ಕುವೆಂಪುರವರ ಒಂದು ಪ್ರಬಂಧ - ಬೇಟೆಗಾರರು ಕಬ್ಬಿಗರಾದ ಪ್ರಸಂಗ

ಕುವೆಂಪುರವರ ಒಂದು ಪ್ರಬಂಧ - ಬೇಟೆಗಾರರು ಕಬ್ಬಿಗರಾದ ಪ್ರಸಂಗ

ಬರಹ

ಕಾಡಿನಲ್ಲಿ ಒಂದು ರಾತ್ರಿ ಕಳೆಯುವ ಸೌಭಾಗ್ಯ ದೊರೆತರೆ ಆ ಅನುಭವವನ್ನು ಹೇಗೆ ಹಂಚಿಕೊಳ್ಳುತ್ತೀರಿ? ಅಲ್ಲಿ ನೀವು ಅನುಭವಿಸಿದ ಪ್ರಕೃತಿಯ ಸಿರಿ, ಮನದ ವಿಕೃತಿ, ಭಯ, ಇವೆಲ್ಲವನ್ನೂ ಹೇಗೆ ಬಣ್ಣಿಸುತ್ತೀರಿ? ಕುವೆಂಪು ಬರೆದ "ಕಾಡಿನಲ್ಲಿ ಕಳೆದ ಒಂದಿರುಳು" ಬಹುಶಃ ಈ ದಿಶೆಯಲ್ಲಿ ಒಳ್ಳೆಯ ಓದು.

ಮೊನ್ನೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕೊಂಡು ತಂದ ಒಂದು ಪುಸ್ತಕದಲ್ಲಿ ಕುವೆಂಪುರವರು ಬರೆದ ಈ ಪ್ರಬಂಧವೂ ಇತ್ತು. ಕುವೆಂಪು ಬರೆದದ್ದು ಎಂದ ಮೇಲೆ ಸಹಜವಾಗಿ ಉಳಿದ ಪ್ರಂಬಂಧಗಳಿಗಿಂತ ಹೆಚ್ಚು ಆಸಕ್ತಿ ಮೂಡುತ್ತದೆ. ಸಾಯಂಕಾಲ ಬೇಟೆಗಾರರಾಗಿ ಅರಣ್ಯ ಹೊಕ್ಕ ಮೂರು ಸ್ನೇಹಿತರು ಮುಂಜಾನೆ ಕಬ್ಬಿಗರಾಗಿ ಮನೆಗೆ ಮರಳಿದ್ದುದರ ವ್ಯಾಖ್ಯಾನ ಕಾವ್ಯಭರಿತವಾಗಿ, ಸ್ವಾರಸ್ಯಕರವಾಗಿ ಬರೆಯಲ್ಪಟ್ಟಿದೆ.

ಕುವೆಂಪು ಬರೆದದದ್ದನ್ನು ನಾನು ಹೆಚ್ಚು ಓದಿಲ್ಲ, ಆದರೆ ಅವರಿಗೆ ಬೆಳ್ದಿಂಗಳು ಎಷ್ಟು ಪ್ರಿಯವಾದುದು ಎಂಬುದಕ್ಕೆ ಇದೊಂದು ಪ್ರಬಂಧವೇ ಸಾಕು. ಬೆಳ್ದಿಂಗಳಿನ ರಸಾಸ್ವಾದ ಕಾವ್ಯಮಯವಾಗಿ ಗದ್ಯದಲ್ಲೇ 'embed' ಆಗಿದೆ, ಈ ಪ್ರಬಂಧದಲ್ಲಿ.

ನಮ್ಮಲ್ಲಿ ಹಲವರು ಕಾಡಿನಲ್ಲಿ 'ಟ್ರೆಕ್' ಮಾಡಿದ್ದುಂಟು, ಆದರೆ ಬೇಟೆಯಾಡಿದವರು ಇಲ್ಲವೇ ಇಲ್ಲ ಎಂಬುದು ಹೆಚ್ಚು ತಲೆಕೆಡಿಸಿಕೊಳ್ಳದೆ ಹೇಳಬಹುದು. ಹೀಗಾಗಿ ಬೇಟೆಯ ವಿವರ ಹೆಚ್ಚು ಆಸಕ್ತಿದಾಯಕವೂ, appealing ಆಗಿಯೂ ಕಾಣುವ ಸಂದರ್ಭ ಹೆಚ್ಚು.

ಕೋವಿಯಲ್ಲಿದ್ದ ತೋಟಾಗಳನ್ನು ತೆಗೆದು ಜೀಬಿಗೆ ಹಾಕಿಕೊಂಡು, ಬಂದೂಕನ್ನು ಕುತ್ತಿಗೆ ಕಂಕುಳುಗಳ ಸಹಾಯದಿಂದ ಭದ್ರವಾಗಿ ಹಿಡಿದುಕೊಂಡು, ಮರವನ್ನೂ ಜೀವವನ್ನೂ ಕೈಯಲ್ಲಿ ಹಿಡಿದು ಅಟ್ಟಣಿಗೇರಿದೆ.

ಎಂಬುದನ್ನು ಓದುವಾಗ ಹೊಸತೊಂದು ಅನುಭವದ ರಸಾಸ್ವಾದವಾಗುತ್ತದೆ.

