ಕುಮಾರಿ ಸೌಜನ್ಯ ಸೃಷ್ಟಿಸಿರುವ ತ್ರಿಶಂಕು ಪರಿಸ್ಥಿತಿ !

ಕುಮಾರಿ ಸೌಜನ್ಯ ಸೃಷ್ಟಿಸಿರುವ ತ್ರಿಶಂಕು ಪರಿಸ್ಥಿತಿ !

ಕಣ್ಣು ಮುಚ್ಚಿ ಕುಳಿತ ಧರ್ಮಸ್ಥಳದ ಮಂಜುನಾಥ ಸ್ವಾಮಿ, ಕಿವಿ ಮುಚ್ಚಿ ಕುಳಿತ ‌ಕರ್ನಾಟಕ ಸರ್ಕಾರ, ಕೈಕಟ್ಟಿ ಕುಳಿತ ಕರ್ನಾಟಕ ಉಚ್ಚ ನ್ಯಾಯಾಲಯ, ನ್ಯಾಯಕ್ಕಾಗಿ ಪ್ರತಿಭಟಿಸುತ್ತಿರುವ ಕೆಲವು ಜನ ಸಾಮಾನ್ಯರು. ಹಾಗೆಯೇ, ಗೊಂದಲದಲ್ಲಿ ಶ್ರೀ ಮಂಜುನಾಥ ಸ್ವಾಮಿ. ಒಂದು ಕಡೆ ಸೌಜನ್ಯ ಕುಟುಂಬದವರು ಮುಂಜುನಾಥನಲ್ಲಿ ನ್ಯಾಯಕ್ಕಾಗಿ ಮೊರೆ ಇಡುತ್ತಿದ್ದಾರೆ, ಮತ್ತೊಂದು ಕಡೆ ಸಾರ್ವಜನಿಕರಿಂದ ಅನುಮಾನಕ್ಕೆ ಒಳಗಾಗಿರುವ ಹೆಗ್ಗಡೆಯವರ ಕುಟುಂಬದ ಮೂವರು ಯುವಕರು ತಾವು ನಿರಪರಾಧಿಗಳು ದಯವಿಟ್ಟು ನಮ್ಮನ್ನು ಆರೋಪದಿಂದ ಮುಕ್ತ ಮಾಡು ಎಂದು ಅದೇ ಮಂಜುನಾಥೇಶ್ವರನಲ್ಲಿ ಕೇಳಿಕೊಳ್ಳುತ್ತಿದ್ದಾರೆ,

ಕೆಲವು ಸಾಮಾಜಿಕ ಹೋರಾಟಗಾರರು ಮಂಜುನಾಥ ಸ್ವಾಮಿ, ಸರ್ಕಾರ ಮತ್ತು ನ್ಯಾಯಾಲಯ ಮಧ್ಯಪ್ರವೇಶಿಸಿ ನ್ಯಾಯ ಒದಗಿಸಲು ಆಗ್ರಹಿಸುತ್ತಿದ್ದಾರೆ. ಅದಕ್ಕಾಗಿಯೇ ಹೇಳಿದ್ದು ತ್ರಿಶಂಕು ಸ್ಥಿತಿ ಎಂದು. ಮಂಜುನಾಥ ಸ್ವಾಮಿಗೆ ಒತ್ತಡ ಹೆಚ್ಚಾಗುತ್ತಿದೆ. ಸೌಜನ್ಯ ಎಂಬ ಮುಗ್ದ ಹೆಣ್ಣು ಮಗಳು ಅತ್ಯಂತ ಭೀಕರವಾಗಿ ಅತ್ಯಾಚಾರಕ್ಕೆ ಒಳಗಾಗಿ ಬಲಿಯಾಗಿರುವುದು ಸ್ವತಃ ಮಂಜುನಾಥ ಸ್ವಾಮಿಯ ವ್ಯಾಪ್ತಿಯಲ್ಲಿ ಬರುವ ಸನ್ನಿಧಿಯಲ್ಲಿ. ಬಹುತೇಕ ಎಲ್ಲರೂ ಮಂಜುನಾಥ ಸ್ವಾಮಿ - ಸರ್ಕಾರ ಮತ್ತು ನ್ಯಾಯಾಲಯದಲ್ಲಿ ನ್ಯಾಯ ಕೇಳುತ್ತಿದ್ದರೆ ನಮ್ಮಂತ ಕೆಲವರು ಇದೇ ವ್ಯವಸ್ಥೆಯನ್ನು ಕೇಳುತ್ತಿರುವುದು ನ್ಯಾಯವಲ್ಲ, ಬದಲಾಗಿ ಸೌಜನ್ಯಳಿಗೆ ಅನ್ಯಾಯ ಮಾಡಿದ್ದು ಏಕೆ ಮೊದಲು ಅದಕ್ಕೆ ಉತ್ತರ ಕೊಡಿ ಎಂದು.

