ಕುದ್ರಗೋಡು ಕೇರೀಲಿ ವಿದ್ಯಾ ಬುದ್ಧಿ ವಿಚಾರ....(ಭಾಗ ೨)
ನಿಜ, ಈ ಸ್ಥಿತಿಯನ್ನು ನಾನು-ನೀವು ಊಹಿಸುವುದೂ ಕಷ್ಟ. ' ಪತ್ರಕರ್ತರೇ ಹಾಗೆ.. ಚೋಟುದ್ದದ ಸಮಸ್ಯೆಗೆ ಬಣ್ಣ ಕಟ್ಟಿ ಹೇಳುತ್ತಿರಿ' ಎಂದು ಕುದ್ರಗೋಡಿನ ಈ ಸಮಸ್ಯೆಯನ್ನು ಲಘವಾಗಿ ತೆಗೆದುಕೊಳ್ಳವ ಸಾಧ್ಯತೆಯಿದೆ. ಆದರೆ ನಿಜವಾಗಿ ಕುದ್ರಗೋಡಿನ ಈ ಸಮಸ್ಯೆಯನ್ನು ಲಘುವಾಗಿ ತೆಗೆದುಕೊಳ್ಳುವ ಸಾಧ್ಯತೆಯಿದೆ. ಆದರೆ ನಿಜವಾಗಿ ಕುದ್ರಗೋಡಿಗೆ ಹೋಗಿ ನೋಡಿ. ೨೫-೩೦ ವರ್ಷಗಳಿಂದ ಹೆಸರಿಗೆ ಶಾಲೆಯಿರುವ ಆ ಊರಲ್ಲಿ ನಾಲ್ಕನೇ ಕ್ಲಾ ಸನ್ನಾದರೂ ಪಾಸು ಮಾಡಿದ ಒಬ್ಬ ಮಹಾನುಭಾವ ಸಿಕ್ಕರೆ ಹೇಳಿ!
ಇಷ್ಟಕ್ಕೂ ಕಾರಣ-ಈ ಮಧ್ಯೆ ಇನ್ನೊಂದು ಭಾನಗಡಿ ನಡೆದದ್ದು. ಇಲ್ಲಿಯ ಶಾಲೆಗೆ ಬರದೇ, ಬಹಳ ವರ್ಷ ಸರ್ಕಾರಿ ದಾಖಲೆಗಳಲ್ಲೇ ಕೆಲಸ ಮಾಡಿದ ಗೋಕರ್ಣದ ಮಾಸ್ತರೊಬ್ಬರು ಇಲ್ಲಿಂದ ಎದ್ದು ಹೋಗಲು ಒಂದು ಉಪಾಯ ಮಾಡಿದರು. ಊರವರಿಂದ ಮೈಲಿ ಬೇನೆಗೆ ಔಷಧ ಕೊಡಿಸಲು ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಹೆಬ್ಬೆಟ್ಟು ಹಾಕಿಸಿಕೊಂಡು 'ನಮ್ಮೂರಿಗೆ ಶಾಲೆಯ ಅಗತ್ಯವಿಲ್ಲ'ವೆಂದು ಅಧಿಕಾರಿಗಳಿಗೆ ಅರ್ಜಿ ಗುಜರಾಯಿಸಿದ್ದು! ಪರಿಣಾಮ ? ಹತ್ತು ವರ್ಷ ಶಾಲೆಯೇ ಬಂದ್ ಅಗಿತ್ತು. ಇದ್ದ ಕಟ್ಟಡವೂ ಗೆದ್ದಲು ಪಾಲಾಯಿತು. ಶಾಲೆ ಪುನರಾರಂಭಗೊಂಡದ್ದು ಮೂರು ವರ್ಷಗಳ ಹಿಂದೆ. ಈ ಭಾಗದ ಜಿಲ್ಲಾ ಪರಿಷತ್ ಸದಸ್ಯ ಮುರೇಗಾರು ಗೋಪಾಲಕೃಷ್ಣ ವಹಿಸಿದ ಆಸಕ್ತಿಯಿಂದಾಗಿ.
