ಕುವೆಂಪು ಚಿಂತನೆ - ದೈವಭಕ್ತಿ ಮಕ್ಕಳಲ್ಲಿ…

ಕುವೆಂಪು ಚಿಂತನೆ - ದೈವಭಕ್ತಿ ಮಕ್ಕಳಲ್ಲಿ…

ದೇವರಲ್ಲಿ ಭಕ್ತಿಯನ್ನು ಬೆಳೆಸಬೇಕೆಂದು ಯಾವುದೋ ಒಂದು ಕಥೆಯನ್ನು ಕಟ್ಟಿ, ಆ ಕಥೆಯನ್ನು ಪವಿತ್ರವೆಂದು ಘೋಷಿಸಿಸುತ್ತಾರೆ. ಅದನ್ನು ಭಕ್ತಿಯಿಂದ ಆಲಿಸಿ, ಐತಿಹಾಸಿಕವಾದ ಘಟನೆಯನ್ನೆಂತೋ ಅಂತೆಯೇ ಅದನ್ನು ನಂಬಿ, ಶ್ರದ್ಧಾಪುರ್ವಕವಾಗಿ ಪೂಜಿಸಬೇಕು ಎನ್ನುತ್ತಾರೆ.

ಉದಾಹರಣೆಗೆ, ಪ್ರಹ್ಲಾದನ ಚರಿತ್ರೆಯನ್ನು ತೆಗೆದು ಕೊಳ್ಳೋಣ, ಹಿರಣ್ಯಕಶಿಪುವಿಗೆ ಪ್ರಹ್ಲಾದ ಮಗನಾಗಿ ಹುಟ್ಡಿದ್ದಾನೆ. ಅವನನ್ನು ವಿಷ್ಣುಭಕ್ತನನ್ನಾಗಿ ಚಿತ್ರಿಸುತ್ತಾರೆ. ಅವನ ತಂದೆಯನ್ನು ದೈವದ್ವೇಷಿಯನ್ನಾಗಿ ಚಿತ್ರಿಸುತ್ತಾರೆ. ಈ ಕಥೆಯನ್ನು ಹುಟ್ಟಿಸಿ ಬರೆದವರು ವಿಷ್ಣು ಪಂಥದವರಾಗಿ ವಿಷ್ಣುವಲ್ಲದ ದೇವರನ್ನು ಅಸುರನೆಂಬಂತೆ ಚಿತ್ರಿಸುತ್ತಾರೆ. ಆದ್ದರಿಂದ ಹಿರಣ್ಯಕಶಿಪು ಶಿವನ ಭಕ್ತನಾದರೂ 'ದೈವದ್ವೇಷಿ' ಎಂದೇ ಚಿತ್ರಿಸುತ್ತಾರೆ. ಸರಿ, ಪ್ರಹ್ಲಾದನ ' ದೈವಭಕ್ತಿ'ಗೂ ಹಿರಣ್ಯಕಶಿಪುವಿನ 'ದೈವದ್ವೇಷ'ಕ್ಕೂ ಕಾಳಗ ಶುರುವಾಗುತ್ತದೆ. ಮಗನನ್ನು ವಿಷ್ಣುಭಕ್ತಿಯಿಂದ ತಪ್ಪಿಸಲು ಅಪ್ಪ ಏನೇನೋ ಕಷ್ಟಗಳನ್ನು ಕೊಡುತ್ತಾನೆ. ಬೆಂಕಿಯಲ್ಲಿ ಅದ್ದುತ್ತಾನೆ. ನೀರಿನಲ್ಲಿ ಮುಳುಗಿಸುತ್ತಾನೆ. ವಿಷಸರ್ಪಕ್ಕೆ ಬಲಿಗೊಡುತ್ತಾನೆ. ಕಿಬ್ಬಿಯಿಂದ ತಳ್ಳುತ್ತಾನೆ. ಆದರೆ ಪ್ರಹ್ಲಾದನನ್ನು ದೇವರು, ವಿಷ್ಣು ಅವನನ್ನು ಪ್ರತಿಸಲವೂ ಕಾಪಾಡುತ್ತಾನೆ. ಕಡೆಗೆ ತಂದೆಗೆ ರೇಗಿ ಮಗನಿಗೆ ಅವನ ದೇವರನ್ನು ತನಗೆ ತೋರಿಸಿದರೆ ಆ ದೇವರನ್ನು ತಾನೆ ಸಂಹರಿಸುವುದಾಗಿ ಹೇಳುತ್ತಾನೆ. ಅವನು ಎಲ್ಲಿದ್ದಾನೆ. ತೋರಿಸು ಎನ್ನುತ್ತಾನೆ. 'ಅವನು ಎಲ್ಲೆಲ್ಲಿಯೂ ಇದ್ದಾನೆ' ಎನ್ನತ್ತಾನೆ ಮಗ. "ಹಾಗಾದರೆ ನಿನ್ನ ವಿಷ್ಣು ಇಲ್ಲಿದ್ದಾನೆಯೆ"? ಎಂದು ತನ್ನ ಆಸ್ಥಾನದ ಒಂದು ಕಂಬವನ್ನು ತೋರಿಸಿ ಕೇಳುತ್ತಾನೆ ಹಿರಣ್ಯಕಶಿಪು. " ಇದ್ದಾನೆ! ಅವನು ಎಲ್ಲೆಲ್ಲಿಯೂ ಇದ್ದಾನೆ" ಎನ್ನುತ್ತಾನೆ ಪ್ರಹ್ಲಾದ. ಅಪ್ಪ, ಇನ್ನೊಂದು ಕಂಬವನ್ನು ತೋರಿಸಿ "ಇಲ್ಲಿ?" ಎನ್ನುತ್ತಾನೆ. "ಅಲ್ಲಿಯೂ" ಎನ್ನುತ್ತಾನೆ ಮಗ. ಹೀಗೆ ನಾಲ್ಕಾರು ಕಂಬ ತೋರಿಸಿ ಕೊನೆಗೆ ಒಂದು ಕಂಬಕ್ಕೆ ಒದೆಯುತ್ತಾನೆ. ಆಗ 'ನರಸಿಂಹ' ಹೊರಕ್ಕೆ ಹಾರಿ ಮಗನ ಮುಂದೆಯೆ ಅಪ್ಪನ ಕರಳು ಕಿತ್ತು ತಂದು ಮಾಲೆ ಹಾಕಿಕೊಳ್ಳುತ್ತಾನೆ. ಮಗ ಸ್ತುತಿಸುತ್ತಾನೆ ! ತನ್ನ ವಿಷ್ಣುವನ್ನ ! ಈ ಮದ್ಯೆ ತನಗೆ ನಾನಾ ವರಗಳನಿತ್ತು, ತನಗೆ ಮಹಾಶಕ್ತಿಯಿತ್ತ 'ಶಿವ' ತನ್ನನ್ನು ರಕ್ಷಿಸಲು ಬರುವುದೇ ಇಲ್ಲ! ಪತ್ತೆಯಿಲ್ಲದಂತೆ ಕಣ್ಮರೆಯಾಗುತ್ತಾನೆ.‌ ವಿಷ್ಣು ಪರವಾಗಿ ಕಥೆ ಬರೆದ ವೈಷ್ಣವ ಕವಿಯ ಇಷ್ಟದಂತೆ!