ಮುಖ್ಯವಾಗಿ ಇದಕ್ಕೆ ಉತ್ತರಿಸಬೇಕಾಗಿರುವುದು ಮಂಜುನಾಥ ಸ್ವಾಮಿ. ಇಲ್ಲಿ ದಯಾನಂದ ಸರಸ್ವತಿ ಅವರು  ಬಾಲ್ಯದಲ್ಲಿ ತನ್ನ ತಂದೆಯನ್ನು ಕೇಳಿದ ಪ್ರಶ್ನೆ ನೆನಪಾಗುತ್ತಿದೆ. ದೇವರ ವಿಗ್ರಹದ ಮೇಲೆ ಇಲಿಗಳು ಓಡಾಡುತ್ತಿರುವುದನ್ನು ಕಂಡು " ಅಪ್ಪಾ ದೇವರಿಗೆ ತನ್ನ ಮೇಲಿರುವ ಇಲಿಗಳನ್ನೇ ಓಡಿಸಲು ಸಾಧ್ಯವಾಗುತ್ತಿಲ್ಲ. ಇನ್ನು ನಮ್ಮನ್ನೆಲ್ಲಾ ಹೇಗೆ ಕಾಪಾಡಲು ಸಾಧ್ಯ.?"

ಶ್ರೀಕೃಷ್ಣ ದ್ರೌಪದಿಯ ವಸ್ತ್ರಾಪಹರಣವನ್ನು ತಡೆದಂತೆ ಮಂಜುನಾಥ ಸೌಜನ್ಯ ಅತ್ಯಾಚಾರವನ್ನು ತಡೆಯಲು ಏಕೆ ಸಾಧ್ಯವಾಗಲಿಲ್ಲ ಎಂಬ ಪ್ರಶ್ನೆಯನ್ನು ತಮಗೆ ತಾವೇ ಕೇಳಿಕೊಳ್ಳಲಾಗದಷ್ಟು ಮಾನಸಿಕ ಗುಲಾಮಿತನ ಬಹಳಷ್ಟು  ಜನರಲ್ಲಿದೆ. ಹಾಗೆಯೇ ದೇಶದ ಅತ್ಯುನ್ನತ ತನಿಖಾ ಸಂಸ್ಥೆಗೆ ನಿಜವಾದ ಅಪರಾಧಿಗಳನ್ನು ಹಿಡಿಯಲು ಸಾಧ್ಯವಾಗದಿರುವ ಅಸಹಾಯಕತೆ ಬಂದಿದೆಯೇ ಅಥವಾ ನಿಜವಾದ ಅಪರಾಧಿಯನ್ನು ಹಿಡಿದರೂ ಸಾಕ್ಷ್ಯದ ಕೊರತೆ ಅಥವಾ ವಕೀಲರ ಚಾಕಚಕ್ಯತೆ ಅಥವಾ ಕಾನೂನಿನ ಲೋಪದೋಷಗಳು ಅಥವಾ ನ್ಯಾಯಾಲಯದ ಕಾರ್ಯಕಲಾಪಗಳ ನಿರ್ಲಕ್ಷತೆ ಕಾರಣವೇ ಅಥವಾ ತನಿಖಾ ಸಂಸ್ಥೆ ಮತ್ತು ನ್ಯಾಯಾಲಯಗಳನ್ನೇ ನಂಬದೇ ಅನುಮಾನಿಸುವ ಮನೋಭಾವ ಸಾಕಷ್ಟು ಜನರಲ್ಲಿ ಬೆಳೆದಿದೆಯೇ?

ಈ ಘಟನೆಯ ಇತ್ತೀಚಿನ ಬೆಳವಣಿಗೆ ಎಂದರೆ ಸ್ವತಃ ವೀರೇಂದ್ರ ಹೆಗ್ಗಡೆಯವರೇ ಪ್ರಕರಣದ ಮರು ತನಿಖೆಗೆ ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆ ಇದೆ. ಹಾಗಾದರೆ ಅದು ಉತ್ತಮ ನಡೆ. ಇದನ್ನು ಇನ್ನೂ ಮೊದಲೇ ಮಾಡಬೇಕಿತ್ತು. ಇದನ್ನು ಗಂಭೀರವಾಗಿ ತೆಗೆದುಕೊಂಡು ಜನಾಭಿಪ್ರಾಯ ಮೂಡಿಸಿ ಪ್ರಬಲ ಹೋರಾಟ ಮಾಡುತ್ತಿರುವ ಮಾನವೀಯ ಮನಸ್ಸುಗಳು ಅಭಿನಂದನಾರ್ಹರು. ಜೊತೆಗೆ ಮಂಜುನಾಥ ಸ್ವಾಮಿ, ತನಿಖಾ ಸಂಸ್ಥೆಗಳು, ಸರ್ಕಾರ ಮತ್ತು ನ್ಯಾಯಾಲಯ ಟೀಕೆಗೆ ಅರ್ಹರು.

