ಕುವೆಂಪು ಬರವಣಿಗೆ, ಸಾಹಿತ್ಯ ಮತ್ತು ಕನ್ನಡ ಭಾಷೆ (ಭಾಗ 2)

ಕುವೆಂಪು ಬರವಣಿಗೆ, ಸಾಹಿತ್ಯ ಮತ್ತು ಕನ್ನಡ ಭಾಷೆ (ಭಾಗ 2)

ಕನ್ನಡ ಸಾಹಿತ್ಯ ಲೋಕದ ಸಾಮ್ರಾಟ ಕುವೆಂಪು ಅವರ ಜನ್ಮದಿನದ ಸಂದರ್ಭದಲ್ಲಿ ಬರವಣಿಗೆ - ಸಾಹಿತ್ಯ - ಕನ್ನಡ ಭಾಷೆ ಕುರಿತ ಒಂದಷ್ಟು ಮಾತುಕತೆ. ಬರವಣಿಗೆ ಸಾಹಿತ್ಯವಾಗಿ ಬೆಳವಣಿಗೆ ಹೊಂದುವ ಪ್ರಕ್ರಿಯೆ.

ಸಾಹಿತ್ಯ ಎಂದರೇನು ?:  ಅಕ್ಷರಗಳೇ ? ಪದಗಳೇ ? ವಾಕ್ಯಗಳೇ ? ನಂಬಿಕೆಗಳೇ ? ಭಾವನೆಗಳೇ ? ಅನುಭವಗಳೇ ? ವ್ಯಾಕರಣವೇ ?ಛಂಧಸ್ಸೇ ? ಪ್ರಾಸವೇ ? ರಾಜಕೀಯವೇ ? ಸಾಮಾಜಿಕವೇ ? ಆಧ್ಯಾತ್ಮಿಕವೇ ? ಭಕ್ತಿಯೇ ? ವೈಚಾರಿಕತೆಯೇ ? ಕಲ್ಪನೆಯೇ ? ಪ್ರೀತಿಯೇ ?  ದ್ವೇಷವೇ ? ಅಸೂಯೆಯೇ ? ಇತಿಹಾಸವೇ ? ವರ್ತಮಾನವೇ ? ಭವಿಷ್ಯವೇ ? ಭ್ರಮೆಯೇ ? ವಾಸ್ತವವೇ ? ಸ್ವಾಭಾವಿಕವೇ ? ಬರೆದದ್ದೆಲ್ಲವೂ ?ಗೀಚಿದ್ದೆಲ್ಲವೂ ? ಕಂಡಿದ್ದೆಲ್ಲವೂ ? ನೀತಿಗಳೇ ? ನಿಯಮಗಳೇ ? ಸ್ವಚ್ಚಂದವೇ ? ಸರಳವೇ ?ಸಂಕೀರ್ಣವೇ ? ಸಂಘರ್ಷವೇ ? ಮಾತುಗಳೇ ?  ಮೌನವೇ ? ಶಬ್ದವೇ ? ಸಂಬಂಧಗಳೇ ? ಸಂಸ್ಕಾರಗಳೇ ? ಶಾಸ್ತ್ರಗಳೇ ? ಕವಿತೆಯೇ ? ಕಥೆಯೇ ? ಕಾದಂಬರಿಯೇ ? ನವರಸಗಳ ಪ್ರದರ್ಶನವೇ ? ಅರಿಷಡ್ವರ್ಗಗಳ ಅರಿವಿನ ವ್ಯಕ್ತಪಡಿಸುವಿಕೆಯೇ  ? ಪಂಚೇದ್ರಿಯಗಳ ಸ್ಪರ್ಶದ ಗ್ರಹಿಕೆಯೇ ?...

