ಕುವೆಂಪು ನುಡಿನಮನ

ಕುವೆಂಪು ನುಡಿನಮನ

ಕವನ

ಮನುಜಮತ ವಿಶ್ವಪಥ

ಕನಕದೊಳು ಸಾರಿದರು

ತನುಮನದಿ ಝೇಂಕರಿಸಿ ಕಂಗೊಳಿಸುತ

ಜನಜನಿತ ಕವಿವರ್ಯ

ಮನಮಿಡಿತ ಕಾವ್ಯಗಳ

ವನಜದಳ ರೂಪದಲಿ ತೋರಿಸಿದರು||

 

ಕನ್ನಡದ ಡಿಂಢಿಮಕೆ

ಮನ್ನಣೆಯ ದೊರಕಿಸಿ

ಬನ್ನಣೆಯ ಮಾಡುತಲಿ ಕರುನಾಡಿಗೆ

ತಣ್ಣನೆಯ ಸುಳಿಗಾಳಿ

ಮಣ್ಣಿನಲಿ ಬೆಸೆಯುತಲಿ

ಕನ್ನಡದಿ ನವಪರ್ವ ಸೃಷ್ಠಿಸಿದರು||

 

ಮಲೆನಾಡ ಸಿರಿಯಲ್ಲಿ

ಜಲಗಾರ ನರ್ತಿಸುತ

ಕಲೆಯೊಳಗೆ ಕನ್ನಡವ ಬಿಂಬಿಸಿದರು

ಒಲವಿನಲಿ ಸಿರಿನುಡಿಯ

ಛಲದಿಂದ ಮುನ್ನುಗ್ಗಿ

ಬಲುಮೆಯಲಿ ಜತನಿಸುತ ರಕ್ಷಿಸಿದರು||

 

ಕೊಳಲನ್ನು ನುಡಿಸುತಲಿ

ಕಳೆಯಲ್ಲಿ ಪಕ್ಷಿಕಾಶಿ

ಹೊಳೆದಿವೆ ಪ್ರೇಮಕಾಶ್ಮೀರದಲಿ|

ಮಳೆಯಲ್ಲಿ ಕಿಂಕಿಣಿಯು

ತಳೆಯುತಿದೆ ಕಾನೀನ

ಸೆಳೆದಿಹವು ಕಾನೂರು ಹೆಗ್ಗಡತಿಯು||

 

ಹಾಳೂರ ಕೊಂಪೆಯಲು

ಬೇಲೂರ ಕಲೆಯನ್ನು

ಸಾಲಾಗಿ ಹೊನ್ನಹೊತ್ತಾರೆ ಮಿಂಚಿ

ಮಾಲಿಸದಿ ಕೃತ್ತಿಕೆಯು

ತಾಲವೃಂದದಿ ರಯಿಸಿದೆ

ಸೋಲಲ್ಲು ಗೆಲುವನ್ನು ತೋರಿಸುತಲಿ||

 

  • ಅಭಿಜ್ಞಾ ಪಿ ಎಮ್ ಗೌಡ

***

ಕುವೆಂಪು 

 

ಕನ್ನಡದ ಮೇರುಕವಿ

ಹೊನ್ನುಡಿಯ ಬರೆದವರು

ಮುನ್ನುಡಿಲಿ ಕಂಗೊಳಿಸಿ ನಲಿಯುತಿಹರು

ಚಿನ್ನುಡಿಯ ಬಿತ್ತುತ್ತ

ನನ್ನೊಳಗೆ ಮನೆಮಾಡಿ

ತನ್ನಿರುವ ತೋರಿಸಿದ ಕವಿವರ್ಯರು||

 

ಕನ್ನಡತಿ ಜಯದೇವಿ

ನನ್ನೊಡತಿ ಗೆಲುವಿನಲಿ

ಕನ್ನೆನೆಲವ ಕೊಂಡಾಡಿ ಮಿಂಚಿಸಿದರು

ಕನ್ನಡಿಗ ಹೆಮ್ಮೆಯನು

ನನ್ನಿಯೊಳ್ ತೋರಿಸುತ

ರನ್ನಗರುವಂತೆ ನಾಡ ಕುಣಿಸಿದರು ||

 

ಸುಮಕಾವ್ಯ ರಸಋಷಿಯು

ರಮಣೀಯ ನಾಡಿನಲಿ

ವಿಮಳಿನದ ಕಾವ್ಯಗಳ ರಚಿಸುತ್ತಲಿ

ಶಮವನ್ನು ಬಯಸುತಲಿ

ಸಮದರ್ಶಿ ಬರಹಗಳ

ಸುಮಧುರದ ಭಾವದಲಿ ಬಿಂಬಿಸುತಲಿ||

 

ಪಂಪರನ್ನರ ಸಾಲು

ಚಂಪುಕಾವ್ಯ ಕವನ ಕು

ವೆಂಪು ರಚಿತ ಮಲೆಗಳಲಿ ಮಧುಮಗಳು

ತಂಪುತರುತಲಿ ದಿನ

ಕಂಪು ಸೂಸುತ ನಿತ್ಯ

ಗುಂಪಿನಲಿ ಹಾಡುವೆವು ನಾಡಗೀತೆ||

 