ಸೌಜನ್ಯ ಪ್ರಕರಣ ಮುಂದೇನಾಗಬಹುದು? ಸದ್ಯಕ್ಕೆ ಮಂಜುನಾಥ ಸ್ವಾಮಿ ಮತ್ತು ಸರ್ಕಾರ ಏನಾದರೂ ಮಾಡುವ ಸಾಧ್ಯತೆ ಕಡಿಮೆ. ಬಹುಶಃ ವೀರೇಂದ್ರ ಹೆಗ್ಗಡೆಯವರೇ ನ್ಯಾಯಾಲಯಕ್ಕೆ ಒತ್ತಾಯ ಮಾಡಿ ಅಥವಾ ಯಾರಾದರು ಸೌಜನ್ಯ ಕುಟುಂಬದ ವತಿಯಿಂದ ವಿಶೇಷ ಪುನರ್ ತನಿಖೆಗೆ ನ್ಯಾಯಾಲಯಕ್ಕೆ ಮನವಿ ಮಾಡುವುದು ಇರುವ ಪರ್ಯಾಯ ಮಾರ್ಗಗಳು. ತೀರಾ ಅನಿರೀಕ್ಷಿತವಾಗಿ ಸರ್ಕಾರವೇ ಮರು ತನಿಖೆಗೆ ಆದೇಶಿಸಬಹುದು ಅಥವಾ ಪ್ರತಿಭಟನೆಗಳು ನಿಧಾನವಾಗಿ ತೀವ್ರತೆ ಕಳೆದುಕೊಳ್ಳಬಹುದು. ಒಂದು ವೇಳೆ ಯಾವುದೋ ಕಾರಣದಿಂದ ಮರು ತನಿಖೆ ನಡೆದರೆ ನಿಜವಾದ ಅಪರಾಧಿಗಳು ಸಿಗುವ ಸಾಧ್ಯತೆ ಕಡಿಮೆ. ಒಂದು ವೇಳೆ ಸಿಕ್ಕರೂ ಅವರಿಗೆ ನ್ಯಾಯಾಲಯದಲ್ಲಿ ಶಿಕ್ಷೆ ಆಗುವ ಸಾಧ್ಯತೆಯೂ ಕಡಿಮೆ. ಬಂಧನ ಆಗಿ ಸ್ವಲ್ಪ ದಿನ ಜೈಲಿಗೆ ಕಳಿಸಬಹುದಷ್ಟೇ.

ಏಕೆಂದರೆ 12 ವರ್ಷಗಳ ಹಿಂದೆಯೇ ತನಿಖೆಯಲ್ಲಿ ಲೋಪದೋಷಗಳು‌ ಆಗಿರುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇಷ್ಟು ದೀರ್ಘ ಅವಧಿಯಲ್ಲಿ ಎರಡು ತನಿಖೆ ಆಗಿ ಒಬ್ಬ ಆರೋಪಿಯನ್ನು ಬಂಧಿಸಿ ಆತನೂ ನಿರಪರಾಧಿ ಎಂದು ಬಿಡುಗಡೆಯಾದ ನಂತರವೂ ಮತ್ತೊಬ್ಬರನ್ನು‌ ಆರೋಪಿ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವುದು ತುಂಬಾ ಕಷ್ಟ. ಆದರೆ ಈ ಘಟನೆಯಿಂದ ಸಾರ್ವಜನಿಕ ವಲಯದಲ್ಲಿ ಎಷ್ಟೇ ಪ್ರಖ್ಯಾತ ಪ್ರಬಲ ವ್ಯಕ್ತಿಯಾದರು ಅತ್ಯಾಚಾರದಂತ ಪ್ರಕರಣದಲ್ಲಿ ಜನ ಸಾಮಾನ್ಯರು ಸಹಿಸುವುದಿಲ್ಲ ಎಂಬ ಎಚ್ಚರಿಕೆಯ ಸಂದೇಶ ನೀಡಿದೆ. ಇದಕ್ಕಾಗಿ ಸೌಜನ್ಯ ಎಂಬ ಮಗು ಅತ್ಯಂತ ಬರ್ಬರವಾಗಿ ಕೊಲೆಯಾಗಿ ಹುತಾತ್ಮಳಾಗಬೇಕಾದ ಪರಿಸ್ಥಿತಿಗೆ ವಿಷಾದವಿದೆ.

ಒಟ್ಟಿನಲ್ಲಿ ದುಷ್ಟ ಮನುಷ್ಯರ ಹೊಡೆತಕ್ಕೆ ‌ದೇವರು ಸರ್ಕಾರ ಕಾನೂನು ನ್ಯಾಯಾಲಯ ಎಲ್ಲರೂ ತಬ್ಬಿಬ್ಬಾಗಿದ್ದಾರೆ. ಈಗಲಾದರು ವಿಶಾಲ ಮನಸ್ಸಿನಿಂದ ಶುದ್ದ ಹೃದಯದಿಂದ ಯೋಚಿಸುವುದನ್ನು ಪ್ರಾರಂಭಿಸಿ. ಸಂಕುಚಿತ ಮನೋಭಾವದಿಂದ ನಿಮ್ಮ ಬದುಕಿನ ಕ್ವಾಲಿಟಿಯೇ ಕಡಿಮೆಯಾಗುತ್ತದೆ. ಬದುಕೆಂಬ ಬೃಹನ್ನಾಟಕದ ಬಲಿಪಶುಗಳು ದೇವರೋ ಆಡಳಿತವೋ ಮನುಷ್ಯರೋ…?

-ವಿವೇಕಾನಂದ ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