ಕುಲುಮೆಯ ಹೂವು..

ಆಗಸ್ತಿನೋ ಗೋಪಿಯನ್ನು ಮೂರನೇ ಬಾರಿಗೆ ಸಂಧಿಸಿದಾಗ ಮುಂಜಾನೆ ಐದೂವರೆಯ ಚರ್ಚ್ ನ ಘಂಟೆ ಶಬ್ದ ಮೊಳಗಿತ್ತು. ಆಗಸ್ತಿನೋನ ಭದ್ರಬಾಹುಗಳಲ್ಲಿ ತನ್ಮಯಳಾಗಿದ್ದ ಗೋಪಿ ದಿಢೀರನೇ ಎದ್ದಿದ್ದಳು. ಭೂತ ವರ್ತಮಾನಗಳನ್ನು ಹೇಗೆ ತಾಳೆಹಾಕಿ ನೋಡಿದರೂ ತಾನು ಮಾಡಿದ್ದು ಸಮಾಜ ಮೆಚ್ಚದ ಕೆಲಸ ಎಂಬುವುದು ಗೋಪಿಗೆ ಮನದಟ್ಟಾಗಿತ್ತು. ಅದ್ಯಾವ ಮಾಯೆ ನನ್ನನ್ನು ಆಗಸ್ತಿನೋನ ಬಲೆಗೆ ಬೀಳಿಸಿತೋ ಎಂಬುವುದೇ ಅವಳಿಗೆ ಪ್ರಶ್ನೆಯಾಗಿ ಉಳಿದಿತ್ತು.
ಆಗಸ್ತಿನೋನ ಬೆಚ್ಚನೆಯ ಮೈಯ ಶಾಖದಲ್ಲಿ ರಾತ್ರಿಯಿಡೀ ತನ್ನನ್ನೇ ಮರೆತಿದ್ದ ಗೋಪಿ ಎದ್ದುನಿಂತು ಸೀರೆ ಸರಿಪಡಿಸತೊಡಗಿದಳು. ಅಪ್ಪಾ ಏನಂದಾರು? ನನ್ನ ವಿಷಯ ಗೊತ್ತಾದರೆ ಸಾಯಿಸಿಯೇ ಬಿಟ್ಟಾನು ನನ್ನಪ್ಪ.. ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲಾ ಎನ್ನುವ ಹಾಗೆ ದೆಯ್ಯು, ಬೆಳ್ಳಿ ಇದೇ ಮುಂದುವರೆಸಿದರೇ?
ದಿಢೀರನೇ ಎದ್ದು ಹೊರಡಲನುವಾದ ಗೋಪಿಯ ಕೈಹಿಡಿದು ತಡೆದ ಆಗಸ್ತಿನೋ ಏನು ಅವಸರ ಎಂದಾಗ ತನ್ನ ಮನಸಿನಲ್ಲಿ ಓಡುತ್ತಿದ್ದ ವಿಚಾರಗಳನ್ನು ತಿಳಿಸಿ ನೀನು ನಿಜವಾಗಿಯೂ ನನ್ನನ್ನು ಪ್ರೀತಿಸುತ್ತೀಯ ಎಂದು ಕೇಳಿದಾಗ ಆಗಸ್ತಿನೋ ತಡವರಿಸದೆ ಹೌದು ಎಂದಿದ್ದ..
ಆದರೆ ಸಮಾಜ.... ಇವನು ಕ್ರೈಸ್ತ ಊರಿನ ಇಗರ್ಜಿಯ ಸಹಾಯಕ. ನಾನು... ನಾನು ಊರ ಹೊರಗಿನ ಪಂಬದನ ಮಗಳು. ಹೇಗೆ ಸಾಧ್ಯ ಈ ಸಂಬಂಧ. ಆಗಸ್ತಿನೋ ಒಪ್ಪಿದರೂ ಅಪ್ಪ ಒಪ್ಪಲಾರ. ಮುಟ್ಟಿದರೆ ಮೈಲಿಗೆಯೆಂದು ಸಮಾಜ ಹೊರಗಿಟ್ಟರೂ ಕುಲವನ್ನು ಬಿಡದ ತಾತ ಚೋಮನ ಮಗ ಅವನು.