ಚಿಕ್ಕಂದಿನಲ್ಲಿಯೇ ವಿಚಾರ ಪ್ರಜ್ಞೆಯನ್ನು ಕೆರಳಿಸುವ, ಅಂದರೆ ಪ್ರಶ್ನೆ ಕೇಳುವ, ಸಂದೇಹಪಡುವ, ಸತ್ಯವನ್ನು ಒರೆಗಲ್ಲಿಗೆ ತಿಕ್ಕಿ ಸರಿ ತಪ್ಪನ್ನು ಪರಿಶೀಲಿಸುವ ಮನೋಧರ್ಮ ಉಂಟಾಗುವಂತೆ ಮಗುವಿಗೆ ಬೋಧಿಸಿದ್ದರೆ, ಆ ಮಗು ಇಂಥ ಕಥೆಯನ್ನು ಕೇಳಿ ಅದನ್ನು ಅವಿಚಾರವಾಗಿ ಸ್ವೀಕರಿಸಿ ಗುಳಕ್ಕನೆ ನುಂಗುವುದಿಲ್ಲ. ಇಲ್ಲದಿದ್ದರೆ ಆ ಕಥೆಯನ್ನು ಪವಿತ್ರ ಪುರಾಣವೆಂದು ಶ್ರದ್ಧಾಪೂರ್ವಕವಾಗಿ ನಂಬಿ, ವೀರ ಮತಭ್ರಾಂತಿಯ ವೈಷ್ಣವನಾಗಿ, ಶೈವ ವೈಷ್ಣವ ಕಲಹಗಳನ್ನು ಸೃಷ್ಟಿಸಿ, ಕದನಗಳಲ್ಲಿ ಭಾಗಿಯಾಗಿ ಲೋಕಕ್ಷೋಭೆಗೆ ಕಾರಣನಾಗುತ್ತಾನೆ.

