ಕುಪ್ಪಟೆ ಕವಿತೆ
ಬಹಳ ಹಿಂದೆ ಧಾರಾನಗರದಲ್ಲಿ ಚಳಿಗಾಲದ ಒಂದು ರಾತ್ರಿ. ಯಾರೂ ಹೊರಗೆ ತಿರುಗಾಡುತ್ತಿರಲಿಲ್ಲ. ಪ್ರಜೆಗಳ ಕಷ್ಟಸುಖಗಳನ್ನು ಸ್ವತಃ ತಿಳಿದುಕೊಳ್ಳಲು ಹೊರಡುವ ಪದ್ಧತಿಯಂತೆ, ರಾಜನಾದ ಭೋಜರಾಜನು ವೇಷ ಬದಲಾಯಿಸಿಕೊಂಡು ಊರೊಳಗೆ ಹೊರಟನು.
ಹೋಗುತ್ತಾ ರೈತ ಜನರು ವಾಸಮಾಡಿಕೊಂಡಿರುವ ಒಂದು ಕೇರಿಗೆ ಹೋದನು. ಅಲ್ಲಿ ಒಂದು ಮನೆಯೊಳಗಿನಿಂದ ಏನೋ ಮಾತುಗಳು ಮೆಲ್ಲನೆ ಕೇಳಿ ಬರುತ್ತಿತ್ತು. ತನ್ನ ಪರಿಪಾಲನೆಯ ಕುರಿತು ಅವರೇನಾದರೂ ಮಾತನಾಡಿಕೊಳ್ಳುವರೋ ತಿಳಿದುಕೊಳ್ಳಲಿಕ್ಕಾಗಿ, ಆ ಮನೆಯ ಗವಾಕ್ಷದ ಪಕ್ಕದಲ್ಲಿ ನಿಂತು ಕಿವಿಕೊಟ್ಟನು. ಸಂದಿನಿಂದ ಒಳಗಿನ ದೃಶ್ಯವೂ ಕಾಣಿಸುತ್ತಿತ್ತು.
ಒಬ್ಬ ರೈತನೂ ಅವನ ಮಕ್ಕಳೂ ಕುಳಿತಿದ್ದರು. ಅವರ ಮುಂದೆ ಒಂದು ಕುಪ್ಪಟೆ (ಬಿಸಿ ಕಾಯಿಸಲು ಇರುವ ಸಾಧನ) ಇದ್ದಿತು. ಅದರ ಬೆಂಕಿಗೆ ಚಳಿಕಾಯಿಸುತ್ತಾ ಏನೋ ಮಾತಾಡಿಕೊಳ್ಳುತ್ತಿದ್ದರು.
ಮಗನು “ಅಪ್ಪಾ, ನಾಡಿದ್ದು ಕಾಮದಹನ ಹಬ್ಬ. ಹಬ್ಬದ ಗೌಜಿ ನೋಡಲಿಕ್ಕೆ ನಾನೂ ಅಕ್ಕ ಹೋಗುತ್ತೇವೆ. ದುಡ್ಡು ಕೊಡುವೆಯಾ? ಎಂದು ಕೇಳಿದನು.
ರೈತ ನಗುತ್ತ, “ಕಾಮದಹನ ಹಬ್ಬ ಅಂದರೆ ಏನೂಂತ ಗೊತ್ತೇನ್ರೋ ಪೋಕ್ರಿ?” ಎಂದು ತಮಾಷೆಯಾಗಿ ಕೇಳಿದನು.
“ಅದು ಗೊತ್ತಿಲ್ಲದೇನು? ಶಿವ ಮನ್ಮಥನನ್ನು ಕೊಂದು ಹಾಕ್ತಾನಲ್ಲ, ಅದೇ” ಅಂದ ತಿಳಿದವನಂತೆ ಹುಡುಗ.