ಗೋಪಿ ಗೌಣವಾಗಿ ಏನೋ ಯೋಚಿಸುತ್ತಿದ್ದುದನ್ನು ಕಂಡ ಆಗಸ್ತಿನೋ ಏನಾಯ್ತು ಎಂದು ಕೇಳಿದಾಗ ನನ್ನನ್ನು ನೀನು ಮದುವೆಯಾಗಲು ನನ್ನಪ್ಪನನ್ನು ಒಪ್ಪಿಸು ಎಂದಾಗ ಆಗಸ್ತಿನೋ ಷರತ್ತೊಂದನ್ನು ಹಾಕಿದ. "ನೀನು ಕ್ರಿಶ್ಚಿಯನ್ ಧರ್ಮಕ್ಕೆ ಬಂದರೆ ಮಾತ್ರ ನಾನು ನಿನ್ನನ್ನು ಮದುವೆಯಾಗೋದು.."
ಗೋಪಿ ನಿಂತಲ್ಲೇ ಕುಸಿದಿದ್ದಳು. ನಾವು ಅಸ್ಪೃಶ್ಯರಾಗಿ ಕೊನೆವರೆಗೆ ಉಳಿದರೂ ಅಡ್ಡಿಯಿಲ್ಲ. ನಮಗದು ಅಭ್ಯಾಸವಾಗಿ ಬಿಟ್ಟಿದೆ. ಆದರೆ.. ಆದರೆ ಕ್ರಿಶ್ಚಿಯನ್ ಆಗಿ ಊರು ಪ್ರವೇಶಿಸುವುದಕ್ಕಿಂತ ಕೆರೆಗೆ ಹಾರಿ ಸಾಯುವುದೇ ಲೇಸು ಎಂದು ಗೋಪಿಯ ತಂದೆ ಕೂರ ಹೇಳುತ್ತಿದ್ದ ಮಾತು ಚರ್ಚ್ ನ ಘಂಟೆಗಿಂತಲೂ ಹೆಚ್ಚಿನ ಸದ್ದುಮಾಡುತ್ತಿತ್ತು.
ಆಗಸ್ತಿನೋಗಾಗಿ ದುಗ್ಗನ ಪ್ರೀತಿಯನ್ನು ನಿರಾಕರಿಸಿದ ಗೋಪಿಗೆ ಇಂತಹ ಸಂಧಿಗ್ದ ಪರಿಸ್ಥಿಯಲ್ಲಿ ನೆನಪಾದದ್ದು ದುಗ್ಗನೇ.. ಚರ್ಚ್ ನ ಘಂಟೆ ಮಸೀದಿಯ ಆಜಾನ್ ಎರಡೂ ಧರ್ಮದ ಶಬ್ದಗಳೂ ಗೋಪಿಯ ಮನಸ್ಸನ್ನು ಅದುಮಿತ್ತು. ಮತಾಂತರವಾದರೂ ಮೂಲ ಕ್ರಿಶ್ಚಿಯನ್ನರು ಮತಾಂತರಗೊಂಡ ದಲಿತರನ್ನು ಅಸ್ಪೃಶ್ಯರಂತೆಯೇ ನೋಡುತ್ತಾರೆ ಎಂದು ಗೋಪಿಯ ಗೆಳತಿ ರತ್ನ ಯಾನೆ ಲಿಲ್ಲಿ ಹೇಳಿದ ಮಾತು ಆಕೆಗೆ ನೆನಪಾಗಿತ್ತು.
ಆ ಜೀಸಸ್ ನ ಜಪಮಾಲೆ ಭಾನುವಾರದ ಪ್ರಾರ್ಥನೆ, ಅವರ ಆಚರಣೆ, ಅರ್ಥವಾಗದ ಕೊಂಕಣಿ ಭಾಷೆ ಇವೆಲ್ಲವೂ ಗೋಪಿಗೆ ಇಷ್ಟವಿಲ್ಲದ ವಿಚಾರಗಳಾಗಿತ್ತು. ಅದಕ್ಕೆ ಪ್ರಬಲ ಕಾರಣ ಅವಳ ತಂದೆ ಕೂರ...