ಸಾಹಿತ್ಯವೆಂಬುದು, ಭಾಷೆಯ ಒಡಲು, ಭಾವನೆಗಳ ಕಡಲು, ಅಕ್ಷರಗಳ ಮಡಿಲು, ಕಲ್ಪನಾ ಲೋಕದ ಸವಾಲು, ಕ್ರಿಯಾತ್ಮಕತೆಯ ಒಲವು, ಮನುಷ್ಯನ ನಿಲುವು,ಪ್ರಾಸಗಳ ಚೆಲುವು, ವ್ಯಾಕರಣದ ತಿಳಿವು, ‌ಛಂದಸ್ಸಿನ ಅರಿವು, ಮನಸ್ಸುಗಳ ಹರಿವು, ಜ್ಞಾನದ ಸುಳಿವು, ಜೀವಂತಿಕೆಯ ಕುರುಹು. ಈ ಎಲ್ಲದರ ಸಮ್ಮಿಲನ. ಅದೇ ಸಾಹಿತ್ಯದ ಸಂಕಲನ. ನಮ್ಮೆಲ್ಲರ ಶುಭ ಮಿಲನ. ಹಾಗೆಯೇ ಸಾಹಿತ್ಯದ ಶ್ರೇಷ್ಠತೆ ಎಲ್ಲಿ ? ಹೇಗೆ ?

ನೋವು ಮತ್ತು ನೊಬೆಲ್ ಸಾಹಿತ್ಯ ಪ್ರಶಸ್ತಿ. ವಿಶ್ವ ಸಾಹಿತ್ಯ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿ ಎಂದು ಪರಿಗಣಿಸಲ್ಪಟ್ಟಿದೆ. ಹೆಚ್ಚು ಕಡಿಮೆ ಇಲ್ಲಿಯವರೆಗೂ ತನ್ನ ಮೂಲ ಆಶಯದ ಮೌಲ್ಯಗಳನ್ನು ಕಾಪಾಡಿಕೊಂಡು ಬಂದಿದೆ. (ಎಂದಿನಂತೆ ಒಂದಷ್ಟು ವಿವಾದ - ಅಸಮಾಧಾನ ಇದ್ದೇ ಇರುತ್ತದೆ) ನೊಬೆಲ್ ಸಾಹಿತ್ಯ ಪ್ರಶಸ್ತಿ ಪಡೆದ ಕೃತಿಗಳ ಸಾರಾಂಶಗಳನ್ನು ಓದುತ್ತಿರುವಾಗ ಗಮನಸೆಳೆಯುವ ಅಂಶವೆಂದರೆ ಬಹುತೇಕ ರಚನೆಗಳು ಅಂದರೆ ಶೇಕಡಾ 90% ಬರಹಗಳು ಶೋಷಣೆಯ, ಬಡತನದ, ಮೌಡ್ಯದ, ಅರಾಜಕತೆಯ, ದೌರ್ಜನ್ಯದ, ವ್ಯವಸ್ಥೆಯ ವಿರುದ್ಧದ, ಬದುಕಿನ ತಳಮಳಗಳ, ಅಸಹಾಯಕತೆಯ ವಿಷಯಗಳೇ ಕಂಡುಬರುತ್ತವೆ. ರಮ್ಯತೆಯ, ಆಧ್ಯಾತ್ಮದ, ಪ್ರೀತಿ ಪ್ರೇಮದ, ಪ್ರಾಕೃತಿಕ ಸೌಂದರ್ಯದ, ವೈಚಾರಿಕತೆಯ, ಕೌಟುಂಬಿಕ ಸಂಬಂಧಗಳ ವಿಷಯ ತುಂಬಾ ಕಡಿಮೆ ಇದೆ. ಏಕೆ ಈ ಪ್ರಶಸ್ತಿ ಪುರಸ್ಕೃತ ಸಾಹಿತ್ಯವು ಹೆಚ್ಚಾಗಿ ನೋವನ್ನೇ ಅವಲಂಬಿಸಿದೆ ?