ರೈತ ನಗುತ್ತ “ ಅದೂ ನಿಜ, ನಮ್ಮ ಕಾಳಿದಾಸರು ಕುಮಾರ ಸಂಭವದಲ್ಲಿ ಅದೇ ಕಥೆ ಕೇಳಿದ್ದಾರೆ. ಅದರೊಳಗೆ ಇನ್ನೊಂದು ನಿಜವೂ ಇದೆ. ಮನ್ಮಥ ಅಂದರೆ ಮನುಷ್ಯನೇ ಅಲ್ಲ. ನಮ್ಮ ಮನಸ್ಸಿನಲ್ಲಿ ಹುಟ್ಟುವ ಆಸೆಗಳು. ಮಥಿಸಿ ಮಥಿಸಿ ಹುಟ್ಟುವ ಆಸೆಗಳು. ರತಿ ಅಂದರೆ ಆಸೆಗಳನ್ನು ಈಡೇರಿಸುವ ಕಾರ್ಯ. ಮೂರನೇ ಕಣ್ಣು ಅಂದರೆ ಜ್ಞಾನ ದೃಷ್ಟಿ. ಜ್ಞಾನ ದೃಷ್ಟಿಯಿಂದ ಮನಸ್ಸಿನ ಕೆಟ್ಟ ಕೋರಿಕೆಗಳನ್ನು ಸುಟ್ಟು ಹಾಕಿದರೆ ಲೋಕಕಲ್ಯಾಣ ಆಗುತ್ತದೆ. ಅದೇ ಶಿವ-ಪಾರ್ವತಿಯರ ಕಲ್ಯಾಣ.' ಎಂದು ವಿಸ್ತಾರವಾಗಿ ಹೇಳಿದನು.
ಭೋಜರಾಜನು ಇದನ್ನು ಕೇಳಿ ವಿಸ್ಮಿತನಾದನು. ಹೊಲ-ಗದ್ದೆಗಳಲ್ಲಿ ಹೆಸರಿನೊಂದಿಗೆ ಹೋರಾಡುವ ರೈತನಿಗೆ ಇಷ್ಟು ಪಾಂಡಿತ್ಯವಿದೆಯೇ? ಆಶ್ಚರ್ಯಪಟ್ಟ ರಾಜನು ಮತ್ತೆ ಆಲಸ್ಯ ಮಾಡದೆ ಆ ಮನೆಯ ಬಾಗಿಲು ತಟ್ಟಿದನು. ಮಗಳು ಎದ್ದು ಬಂದು ಬಾಗಿಲು ತೆರೆಯುತ್ತ " ಯಾರು?" ಎಂದು ಪ್ರಶ್ನಿಸಿದಳು.
" ನಾನೊಬ್ಬ ಅತಿಥಿ" ಎನ್ನುತ್ತಾ ರಾಜನು ಒಳಗೆ ಬಂದನು. " ನಾನು ಚಳಿ ಕಾಯಿಸಿಕೊಳ್ಳಲು ಬಂದ ಅತಿಥಿ ಎಂದು ಹೇಳಿ ರಾಜನು ಕುಪ್ಪಟೆಯ ಮುಂದೆ ಕುಳಿತನು.
ದೇವಲನೆಂಬ ರೈತನು ರಾಜನನ್ನು ಪರಿಶೀಲನೆ ಮಾಡುವಂತೆ ನೋಡಿದನು. ತನ್ನದು ಹೊರಗಿನ ದೇಶವೆಂದೂ, ರಾಜಾ ಭೋಜನ ಆಸ್ಥಾನಕ್ಕೆ ಹೋಗಿ, ಏನಾದರೂ ಸನ್ಮಾನ ಪಡೆಯುವ ಉದ್ದೇಶದಿಂದ ಬಂದವನೆಂದೂ ಭೋಜರಾಜನು ಹೇಳಿದನು.
ಅದನ್ನು ಕೇಳಿ ದೇವಲನು " ಏತಕ್ಕಯ್ಯಾ ಸನ್ಮಾನ? ಈ ಸಮ್ಮಾನಗಳು ಕೂಡ ವ್ಯಾಪಾರದ ಹಾಗೆ ಆದುವಲ್ಲಾ? ವಾಲ್ಮೀಕಿ, ವ್ಯಾಸರಿಗೆ ಯಾರು ಸನ್ಮಾನ ಮಾಡಿದ್ದಾರೆ? ಒಳ್ಳೆಯ ಕವಿತ್ವವನ್ನು ನಾವು ನಮ್ಮ ತೃಪ್ತಿಗಾಗಿ ಹೇಳುತ್ತೇವೆ. ಅಷ್ಟೇ ಹೊರತು ಅದನ್ನು ರಾಜರ ಮುಂದೆ ಪ್ರದರ್ಶಿಸಿ ಹಣ ಕೇಳುವುದು ಹೀನ ಕೆಲಸ" ಎಂದನು.
" ಮತ್ತೆ ಕವಿಗಳಿಗೆ ಹೊಟ್ಟೆ ಹೇಗೆ ತುಂಬೀತು?" ಎಂದು ಪ್ರಶ್ನಿಸಿದನು ರಾಜ.
" ದುಡಿಮೆಯನ್ನು ಆಧಾರವಾಗಿಟ್ಟುಕೊಂಡವರಿಗೆ ಹೊಟ್ಟೆಗೆ ಯಾವ ಕೊರತೆಯೂ ಇಲ್ಲ. ಭೂದೇವಿಯನ್ನು ನಂಬಿಕೊಂಡು ಬದುಕಲು ಸಾಧ್ಯವಿಲ್ಲವೇನು?" ಎಂದನು ರೈತ.
" ಹಾಗಾದರೆ ನೀನೂ ಕವಿಯೇ ಅನ್ನು" ಎನ್ನಲು ರಾಜ.
"ನನ್ನ ಅಪ್ಪ ಮಹಾಕವಿ. ಕಾಳಿದಾಸನಿಗಿಂತಲೂ ದೊಡ್ಡ ಕವಿ" ಎಂದು ದೇವಲನು ಹೇಳಲು, ಭೋಜರಾಜನು ಉತ್ಸಾಹದಿಂದ, " ಹಾಗಾದರೆ ನೀನೂ ಕವಿಯೇ. ಇಲ್ಲಿ ನೋಡುವ., ಈ ಕುಪ್ಪಟೆಯ ಮೇಲೆ ಒಂದು ಕವಿತೆ ಹೇಳು." ಎಂದನು.
"ಕವಿಮತಿರಿವಬಹುಲೋಹಾ
ಸಂಘಟಿತ ಚಕ್ರಾಪ್ರಭಾತ ವೇಳೇವ
ಹರಿಮೂರ್ತಿರಿವ ಹಸನ್ತೀ
ಭೂತಿವಿಧೂಮಾನಲೋಪೇತಾ"
ಇದರ ಅರ್ಥವೇನೆಂದರೆ "ಈ ಕುಪ್ಪಟೆ ಮಹಾ ಕವಿಯ ಮನಸ್ಸಿನಂತೆ ಬಹು ಲೋಹವಾಗಿದೆ.( ಊಹೆಗಳಿಂದ ತುಂಬಿದೆ. ಒಳ್ಳೆಯ ಕಬ್ಬಿಣದ್ದು ಎಂದು ಇನ್ನೊಂದು ಅರ್ಥ) ಉದಯ ಕಾಲದಂತೆ ಸಂಘಟಿತ ಚಕ್ರವಾಗಿದೆ. ('ಚಕ್ರ'ವಾಕ ಗಳು ಉದಯದ ಮೊದಲು ತಿರುಗುತ್ತವೆ. ಚಕ್ರವೆಂದರೆ. ಕುಪ್ಪಟೆಯೊಳಗಿರುವ ಚಕ್ರವೆಂದು ಇನ್ನೊಂದು ಅರ್ಥ.) ಶಿವಾಕೃತಿಯ ಹಾಗೆ ನಗುತ್ತದೆ. (ಇನ್ನೂ ಇದು ಹೊಗೆಬೆಂಕಿ ಜ್ವಾಲೆಗಳಿಂದ ಕೂಡಿದೆ. ಎಂದು ಒಂದರ್ಥ. ವಿಧು + ಉಮ + ಅನಲ + ಉಪೇತ + ಚಂದ್ರ, ಪಾರ್ವತಿ, ತ್ರಿನೇತ್ರಗಳಿಂದ ಕೂಡಿವೆ ಎಂದು ಎರಡನೇ ಅರ್ಥ.)
ಇದನ್ನು ಕೇಳಿ ಭೋಜರಾಜನು, ಈ ದೇವಲನು ನಿಜಕ್ಕೂ ಮಹಾಕವಿಯೇ ಎಂದು ತೀರ್ಮಾನಿಸಿಕೊಂಡನು. ಆಮೇಲೆ ಸ್ವಲ್ಪ ಹೊತ್ತು ಹರಟೆಯಾಡಿ ಹೊರಟುಹೋದನು.