ವಿಷ್ಣುವೇ ದೇವರು ಶಿವನಲ್ಲ ಎಂದು ಪಂಥಗಳನ್ನು ಕಟ್ಟುವ ಆಚಾರ್ಯನೂ ಆಗಿ, ಹೋರಾಟ ನಡೆಸಿ , ಕೊಲೆ ರಕ್ತಪಾತಗಳಿಗೂ ನಿರಂತರ ಶಾಂತಿಭಂಗಕ್ಕೂ ಕಾರಣನಾಗುತ್ತಾನೆ. ಚಿಕ್ಕಂದಿನಲ್ಲಿಯೇ ವೈಚಾರಿಕ ಮನೋಧರ್ಮವನ್ನು ನಾಟಿ ಹಾಕದಿದ್ದರೆ, ಆ ಮಗು ಪ್ರಹ್ಲಾದನ ಕಥೆಯನ್ನು ಹಾಗೆ ಹಾಗೆಯೇ ಇಡಿಯಾಗಿ ಸ್ವೀಕರಿಸುತ್ತಿರಲಿಲ್ಲ. ಪ್ರಶ್ನೆಗಳ ಸುರಿಮಳೆಗರೆಯುತ್ತಿತ್ತು. ಪ್ರಹ್ಲಾದನ ವಿಷ್ಣು ಭಕ್ತಿ ಹಿರಣ್ಯಕಶಿಪುವಿನ ಶಿವಭಕ್ತಿ ಎರಡೂ ಭಕ್ತಿಗಳಲ್ಲವೆ? ದೇವರು ಹೀಗೆ ಎರಡಾಗಿ ಭಕ್ತಿಯಲ್ಲಿಯೂ ಪಕ್ಷಪಾತ ತೋರಿಸುತ್ತಾನೆಯೆ? ಹಿರಣ್ಯಕಶಿಪುವಿನ ಶಿವ ಅವನನ್ನು ಪ್ರಹ್ಲಾದನ ವಿಷ್ಣುವಿನಿಂದ ಏಕೆ ರಕ್ಷಿಸಲು ಬರಲಿಲ್ಲ? ಕಂಭದಿಂದ ನರಸಿಂಹ ಜಿಗಿಯುವುದು ನಿಜವೆ? ಇತ್ಯಾದಿ ಪ್ರಶ್ನೆಗಳನೆಲ್ಲ ಕೇಳಿ ಈ ಪುರಾಣಗಳು ಅಸತ್ಯ ಮತ್ತು ಅವೀವೆಕದ ಕಂತೆಗಳೆಂದು ನಿರ್ಣಯಿಸುತ್ತಿದ್ದನು ಅಥವಾ ಇನ್ನೂ ತುಸು ಗಹನವಾಗಿ ವಿಚಾರಮಾಡಿ, ಇವುಗಳೆಲ್ಲ ಸತ್ಯಗಳನ್ನು ಸೂಚಿಸುವ ಕಥಾ ಪ್ರತಿಮೆಗಳು ಮಾತ್ರವೆಂದು ಇವುಗಳನ್ನು ಅಕ್ಷರಶಃಸತ್ಯಗಳೆಂದು ನಡೆದ ಘಟನೆಗಳೆಂದೂ ತೆಗೆದುಕೊಂಡರೆ ಅನರ್ಥವಾಗುತ್ತದೆ ಎಂದೂ ನಿರ್ಣಯಿಸುತ್ತಿ‌ದ್ದನು.

ಅಂತಹ ವೈಚಾರಿಕ ಮನೋಧರ್ಮವನ್ನು ಮೊದಲಿನಿಂದಲೂ ನಾವು ಮಕ್ಕಳಲ್ಲಿ ಬಿತ್ತಿದ್ದರೆ, ಮತಕಲಹಗಳೂ ಮತ್ತು ಮೌಢ್ಯಗಳೂ ಸಂಕುಚಿತವಾದ ಹುಸಿ ಮತಾಭಿಮಾನದಿಂದ ಒದಗುವ ಅನ್ಯಮತ ದ್ವೇಷದಿಂದ ಉಂಟಾಗುತ್ತಿರುವ ಕ್ಷೋಭೆಗಳೂ ಲೋಕದಲ್ಲಿರುತ್ತಿರಲಿಲ್ಲ. ಶ್ರೀ ರಾಮಕೃಷ್ಣ ಪರಮಹಂಸರು ಬೋಧಿಸಿರುವ “ಎಂತು ಮತ ಅಂತು ಪಥ” ಎಂಬ ಸರ್ವಧರ್ಮ ಸಮನ್ವಯದಿಂದ ಜಗತ್ತು ಶಾಂತಿಮಂದಿರವಾಗುತ್ತಿದ್ದುದರಲ್ಲಿ ಸಂದೇಹವಿಲ್ಲ..

-ಕುವೆಂಪು

(ಜನತಾ ಪ್ರಜ್ಞೆ ಮತ್ತು ವೈಚಾರಿಕ ಜಾಗೃತಿ ಲೇಖನದಿಂದ ಸಂಗ್ರಹಿತ)