತಿ ಕುಂದಿಸಿತ್ತು. ಚರಿತ್ರೆಯೆಂದರೆ ಬರೀ ಅವಷ್ಟೇ ಅಲ್ಲ ಎಂದು ಗೊತ್ತಾಗುವ ಹೊತ್ತಿಗೆ ಬದುಕು ಗುರ್‌ ಎಂದು “ಓದಿನ ಹುಚ್ಚು ಹೊಟ್ಟೆ ತುಂಬಿಸುವುದಿಲ್ಲ; ಕ್ಯಾಮೆ ನೋಡ್ಕೊ ಹೋಗ್” ಅಂದಿತ್ತು. ಅಕ್ಷರ ಮೋಹ ಬಿಡಲಾಗದೇ ಅಷ್ಟೋ ಇಷ್ಟೋ ಪುಸ್ತಕಗಳ ನೇವರಿಸುತ್ತಿದ್ದ ಹೊತ್ತಿನಲ್ಲಿ ಕೆಲವು ಬಿಡಿ ಬರಹಗಳನ್ನು ಓದುವಾಗ ಖುಷಿಯಿತ್ತು. “ಕುಣಿಗಲ್ ಟು ಕಂದಹಾರ್” ಕೂಡ ಅಂಥದ್ದೇ ಪುಸ್ತಕ ಇರಬಹುದು ಎಂದೆನಿಸಿ ಮಾರ್ಚ್‌ ತಿಂಗಳ ಬಜೆಟ್‌ʼನಲ್ಲಿ ಕೊಳ್ಳುವ ಇರಾದೆಯಲ್ಲಿ ಇದ್ದಾಗಲೇ ಲಡ್ಡು ಬಂದು ಬಾಯಿಗೆ ಬಿತ್ತು. ಮಂಜುನಾಥ್ ಕುಣಿಗಲ್ ತಾನೇ ತನ್ನ ಕಂದ-ಹಾರವನ್ನು ಕೈಗಿಟ್ಟರು.

ಯುದ್ಧವೆಂಬುದು ಮಾಧ್ಯಮ ವರದಿಗಳ ರೂಪದಲ್ಲೋ ಅಥವಾ ವಾರ್ತೆಗಳಾಗಿಯೋ ನಮ್ಮನ್ನು ತಲುಪಿದ್ದುಂಟು. ಅವೆಲ್ಲ ಬಹುತೇಕ ಕದನ ನಡೆಯುತ್ತಿರುವ ಸಂದರ್ಭದ ಚಿತ್ರಣಗಳಷ್ಟೇ. ನನ್ನ ಓದಿನ ಮಿತಿಯಲ್ಲಿ ಹೇಳುವುದಾದರೆ ಕನ್ನಡದ ಮಟ್ಟಿಗೆ ನಿತ್ಯ ರಣರಂಗದ ಚಿತ್ರಣವನ್ನು ಹೀಗೆ ಕಟ್ಟಿಕೊಟ್ಟಿದ್ದು ಇಲ್ಲವೆಂದೇ ಭಾವಿಸುತ್ತೇನೆ. ಮಂಜುನಾಥ್ ತನ್ನ ಉದ್ಯೋಗದ ಭಾಗವಾಗಿ ಕಂದಹಾರ್, ಕಾಬೂಲ್ನಲ್ಲಿ ಯುದ್ಧದ ಏರ್ಬೇಸ್ ಕ್ಯಾಂಪ್ಗಳಲ್ಲಿ ಇತರೆಡೆಗಳಲ್ಲಿ ಕೆಲಸ ಮಾಡಿದ್ದು, ತಾನು ಕಂಡ ಯುದ್ಧದ ವಿಭಿನ್ನ ಮಜಲುಗಳನ್ನು, ಅಲ್ಲಿನ ಆಗು ಹೋಗುಗಳನ್ನು ಬಹಳ ಹತ್ತಿರದಿಂದ ಗಮನಿಸಿ ಪುಸ್ತಕವಾಗಿ ಕಟ್ಟಿಕೊಟ್ಟಿದ್ದಾರೆ.