ದೈವ ನರ್ತಕನಾದ ದುಗ್ಗ ಅದೆಷ್ಟು ಬಾರಿ ನಿವೇದಿಸಿಕೊಂಡ ಪ್ರೀತಿಯ ಬಗ್ಗೆ. ನಾನೇ ಹುಚ್ಚಿ; ತಿರಸ್ಕರಿಸಿ ಬಿಟ್ಟೆ. ಒಂದು ವೇಳೆ ಅವನ ಪ್ರೀತಿಯನ್ನು ಒಪ್ಪಿದ್ದರೆ ಅಪ್ಪನೇ ಮುಂದೆ ನಿಂತು ಮದುವೆ ಮಾಡಿಸುತ್ತಿದ್ದ. ಅಸ್ಪೃಶ್ಯಳಾದರೂ ಆತ್ಮಗೌರವದಿಂದ ಬದುಕಬಹುದಿತ್ತು ಎಂದು ಮತ್ತೆ ಮತ್ತೆ ಯೋಚಿಸಿ ಗೋಪಿಯ ಕಂಗಳಲ್ಲಿ ಹನಿಗಳು ಜಿನುಗುತ್ತಿತ್ತು..
ಆಗಸ್ತಿನೋನ ಮೇಲಿದ್ದ ಗಾಢ ಪ್ರೀತಿಗೆ ಮನಸೋತು ಅವಳ ನಿರ್ಧಾರವನ್ನೇ ಬದಲಿಸಬೇಕಿತ್ತು. ಅವನ ಷರತ್ತಿಗೆ ಒಪ್ಪಿದ ಅವಳು ಅವನೊಂದಿಗೇ ತನ್ನ ಜೋಪಡಿಗೆ ಹೋಗುತ್ತಾಳೆ. ಊರಿನ ಕಲಿಯನ್ನು ಕುಡಿದು ಗಡದ್ದಾಗಿ ಮಲಗಿದ್ದ ಕೂರನಿಗೆ ಮಗಳು ಮನೆಯಲ್ಲಿರದ ವಿಷಯ ತಿಳಿದಿರಲಿಲ್ಲ. ಗೋಪಿಯ ತಾಯಿ ಪಮ್ಮಿ ಹೊರಬಂದು ನೋಡಿದವಳಿಗೆ ಸಿಟ್ಟು ದುಪ್ಪಟ್ಟಾಗಿದ್ದು ಆಗಸ್ತಿನೋನನ್ನು ನೋಡಿ. ಒನಕೆಯಲ್ಲಿ ನಾಲ್ಕು ಬಿಟ್ಟ ಮೇಲೆ ಆಗಸ್ತಿನೋ ಅಡ್ಡ ಬಂದು ಒನಕೆ ಕಿತ್ತೆಸೆದಾಗ ಪಮ್ಮಿ ಹಿಂದೆಸರಿದು ನೇರಾ ಹೋಗಿ ಕೂರನನ್ನು ಎಬ್ಬಿಸಿ ಕೂರನೊಂದಿಗೆ ಹೊರಬಂದಾಗ, ಇವರಿಬ್ಬರನ್ನು ನೋಡಿದ ಕೂರ ಕೆಂಡಾಮಂಡಲನಾಗುತ್ತಾನೆ. ಗೋಪಿ ಕೂರನ ಕಾಲಿಗೆ ಬೀಳಲು ಹೋದಾಗ ಒದ್ದು ಅವಳನ್ನು ದೂರಕ್ಕೆ ತಳ್ಳಿ "ಏನಯ್ಯಾ ಪೊರ್ಬು ನಿಂಗೆ ನಮ್ ಜಾತಿ ಕೆಡಿಸೋಕೆ ನನ್ ಮಗಳೇ ಬೇಕಾಯ್ತೋ... ಇಗರ್ಜಿಯಲ್ಲಿದ್ದು ಪಾದ್ರಿ
ಸನ್ಯಾಸಿಯಾಗೋ ನಿಂಗೆಂತ ತೆವಲೋ... ಹೇಡಿ.. ಥೂ ನಿನ್ ಜೀವ್ನಕ್ಕೆ.. ಊರೊಳಗೆ ಇಗರ್ಜಿ ಭಾಷೆಯಲ್ಲಿ ಜನರ ತಲೆ ಕೆಡಿಸಿ ಈಗ ನಮ್ಮ ಜಾತಿ ಕೆಡಿಸೋಕೆ ಬಂದಿದ್ದೀಯಾ... ನನ್ ಮಗ್ಳು ಬೇಕಾ ನಿಂಗೆ... ಸರಿ ನನ್ ಮಗಳನ್ನು ಮದುವೆಯಾಗು ಆದರೆ ನೀನು ಕ್ರಿಶ್ಚಿಯನ್ ಧರ್ಮ ಬಿಟ್ಟು ಇಲ್ಲೆ ಪಂಬದನ ಮನೆಯಲ್ಲಿ ಇರಬೇಕು!..