ಇಡೀ ವಿಶ್ವದಲ್ಲೇ ಅತಿಹೆಚ್ಚು ಪ್ರಸಾರ, ಜನಪ್ರಿಯತೆ, ಓದುಗರು, ಆರಾಧಕರು, ಅಭಿಮಾನಿಗಳು, ಅನುಯಾಯಿಗಳು ಇರುವುದು ಧಾರ್ಮಿಕ ಸಾಹಿತ್ಯಕ್ಕೆ. ಅತಿಹೆಚ್ಚು ಬರೆಯಲ್ಪಡುವುದು ಪ್ರೀತಿ ಪ್ರೇಮಗಳಿಗೆ ಸಂಬಂಧಿಸಿದ ಸಾಹಿತ್ಯ. ಅದರಲ್ಲೂ ಯುವ ಬರಹಗಾರರ ನೆಚ್ಚಿನ ವಿಷಯವಿದು. ಸಾಹಸ, ಶೃಂಗಾರ, ಹಾಸ್ಯ, ವಿಜ್ಞಾನ ಮುಂತಾದ ಸಾಹಿತ್ಯಗಳು ವಿಶೇಷವಾಗಿ ಅಲ್ಪ ಪ್ರಮಾಣದಲ್ಲಿ ಗುರುತಿಸಲ್ಪಡುತ್ತದೆ. ಆದರೆ, ನೋವಿನ ಸಾಹಿತ್ಯ ಬಹುತೇಕ ಶ್ರೇಷ್ಠ ಸಾಹಿತ್ಯವಾಗಿ ಹೊರಹೊಮ್ಮುತ್ತದೆ - ಕಾಡುತ್ತದೆ - ಪ್ರಶಸ್ತಿ ಪಡೆಯುತ್ತದೆ.  ನೋವು ಪ್ರೀತಿಯಲ್ಲಿ ಇರಬಹುದು, ಯುದ್ದದಲ್ಲಿ ಇರಬಹುದು, ಪ್ರಕೃತಿಯ ನಾಶದಲ್ಲಿ ಇರಬಹುದು, ನೋವಿನ ‌ಅಂತರಾಳ ಎಲ್ಲರನ್ನೂ ತಟ್ಟುತ್ತದೆ.

ನೋವಿನ ತೀವ್ರತೆ ಅಳೆಯುವ ಯಾವುದೇ ಮಾಪನ ಇಲ್ಲ ನಿಜ. ನೋವು ಖಾಸಗಿಯಾಗಿರಬಹುದು, ಸಾಮೂಹಿಕವಾಗಿರಬಹುದು, ವೈಯಕ್ತಿಕವಾಗಿರಬಹುದು, ಸಾರ್ವಜನಿಕವಾಗಿರಬಹುದು ಅದು ವ್ಯಕ್ತಿಯ ಮನಸ್ಸಿನ ಮೇಲೆ ಬೀರುವ ಪರಿಣಾಮಗಳ ಆಧಾರದಲ್ಲಿ ನಿರ್ಧರಿಸಲ್ಪಡುತ್ತದೆ. ಅದನ್ನು ಸ್ವೀಕರಿಸುವ ವ್ಯಕ್ತಿಯ ಮನಸ್ಥಿತಿಯ ಮೇಲೆ ಅವಲಂಭಿಸಿರುತ್ತದೆ. ಆದರೆ ಅದರಿಂದ ಮೂಡುವ ಭಾವನೆಗಳು ಕಲೆ ಸಂಗೀತ ಸಾಹಿತ್ಯ ಮುಂತಾದ ಪ್ರಕಾರಗಳಲ್ಲಿ ಪ್ರಕಟವಾದಾಗ ಓದುವವರು ನೋಡುವವರು ಕೇಳುವವರು ಭಾವ ತೀವ್ರತೆಗೆ ಒಳಗಾಗುತ್ತಾರೆ. 