ಇಲ್ಲಿ ಪ್ರಸ್ತುತಪಡಿಸಲಾದ ವಿಷಯಗಳು ತನ್ನ ಗ್ರಹಿಕೆ ಮತ್ತು ತಿಳುವಳಿಕೆಯ ಮಟ್ಟಕ್ಕಷ್ಟೇ ಸೀಮಿತ; ಹಾಗಾಗಿ ಆಯಾ ವಿಷಯ ತಜ್ಞರಿಗೆ ವ್ಯತ್ಯಾಸ ಕಂಡು ಬರುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು ಎಂದು ಮೊದಲಿಗೇ ಹೇಳಿಕೊಳ್ಳುವ ಮೂಲಕ ಒಬ್ಬ ವಿನೀತ ಬರಹಗಾರನಾಗಿ ಕೂಡ ಓದುಗರಿಗೆ ದಕ್ಕುತ್ತಾರೆ.

ಕಂದಹಾರ ಏರ್‌ʼಬೇಸ್ ಎಂಬ ಯುದ್ಧ ನಗರಿಯಲ್ಲಿ 25 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಪ್ರಪಂಚದ 54 ಕ್ಕೂ ಹೆಚ್ಚು ರಾಷ್ಟ್ರದ 40,000 ಮಂದಿ ಜೊತೆಗೇ ಬದುಕುತ್ತಿರುತ್ತಾರೆ. ಹಸಿವಿಗೆ ಜಾತಿ ಧರ್ಮಗಳಗಳ ಪರಿವೆಯಿಲ್ಲ ನಿಜ; ಯುದ್ಧದ ಹಸಿವಿಗೂ ಹೀಗೇನಾ? ತಾಲಿಬಾನಿಗಳ ಪ್ರಮುಖ ಉದ್ದೇಶ ಅತಿ ಹೆಚ್ಚು ಜನರಿರುವ ಕಡೆ ದಾಳಿ ಮಾಡುವುದು ಮತ್ತು ಹಾನಿಯಾಗುವಂತೆ ನೋಡಿಕೊಳ್ಳುವುದು ಹೆಚ್ಚು ಹಾನಿಯಾಗುವಂತೆ ನೋಡಿಕೊಳ್ಳುವುದು ಎನ್ನುತ್ತಾರೆ ಲೇಖಕರು. ಪ್ರಾಣಿಗಳು ತಮ್ಮ ಹಸಿವು ನೀಗಿಸಲಷ್ಟೇ ಇನ್ನೊಂದು ಜೀವವನ್ನು ಸಾಯಿಸುವುದು; ಆದರೆ ಮನುಷ್ಯನೆಂಬ ಜಗತ್ತಿನ ಶ್ರೇಷ್ಠ ಪ್ರಾಣಿ ಇದನ್ನು ವಿಕೃತ ಸಂತೋಷಕ್ಕಾಗಿಯೂ ಮಾಡುತ್ತಾನಲ್ಲ ಎನಿಸದಿರದು. ಡಿಫ್ಯಾಕ್ ಎಂಬ ಊಟದ ವ್ಯವಸ್ಥೆಯನ್ನು ವಿವರಿಸುತ್ತ ಮಿಲಿಟರಿಯವರ ಜೊತೆಯಲ್ಲೇ ಕೂತು ತಿನ್ನುವ ಮೇಲು ಕೇಳಿಲ್ಲದ ಊಟದ ವ್ಯವಸ್ಥೆ ಎನ್ನುತ್ತಾರೆ. ಮನುಷ್ಯನೊಳಗೆ ಸಮಾನ ಗೌರವ ಪಡೆಯುವ ನಿರೀಕ್ಷೆ ಎಷ್ಟು ಗಾಢವಾಗಿ ಬೇರೂರಿರುತ್ತದೆ! ಅಲ್ಲಿನ ವೈಭವೋಪೇತ ಭಕ್ಷ್ಯಗಳ ವಿವರಗಳನ್ನು ಓದುವಾಗ ಯುದ್ಧಭೂಮಿಯ ನಡುವೆ ಇಂಥದ್ದು ಇರಲು ನಿಜಕ್ಕೂ ಸಾಧ್ಯವಾ ಅನಿಸದಿದ್ರೆ ಹೇಳಿ. ಎಂಥದ್ದೇ ಕಠಿಣ ಪರಿಸ್ಥಿತಿ ಇರಲಿ ಮನುಷ್ಯ ಹಸಿವುಗಳನ್ನು (ಯಾವ ಹಸಿವೆಯೇ ಇರಲಿ) ಪೂರ್ತಿ ಗೆಲ್ಲಲಾರದ ಅಸಹಾಯಕ!!

ಲೇಖಕರ ಕಂಪನಿಯ ಒಬ್ಬ ಹುಡುಗ ರಾಕೆಟ್ ದಾಳಿಗೆ ಬಲಿಯಾಗುತ್ತಾನೆ ಮತ್ತು ಅದು ಸುದ್ದಿಯಾಗುವುದೇ ಇಲ್ಲ. ಅಮೆರಿಕಾ ಅಥವಾ ಯುರೋಪಿಗೆ ಸೇರಿದ ನೊಣ ಸತ್ತರೂ ಅದು ದೊಡ್ಡ ಸುದ್ದಿ; ಬೃಹತ್ ಮೊತ್ತದ ವಿಮೆ ಪರಿವಾರದ ಪಾಲಾಗುತ್ತದೆ. ಎನ್ನುವಾಗ ಮರಣದ ಸಮ್ಮುಖದಲ್ಲೂ ಮನುಷ್ಯ ತೋರುವ ಮೇಲು ಕೀಳೆಂಬ ಭಾವ ಗಾಢ ವಿಷಾದ ಹುಟ್ಟಿಸುತ್ತದೆ. ಇಂಥ ವ್ಯಂಗ್ಯಗಳು ವಿರೋಧಾಭಾಸಗಳು ಪುಸ್ತಕದುದ್ದಕ್ಕೂ ಅಲ್ಲಲ್ಲಿ ಸಿಗುತ್ತವೆ. ನಾವು ಮಾತ್ರ ನಮ್ಮ ದೇಶದಲ್ಲಿ ಮಾತ್ರವೇ ತಾರತಮ್ಯ ಎಂಬಂತೆ ಬೊಬ್ಬಿರಿಯುತ್ತೇವೆ.

ತಡವಾದ ವಿಮಾನಕ್ಕೆ ಕಾಯುತ್ತ ಕೂತಾಗ ಪರಿಚಯವಾದ ಮನುಷ್ಯನೊಬ್ಬ 20 ಮಿಲ್ಲಿಯನ್ ಜಿಂಬಾಬ್ವೆ ಡಾಲರಿನ ನೋಟನ್ನು ನೆನಪಿಗಾಗಿ ಕೊಡುತ್ತಾನೆ. ಅದು ಯಾವುದೇ ರೀತಿಯಲ್ಲೂ ತನಗೆ ಉಪಯೋಗವಿಲ್ಲ ಎಂಬ ಅರಿವಿದ್ದೂ ಅದರ ಹಿಂದಿನ ಬೆಲೆ ಕಟ್ಟಲಾಗದ ಔದಾರ್ಯಕ್ಕಾಗಿ ಜತನದಿಂದ ಕಾಪಿಟ್ಟುಕೊಳ್ಳುವ ಮೂಲಕ ಅಂಥ ಭೀಕರತೆಯ ನಡುವೆಯೂ ಇವರ ಭಾವುಕತೆ ಜೀವಂತ ಆಗಿ ಉಳಿಯುವ ಅಚ್ಚರಿಯೂ ಇಲ್ಲಿದೆ.