“ಶಾಲೆಯಿದ್ರೂ ಮಾಸ್ತರರೇ ಬರದಿದ್ರೆ ನಾವೇನು ಮಾಡೋದು....” ಕಲಿಯದ್ದಕ್ಕೆ ಸಮರ್ಥನೆಯಾಗಿ ಊರ ಜನ ಹೇಳೋದು ಬಿಟ್ಟರೆ ಅವರಿಗೆ ಈ ಸಂಗತಿಯೆಲ್ಲ ಗೊತ್ತಿಲ್ಲ. ರಾಜೀವ್ ಗಾಂಧಿ ಕುರ್ಚಿ ಬಿಟ್ಟಿದ್ದಾಗಲೀ, ಬೆಂಗಳೂರಲ್ಲಿ ವಿಮಾನ ಬಿದ್ದದ್ದಾಗಲೀ ಅವರಿಗೆ ಸಂಬಂಧವಿಲ್ಲ. ಹೆಚ್ಚಂದರೆ ಅವರ ಆಸಕ್ತಿಯ ವಿಷಯ -' ಗೋಣ್ಸರ ಕಾಡಾಗೆ ಜೇನು ಬಡೀಲಿಕ್ಕೆ ಹೋದಾಗ....
ಜೇನು ಬಡಿಯೋದ್ರಲ್ಲಿ. ಬುಟ್ಟಿ ಹೆಣೆಯೋದ್ರಲ್ಲಿ ಕರಿ ಒಕ್ಕಲರದು ಎತ್ತಿದ ಕೈ. ಕೊಯ್ದ ಜೇನನ್ನು ಮೊಟ್ಟೆ-ಮರಿಗಳ ಸಮೇತ ಕೈಯಾರೆ ಹಿಂಡಿ, ತಾವು ಕೆಲಸ ಮಾಡುವ ಮನೆಗಳಲ್ಲಿ ಹಳೇ ಅಂಗಿಗೋ, ಹರಕು ಪಂಚೆಗೋ ಬದಲಿಯಾಗಿ ಕೊಟ್ಟಿ ಬಿಡುತ್ತಾರೆ. ಕರಿ ಒಕ್ಕಲರ ಹೆಂಗಸರೋ ಚಾಪೆ ಹೆಣೆಯುವುದರಲ್ಲಿ ಸಿದ್ಧ ಹಸ್ತರು. ಈ ಭಾಗದಲ್ಲಿ ಇನ್ನೂ ಚಾಪೆ ಹೆಣೆಯುವ ಕಸುಬುಗಾರಿಕೆ ಉಳಿದುಕೊಂಡಿದ್ದರೆ ಇವರಿಂದಲೇ ಎನ್ನಬೇಕು.ಆದರೆ ಅದೂ ಕೂಡ ಹೆಗ್ಗ ಡತಿ -ಭಡ್ತಿಗಳ ಹಳೇ ಸೀರೆ ಪಡೆಯಲು ಮೀಸಲಾಗುವುದರಿಂದ ಕರಿಒಕ್ಕಲರ ಕೈಗಾರಿಕೆಗಳು 'ಕ್ಯಾಷ್' ಆಗುವುದು ಕಮ್ಮಿ.
ಕುದ್ರಗೋಡಿನ ಕರಿಒಕ್ಕಲರ ಕೇರಿಯ ವಿಶೇಷ-ಮನೆ ಹೇಗೇ ಇರಲಿ, ಮನೆಯೆದುರಿಗೆ ತುಳಸಿ ಕಟ್ಟೆ ಮಾತ್ರೆ ಜೋರಾಗಿ ಇರಬೇಕು. ಕೆಮ್ಮಣ್ಣು ಬಳಿದು, ಚಂದಗಿ ಸಾರಿಸಿ, ರಂಗೋಲೆಯಿಟ್ಟು ದೇವರ ಪೀಠವೋ ಎನ್ನುವ ಹಾಗೆ ಅಣಿಗೊಂಡಿದ್ದವು-ತುಳಿಸಿ ಕಟ್ಟೆಗಳು. ಮತ್ತೆ, ಎಲ್ಲ ಕಟ್ಟೆಗಳ ಮೇಲೂ ಹುಲಿ ದೇವರ ಹೆಸರಲ್ಲಿ ಒಂದೊಂದು ತೆಂಗಿನ ಕಾಯಿ ಇತ್ತು.