ಮರುದಿನವೇ ಭೋಜರಾಜನು ಆ ರೈತ ದೇವಲನಿಗೆ ‘ಅಕ್ಷರ ಲಕ್ಷ ಬಹುಮಾನ' ವನ್ನು ಕಳಿಸಿಕೊಟ್ಟನು. ಆದರೆ ದೇವಲನು ಅವುಗಳನ್ನು ಹಿಂದಿರುಗಿಸುತ್ತಾ, ಭಟರ ಕೈಗೆ ಈ ಕೆಳಗಿನಂತೆ ಬರೆದು ಕೊಟ್ಟು ಕಳುಹಿಸಿದನು.
“ಮಹಾಪ್ರಭುಗಳೇ, ರಾತ್ರಿ ನಮ್ಮ ಮನೆಗೆ ಬಂದವರು ತಾವೆಂದು ಆಗ ತಿಳಿಯಲಿಲ್ಲ. ಅವಿವೇಕದಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಬೇಕು. ನನ್ನ ಕವಿತ್ವವು ಆತ್ಮಾನಂದಕ್ಕೂ, ತಮ್ಮಂಥವರನ್ನು ಸಂತೋಷಪಡಿಸಲಿಕ್ಕೂ ಹೇಳುವಂಥದ್ದೇ ಹೊರತು ಸನ್ಮಾನಕ್ಕಾಗಿ ಅಲ್ಲವೆಂಬುದು ರಾತ್ರಿಯಲ್ಲಿ ಹೇಳಿದ್ದೇನೆ. ಕುಪ್ಪಟೆ ಜನರಿಗೆ ಶಾಖವನ್ನು ಕೊಡಲು ಮೊದಲು ತನ್ನನ್ನು ತಾನು ಕಾಯಿಸಿಕೊಳ್ಳುತ್ತದೆ. ಒಂದು ವೇಳೆ ಅದನ್ನು ತಣ್ಣಗೆ ಮಾಡಲು ನೀರು ಹೊಯ್ದು ತಣ್ಣಗೆ ಮಾಡಲು ಹೋದರೆ ಸಿಡಿದು ಹೋಗುತ್ತದೆ. ನಾನೂ ಅಷ್ಟೇ. ನನ್ನ ಬೆನ್ನು ಹೊಲದಲ್ಲಿ ಕಾಯುತ್ತಿದ್ದರೇನೇ ಇಲ್ಲಿ ಲೇಖನಿಯೂ ಅಲ್ಲಿ ನೇಗಿಲೂ ಸಾಗುತ್ತದೆ. ನನ್ನನ್ನು ಹೀಗೆ ಸಾಮಾನ್ಯ ರೈತನಾಗಿ ಬದುಕುವಂತೆಯೇ ಬಿಡಿರಿ. ಅದರಲ್ಲೇ ಆನಂದವಿದೆ.”
ಈ ಕಾಗದವನ್ನು ಓದಿದ ಭೋಜರಾಜನ ಕಣ್ಣುಗಳಲ್ಲಿ ಆನಂದಭಾಷ್ಪಗಳು ತುಂಬಿದವು. ದೇವಲನ ದೊಡ್ದತನವನ್ನು ಅವನೆಂದೂ ಮರೆಯಲಿಲ್ಲ.
***
೧೯೭೮ರ ‘ಬೊಂಬೆಮನೆ’ ಎಂಬ ಮಕ್ಕಳ ಪತ್ರಿಕೆಯಿಂದ ಈ ಕಥೆಯನ್ನು ಆಯ್ದು ಪ್ರಕಟಿಸಲಾಗಿದೆ. ಆಗಿನ ಮದ್ರಾಸ್ (ಈಗ ಚೆನ್ನೈ) ನಿಂದ ಪ್ರಕಟವಾಗುತ್ತಿದ್ದ ಈ ಪತ್ರಿಕೆಯು ಅಂದಿನ ಖ್ಯಾತ ಮಕ್ಕಳ ಪತ್ರಿಕೆಗಳಾದ ಚಂದಮಾಮ ಮತ್ತು ಬಾಲಮಿತ್ರ ಗಳ ಸಂಗಾತಿಯಾಗಿತ್ತು. ಅಂದಿನ ಮಕ್ಕಳ ಕಥೆಗಳನ್ನು ಇಂದು ಓದುವಾಗ ಹಿಂದಿನ ನೆನಪುಗಳು ಮರುಕಳಿಸುವುದರಲ್ಲಿ ಸಂಶಯವಿಲ್ಲ.
ಚಿತ್ರ ಕೃಪೆ: ಬೊಂಬೆಮನೆ ಪತ್ರಿಕೆ