ಕುಲಪತಿಗಳು ಬೇಕಾಗಿದ್ದಾರೆ!

ದೇಶದ ಭವಿಷ್ಯ ರೂಪುಗೊಳ್ಳುವುದೇ ವಿಶ್ವವಿದ್ಯಾಲಯಗಳಲ್ಲಿ, ಆದರೆ, ಇಂಥ ಮಹೋನ್ನತ ಸಂಸ್ಥೆಗಳಿಗೆ ದಿಕ್ಕು ತೋರಿಸುವವರಿಲ್ಲ ಎಂದಾಗ ಇನ್ನು ಭವಿಷ್ಯದ ಕತೆಯೇನು? ರಾಜ್ಯದಲ್ಲಿನ ಆರು ವಿವಿಗಳ ಕತೆಯೂ ಹಾಗೆಯೇ ಆಗಿದೆ. ಕಳೆದ ಆರೇಳು ತಿಂಗಳಿಂದ ನಾಡಿನ ಆರು ವಿವಿಗಳಲ್ಲಿ ಕುಲಪತಿಗಳ ಹುದ್ದೆ ಖಾಲಿಯಾಗಿದ್ದು, ಸಕಾಲದಲ್ಲಿ ಅರ್ಹರನ್ನು ನೇಮಕ ಮಾಡ ಬೇಕಾದ ಸರಕಾರವೇ ಕಣ್ಮುಚ್ಚಿ ಕುಳಿತಿದೆ. ಆಡಳಿತ ವ್ಯವಸ್ಥೆಯ ಈ ನಿರ್ಲಕ್ಷ್ಯವು ವಿವಿಗಳ ಹಾಗೂ ಶೈಕ್ಷಣಿಕ ಪ್ರಗತಿಗೆ ಬಹುದೊಡ್ಡ ಹಿನ್ನಡೆ.
ಯಾವುದೇ ಜವಾಬ್ದಾರಿಯುತ ಸರಕಾರ ಉನ್ನತ ಶಿಕ್ಷಣ ಸಂಸ್ಥೆಗಳನ್ನು ನಿರ್ಲಕ್ಷಿಸುವುದು ಸರಿಯಲ್ಲ. ಅದೂ ವಿವಿಗಳ ಕುಲಪತಿ ನೇಮಕ ವಿಚಾರದಲ್ಲಿ ಉದಾಸೀನ ತೋರಬಾರದು. ಈಗಾಗಲೇ ಬಹುತೇಕ ವಿವಿಗಳು ಹಣಕಾಸಿನ ತೊಂದರೆ ಎದುರಿಸುತ್ತಿವೆ. ವಿದ್ಯಾರ್ಥಿಗಳಿಲ್ಲದೆ ಕೆಲ ಕೋರ್ಸ್‌ಗಳನ್ನು ಮುಚ್ಚುವಂಥ ಸ್ಥಿತಿಯೂ ನಿರ್ಮಾಣವಾಗಿದೆ. ಇಂಥ ಸನ್ನಿವೇಶದಲ್ಲಿ ಆರೇಳು ತಿಂಗಳಿಂದ ವಿಸಿ ಹುದ್ದೆ ಖಾಲಿ ಬಿದ್ದಿರುವುದು ಸಹಜವಾಗಿ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಬೀರುವಂಥ ಸಂಗತಿ.
ಸಾಮಾನ್ಯವಾಗಿ ಯಾವ ವಿಶ್ವವಿದ್ಯಾಲಯಗಳ ವಿಸಿ ಹುದ್ದೆಯಾವಾಗ ಖಾಲಿಯಾಗಲಿದೆ ಎಂಬುದು ಸರಕಾರಕ್ಕೇನೂ ಗೊತ್ತಿರದ ವಿಷಯವೇನಲ್ಲ. ಹೀಗಾಗಿ, ಸಂಬಂಧಪಟ್ಟ ವಿವಿಗಳ ವಿಸಿ ಹುದ್ದೆ ಖಾಲಿಯಾಗುವ ಮುನ್ನವೇ ಸರಕಾರ ಶೋಧನಾ ಸಮಿತಿ ರಚಿಸುವ ಮೂಲಕ ಅರ್ಹರ ಪಟ್ಟಿಪಡೆದು ಸಕಾಲದಲ್ಲಿ ಸೂಕ್ತ ವ್ಯಕ್ತಿಗಳ ಹೆಸರನ್ನು ಅಖೈರುಗೊಳಿಸಿ ವಿವಿಗಳ ಕುಲಾ ಧಿಪತಿಗಳೂ ಆಗಿರುವ ರಾಜ್ಯಪಾಲರಿಗೆ ಶಿಫಾರಸು ಮಾಡಬೇಕಾಗುತ್ತದೆ. ಅಂತಿಮವಾಗಿ ರಾಜ್ಯಪಾಲರು ಮೂವರ ಪೈಕಿ ಒಬ್ಬರ ಹೆಸರನ್ನು ಅಂತಿಮಗೊಳಿಸುವರು. ಈ ಪ್ರಕ್ರಿಯೆ ಯನ್ನು ವಿಸಿ ಅಧಿಕಾರ ಅವಧಿ ಮುಗಿಯುವ ಮೂರು ತಿಂಗಳ ಮೊದಲೇ ಪ್ರಾರಂಭಿಸಬೇಕು ಎಂಬ ನಿಯಮವಿದ್ದರೂ ಅದನ್ನು ಸರಕಾರ ಗಾಳಿಗೆ ತೂರುತ್ತಿರುವುದು ಸರಿಯಲ್ಲ. ಅಲ್ಲದೆ, ವಿಸಿ ಹುದ್ದೆ ಖಾಲಿಯಾದ ನಂತರ ಹಿರಿಯ ಡೀನ್ ಗಳನ್ನು ಹಂಗಾಮಿ ವಿಸಿಗಳನ್ನಾಗಿ ನೇಮಿಸುವ ಪರಂಪರೆ ಮುಂದುವರಿಸಿರುವುದು ಸರಿಯಾದ ಬೆಳವಣಿಗೆಯಲ್ಲ.