ಮಿಲಿಟರಿಯಲ್ಲಿ ಉದ್ಯೋಗ ಗಿಟ್ಟಿಸಲು ವಿಶಿಷ್ಟ ಸಾಮರ್ಥ್ಯ ಮತ್ತು ಅರ್ಹತೆ ಇರಬೇಕೇನೋ ಎಂಬ ನನ್ನ ಭಾವನೆಗಳನ್ನು ಪೂರ್ತಿ ಬುಡಮೇಲು ಮಾಡಿದ ಶ್ರೇಯ ಈ ಕೃತಿಗೇ ಸಲ್ಲಬೇಕು. ಯುದ್ಧ ಪೀಡಿತ ಜಾಗದಲ್ಲಿ ಕೆಲಸಕ್ಕೆ ಜನ ಸರಿಯಾಗಿ ಸಿಕ್ಕದ ಕಾರಣ ಸಿಕ್ಕಸಿಕ್ಕವರನ್ನು ತಂದು ಅವರಿಗೆ ದೊಡ್ಡ ಹುದ್ದೆ ಮತ್ತು ಸಣ್ಣ ಸಂಬಳ ಕೊಟ್ಟು ಕೈ ತೊಳೆದುಕೊಂಡು ಬಿಡುತ್ತಾರಂತೆ. Money does many things ಎನ್ನುವುದು ಎಲ್ಲ ಕಾಲದಲ್ಲೂ ಎಲ್ಲ ಜಾಗದಲ್ಲೂ ಸತ್ಯ. ಆ ರಣಭೂಮಿಯ ನಡುವಿನ ಹಿಮಪಾತ ನೋಡಿದಾಗ ಬಿಳಿ ಹೂವಿನ ಪಕಳೆಗಳು ಆಕಾಶದಿಂದ ವೃಷ್ಟಿಯಾದಂತೆ ಭಾಸವಾಗುತ್ತಿತ್ತು ಎಂದು ಬರೆಯಬಲ್ಲ ಸೌಂದರ್ಯ ಪ್ರಜ್ಞೆ ಜೀವಭಯವನ್ನು ಮೀರಿದ್ದು ಸೋಜಿಗ.

ಪುಸ್ತಕದ ಉದ್ದಕ್ಕೂ ಸಾಕಷ್ಟು ಭೌಗೋಳಿಕ ವಿವರಗಳಿದ್ದು ಬರೆಯುವ ಮುನ್ನ ಇವರು ಮಾಡಿರಬಹುದಾದ ತತ್ಸಂಬಂಧಿ ಅಧ್ಯಯನ ಸ್ಪಷ್ಟವಾಗಿ ಗೋಚರಿಸುತ್ತದೆ. ಓದುಗನಿಗೆಷ್ಟು ಗೊತ್ತಾದೀತು ಮಹಾ ಎಂಬ ಉದಾಸೀನ/ ಉಡಾಫೆಯಿಂದ ಬರೆಯುವವರ ನಡುವೆ ಇವರು ಭಿನ್ನವಾಗಿ ನಿಲ್ಲುತ್ತಾರೆ. ಬಹಳ ಕಡಿಮೆ ಓದಿರುವ ನನ್ನ ಜ್ಞಾನದ ಪರಿಧಿಯನ್ನು ಈ ಪುಸ್ತಕ ವಿಸ್ತರಿಸಿದೆ. ಅನಧಿಕೃತ ಐಡಿ, ಆಧಾರ್‌ ಕಾರ್ಡುಗಳಿರುತ್ತವೆ ಗೊತ್ತಿದ್ದ ನನಗೆ ತನ್ನ ಅಸ್ತಿತ್ವವನ್ನು ಅಧಿಕೃತಗೊಳಿಸಲು ಇಂದಿಗೂ ಪರದಾಡುತ್ತಿರುವ ಕೊಸೊವೋ ಎಂಬೊಂದು ಅನಧಿಕೃತ ದೇಶ ಜಗತ್ತಿನಲ್ಲಿದೆ ಎಂದು ಕಂದಾಹಾರ್‌ ಮೇಲಾಣೆಗೂ ಗೊತ್ತಿರಲಿಲ್ಲ. ಯುದ್ಧ ಭೂಮಿಗಳಲ್ಲಿ ರೇಸಿಸಂ ನಿಷಿದ್ಧವಾಗಿದ್ದರೂ ಲೇಖಕರ ಸಹವರ್ತಿಯೊಬ್ಬ ಮೂರೂ ಹೊತ್ತು ತನ್ನ ಧರ್ಮದ ಶ್ರೇಷ್ಟತೆಯ ಬಗ್ಗೆಯಷ್ಟೇ ಕೊರೆಯುತ್ತಾನೆ. ಕನಿಷ್ಟ ಯುದ್ಧಪೀಡಿತ ಭೂಮಿಯಲ್ಲಾದರೂ ಧರ್ಮ ವೈಯಕ್ತಿಕ ಆಚರಣೆಗೆ ಸೀಮಿತವಾಗದೇ ವ್ಯಸನವಾಗಿ ಮಾರ್ಪಟ್ಟರೆ ಅಫೀಮು ಗಂಜಾಗಳಿಗಿಂತಲೂ ಅಪಾಯಕಾರಿ ಆಗಿ ಮನುಷ್ಯ ಕುಲದ ಸಣ್ಣತನಕ್ಕೆ ಮತ್ತೆ ಮತ್ತೆ ಸಾಕ್ಷಿ ಕೊಡುತ್ತದೆ.

