ಕುಮರಿ ರಾಗಿಗೆ ಎತ್ತಂಗಡಿ !

ಕುಮರಿ ರಾಗಿಗೆ ಎತ್ತಂಗಡಿ !

ಕರಾವಳಿ  ಬತ್ತದ ಗದ್ದೆಯಲ್ಲಿ 'ಬೀಜ ಬಚಾವೋ’ ಸದ್ದಿಲ್ಲದೇ ನಡೆದಿದೆ. ರಾಗಿ  ಅಂಬಲಿ  ಮರೆಯಲಾಗದ  ಹಾಲಕ್ಕಿಗರು ಬೇಸಿಗೆಯಲ್ಲಿ  ನೀರಾವರಿಯಲ್ಲಿ  ಪುಟ್ಟ ಭೂಮಿಯಲ್ಲಿ  ಕುಮರಿ  ರಾಗಿಯ ಬೀಜ   ಉಳಿಸಿ  ಬೆಳೆಸಿದ್ದಾರೆ , ಬೇಸಾಯ ಮುಂದುವರೆಸಿದ್ದಾರೆ .
 
ರಾಗಿ ಕಾಳು   ಒಮ್ಮೆ  ಹಾಲಕ್ಕಿ  ಕೃಷಿಕರಿಗೆ  ಹೇಳಿತು, ‘ನನ್ನನ್ನು  ಕಲ್ಲಿನ  ಮೇಲೆ  ಬಿತ್ತಿರಿ, ಮಣ್ಣಿನಲ್ಲಿ  ಬಿತ್ತಿರಿ, ಗರಟೆಯಲ್ಲಿ  ಹಿಡಿ  ಮಣ್ಣು ಹಾಕಿ  ಬಿತ್ತಿದರೂ  ನಾನು  ಬೆಳೆದು  ನಿಮ್ಮನ್ನು  ಸಾಕುತ್ತೇನೆ. ಬತ್ತದ  ಬೆಳೆಯಂತೆ  ನನ್ನ  ಬದುಕು   ಒಂದೆರಡು  ವರ್ಷವಲ್ಲ,  ಒಮ್ಮೆ ನೀನು ಬಿತ್ತಿ ಬೆಳೆದರೆ 20 ವರ್ಷದವರೆಗೂ ಬದುಕುಳಿದು  ಸಾಕುತ್ತೇನೆ. 12 ವರ್ಷದ ಬರಗಾಲಕ್ಕೂ ನೀವು  ಹೆದರಬೇಕಾಗಿಲ್ಲ'. ಪುಟ್ಟ  ರಾಗಿಯ  ಮಾತನ್ನು  ಹಾಲಕ್ಕಿಕೊಪ್ಪದವರು  ನಂಬಿದರು. ಬುಡಕಟ್ಟು  ಜನಾಂಗದ ಆಹಾರದಲ್ಲಿ  ರಾಗಿ  ಅಂಬಲಿ  ವಿಶೇಷ ಸ್ಥಾನ ಗಿಟ್ಟಿಸಿತು.
 
ಕಾಡು ಕಡಿದು ಕುಮರಿ ಬೇಸಾಯದಲ್ಲಿ ರಾಗಿ ಬೆಳೆಯುವುದು ಕರಾವಳಿ ಹಾಲಕ್ಕಿಗರಿಗೆ ಕರಗತವಾದ ವಿದ್ಯೆ. ಶತಮಾನಗಳ ಹಿಂದೆ ಸಮುದ್ರ ಮಟ್ಟದಿಂದ ಒಂದು ಸಾವಿರ ಅಡಿ ಎತ್ತರದವರೆಗಿನ ಬೆಟ್ಟಗಳೆಲ್ಲ ಕೃಷಿ ನೆಲೆ. ಅಲ್ಲಿನ ಚಿಕ್ಕಪುಟ್ಟ ಗಿಡ, ಮರ, ಕಡಿದು ಸುಟ್ಟು ಬಯಲು ಮಾಡುತ್ತಿದ್ದರು, ಬಳಿಕ ಬೂದಿಯಲ್ಲಿ ಬೀಜ ಬಿತ್ತನೆ. ಒಂದೆರಡು ವರ್ಷ ಕೃಷಿಬಳಿಕ ಮಣ್ಣಿನ ಸತ್ವ ಕಡಿಮೆಯಾದಾಗ ಮತ್ತೆ ಹೊಸ ನೆಲೆಗೆ ಸ್ಥಳಾಂತರ ಬೇಸಾಯ. ಇದನ್ನು ಎತ್ತಂಗಡಿ ಕೃಷಿಯೆಂದು ವಾಡಿಕೆಯಲ್ಲಿ ಕರೆಯುತ್ತಿದ್ದರು. ಆಗ ನೆಲ ಆಳುತ್ತಿದ್ದ ಬ್ರಿಟಿಷರಿಗೆ ಕೆನರಾ ತೇಗದ ಮರದ ಬೆಲೆ ಗೊತ್ತಿತ್ತು. ಕಾಡು ಸುಟ್ಟು ಕೃಷಿ ಮಾಡುವ ಪದ್ಧತಿಯಿಂದ ಬೆಲೆಬಾಳುವ ಸಾಗುವಾನಿ ಸಸಿಗಳು ಬೆಂಕಿಗೆ ಆಹುತಿಯಾಗುತ್ತವೆಂದು ತಕರಾರು ಶುರು ಮಾಡಿದರು. ಪರಂಪರೆಯ ಆಹಾರ ಧಾನ್ಯ ಇಕ್ಕಟ್ಟಿಗೆ ಸಿಲುಕಿತು.
 
