ಕುಶಲಿ ಬೇಟೆಗಾರ ಈ ಜೇಡ !

ಕುಶಲಿ ಬೇಟೆಗಾರ ಈ ಜೇಡ !

ಈ ಭೂಮಿಯ ಮೇಲೆ ಸುಮಾರು ೪೦ ಸಾವಿರ ಬಗೆಯ ಜೇಡಗಳು ಕಂಡು ಬಂದಿವೆ. ಈ ಜೇಡಗಳು ಅಂಟಾರ್ಟಿಕವನ್ನು ಹೊರತು ಪಡಿಸಿ ಉಳಿದಂತೆ ಸರ್ವವ್ಯಾಪಿ. ಮೊಟ್ಟಮೊದಲ ಜೇಡ ಈ ಭೂಮಿಯ ಮೇಲೆ ಕಂಡುಬಂದದ್ದು ೩೮೬ ದಶಲಕ್ಷ ವರ್ಷಗಳ ಹಿಂದೆ. ಈಗ ನಮ್ಮ ಭೂಮಿಯ ಮೇಲೆ ಕಾಣುತ್ತಿರುವ ಜೇಡಗಳ ಸಂತತಿ ೨೦೦ ದಶಲಕ್ಷ ವರ್ಷಗಳಿಂದ ವಾಸಿಸುತ್ತಿವೆ. 

ಜೇಡಗಳು ಎಂಟು ಕಾಲುಗಳನ್ನು ಹೊಂದಿದ್ದು ಬೇರೆ ಕೀಟಗಳಂತೆ ಇವುಗಳಿಗೆ ಉದ್ದನೆಯ ಮೀಸೆಗಳಿರುವುದಿಲ್ಲ. ಇವುಗಳಿಗಿರುವ ವಿಶೇಷ ಗುಣವೆಂದರೆ ಬಲೆಯನ್ನು ನೇಯುವುದು. ಬಹಳಷ್ಟು ಜೇಡಗಳು ಆಕ್ರಮಣಕಾರಿಯಾಗಿದ್ದು, ಮಾಂಸಹಾರಿಗಳಾಗಿವೆ. ಆದರೆ ಇತ್ತೀಚೆಗೆ ಅಂದರೆ ೨೦೦೮ರಲ್ಲಿ ಮಧ್ಯ ಅಮೇರಿಕಾದ ಕೆಲವು ಪ್ರಾಂತ್ಯಗಳಲ್ಲಿ ಕೆಲವು ಸಸ್ಯಾಹಾರಿ ಜೇಡಗಳನ್ನು ಗುರುತಿಸಿದ್ದಾರೆ. 

ಜೇಡ ಅತ್ಯಂತ ಕುಶಲಿ ಬೇಟೆಗಾರ ! ಇದು ತನ್ನ ಆಹಾರಕ್ಕಾಗಿ ಬೇಟೆಯಾಡಲು ವಿಶೇಷ ತಂತ್ರವನ್ನು ಬಳಸುತ್ತದೆ. ತಾನು ಬಯಸಿದ ಬೇಟೆಯನ್ನು ತಾನೇ ನೇಯ್ದು ಬಲೆಯಲ್ಲಿ ಬೀಳಿಸಿ ಅದನ್ನು ನಿಸ್ಸಾಹಯಕಗೊಳಿಸಿ ತಿನ್ನುತ್ತದೆ. ಸಾಮಾನ್ಯವಾಗಿ ಜೇಡಗಳು ಒಂಟಿಯಾಗಿಯೇ ಜೀವಿಸುತ್ತವೆ. ಎಲ್ಲೋ ಕೆಲವು ಮಾತ್ರ ಒಗ್ಗೂಡಿ ಬಾಳುತ್ತವೆ. ಇವುಗಳ ಜೀವಿತಾವಧಿ ಸುಮಾರು ೨ ವರ್ಷಗಳು. ಆದರೆ ಕೆಲವು ಜೇಡಗಳು ೨೦ ವರ್ಷಗಳವರೆಗೆ ಬದುಕಿದ ನಿದರ್ಶನಗಳಿವೆ. ಬಹಳಷ್ಟು ಜೇಡಗಳು ಅಪಾಯಕಾರಿಯಲ್ಲ. ಆದರೆ ಕೆಲವೊಂದು ಜಾತಿಯ ಜೇಡಗಳು ವಿಷಕಾರಿಗಳು. ಮನುಷ್ಯನನ್ನು ಕಚ್ಚಿದರೆ ಸಾವು ನಿಸ್ಸಂದೇಹ ! ವಿಷಕಾರಿಗಳಾಗಿರುವ ಇಂತಹ ಕೆಲವು ಕಪ್ಪು ಹಾಗೂ ಕಂದು ಜೇಡಗಳು ಅಮೇರಿಕಾದಲ್ಲಿ ಕಂಡು ಬಂದಿವೆ. ಪ್ರತಿ ವರ್ಷ ಅಮೇರಿಕಾದಲ್ಲಿ ಜೇಡದ ವಿಷದಿಂದ ಸಾಯುವವರ ಸಂಖ್ಯೆ ಗಣನೀಯ. ಆದ್ದರಿಂದಲೇ ಅಮೇಕನ್ನರಿಗೆ ಜೇಡಗಳನ್ನು ಕಂಡರೆ ವಿಶೇಷ ಭಯ.