ಇನ್ನು, ಹಂಗಾಮಿ ವಿಸಿಗಳಿಗೆ ಆಡಳಿತ ಹಾಗೂ ಶೈಕ್ಷಣಿಕ ವಿಚಾರಗಳಲ್ಲಿ ಯಾವುದೇ ನೀತಿ- ನಿರ್ಧಾರ ಕೈಗೊಳ್ಳುವ ಅಧಿಕಾರ ಇರುವುದಿಲ್ಲ. ಹೀಗಾಗಿ, ಈ ರೀತಿ ಸಕಾಲದಲ್ಲಿ ವಿಸಿ ಗಳನ್ನು ನೇಮಕ ಮಾಡದೆ ಸರಕಾರ ಕಾಲಹರಣ ಮಾಡುವುದರಿಂದ ವಿವಿಗಳು ಅಷ್ಟೇ ಸೊರಗುತ್ತಾ ಹೋಗುತ್ತವೆ ಎಂಬುದನ್ನು ಸರಕಾರ ಮನಗಾಣಬೇಕಿದೆ.
ಗುಲ್ಬರ್ಗಾ, ಗಂಗೂಬಾಯಿ ಹಾನಗಲ್, ಬೆಂಗಳೂರು ನಗರ, ಮಹಾರಾಣಿ ಕ್ಲಸ್ಟರ್, ಮಂಡ್ಯ ಹಾಗೂ ನೃಪತುಂಗ ವಿವಿಗಳಲ್ಲಿ ಹಲವು ತಿಂಗಳಿಂದ ವಿಸಿ ಹುದ್ದೆಗಳು ಖಾಲಿ ಉಳಿದಿವೆ. ವಿವಿಗಳ ಸುಸೂತ್ರ ಆಡಳಿತ ನಿರ್ವಹಣೆಗಾಗಿ ಸರಕಾರ ತಕ್ಷಣ ವಿಸಿಗಳನ್ನು ನೇಮಿಸಲು ಮುಂದಾಗಬೇಕಿದೆ. ಅಷ್ಟೇ ಅಲ್ಲದೆ, ಕುಲಪತಿಗಳ ನೇಮಕ ವಿಚಾರದಲ್ಲಿ ಸರಕಾರ ಯಾವ ಲಾಬಿಗೆ ಮಣಿಯಬಾರದು. ಶೈಕ್ಷಣಿಕವಾಗಿ ಅರ್ಹತೆ ಹೊಂದಿರುವವರನ್ನು ನೇಮಕ ಮಾಡಲು ಆದ್ಯತೆ ನೀಡಬೇಕು. ಯಾವುದೋ ಜಾತಿ, ಹಣದ ಲಾಬಿ ಅಥವಾ ರಾಜಕೀಯ ಪ್ರಭಾವ ಬಳಸಿ ತಮಗೆ ಬೇಕಾದವರನ್ನು ವಿಸಿಗಳನ್ನಾಗಿ ನೇಮಿಸುವ ಚಾಳಿ ನಿಲ್ಲಬೇಕು. ಈ ಅಪವಾದದಿಂದ ಮುಕ್ತವಾಗಲು ಸರಕಾರ ವಿಸಿಗಳ ನೇಮಕದಲ್ಲಿ ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸಬೇಕು. ತಪ್ಪಿದಲ್ಲಿ ಅದು ವಿವಿಗಳ ಶಿಕ್ಷಣದ ಗುಣಮಟ್ಟದ ಮೇಲೂ ಪರಿಣಾಮ ಬೀರುವ ಅಪಾಯವೇ ಹೆಚ್ಚು
ಏತನ್ಮಧ್ಯೆ, ಆರ್ಥಿಕವಾಗಿ ಸೊರಗಿದೆ ಕೆಲ ವಿವಿಗಳನ್ನು ಮತ್ತೆ ವಿಲೀನ ಮಾಡಲು ಸರಕಾರ ಹೊರಟಿದೆ. ಆಡಳಿತಾತ್ಮಕ ದೃಷ್ಟಿಯಿಂದ ವಿವಿಗಳನ್ನು ವಿಭಜಿಸಿದ ಸರಕಾರ, ಅವುಗಳನ್ನು ಆರ್ಥಿಕವಾಗಿ ನಿಭಾಯಿಸಲು ಸಾಧ್ಯವಾಗದೆ ವಿಲೀನ ಮಾತುಗಳನ್ನಾಡುತ್ತಿರುವುದು ಸರಿಯಲ್ಲ. ಹೀಗಾಗಿ, ವಿವಿಗಳ ವಿಭಜನೆ ವಿಚಾರದಲ್ಲೂ ಸರಕಾರ ಯೋಚಿಸಿ ನಿರ್ಧಾರ ಕೈಗೊಳ್ಳುವುದು ಸೂಕ್ತ. ಜತೆಗೆ, ಹಣಕಾಸು ಮುಗ್ಗಟ್ಟು ಎದುರಿಸುತ್ತಿರುವ ವಿವಿಗಳಿಗೆ ಸರಕಾರ ಹೆಚ್ಚಿನ ಅನುದಾನ ನೀಡಿ ಉತ್ತೇಜನ ನೀಡಬೇಕಾಗಿದೆ. ವಿಸಿ ನೇಮಕಾತಿಯಲ್ಲಿ ವಿಳಂಬ ಧೋರಣೆ ಸಲ್ಲದು.
ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೦೪-೦೯-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