ಗೋಕರ್ಣದಲ್ಲಿ ಹಾಲಕ್ಕಿಗರು ಜಾಸ್ತಿ. ಇಲ್ಲಿ ಕ್ರಿ.ಶ. 1452ರಲ್ಲಿ ರಾಗಿ ಕುಮರಿಗೆ ಸರಕಾರ ಕರ ವಿಧಿಸಿದ ದಾಖಲೆಯಿದೆ! ಕ್ರಿ.ಶ. 1801 ಫೆಬ್ರವರಿ 23 ಹಾಗೂ 26ರಂದು ಹಳಿದೀಪುರ, ಗೋಕರ್ಣಕ್ಕೆ ಹೋದ ಪ್ರವಾಸಿ ಡಾ. ಫ್ರಾನ್ಸಿಸ್‌ ಬುಕಾನನ್‌ ಇಲ್ಲಿನ ರಾಗಿ ಕುಮರಿ ವಿವರ ದಾಖಸಿದ್ದಾರೆ. ಯಾವುದೇ ಖಾಸಗಿ ವ್ಯಕ್ತಿ ತನ್ನದೆಂದು ಖಚಿತ ಪುರಾವೆ ಒದಗಿಸಲಾರದ ಕಾಡುಗಳನ್ನು ಸರಕಾರದ್ದೆಂದು
ಸಾರಬೇಕು. ಕುಮರಿ ಬೇಸಾಯ ನಿಯಂತ್ರಿಸಬೇಕೆಂದು ಮುಂಬಯಿ ಸಸ್ಯಾಗಾರದ ಮೇಲ್ವಿಚಾರಕರಾಗಿದ್ದ ಡಾ.ಗಿಬ್ಸನ್‌ ಹೇಳಿದರು. ಕ್ರಿ.ಶ. 1847ರಲ್ಲಿ ಕುಮರಿ ಬೇಸಾಯ ನಿಲ್ಲಿಸಲು ಪ್ರಥಮವಾಗಿ ಕಲೆಕ್ಟರ್‌ಗೆ ಸಲಹೆ ನೀಡಿದರು. ಪರಿಣಾಮ. ಮುಂದೆ ಕ್ರಿ.ಶ. 1861—63ರಲ್ಲಿ ನಿಷೇಧವಾಯಿತು. ಆಹಾರಕ್ಕೆ ಕುಮರಿ ಕೃಷಿ ನಂಬಿದ ಮರಾಠಿ ಜನಾಂಗದವರು ಕೆನರಾ ಬಿಟ್ಟು ಮೈಸೂರು ಸೀಮೆಗೆ ವಲಸೆ ಹೋದರು. ಈಸ್ಟ್‌ ಇಂಡಿಯಾ ಕಂಪನಿ ಪರಿಸ್ಥಿತಿ ಗಮನಿಸಿತು. ಜನರ ಪಾರಂಪರಿಕ ಹಕ್ಕಿನ ಬಗೆಗೆ ಕಾನೂನು ಪ್ರಹಾರ ನಡೆಸುವುದು ಅದಕ್ಕೆ ಇಷ್ಡವಿರಲಿಲ್ಲ. ನಂತರ ನಿಷೇಧರದ್ದಾಯಿತು. ಮುಂದಿನ ಒಂದೇ ವರ್ಷದಲ್ಲಿ ಕೆನರಾದಲ್ಲಿ 7000 ಎಕರೆ ಕಾಡು ಮತ್ತೆ ರಾಗಿ ಕುಮರಿಗೆ ಆಹುತಿಯಾಯಿತು. ಕ್ರಿ.ಶ. 1890 ಡಿಸೆಂಬರ್‌ 22ರ ಸರಕಾರಿ ಆದೇಶದಂತೆ ಕುಮರಿ ಕೃಷಿಯನ್ನು ಮತ್ತೆ ರದ್ದುಗೊಳಿಸಲಾಯಿತು. ದಟ್ಟ ಕಾಡು ಕಣಿವೆಯಲ್ಲಿದ್ದ ಮರಾಠಿಗರಿಗೆ ಅಲ್ಲಿನ ತಾಳೆಮರದ ಹಿಟ್ಟು ತಿನ್ನಲು ಸೌಲಭ್ಯ ಘೋಷಣೆಯಾಯಿತು. ಕುಟಂಬಕ್ಕೆ ವರ್ಷಕ್ಕೆ ಒಂದು ತಾಳೆಮರ ನೀಡಲು ಆಜ್ಞೆ ಹೊರಟಿತು.
 