"ಇದೆಂತ ಮಾತು ಕೂರ ನಾವೆಲ್ಲರೂ ದೇವರ ಮಕ್ಕಳು. ಇಲ್ಲಿಗೆ ಬಂದದ್ದೇ ನಿಮ್ಮನ್ನು ಉದ್ಧಾರ ಮಾಡ್ಲಿಕ್ಕೆ. ಇಗರ್ಜಿಗೆ ಬನ್ನಿ ಅಲ್ಲಿ ಸತ್ಯವಿದೆ. ನೀನು ಕ್ರಿಶ್ಚಿಯನ್ ಧರ್ಮಕ್ಕೆ ಬಂದ್ರೆ ನಿಂಗೆ ಇನಾಮು ಸಿಗುತ್ತದೆ. ಗೋಪಿಯನ್ನ ನನ್ ಜೊತೆ ಕಳಿಸು.."
"ಸಾಕು ನಿಲ್ಸಯ್ಯ.. ಇದೇ ಮಾತನ್ನು ಗೋಪಿಯನ್ನು ಮುಟ್ಟೋ ಮೊದ್ಲು ಹೇಳ್ಲಿಕ್ಕೆ ನಿನ್ನ ನಾಲ್ಗೆ ಸತ್ತಿತ್ತಾ??.. ಸತ್ಯ ಅಂತೆ ಸತ್ಯ.. ನಮ್ಗೆ ನಮ್ ಪಂಜುರ್ಲಿ ಇದ್ದಾನೆ. ಕೊರಗ ತನಿಯ ಇದ್ದಾನೆ.. ಬೇಕಾದರೆ ಅಲ್ಲಿ ಕಾಣುವ ಬತ್ತಿದ ಬಾವಿಗಾದರೂ ಹಾಕಿಯೇನು. ನಿನ್ನ ಜೊತೆ ಕಳಿಸಿ ನನ್ನ ಕುಲ ಕೆಡಿಸಿಕೊಳ್ಳಲಾರೆ. ನಾವು ಪಂಬದರಾಗಿಯೇ ಇರ್ತೇವೆ. ನಮ್ಗೆ ಅದು ಅಭ್ಯಾಸವಾಗಿದೆ. ಆದರೆ ನಿನ್ನ ಜೊತೆ ಮಾತ್ರ ಕಳಿಸಲಾರೆ.. " ಎಂದು ಅಲ್ಲೇ ಅಂಗಳದಲ್ಲಿ ಬಿದ್ದಿದ್ದ ಒನಕೆಯನ್ನು ಕೈಯಲ್ಲಿ ಹಿಡಿದು, "ನಾನು ಮುಟ್ಟಿದ್ರೆ ನಿಂಗೆ ಮೈಲಿಗೆಯಾಗ್ತದಲ್ಲ. ಇನ್ನು ಹೆಚ್ಚು ಮಾತಾಡಿದ್ರೆ ನನ್ನ ಒನಕೆ ಮಾತಾಡ್ತಾದೆ. ಅದಕ್ಕೆ ಯಾವ ಜಾತಿ, ಕುಲ, ಗೋತ್ರವೂ ಇಲ್ಲ.." ಎಂದಾಗ ಆಗಸ್ತಿನೋ ಮರು ಮಾತನಾಡದೆ ಹಿಂದಕ್ಕೆ ಸರಿದ. ಅವನಿಗೆ ಕೂರನನ್ನು ಹೊಡೆದುರುಳಿಸುವುದು ಅಷ್ಟು ಕಷ್ಟವೇನೂ ಆಗಿರಲಿಲ್ಲ. ಯೌವ್ವನ ತುಂಬಿ ತುಳುಕುವ ತರುಣ ಆತ. ಆದರೆ ಕೂರನನ್ನು ಹೊಡೆದು ಗೋಪಿಯ ಕೈಹಿಡಿಯಲು ಗೋಪಿ ವಿಶೇಷವಾದ ಸುಂದರಿಯೇನೂ ಅಲ್ಲ.. ಕ್ರಿಶ್ಚಿಯನ್ನರಂತೆ ಬಿಳುಪಿಲ್ಲದಿದ್ದರೂ ಕೊಂಚ ಲಕ್ಷಣವಾಗಿದ್ದಳು. ಅಲ್ಲದೇ ಗೋಪಿಯ ಜೊತೆಗೆ ತನ್ನ ದಾಹವನ್ನು ತೀರಿಸಿಕೊಂಡ ಆತ ಯಾಕೆ ತಾನೆ ಕೂರನಿಗೆ ಹಲ್ಲೆಗೈದಾನು??... ಜೀಸಸ್ ಎಲ್ಲೂ ಹಿಂಸೆಯನ್ನು ಪ್ರಚೋದಿಸಲಿಲ್ಲ.. ತನ್ನನ್ನು ಶಿಲುಬೆಗೇರಿಸುವಾಗಲೂ ಪ್ರತಿರೋಧಿಸಲಿಲ್ಲ..
ನಡೆಯುತ್ತಿದ್ದ ಸಂಭಾಷಣೆಯನ್ನು ತಲೆ ಬಗ್ಗಿಸಿ ನಿಂತು ಕೇಳುತ್ತಿದ್ದ ಗೋಪಿ ಮನದೊಳಗೆಯೇ ಅತ್ತು ಅತ್ತು ಹೈರಾಣಾಗುತ್ತಾಳೆ. ಆಗಸ್ತಿನೋ ನಿರ್ಗಮಿಸಿದ ನಂತರ ಅದೆಷ್ಟು ಕೊತ್ತಳಿಗೆಯ ಪೆಟ್ಟು ಬಿದ್ದರೂ ನಿಶ್ಚಲವಾಗಿದ್ದ ಆಕೆಯನ್ನು ದೆಯ್ಯು ಬೆಳ್ಳಿ ಜೋಪಡಿ ಸಂದಿಯಲ್ಲಿ ಇಣುಕುತ್ತಾ ನೋಡುತ್ತಿದ್ದರು. ಮನಸಿಗಾದ ಗಾಯ ದೇಹಕ್ಕೇ ಅರವಳಿಕೆ ನೀಡಿದಂತಾಗಿತ್ತು ಗೋಪಿಯ ಪಾಲಿಗೆ. ಅದೆಷ್ಟು ಒದ್ದರೂ, ಜುಟ್ಟು ಹಿಡಿದು ತಳ್ಳಿದರೂ ಆಕೆ ನಿಂತ ಭಂಗಿಯನ್ನು ಬದಲಿಸಲೇ ಇಲ್ಲ. ಆಕೆಗೆ ಸಾಯಲೂ ಮನಸಾಗಲಿಲ್ಲ. ಎಂತೂ ವಯಸ್ಸಿಗೆ ಬಂದಾಗಿದೆ ಒಂದು ಹುಡುಗನನ್ನು ನೋಡಿ ಮದುವೆ ಮಾಡಿದರಾಯಿತು ಎಂದು ಯೋಚಿಸಿದ ಕೂರ ಮದ್ವೆಯ ಬಗ್ಗೆ ಪಮ್ಮಿಯಲ್ಲಿ ಹೇಳಿದಾಗ ನಿಶ್ಚಲವಾಗಿದ್ದ ಗೋಪಿ ಇಲ್ಲ.. "ಇಲ್ಲ ಅಮ್ಮಾ ನಂಗೆ ಮದ್ವೆ ಬೇಡ.. ನಾನೀಗ ಎಂಜಲು. ನಂಗೆ ಬ್ಯಾಡ ಮದ್ವೆ." ಗೋಪಿಯ ಮಾತು ಕೇಳಿ ಕೂರನ ಸಿಟ್ಟು ನೆತ್ತಿಗೇರಿತ್ತು.. "ಹಾಗಾದ್ರೆ ಸಾಯಿ.. ನಿನ್ನ ಬುದ್ಧಿ ಗೊತ್ತಿದ್ದಿದ್ರೆ ಮಾರಿಗೆ ಬಲಿ ಕೊಡ್ತಿದ್ದೆ.." ಗೋಪಿ ಉತ್ತರಿಸಲಿಲ್ಲ. ಸಮಾಜದಲ್ಲಿ ಹೊರಗಿನವಳಾದ ಗೋಪಿ ಮನೆಯಲ್ಲೂ ಹೊರಗಿನವಳಾದಳು. ದೆಯ್ಯು ಬೆಳ್ಳಿಯ ಜೊತೆಗೂ ಮಾತನಾಡಲು ಅವಕಾಶವಿದ್ದಿರಲಿಲ್ಲ. ಇದೇ ಚಿಂತೆ ಕ್ರಮೇಣ ಕೂರನ ಬಲಿ ಪಡೆಯಿತು. ಪಮ್ಮಿಯೂ ಕೊರಗಿ ಕೊರಗಿ ಮೂಲೆ ಸೇರಿದಳು. ಆಗ ಚಾಕರಿಗೆ ಬೇಕಾದದ್ದು ಗೋಪಿ..
ಗೋಪಿಯ ಗರ್ಭದಲ್ಲಿ ಆಗಸ್ತಿನೋನ ಅಂಶವೊಂದು ಮೊಳಕೆಯೊಡೆದಿತ್ತು. ಮುಟ್ಟು ನಿಂತದ್ದು ಅರಿವಿಗೆ ಬಂದರೂ ಗೋಪಿ ಯಾರೊಂದಿಗೂ ಹೇಳಿರಲಿಲ್ಲ. ಹೇಳುವಂತೆಯೂ ಇರಲಿಲ್ಲ. ತಾಯಿ ತೀರಿಹೋದದ್ದು ಗೋಪಿಯ ಹೊಟ್ಟೆ ನೋಡಿಯೇ.. ಮನೆಯಲ್ಲಿ ಉಳಿದಿದ್ದು ಗೋಪಿ, ದೆಯ್ಯು ಮತ್ತು ಬೆಳ್ಳಿ.. ಸಕ್ಕರೆಯಿದ್ದಲ್ಲಿ ಇರುವೆಯ ಸಾಲುಗಳು ಎಂಬಂತೆ ಉರೊಳಗಿನ ಧೀಮಂತ ಕುಲದವರು ಆಗಾಗ್ಗೆ ಬಂದು ದೆಯ್ಯು ಗೋಪಿಯನ್ನು ಬಂದು ಮಾತನಾಡಿಸುವುದೇನು? ಭರವಸೆ ನೀಡುವುದೇನು?...