ಜೇಡಗಳನ್ನು ಚೇಳುಗಳಿಗೆ ಹೋಲಿಸಬಹುದಾದರೂ ವ್ಯತ್ಯಾಸಗಳನ್ನು ಸ್ಪಷ್ಟವಾಗಿ ಗುರುತಿಸಬಹುದು. ಚೇಳಿಗೆ ಆರು ಕಾಲುಗಳಿದ್ದರೆ ಜೇಡಕ್ಕೆ ಎಂಟು ಕಾಲುಗಳು. ಜೇಡಕ್ಕೆ ಕಿರಿದಾದ ಅನ್ನನಾಳವಿದ್ದು ಅದು ಕೇವಲ ದ್ರವಾಹಾರವನ್ನು ಮಾತ್ರ ಸ್ವೀಕರಿಸಬಲ್ಲದು. ಪ್ರತಿ ಜೇಡಕ್ಕೆ ನಾಲ್ಕು ಜತೆ ಕಣ್ಣುಗಳಿರುತ್ತವೆ. ಇವುಗಳಲ್ಲಿ ಪ್ರಧಾನ ಕಣ್ಣುಗಳು ಇದರ ತಲೆಯ ಮೇಲೆ ಕಂಡು ಬರುತ್ತವೆ. ಇದರ ಉಳಿದ ಕಣ್ಣುಗಳು ಕೇವಲ ಬೆಳಕನ್ನು ಗ್ರಹಿಸುವುದಕ್ಕೆ ಮಾತ್ರ ಬಳಸಲ್ಪಡುತ್ತವೆ.

ಜೇಡಗಳಿಗೆ ಸಮಸ್ಥಿತಿಯನ್ನು ಕಾಯ್ದುಕೊಳ್ಳುವ ಹಾಗೂ ವೇಗವನ್ನು ಹೆಚ್ಚಿಸಿಕೊಳ್ಳುವ ಸಾಮರ್ಥ್ಯವಿಲ್ಲ. ಆದರೆ ಕೇವಲ ತನ್ನ ಕಣ್ಣುಗಳಿಂದಲೇ ತನ್ನ ಮುಂದಿನ ಕಾರ್ಯತಂತ್ರವನ್ನು ರೂಪಿಸಿಕೊಳ್ಳುತ್ತವೆ. ಇವುಗಳು ತಮ್ಮ ಕಾಲುಗಳ ಚಲನೆಗೆ ‘ದ್ರವಚಾಲಿತ ಒತ್ತಡದ' ತಂತ್ರವನ್ನು ಬಳಸುತ್ತವೆ. ಇವು ನೇಯಬೇಕಾದ ಬಲೆಗಾಗಿ ಸುರಿಸುವ ಜೊಲ್ಲನ್ನು ಆರು ವಿಶೇಷ ಗ್ರಂಥಿಗಳು ಉತ್ಪಾದಿಸುತ್ತವೆ.

ಕೆಲವು ಹಾರುವ ಜೇಡಗಳು ತಮ್ಮ ಎತ್ತರದ ಸುಮಾರು ೫೦ ಪಟ್ಟು ಹೆಚ್ಚು ಎತ್ತರಕ್ಕೆ ಹಾರಬಲ್ಲವು. ವಿಶೇಷವೆಂದರೆ, ಗಂಡು ಜೇಡಗಳಿಗೆ ಹೆಣ್ಣು ಜೇಡಗಳನ್ನು ಕಂಡರೆ ವಿಶೇಷ ಪ್ರಾಣಭಯ. ಏಕೆ ಗೊತ್ತೇ? ಹೆಣ್ಣು ಜೇಡಗಳು ಗಂಡು ಜೇಡಗಳನ್ನು ತಿಂದು ಬಿಡಬಲ್ಲವು. 