ಕ್ರಿ.ಶ. 1902 — 03ರಲ್ಲಿ ಇಂದಿನ ಉತ್ತರ ಕನ್ನಡದಲ್ಲಿ 6210 ಎಕರೆ ಪ್ರದೇಶದಲ್ಲಿ ರಾಗಿ ಬೆಳೆಯುತ್ತಿದ್ದರು. ಮುಂದಿನ 60 ವರ್ಷಗಳಲ್ಲಿ ಕೇವಲ 897 ಎಕರೆಗೆ ಕೃಷಿ ಕ್ಷೇತ್ರ ಕುಸಿಯಿತು. ಈಗ 15ಎಕರೆಯಲ್ಲೂ ಜಿಲ್ಲೆಯಲ್ಲಿ ರಾಗಿ ಬೆಳೆಯುತ್ತಿಲ್ಲ! ಬಡವರ ಅಂಬಲಿಯ ಸರಲು ಅಚ್ಚರಿಯ ಅವಸಾನ ತಲುಪಿತು. ಸುಲಭದಲ್ಲಿ ಬೆಳೆದು ಬರಗಾಲದಲ್ಲೂ ಆಹಾರವಾಗುತ್ತೇನೆಂದು ಹೇಳಿದ್ದ ರಾಗಿಯನ್ನು ಮರೆಯುವ ಸಂದರ್ಭ ತಲೆದೋರಿತು. ಕಾಡಿಲ್ಲಿ ಕುಮರಿ ರಾಗಿ ನಂಬಿದ ಹಾಲಕ್ಕಿಗರು ಅರಣ್ಯ ಕಾನೂನು ಬದಲಾದಂತೆ ಬೆಟ್ಟ ಇಳಿದು ಸ್ಥಿರ ನೆಲೆಗೆ ಬಂದರು. ಉತ್ತರ ಕನ್ನಡದ ಕಡವಾಡ, ಅಂಕೋಲೆ, ನುಶಿಕೋಟೆ, ಕುಂಬಾರಗದ್ದೆ, ಗೋಕರ್ಣ, ಹರಿಟೆ, ಚಂದಾವರ ಪ್ರದೇಶಗಳು ಹಾಲಕ್ಕಿ ಸೀಮೆಗಳು. ಇಲ್ಲಿನ ಆಸುಪಾಸಿನ ಬತ್ತದ ಗದ್ದೆಯಲ್ಲಿ ಬದುಕು ಹುಡುಕಿದರು, ಗೇಣಿಗೆ ಗೇಯ್ದರು. ಕುಮರಿ ಮರೆತರು. ಒಂದು ಕಾಲಕ್ಕೆ ರಾಗಿ ಮಾತು ಕೇಳಿದವರಿಗೆ ಅದನ್ನು ಮರೆಯಲು ಸಾದ್ಯವಾಗಲಿಲ್ಲ. ಬೇಸಿಗೆಯಲ್ಲಿ ತರಕಾರಿ ಬೆಳೆಯುವುದು ವಿಶೇಷ. ತರಕಾರಿ ಬೆಳೆಯ ನಡುವೆ ಅಲ್ಲಲ್ಲಿ ಸಣ್ಣಪುಟ್ಟ ಜಾಗಗಳಲ್ಲಿ ಬಚ್ಚಿಟ್ಟ ಬೀಜ ಬಿತ್ತಿದರು. ಬೇಸಿಗೆಯಲ್ಲಿ ನೀರಾವರಿಯಲ್ಲಿ ಬೆಳೆ ನಕ್ಕಿತು. ಬೆಟ್ಟದ ಅಂಬ್ಲಿ ರಾಗಿಯ ಬೀಜ ಬಿತ್ತಿದರು. ಮೀನಿನ ಪಳದಿ, ಹಾಲಕ್ಕಿ ಮಕ್ಕಳಿಗೆ ಎಂಬ ಗುಮ್ಟೆಯ ಹಾಡು ನಿಜವಾಯಿತು.
 
“ಬದುಕಿನ ಭರಾಟೆಯಲ್ಲಿ  ಹಲವರು 'ಮಿಸ್' ಮಾಡಿಕೊಂಡ ನೆಲಮೂಲ ವಿಚಾರಗಳ ಬಗೆಗಿನ ಅಂಕಣ. “
 ಆಕರ : ಅಡಿಕೆ ಪತ್ರಿಕೆ ಮೇ 2011