ಇವರು ಯಾಕೆ ಇಲ್ಲಿ ಬಂದದ್ದು ಎಂಬುದೇ ಪ್ರಶ್ನೆ ಎಲ್ಲರ ಕಣ್ಣಲ್ಲಿ-ಬಾಯಲ್ಲಿ.'ನಿಮ್ಮೂರು ನೋಡೋಕೆ' ಎಂದರೆ ನಮ್ಮೂರಲ್ಲೇನುಂಟು ನೋಡೋಕೆ' ಎಂದು ಚಾಪೆ ಹೆಣೆಯುತ್ತಿದ್ದ ಅಚ್ಚಿ ಬೊಚ್ಚು ಬಾಯಗಲಿಸಿ ಪ್ರಶ್ನಿಸುತ್ತಾಳೆ. ಅದೇ ಹೊತ್ತಿಗೆ ಮನೆಯೊಳಗೆ ಅವಿತುಕೊಂಡಿದ್ದ ಮೊಮ್ಮಗಳು ಗೋಳೋ ಎಂದು ಅಳತೊಡಗಿದಳು. ತನ್ನ ಅಜ್ಜಿಗೆ ಎನೋ ಮಾಡಿಬಿಡುತ್ತಾರೆ ಎಂಬ ಹೆದರಿಕೆಯಿಂದ! ಮನೆಯ ಹಿರಿಯ ಕೇಳಿದ 'ನಿಮಗೆ ಅಸ್ರೀಗೆ? ಅಕಾ-ಎರಡು ಪಾತ್ರೆಗಳನ್ನು ಚೆನ್ನಾಗಿ ತೊಳೆದು, ನೀರು ಸಕ್ರೆ, ಚಾಪುಡಿ ತಂದುಕೊಡು-'ಹೆಂಗಸರಿಗೆ ಅವನ ಆಜ್ಞೆ ಕೇಳಿ ನಾವು ಸುಸ್ತು. ಕರಿಒಕ್ಕಲರಲ್ಲೇ ಹಾಗೆ. ಅವರ ಜಾತಿಯ ಜನ ಬಂದರೆ ಮಾತ್ರ ಅವರ ಪಂಕ್ತೀಲಿ ಊಟ ಬೇರೆಯವರು ಬಂದರೆ ಕರಿಒಕ್ಕಲರು ಸಾಮಾನು ಒದಗಿಸುತ್ತಾರೆ. ಅತಿಥಿಗಳೇ ಚಾ, ತಿಂಡಿ-ಬೇಕಾದ್ದು ಮಾಡಿಕೊಳ್ಳಬೇಕು. ಇಲ್ಲಾ ಎಂದರೆ ಅವರಿಗೆ ಬೇಜಾರು. ಮನೆಗೆ ಬಂದವರು ಹಾಗೇ ಹೋದರು ಎನ್ನುವ ಸಂಕಟ. ಇನ್ನೊಂದು ಕಡೆ 'ನೀವೇ ಪಾನಕ ಮಾಡಿಕೊಡಿ ನಾವು ಕುಡಿತೇವೆ' ಎಂದು ಒಪ್ಪಿಸುವಾಗ ಸಾಕಾಯ್ತು. 'ಇವತ್ತು ನಮ್ಮೂರಲ್ಲಿ 'ಕತೆ' ಐತಿ ಉಳೀರ್ರಾ' ಊರಲ್ಲಿ ಯಾರದೋ ಮನೆಯ ಸತ್ಯನಾರಾಯಣ ಪೂಜೆಗೆ ಎಲ್ಲರ ಆಹ್ವಾನ!
ಊರೆಲ್ಲ ಪೂಜೆಗೆ ಹೊರಟಾಗ ಹಿಂತಿರುಗಿದೆವು. ಹೋಗುವ ಉತ್ಸಾಹದಲ್ಲಿ ಗೊತ್ತಾಗದ ದಾರಿ ಬರುವಾಗ ದಮ್ಮಿಳಿಸಿತು-ನಮಗೂ-ನಮ್ಮ ಬೈಕುಗೂ. ಈಗ ಅನ್ನಿಸುತ್ತಿದೆ. ಶಾಲೆ, ಆಸ್ವತ್ರೆ, ರಸ್ತೆ, ಬಸ್ಸು, ಅಂಗಡಿ ಇವೆಲ್ಲ ಇಲ್ಲದಿರುವುದು, ಇದ್ದರೂ ಜನರ ಉಪಯೋಗಕ್ಕೆ ಸಿಗದಿರುವುದು ನಮ್ಮ ಹಳ್ಳಿಗಳಲ್ಲಿ 'ಸಾಮಾನ್ಯ'ವೆನ್ನುವುದಾದರೆ ಕುದ್ರಗೋಡಲ್ಲಿ ವಿಶೇಷವೇನೂ ಇಲ್ಲ. ಆದರೂ ಯಾರಿಗಾದರೂ ಭಾರತದಲ್ಲಿ ಹಳ್ಳಿಯೆಂದರೆ ಹಳ್ಳಿ' ಎಂಬಂತ ಊರನ್ನು ನೋಡಬೇಕಾದರೆ ಕುದ್ರ ಗೋಡೆಂಬ ಈ ಕರಿಒಕ್ಕಲ ಕೇರಿ ಮಾದರಿಯಾಗಬಹುದೇನೋ!