ಮನುಷ್ಯನ ವ್ಯಕ್ತಿತ್ವದಲ್ಲಿ ಆತನ ಜೀವಿತ ಕಾಲದಲ್ಲಿ ಅನೇಕ ಘಟನೆಗಳು ಸಂಭವಿಸಿ ಎಲ್ಲಾ ರೀತಿಯ ಭಾವನೆಗಳನ್ನು ಹೊಮ್ಮಿಸುತ್ತದೆ. ಅದರಲ್ಲಿ ನೋವಿನ ನೆನಪು ಮಾತ್ರ ಇತರ ಭಾವನೆಗಳ ಮೇಲೆ ಸವಾರಿ ಮಾಡುತ್ತದೆ. ಬೇಕಾದರೆ ಒಮ್ಮೆ ಅವಲೋಕಿಸಿ ನೋಡಿ ಪ್ರೀತಿ ಸಂತೋಷ ಕೋಪ ಭಯ ಮುಂತಾದ ಇತರ ಭಾವನೆಗಳು ಇದ್ದರೂ ನೋವಿನ ಘಟನೆಗಳು ಮಾತ್ರ ಬೇಡ ಬೇಡವೆಂದರೂ ಮತ್ತೆ ಮತ್ತೆ ಕಾಡುತ್ತಲೇ ಇರುತ್ತವೆ. ಅದನ್ನೇ ಚಿಂತೆ ಎಂದು ಲೋಕದ ಆಡು ಭಾಷೆಯಲ್ಲಿ ಕರೆಯಲಾಗುತ್ತದೆ. ಚಿತೆ (ಬೆಂಕಿ) ನಮ್ಮನ್ನು ಒಮ್ಮೆ ಸುಟ್ಟರೆ ಚಿಂತೆ ಇಡೀ ಬದುಕಿನ ಪ್ರತಿಕ್ಷಣವನ್ನು ಸುಡುತ್ತಲೇ ಇರುತ್ತದೆ. 

ಹಲವಾರು ಹುಟ್ಟುಗಳ ನಡುವೆ ಒಂದು ಸಾವು, ಎಷ್ಟೋ ಸಂಬಂಧಗಳ ನಡುವೆ ಒಂದು ವಿರಹ, ಅನೇಕ ಲಾಭಗಳ ನಡುವೆ ಒಂದು ನಷ್ಟ, ಅಪಾರ ಹೊಗಳಿಕೆಗಳ ನಡುವೆ ಒಂದು ತೆಗಳಿಗೆ ನಮ್ಮನ್ನು ಅಲ್ಲಾಡಿಸಿಬಿಡುತ್ತದೆ. ಇರುವುದಕ್ಕಿಂತ ಇಲ್ಲದಿರುವುದರ ಕಡೆಯೇ ಮನಸ್ಸು ಸದಾ ಯೋಚಿಸುತ್ತದೆ.

ಆ ಕಾರಣದಿಂದಾಗಿಯೇ ನೋವಿನ ಸಾಹಿತ್ಯ ಓದುಗರೆದೆಯಲ್ಲಿ ಸೃಷ್ಟಿಸುವ ತಳಮಳ ಮತ್ತು ಅದರಿಂದ ಏಳುವ ಮಾನಸಿಕ ಅಲೆಗಳು ಅನಂತರದ ಪರಿಣಾಮಗಳು ಗಾಢ ಅನುಭವ ನೀಡುತ್ತದೆ. ನಮ್ಮ ವೈಯಕ್ತಿಕ ಬದುಕಿನೊಂದಿಗೆ ಸಮೀಕರಣಗೊಳ್ಳುತ್ತದೆ. ದೀರ್ಘಕಾಲ ಉಳಿಯುತ್ತದೆ. ಹಾಗೆಂದ ಮಾತ್ರಕ್ಕೆ ಬೇರೆ ಪ್ರಕಾರದ ಸಾಹಿತ್ಯ ಈ ಗುಣಲಕ್ಷಣಗಳನ್ನು ಹೊಂದಿಲ್ಲ ಎಂಬ ಅಭಿಪ್ರಾಯಕ್ಕೆ ಬರಬಾರದು. ಅದು ಓದುಗರ ಆಸಕ್ತಿಯನ್ನು ಅವಲಂಬಿಸಿರುತ್ತದೆ. ಅವರ ವಯಸ್ಸು ಅವರ ಬದುಕಿನ ಸ್ಥಿತಿ ಗತಿಗಳು, ಬೆಳೆದ ಪರಿಸರ ಎಲ್ಲವೂ ಇದನ್ನು ನಿರ್ಧರಿಸುತ್ತದೆ. ಆದರೆ ಒಟ್ಟಾರೆ ನೋವಿನ ಸಾಹಿತ್ಯ ಬರಹಗಳಲ್ಲಿ ಸೃಷ್ಟಿಸುವ ತವಕ ತಲ್ಲಣಗಳು ಇತರೆ ಸಾಹಿತ್ಯ ಪ್ರಕಾರಗಳಿಗಿಂತ ಹೆಚ್ಚು ಪರಿಣಾಮಕಾರಿ ಎಂಬುದು ಸಾಮಾನ್ಯ ಸ್ಥಿತಿಯಲ್ಲಿ ಕಂಡುಬರುತ್ತದೆ. ನೋವಿನ ಮನಸ್ಥಿತಿಯಲ್ಲಿ ಇದ್ದವರಿಗಂತೂ ಇನ್ನೂ ಹೆಚ್ಚು ಕಾಡುತ್ತದೆ. ಓದುತ್ತಾ ಓದುತ್ತಾ ಕಣ್ಣೀರಾಗುತ್ತಾರೆ.

