ಕುರ್ಚಿ ಎಂಬ ಮಾಯಾ ಜಿಂಕೆಯ ಕರಾಳ ಮುಖ...
ಕುರ್ಚಿ ಬೇಕೆ ಕುರ್ಚಿ? " ಆ " ಮಾಯಾ ಕುರ್ಚಿ. ಏರಲು ದೈವ ಬಲ ಬೇಕಂತೆ " ಆ " ಕುರ್ಚಿ. ಕೂರಲು ಜನ ಬಲ ಬೇಕಂತೆ " ಆ " ಕುರ್ಚಿ. ಪಡೆಯಲು ಹಣ ಬಲ ಬೇಕಂತೆ " ಆ " ಕುರ್ಚಿ. ಗಳಿಸಲು ಜಾತಿ ಬಲ ಬೇಕಂತೆ " ಆ " ಕುರ್ಚಿ. ಮಾನ ಮರ್ಯಾದೆ ಬಿಡಬೇಕಂತೆ " ಆ " ಕುರ್ಚಿ ಸಿಗಲು. ಹೋಮ ಹವನ ಮಾಡ ಬೇಕಂತೆ " ಆ " ಕುರ್ಚಿ ಹೊಂದಲು. ತಲೆ ಹಿಡಿಯಲು ತಲೆ ಹೊಡೆಯಲು ಸಿದ್ದರಿರಬೇಕಂತೆ " ಆ " ಕುರ್ಚಿ ಗೆಲ್ಲಲು. ಜುಟ್ಟು ಹಿಡಿಯಲು, ಕೈ ಮುಗಿಯಲು, ಕಾಲು ಕಟ್ಟಲು ಗೊತ್ತಿರಬೇಕಂತೆ " ಆ " ಕುರ್ಚಿ ನಿಮ್ಮದಾಗಲು. ಸಾಮಾನ್ಯರಿಗೆ ಸಿಗದಂತೆ " ಆ " ಕುರ್ಚಿ. ಏಳು ಜನ್ಮದ ಪುಣ್ಯ ಬೇಕಂತೆ " ಆ " ಕುರ್ಚಿ . ಹೋರಾಟಕ್ಕೂ ದೊರೆಯುವುದಂತೆ " ಆ " ಕುರ್ಚಿ. ಮಾರಾಟಕ್ಕೂ ಇದೆಯಂತೆ " ಆ " ಕುರ್ಚಿ.
ಮುಳ್ಳಿನ ಆಸನವಂತೆ " ಆ " ಕುರ್ಚಿ. ಸುಳ್ಳಿನ ಅರಮನೆಯಂತೆ " ಆ " ಕುರ್ಚಿ. ಜನಗಳ ಬೆವರಿನ ವಾಸನೆಯಂತೆ " ಆ " ಕುರ್ಚಿ . ರಕ್ತದ ಕಲೆಗಳ ನೆನಪುಗಳಂತೆ " ಆ " ಕುರ್ಚಿ. ಬೆನ್ನಿಗಿರಿಯುವ ಕಲೆ ಇರಬೇಕಂತೆ " ಆ " ಕುರ್ಚಿ. ಎದೆ ಬಗೆಯುವ ಧೈರ್ಯ ಬರಬೇಕಂತೆ " ಆ " ಕುರ್ಚಿ. ಮುಖವಾಡ ತೊಡೆವ ಮನಸ್ಸಿರಬೇಕಂತೆ " ಆ " ಕುರ್ಚಿ. ವಂಚಿಸುವ ತಲೆಯಿರಬೇಕಂತೆ " ಆ " ಕುರ್ಚಿ. ವರ್ಣನೆಗೆ ನಿಲುಕದಂತೆ " ಆ " ಕುರ್ಚಿ ಪದಗಳಿಗೆ ಸಿಗದಂತೆ " ಆ " ಕುರ್ಚಿ. ಭಾವನೆಗಳಿಗೆ ಕರಗದಂತೆ " ಆ " ಕುರ್ಚಿ. ಕನಸುಗಳಿಗೆ ಎಟುಕದಂತೆ " ಆ " ಕುರ್ಚಿ. ಈ " ಕುರ್ಚಿಯ " ಕಾದಾಟದಲ್ಲಿ ನಾವು ನೀವು ಅನಾಥ ಪ್ರಜ್ಞೆಯಿಂದ ನರಳುವಂತಾಗಿದೆ. ಕುರ್ಚಿಗಿರುವ ಮಹತ್ವ ದೇಶಕ್ಕೂ ಇಲ್ಲ, ಮನುಷ್ಯರಿಗೂ ಇಲ್ಲ. ಕೋಟಿ ಕೋಟಿ ಜನರ ಜೀವನ ನಿರ್ಧರಿಸುವ " ಆ " ಕುರ್ಚಿ ಯಾವುದು ಬಲ್ಲಿರಾ ? ಬಲ್ಲಿರಾ ?
-ವಿವೇಕಾನಂದ ಹೆಚ್.ಕೆ., ಬೆಂಗಳೂರು