ಒಮ್ಮೆ ಕುಲುಮೆಯಲ್ಲಿ ಕಾದ ಕುಡುಗೋಲಿಗೆ ಬೆಂಕಿಯ ಪರಿಚಯವಿರುವುದಿಲ್ವ?.. ಗೋಪಿಗೆ ಇವರ ಒಳಮನಸ್ಸಿನ ಯೋಚನೆ ಚೆನ್ನಾಗಿ ತಿಳಿದಿದೆ. ಊರಿಗೆ ಕಾಲಿಡಲು ಬಿಡದ ಜಾತಿ, ಪಲ್ಲಂಗಕ್ಕೆ ಮಾತ್ರ ಸ್ವಾಗತ ಕೋರುವುದು ವ್ಯಂಗ್ಯವಾಗಿ ಕಂಡಿತ್ತು ಗೋಪಿಗೆ. ಧೀಮಂತ ಕುಲದವರಿಗೆ ಗೋಪಿಯಲ್ಲಿ ತಮ್ಮ ಬೇಳೆ ಬೇಯುವುದಿಲ್ಲ ಎಂಬ ಸತ್ಯ ಗೊತ್ತಾದ ಮೇಲೆ ಕ್ರಮೇಣ ಬರುವುದನ್ನೇ ನಿಲ್ಲಿಸುತ್ತಾರೆ. ತಾವು ಕೂರನಿಗೆ ನೀಡಿದ ಸಾಲದ ಬಗ್ಗೆ ಆಳುಗಳಲ್ಲಿ ಹೇಳಿ ಕಳುಹಿಸಿದ್ದರು..
ಮಳೆಗಾಲದ ಅಬ್ಬರ ತಗ್ಗಿದ್ದರೂ ಆಗಾಗ ಮಳೆಯಾಗುತ್ತಿತ್ತು. ಜೋಪಡಿಯ ಸುತ್ತೆಲ್ಲಾ ಒರತೆಗಳುಂಟಾಗಿ ದಟ್ಟವಾಗಿ ಹುಲ್ಲು ಬೆಳೆದಿತ್ತು. ಗೋಪಿ ತುಂಬು ಗರ್ಭಿಣಿ. ಮಧ್ಯರಾತ್ರಿ ಪ್ರಸವ ವೇದನೆ ಶುರುವಾಗಿತ್ತು. ಮಾನಸಿಕವಾಗಿ ತಯಾರಾಗಿದ್ದಳು ಗೋಪಿ. ವಿಷಯವನ್ನು ಮುಚ್ಚಿಟ್ಟಷ್ಟೂ ಅದು ಹೇಗೋ ಊರೊಳಗೆ ಸುದ್ದಿಯಾಗಿತ್ತು. ಧೀಮಂತ ಜನರು ತಮ್ಮ ತಮ್ಮೊಳಗೆಯೇ ಹುಟ್ಟೋ ಮಗುವಿಗೆ ತಂದೆ ಯಾರು ಎಂದು ಚರ್ಚಿಸುತ್ತಿದ್ದರು.. ಅದು ಪ್ರಶ್ನೆಯಾಗಿಯೇ ಉಳಿದಿತ್ತು ಅವರಲ್ಲಿ..
ದುಗ್ಗ ಕೂರ ಸತ್ತಾಗಲೇ ಬಂದು ಮುಂದಿನ ನಿರ್ಧಾರದ ಬಗ್ಗೆ ಕೇಳಿದಾಗಲೂ ಗೋಪಿ ಏನೂ ಹೇಳಿರಲಿಲ್ಲ. ಮಳೆ ಮೂಡದ ಆ ರಾತ್ರಿ ಗೂಬೆಯ ಶಬ್ದಗಳು ಮಗುವಿನ ಜನ್ಮಕ್ಕೆ ಸಾಕ್ಷಿಯಾಗಿತ್ತು. ಆದರೆ ಬೆಳಗಾಗುವಷ್ಟರಲ್ಲಿ ಗೋಪಿಯ ಜೋಪಡಿಯಲ್ಲಿ ಮಗುವಿರಲಿಲ್ಲ. ಬಸುರಿಯಾದಾಗಲೇ ಮಗುವಿನ ತೀರ್ಮಾನವನ್ನು ಮಾಡಿದ್ದಳು ಆಕೆ. ಊರೊಳಗಿನ ಇಗರ್ಜಿಯಲ್ಲಿ ಬೆಳಗಿನ ಘಂಟೆ ಬಾರಿಸಲು ಬಂದ ಪಾದ್ರಿ ಮಗುವನ್ನು ನೋಡಿ ಅಚ್ಚರಿಗೊಂಡಿದ್ದರು..