ಕಾಡದಿರು ನೀನು

ನೋವೆಂಬ ಮಾಯೆ,

ಎಷ್ಟೊಂದು ಹಿಂಸೆ

ನೆನಪುಗಳ ಭಾರ,

ಮುಂದಕ್ಕೂ ಚಲಿಸಲು ಬಿಡದೆ,

ಹಿಂತಿರುಗಲೂ ಅವಕಾಶ ನೀಡದೆ,

ಕಾಡದಿರು ನೀನು ನೋವೆಂಬ ಮಾಯೆ...

ಸಾಹಿತ್ಯವನ್ನು ಅತ್ಯಂತ ವಿಶಾಲ ಅರ್ಥದಲ್ಲಿ ಗ್ರಹಿಸಬೇಕು. ಭಾಷೆಯ ಮೇಲಿನ ಹಿಡಿತ, ವಿಷಯಗಳ ವ್ಯಾಪ್ತಿ, ಅದು ಸಾಹಿತ್ಯ ಕ್ಷೇತ್ರ ಮತ್ತು ಜನಸಾಮಾನ್ಯರಲ್ಲಿ ಬೀರಿರುವ ಪ್ರಭಾವ, ಎಷ್ಟು ದೀರ್ಘಕಾಲದಿಂದ ಅದು ಉಳಿದು ಬಂದಿದೆ, ಪ್ರಶಸ್ತಿ ಮಾನದಂಡಗಳಲ್ಲಿ ಅದಕ್ಕಿರುವ ಸ್ಥಾನ, ಓದುವಾಗ ಆ ಸಾಹಿತ್ಯ ಓದುಗರ ಮನದಲ್ಲಿ ಮೂಡಿಸುವ ಭಾವ ತರಂಗಗಳು,  ಸಾಹಿತ್ಯ ಪ್ರಕಾರಗಳು, ಭಾರತೀಯ ಮತ್ತು ವಿಶ್ವದ ಇತರ ಭಾಷೆಗಳ ಸಾಹಿತ್ಯದ ಆಳ ಅಗಲಗಳ ಮೂಲದಿಂದ  ಪರಿಶೀಲನೆ, ಸಾಹಿತ್ಯದ ದೂರದೃಷ್ಟಿ, ಮಾನವೀಯ ಸ್ಪಂದನೆ, ಸಾಹಿತಿಯ ಒಟ್ಟು ವ್ಯಕ್ತಿತ್ವ ಮುಂತಾದ ಎಲ್ಲವನ್ನೂ ಒಳಗೊಂಡಿರಬೇಕು.