ಪುಸ್ತಕದ ಬಹು ದೊಡ್ಡ ಶಕ್ತಿ ಮಂಜುನಾಥ್ ಬಳಸಿರುವ ಭಾಷೆ ಮತ್ತು ನಿರೂಪಣಾ ಶೈಲಿ. ಕನ್ನಡವನ್ನು ಸಮರ್ಥವಾಗಿ ದುಡಿಸಿರುವುದರ ಜೊತೆಗೆ ಇಗೋ ಕ್ಲ್ಯಾಷ್‌ ಎಂಬುದಕ್ಕೆ ಗರ್ವ ಗೊಂದಲ ಎಂಬ ಚಂದದ ಶಬ್ದ ಬಳಸಿದ್ದು ನಂಗೆ ಬಹಳಿಷ್ಟವಾಯಿತು. ಇಂಥ ಪದ ಪ್ರಯೋಗ ನನ್ನಂಥ ಕನ್ನಡ ಹುಚ್ಚಿಗೆ ವ್ಯಾಮೋಹ ಹುಟ್ಟಿಸುತ್ತದೆ. ಇಂಥ ಕಥೆಗಳನ್ನು ಹೇಳುವಾಗ ರೋಚಕವೋ, ಭೀಕರವೋ ಆಗಿಸುವುದೇ ಹೆಚ್ಚು. ಅರಿಷಡ್ವರ್ಗಗಳು ಇಲ್ಲಿನ ಬೇರೆ ಬೇರೆ ಜೀವಗಳಲ್ಲಿ ಸಂಚರಿಸುತ್ತಲೇ ಇದ್ದಾಗ್ಯೂ ಯಾವುದರ ವಿಜೃಂಭಣೆಯಿಲ್ಲ; ಹಾಗೇ ಸಣ್ಣ ಸಣ್ಣ ವಿವರಗಳನ್ನು ಇದೇನ್ಮಹಾ ಎಂಬಂತೆ ಅಸಡ್ಡೆಯಿಂದ ಬಿಟ್ಟಿಲ್ಲ. ಈ ಸಮಚಿತ್ತವೇ ಪುಸ್ತಕಕ್ಕೆ ವಿಶಿಷ್ಟವಾದ ಘನತೆ ತಂದು ಕೊಟ್ಟಿದೆ ಮತ್ತು ಅನುಭವಗಳು ಮಂಜುನಾಥ್ ಅವರಿಗೆ ಕೊಡಮಾಡಿದ ಪ್ರಬುದ್ಧತೆಯನ್ನೂ ಹೇಳುತ್ತದೆ.

ಪುಸ್ತಕ ಮುಗಿಸುವ ಮುನ್ನ ತಾನು ಇನ್ನೊಂದಷ್ಟು ದೇಶಗಳಿಗೆ ಹೋಗುವ ಸಾಧ್ಯತೆಗಳಿವೆ ಎಂದಿದ್ದಾರೆ. ಅವರು ಹೋಗಿ ಬರಲಿ; ಇನ್ನೂ ಕೆಲವು ಪುಸ್ತಕಗಳಿಗೆ ಆಗುವಷ್ಟು ಸರಕು ತರಲಿ. ಆದರೆ ಯುದ್ಧದ ಕಾರಣಕ್ಕೆ ಅವರು ಹೋಗುವಂಥ ಸನ್ನಿವೇಶ ಬಾರದಿರಲಿ. “ಯುದ್ಧಸ್ಯ ವಾರ್ತಾ ರಮ್ಯಾ” = ಯುದ್ಧ ವಾರ್ತೆಗಳು ರಮ್ಯವಾಗಿರುತ್ತದೆ ಎಂಬ ಮಾತಿದೆ. ಆದರೆ ಪರಿಣಾಮಗಳು ಘೋರ ಎಂಬ ಅರಿವು ಇನ್ನಾದರೂ ಯುದ್ಧದಾಹಿಗಳಿಗೆ ಮೂಡಲಿ ಎಂಬ ಆಶಯ ನನ್ನದು.

- ಶಮಾ ನಂದಿಬೆಟ್ಟ