ಅತ್ಯಂತ ಚಿಕ್ಕ ಜೇಡ ಅಂದರೆ ಕೇವಲ ೦.೩೭ ಮಿ ಮೀಟರ್ ಉದ್ದವಿರುತ್ತದೆ. ಕೆಲವು ದೊಡ್ದ ಜೇಡಗಳು ೨೫೦ ಮಿಲಿಮೀಟರ್ ಅಂದರೆ ೨೫ ಸೆಂಟಿಮೀಟರ್ ಉದ್ದವಾಗಿರುತ್ತವೆ. ‘ಟರಾಂಟುಲಾ’ ಎಂಬ ವಿಶೇಷ ಜಾತಿಯ ಜೇಡ ಕಾಂಬೋಡಿಯಾ ದೇಶದಲ್ಲಿ ತಿನ್ನುವ ವಿಶೇಷ ಖಾದ್ಯವಂತೆ.!

“ತೋಳ ಜೇಡ" (Wolf Spider) ಎಂಬ ವಿಶೇಷ ಜಾತಿಯ ಜೇಡ ಸುಮಾರು ಒಂದೂವರೆ ಇಂಚು ಉದ್ದವಿದ್ದು ತನ್ನ ಬೇಟೆಯನ್ನು ಬೆನ್ನಟ್ಟಿ ಹಿಡಿದು ತಿನ್ನಬಲ್ಲದು. (ಚಿತ್ರ ೧) ಕೆಲವು ಜೇಡಗಳಂತೂ ತಾವು ನೇಯ್ದ ಬಲೆಯಲ್ಲಿಯೇ ಸತ್ತಂತೆ ನಟಿಸಿ, ಬೇಟೆ ಬಂದಾಗ ತಕ್ಷಣವೇ ದಾಳಿ ನಡೆಸಿ ತಿಂದು ಬಿಡುತ್ತವೆ. 

ಜೇಡಗಳ ವಾಸಸ್ಥಳ ಎಲ್ಲಿಯಾದರೂ ಆಗಬಹುದು. ಮರದ ರಾಶಿ, ಕಲ್ಲುಮಣ್ಣುಗಳ ರಾಶಿ, ಟೊಳ್ಳಾದ ಮರ, ಗ್ಯಾರೇಜ್, ಜೋಪಡಿಗಳು, ವಿಶೇಷವಾಗಿ ಬಹಳ ಕಾಲ ಉಪಯೋಗಿಸದೇ ಇರುವ ಸ್ಥಳಗಳು ಇವುಗಳ ಬಹುಮುಖ್ಯ ನೆಲೆ. ಮನೆಗಳಲ್ಲಿ, ತೋಟಗಳಲ್ಲಿ, ಕಾಡುಗಳಲ್ಲಿರುವ ಜೇಡಗಳು ತಮ್ಮ ಆಹಾರಕ್ಕಾಗಿ ಕೀಟಗಳನ್ನು ತಿನ್ನುವುದರಿಂದ ಇವು “ಜೈವಿಕ ಕೀಟ ನಿಯಂತ್ರಕ"ಗಳಂತೆ ವರ್ತಿಸುತ್ತವೆ.

“ಏಡಿ ಜೇಡ" ಎಂಬ ವಿಶೇಷ ಜಾತಿಯ ಜೇಡ ಉದ್ದವಾದ ಮುಂಗಾಲುಗಳನ್ನು ಹೊಂದಿದ್ದು ಬೇಟೆಗಾಗಿ ಹೂವುಗಳ ಬಳಿ ಅವಿತು ಕೂತಿರುತ್ತವೆ. ಮಕರಂದ ಹೀರಲು ಕೀಟಗಳು ಹೂವಿನ ಬಳಿ ಬಂದಾಗ ಸದ್ದಿಲ್ಲದೆ ಬೇಟೆಯನ್ನು ಹಿಡಿದು ತಿಂದು ಬಿಡುತ್ತದೆ. (ಚಿತ್ರ ೨)

-ಕೆ. ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