ದಾಖಲಾತಿಯ ಸಾಹಿತ್ಯ, ಹೊಗಳಿಕೆಯ ಸಾಹಿತ್ಯ, ಪೌರಾಣಿಕ ಸಾಹಿತ್ಯ, ಐತಿಹಾಸಿಕ ಸಾಹಿತ್ಯ, ಭಕ್ತಿ ಸಾಹಿತ್ಯ, ದಾಸ ಸಾಹಿತ್ಯ, ವಚನ ಸಾಹಿತ್ಯ, ನವ್ಯ ಸಾಹಿತ್ಯ, ನವೋದಯ ಸಾಹಿತ್ಯ, ನವ್ಯೋತ್ತರ ಸಾಹಿತ್ಯ, ಬಂಡಾಯ ಸಾಹಿತ್ಯ, ಮಹಿಳಾ ಸಾಹಿತ್ಯ, ಶಿಶು ಸಾಹಿತ್ಯ, ಜಾನಪದ ಸಾಹಿತ್ಯ, ಆಧ್ಯಾತ್ಮಿಕ ಸಾಹಿತ್ಯ, ವಿಜ್ಞಾನ ಸಾಹಿತ್ಯ, ಹಾಸ್ಯ ಸಾಹಿತ್ಯ ಮುಂತಾದ ಎಲ್ಲಾ ಸಾಹಿತ್ಯ ಪ್ರಕಾರಗಳನ್ನು ಒಳಗೊಂಡು…

ಕಥೆ, ಕಾದಂಬರಿ, ಕಾವ್ಯ, ನಾಟಕ, ಪ್ರಬಂಧ, ಸಂಶೋಧನೆ, ಅನುವಾದ, ವಿಮರ್ಶೆ ಇತ್ಯಾದಿ ಎಲ್ಲವೂ ಸೇರಿ, ಕುವೆಂಪು ಅವರು ಕನ್ನಡ ಸಾಹಿತ್ಯ ಕ್ಷೇತ್ರದ ಮೇರು ಪರ್ವತ ಅಗುವುದು ಇಲ್ಲಿಯೇ. ಸಾಂಕೇತಿಕವಾಗಿ ಹೇಳುವುದಾದರೆ, ರಾಮಾಯಣ ದರ್ಶನಂ ಎಂಬ ಮಹಾಕಾವ್ಯ, ಜಯ ಭಾರತ ಜನನಿಯ ತನುಜಾತೆ ಎಂಬ ನಾಡಗೀತೆ, ನೇಗಿಲ ಯೋಗಿ ಎಂಬ ರೈತ ಗೀತೆ, ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೇ, ದೋಣಿ ಸಾಗಲಿ ಮುಂದೆ ಹೋಗಲಿ, ಎಲ್ಲಾದರು ಇರು ಎಂತಾದರೂ ಇರು, ಭಾರಿಸು ಕನ್ನಡ ಡಿಂಡಿಮವ ಎಂಬ ಭಾಷಾ ಮಹತ್ವದ ರಚನೆಗಳು, ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡತಿ ಎಂಬ ಕಾದಂಬರಿಗಳು, ಶೂದ್ರ ತಪಸ್ವಿ, ಬೆರಳ್ಗೆ ಕೊರಳ್ ನಾಟಕಗಳು, ಎಲ್ಲಕ್ಕಿಂತ ಹೆಚ್ಚಾಗಿ " ವಿಶ್ವ ಮಾನವ ಪ್ರಜ್ಞೆ " ಎತ್ತಿ ಹಿಡಿದ ಮಹಾನ್ ಸಾಹಿತಿ ಕುವೆಂಪು. 

ಕನ್ನಡ ಭಾಷೆಯ ಕುರಿತ ಅವರ ಪ್ರೀತಿಯ ಸಾಲುಗಳು...

ಕನ್ನಡ...

ಮಂತ್ರ ಕಣಾ,

ಶಕ್ತಿ ಕಣಾ,

ತಾಯಿ ಕಣಾ,

ದೇವಿ ಕಣಾ,

ಬೆಂಕಿ ಕಣಾ,

ಸಿಡಿಲು ಕಣಾ,

ಕಾವ ಕೊಲುವ ಒಲವ ಬಲವ,

ಪಡೆದ ಚಲದ ಚಂಡಿ ಕಣಾ....

(ಮುಕ್ತಾಯ)

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