ತೋರಿದರು ಸೌಂದರ್ಯ

ಬಾರಿಸುತ ಡಿಂಢಿಮವ

ಸಾರಿದರು ವಿಶ್ವಮಾನವ ಗೀತೆಯ||

ತೂರುತ್ತ ವಿಷಗಾಳಿ

ಬೇರೂರಿ ನವತನವ

ಕರೆದಿಹರು ಬರೆಯುತ್ತ ನವ್ಯತೆಯನು||

 

ಘನತೆಯನು ಕೊಟ್ಟಿಹರು

ಮನದೊಳಗೆ ಮಿಡಿದಿಹರು

ಸನುಮತದಿ ನಾಡಿನಲಿ ಪರಿಪುಷ್ಠಿಯು|

ಜನರಲ್ಲಿ ಬೆಳೆಸಿದರು

ಹನಿಹನಿಯ  ಕನ್ನಡವ

ತನುಮನದ ಸಿರಿಭಾಗ್ಯ ಕರುನಾಡಿದು||

 

ಪಡಕಣವ ಮಾಡುತಲಿ

ಕಡೆದಿಹರು ಸವಿಕಲೆಯ

ಪಡೆದಿಹ ಜ್ಞಾನಪೀಠ ಗರಿಮೆಯನು|

ಸಡಗರದಿ ಬೀಗುತಲಿ

ಪುಡುಕುತಲಿ ಹೊಸತನವ

ಪಡಣಗಳ ತೊಲಗಿಸುತ ಬೆಳೆಸಿದ್ದರು||

 

ಆವುಜವ ಬಾರಿಸುತ

ಸಾವಿರಾರು ಬರಹದಿ

ಪಾವಿತ್ರ್ಯ ಗಳಿಸುತಲಿ ಭಾಷೆಯೊಳಗೆ

ಆವರಿಸಿ ಗಡಿಪೂರ್ತಿ

ಚಾವಟಿಯ ಬೀಸುತಲಿ 

ಕಾವಲನು ಮಾಡುತಿಹ ಕವಿಪುಂಗರು||

 

-ಅಭಿಜ್ಞಾ ಪಿ ಎಮ್ ಗೌಡ

***

ಜಗದ ಕವಿ ಯುಗದ ಕವಿ 

 

ಜಗದ ಕವಿಗಳು ಯುಗದ ಕವಿಗಳು

ನಮ್ಮ ಹೆಮ್ಮೆಯ  ಕುವೆಂಪು

ನಗದ ಮನಸಿಗೆ ನಗುವವುಣಿಸಿದ

ಇವರೆ ಕಿಂದರ ಜೋಗಿಯು ||

 

ಮಲೆಯ ನಾಡಲಿ ಮದುವೆ ಮಗಳಿನ

ಪಾತ್ರ ರಚಿಸಿದ ಕರ್ತೃವು

ನೆನಪು ಮೂಟೆಯ ಕಟ್ಟಿ ದೋಣಿಯ

ದಡವ ಸೇರಿದ ಯಾತ್ರಿಯು ||

 

ರಾಮ ಮಹಿಮೆಯ ಜಗಕೆದರ್ಶನ

ಮಾಡಿ ನಿಂತರು ರಸಋಷಿ

ಜ್ಞಾನ ಪೀಠವ ಪಡೆದ ಮೊದಲಿಗ

ನಾಡ ಕನ್ನಡ ಕಣ್ಮಣಿ ||

 

ಕೊಳಲು ಕೈಯಲಿ ಪಿಡಿದು ನುಡಿಸುತ 

ಮನವ ಸೆಳೆಯುವ ಕಲೆಗಾರ

ಇತ್ತ ದಡದಿಂ ಅತ್ತ ದಡಕೂ

ಜನರ ಸಾಗಿಸೊ ಜಲಗಾರ ||

 

ಯುದ್ಧ ರಂಗದಿ ಪಾಂಚ ಜನ್ಯವ

ನುಡಿಸಿ ಜಯಿಸಿದ ರಣಧೀರ

ಮುದ್ದು ಪುಟ್ಟನು ಬೆರಳು ಕೊರಳಿಗೆ

ಲೋಕಕರ್ಪಿಸೆ ಕಲಿವೀರ ||

 

ರಾಷ್ಟ್ರಕವಿಗಳು ನಮ್ಮಕುಪ್ಪಳ್ಳಿ

ಕುಡಿಯು ಕನ್ನಡ ಕಳಸವು

ಶ್ರೇಷ್ಠ ಕವಿಗಳು ಸಿಹಿಯ ಮೊಗ್ಗೆಯ

ಬಾಡದಂತಹ ಕುಸುಮವು ||

 

-ಶ್ರೀ ಈರಪ್ಪ ಬಿಜಲಿ

 

ಚಿತ್ರ್