ಕಡೆಗೆ ತಡೆದಷ್ಟೂ ಪ್ರಬಲವಾಗಿ ಟಗರಿನಂತೆ ಸೀನಿ, ಕೆಮ್ಮಿಯೂ ಬಿಟ್ಟೆ! ಕಾಡಿನಲ್ಲಿ ಕಡ್ಡಿ ಮುರಿದರೂ ದೊಡ್ಡ ಸದ್ದಾಗುತ್ತದೆ. ಮೌನ ಸರೋವರಕ್ಕೆ ಸ್ವನಮಹಿಷವು ದುಮ್ಮಿಕ್ಕಿದಂತಾಗಿ ಒಂದು ಸಾರಿ ಕಾಡೆಲ್ಲ ಅಲ್ಲೋಳ ಕಲ್ಲೋಲವಾದಂತಾಯಿತು.

ಕಾಡಿನ ಮೌನವನ್ನು, ಕಾಡಿನ ದಟ್ಟಣೆಯನ್ನು ಇವರು ವಿವರಿಸುವ ಸೊಬಗು ಎಷ್ಟು ಚೆಂದವಾದುದೆಂದರೆ ಚಿತ್ರಪಟ ಓದುಗನ ಸಂವೇದನೆಗನುಸಾರ ಕಣ್ಣಮುಂದೆ ತೆರೆದುಕೊಳ್ಳುತ್ತದೆ.

ಬೆಳ್ದಿಂಗಳನ್ನು ಕಾವ್ಯಮಯವಾಗಿ ಅವರು ಬಣ್ಣಿಸುವ ರೀತಿ ಅಪೂರ್ವವಾದದ್ದು:

ಸ್ವಲ್ಪ ಹೊತ್ತಿನಲ್ಲಿಯೇ ಆಕಾಶ ಪಟಸ್ಥ ಸ್ವಲ್ಪ ವಿರಳ ವೃಕ್ಷಮಾಲೆಗಳ ಹಿಂಗಡೆಯಲ್ಲಿ ಸುಂದರ ಶಶಾಂಕನು ಗೋಚರವಾದನು. 'ಜೊನ್ನದ ಬಣ್ಣದಿ ತುಂಬಿದ ಬಿಂಬದ ಹೊನ್ನಿನ ಸೊನ್ನೆಯು ಮೂಡಿದುದು'. ಹೊಂಗದಿರುಗಳು ಒಯ್ಯೊಯ್ಯನೆ ಅರಣ್ಯ ಪ್ರವೇಶ ಮಾಡಿದುವು. ಕತ್ತಲು ನಿಬಿಡ ವೃಕ್ಷವಾಟಿಕೆಗಳಲ್ಲಿ ಅವಿತುಕೊಂಡಿತು. ಆದರೆ ಮೌನವು ಎಂದಿನಂತೆ ಗಂಭೀರವಾಗಿತ್ತು. ಚಂದ್ರನು ಆಕಾಶಮಾರ್ಗದಲ್ಲಿಡುವ ಹೆಜ್ಜೆಗಳ ಸದ್ದು ಕೂಡ ಕೇಳಿಸುವಂಟಿತ್ತು. ಘೋರ ವಿಷಣ್ಣಳಾಗಿದ್ದ ನಿಶಾವನಿತೆ ಮಧುರ ಪ್ರಸನ್ನಳಾದಳು.

ಇನ್ನು ಕಗ್ಗತ್ತಲೆಗೆ ಚಂದ್ರನ ಪ್ರವೇಶ ತಂದೊಡ್ಡುವ ಜ್ಯೋತ್ಸ್ನೆಯನ್ನು ಬಣ್ಣಿಸುವ ರೀತಿ ಕೇವಲ ಸಚಿನ್ ತೆಂಡೂಲ್ಕರ್ ಹೊಡೆಯಬಲ್ಲ ಸ್ಕ್ವೇರ್ ಡ್ರೈವ್ (square drive) ಮಾದರಿಯದ್ದು:

ತಿಂಗಳು ಮೂಡಿಬರುವನೆಂದು ನನ್ನೆದೆ ಹಿಗ್ಗಿತು. ಆ ಮೌನತಿಮಿರಗಳ ಗುರುಭಾರದಿಂಡ ಕುಗ್ಗಿ ನೆಲಸಮವಾಗಿದ್ದ ಮನಸ್ಸು ನಿಟ್ಟುಸಿರೆಳೆದು, ನಸು ತೆಲೆಯೆತ್ತಿತ್ತು. ನೋಡುತ್ತಿದ್ದ ಹಾಗೆಯೇ ಕನಸುನನೆಕೊನೆಯೇರಿತು. ಕಾಂತಿ ಹೆಚ್ಚಿತು. ಹೊಂಬಣ್ಣವಾಯಿತು. ಬಣ್ಣಕ್ಕೆ ಬಣ್ಣವೇರಿತು. ಪರ್ವತಶಿಖರ ಶಿರೋರೇಖೆಯಲ್ಲಿ ಬೆಳೆದಿದ್ದ ಭೀಮ ಭೂರುಹ ರಾಜಿಗಳು ಜ್ಯೋತ್ಸ್ನಾಪ್ರದೀಪ್ತವಾದ ನೀಲಾಕಾಶಪಟದಲ್ಲಿ ಚಿತ್ರಿತವಾದಂತೆ ತೋರಿದವು. ಉತ್ಕಂಠಿತ ಭಾವದಿಂಡ ಅತ್ತ ಕಡೆ ಉನ್ಮೀಲಿತ ನಯನನಾಗಿ ದೃಷ್ಟಿಸಲಾರಂಭಿಸಿದೆ. ದೃಶ್ಯವು ಅತ್ಯಂತ ರಮಣೀಯವಾಗಿತ್ತು. ಬೇಟೆಗಾರನು ಕಬ್ಬಿಗನಾಗಿ ನೋಡಿದನು