ಮಗುವಿನ ವಿಚಾರ ತಿಳಿದ ಆಗಸ್ತಿನೋ, ಪಾದ್ರಿಯ ಬಳಿ ಇದನ್ನು ಮಿಷನರಿಯ ಆರೈಕೆಯಲ್ಲಿ ಸಾಕೋಣ. ನಮ್ಮಲ್ಲೇ ಇರಲಿ. ಹೊರಜಗತ್ತಿಗೆ ತಿಳಿಯುವುದು ಬೇಡ ಎಂದಾಗ ಪಾದ್ರಿಗೂ ಸರಿಯೆನಿಸಿತ್ತು. ಮಗು ಮೇಲಿನ ಮಮತೆಗಿಂತ ಮರ್ಯಾದೆಯೇ ಮುಖ್ಯವಾಗಿತ್ತು ಆಗಸ್ತಿನೋನಿಗೆ. ಈ ಪಾಪವನ್ನು ಶಿಲುಬೆಗೇರಿದ ಸ್ವಾಮಿ ಕ್ಷಮಿಸಲು ಎಷ್ಟು ಬಾರಿ ಕ್ಷಮಾಪಣಾ ಪತ್ರ ಓದಬೇಕೇನೋ ಎಂಬ ಚಿಂತೆ ಅವನನ್ನು ಕಾಡಿತ್ತು.
ಊರೊಳಗಿನ ಆಳುಗಳು ಪದೇಪದೇ ಅಪ್ಪನ ಸಾಲದ ಬಗ್ಗೆ ಮನೆ ಮುಂದೆ ನಿಂತಾಗ ಗೋಪಿಗೂ ಕಿರಿಕಿರಿಯೆನಿಸಿತ್ತು. ಪ್ರಸವದ ನಂತರ ಒಂದುವಾರವಾದ ಮೇಲೆ ಗೋಪಿ ದೆಯ್ಯು ಬೆಳ್ಳಿಯೊಂದಿಗೆ ಊರೊಳಗೆ ಕೆಲಸಕ್ಕೆ ಹೋಗಿ ಋಣ ಸಂದಾಯ ಮಾಡುತ್ತಾರೆ. ಆಗಲೂ ಆ ಧೀಮಂತ ಕುಲದ ಕಣ್ಣುಗಳು ವಕ್ರ ದೃಷ್ಟಿಯಿಂದಲೇ ಗೋಪಿಯ ದೇಹವನ್ನು ನೋಡುತ್ತಿತ್ತು.
ಗೋಪಿ ಕೊನೆವರೆಗೂ ಹಾಗೆಯೇ ಉಳಿದಳು ಮದುವೆಯಾಗದೆ. ಪ್ರೀತಿಸಿದವನೊಂದಿಗೆ ಬಾಳಲಾಗದೆ, ಕಟ್ಟಿಕೊಂಡವನಿಗೆ ಮೋಸಮಾಡಲು ಇಚ್ಛಿಸದೇ ಆತ್ಮದಿಂದ ಪತಿವ್ರತೆಯಾಗಿಯೇ ಉಳಿದಳು. ದೆಯ್ಯುನನ್ನು ದುಗ್ಗನಿಗೆ ಮದುವೆ ಮಾಡಿಸಿ ದುಗ್ಗನ ಕಾಯುವಿಕೆಗೂ ವಿರಾಮವಿಟ್ಟಳು. ಬದುಕಿನಲ್ಲಿ ಆಗಾಗ್ಗೆ ಗತಿಸಿದ ಕಾಲವನ್ನು ಸ್ಮರಿಸುವುದು ಅವಳ ಹವ್ಯಾಸ... ಕಾಲ ಬದಲಾದರೂ ಅವಳ ಕೆಲವು ನಿರ್ಧಾರ ಬದಲಾಗಲೇ ಇಲ್ಲ. ಈಗಲೂ ಅಷ್ಟೇ ಮತಾಂತರವೆಂದರೆ ಅವಳಿಗೆ ಅಸಹ್ಯವೆಂದೆನಿಸುತ್ತದೆ.
-ಸನಂ..(ಶಮೀರ್ ನಂದಿಬೆಟ್ಟ..)
ಚಿತ್ರ ಕೃಪೆ: ಇಂಟರ್ನೆಟ್ ತಾಣ