ಕುಣಿದ ಕಿಂಕಿಣಿ

ಕುಣಿದ ಕಿಂಕಿಣಿ

ಕವನ

ಕಾಲಗೆಜ್ಜೆಯ ಧರಿಸಿ ಬಂದಳು

ಬಾಲೆ ಮೊಗದಲಿ ನಗುವ ತಂದಳು

ಲೀಲೆ ಪಾಡಲು ವೇಣು ನಾದವು ಕೇಳಿ ಬರುತಿರಲು|

ಮೇಲೆ ನಿಂತಳು ಗೆಜ್ಜೆ ಕಟ್ಟುತ

ಕೋಲ ಹಿಡಿದಳು ಜೊತೆಗೆ ಕುಣಿಯುತ

ಹಾಲ ಕಡಲಿನ ಕೃಷ್ಣನೊಂದಿಗೆ ನಾಟ್ಯಮಾಡುತಲಿ||

 

ವದನದಂದದಿ ಶಶಿಯ ಕಳೆಯದು

ಮಧುವ ಹೀರಲು ದುಂಬಿ ತೆರದಲಿ

ಹೃದಯ ತೆರೆಯುತ ಮೆಲ್ಲ ನುಡಿಯನ್ನರುಹಿ ನಿಂತಿಹಳು|

ಪದವ ಹಾಡುತ ನಲ್ಲ ಬಂದನು

ಹದವನರಿಯುತ ಮನದಿ ನಿಂದನು

ತದನ ತಾನನ ತಬಲ ನುಡಿಸುತ ಮನವ ಸೆಳೆದಿಹಳು||

 

ಒಲವಿನಲ್ಲಿಯೆ ತೋಷಕಂಡೆನು

ಗೆಲುವಪಡೆದಳು ನೃತ್ಯದಿಂದಲಿ

ಹಲವು ಬಗೆಯ ನೃತ್ಯರೂಪಕ ತೋರಿ ರಂಗದಲಿ|

ಛಲವು ಬಿಡದಿಹ ತರುಣಿ ಕಿಂಕಿಣಿ

ಜಲದ ಮತ್ಸ್ಯದ ತೆರದಿ ಚಲಿಸುತ

ಬಲವ ತೋರಿಸಿ ಮನವ ಕದ್ದಳು ನಾಟ್ಯರಂಗದಲಿ||

 

ನೆಚ್ಚಿ ಕುಣಿದಳು ಗೋಪಿಲೋಲನ

ಹಚ್ಚಹಸಿರಿನ ವನದ ನಡುವಲಿ

ಬೆಚ್ಚಿ ಬೀಳಿಸಿ ರಾಗಪಾಡಿದ ರಮಣ ಮೋಹದಲಿ|

ಹುಚ್ಚಿಯಂತೆಯೆ ಭಾವವಶದಲಿ

ಮುಚ್ಚಿನಯನವ ನಲ್ಲನಪ್ಪುತ

ಕಚ್ಚಿತುಟಿಯನು ನಡುಕಗೊಂಡಳು ಬಿಸಿಯುಸಿರಿನಲಿ||

 

ಗೆದ್ದ ಮುರಳಿಯ ಮನವನರಿತಳು

ಶುದ್ದ ಭಾವದಿ ಹೃದಯ ಬೆರೆಯುತ

ಮುದ್ದೆಯಾದಳು ಸೊಗದ ನೋಟಕೆ ರಾಧೆಮಾಧವನು|

ಸಿದ್ದಳಾಗಿಯೆ ನಿಂತಳಲ್ಲಿಯೆ

ಸದ್ದುಮಾಡದೆ ವೇಣು ಗಾಯನ

ದೆದ್ದು ಬಂದಳು ರಾಗತಾಳದ ಲಯದ ನಾದದಲಿ||

 

-ಶಂಕರಾನಂದ ಹೆಬ್ಬಾಳ 

 

ಚಿತ್ರ್