ಕುಶಾ ಕೀ ಕಹಾನಿ
ಐತಿಚಂಡ ರಮೇಶ ಉತ್ತಪ್ಪ ಅವರ ‘ಕುಶಾ ಕೀ ಕಹಾನಿ’ ಕೃತಿಯು ಲೇಖನಗಳ ಸಂಕಲನ. ಈ ಕೃತಿಗೆ ಬೆನ್ನುಡಿ ಬರೆದಿರುವ ಕವಿರಾಜ್ ಅವರು, ಕುಶಾ ಬರೀ ಕತೆಯಷ್ಟೇ ಹೇಳದೆ ನಾವೆಲ್ಲ ಬಲ್ಲ ದಸರಾ ಪಡೆಯ ಅಭಿಮನ್ಯು, ಬಲರಾಮ ಮುಂತಾದವರ ಕೆಲವು ಮಜಾ ತರುವ ಘಟನೆಗಳನ್ನು ವಿವರಿಸುವಾಗ, ಯಾರೋ ನಮ್ಮವರ ಬಗ್ಗೆಯೇ ಗಾಸಿಪ್ ಮಾಡಿದಂತೆ ಕಿವಿ, ಮನಸ್ಸುಗಳಿಗೆ ಆಪ್ತವೆನ್ನಿಸುತ್ತದೆ. ನಿಜವಾಗಿಯೂ ಆನೆಗಳಿಗೆ ಅದರಲ್ಲೂ ಕಥಾನಾಯಕ ಕುಶನಿಗೆ ಇಷ್ಟು ಹಾಸ್ಯ ಪ್ರಜ್ಞೆ ಇದೆಯೋ ಗೊತ್ತಿಲ್ಲ. ಆದರೆ ಕುಶನ ಮಾತು ಕಟ್ಟುತ್ತಾ ಹೋಗಿರುವ ವಿಚಾರಗಳಲ್ಲಿ ಸಾಕಷ್ಟು ಹಾಸ್ಯವಿದೆ’ ಎಂದು ಪ್ರಶಂಸಿಸಿದ್ದಾರೆ.
ಕೊಡಗಿನ ದುಬಾರೆ ಶಿಬಿರದ ಕುಶ ಎಂಬ ಆನೆಯ ಅತೀ ವಿಶಿಷ್ಟ ನೈಜ ಪ್ರೇಮಕಥೆ ಹೇಳ ಹೊರಟ ಐತಿಚಂಡ ರಮೇಶ್ ಉತ್ತಪ್ಪ ಒಂದು ರೀತಿಯಲ್ಲಿ ದೈತ್ಯ ದೇಹಿಯ ಪುಟ್ಟ ಕಣ್ಣಿನಿಂದ ಬರೀ ಒಂದು ಪ್ರೇಮಕಥೆಯನ್ನಷ್ಟೇ ಹೇಳದೆ ಕಾಡಿನ ಆನೆಗಳ ಸ್ವಚ್ಛಂದ ಬದುಕು, ಆ ಜಗತ್ತಿನ ರೀತಿ ರಿವಾಜುಗಳು, ಶಿಬಿರದ ಆನೆಗಳ ಬಂಧನದ ಬದುಕು, ದಿನಚರಿಯೊಂದಿಗೆ ಆನೆ ಮತ್ತು ಮನುಷ್ಯನ ಸಂಘರ್ಷ, ಸಾಮರಸ್ಯ ಎಲ್ಲವನ್ನೂ ಹೂರಣವಾಗಿ ಒಳಗಿಟ್ಟುಕೊಂಡ ಹೋಳಿಗೆಯನ್ನೇ ತಟ್ಟಿ ಕೊಟ್ಟಿದ್ದಾರೆ. ಹೃದಯಸ್ಪರ್ಶಿ ಕಥೆಯ ಜೊತೆ ಆನೆಗಳ ಜಗತ್ತಿನ ನಮಗೆ ಗೊತ್ತಿಲ್ಲದ ಅದೆಷ್ಟೋ ಸ್ವಾರಸ್ಯಕರ ಸಾಕಷ್ಟು ವಿಚಾರಗಳನ್ನು ಕುಶನ ಮಾತಿನಲ್ಲೇ ಅಲ್ಲಲ್ಲಿ ಕಟ್ಟಿಕೊಡುತ್ತ ಲೇಖಕರು ಪದೇ ಪದೇ ಮುದ, ಅಚ್ಚರಿ, ಸಂಕಟಗಳನ್ನು ಮೂಡಿಸುತ್ತಾರೆ. ಅಲ್ಲಲ್ಲಿ ಪ್ರೀತಿಗಾಗಿ ಹಾತೊರೆವ ಕುಶ - ಸುಂದ್ರಿಯರ ಕಾತುರ, ಭೇಟಿ, ಸರಸ, ಮುನಿಸು, ವಿರಹ ಎಲ್ಲಾ ಥೇಟ್ ನಮ್ಮದೇ, ನಮ್ಮಂತೆಯೇ ಅನಿಸಿ ಮನಸು ಬೆಚ್ಚಗಾಗುತ್ತದೆ. ಎಂದಿದ್ದಾರೆ ಸಿನೆಮಾ ಸಾಹಿತಿ ಕವಿರಾಜ್.
ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರಾದ ವಿನೋದಕುಮಾರ್ ಬಿ.ನಾಯ್ಕ್ ಇವರು ಈ ಕೃತಿಯನ್ನು ಮೆಚ್ಚಿಕೊಳ್ಳುತ್ತಾ ಕೆಲವೊಂದು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಅದರ ಆಯ್ದ ಭಾಗ ನಿಮ್ಮ ಓದಿಗಾಗಿ… “ಇದು ಕುಶ ಎನ್ನುವ ಆನೆಯ ಕತೆಯಲ್ಲ. ಇದು ಇಡೀ ಮನುಕುಲದ ಮನವನ್ನೇ ಕಲುಕುವ ಅತ್ಯಂತ ಅಪರೂಪದ ಕಥಾಸಾಕ್ಷ್ಯ. ಕಾಡಿನಲ್ಲಿದ್ದ ಆನೆ ಕುಶ, ಜನರಿಗೆ ತೊಂದರೆ ಕೊಡುತ್ತಿದ್ದ ಎನ್ನುವ ಕಾರಣಕ್ಕೆ ಆತನನ್ನು ಹಿಡಿದು ತಂದು ಶಿಬಿರದಲ್ಲಿಟ್ಟು ಪಳಗಿಸಿ ನಾಡಿನ ಆನೆ ಮಾಡಿರುತ್ತಾರೆ. ಪ್ರೇಮಲೋಕದ ಕಾದಂಬರಿಯಂತೆ ಕಾಣುವ ಈ ನೈಜ ಕಾದಂಬರಿ ಕಾಡಿನಂತೆ ಅನೇಕ ವಿಸ್ಮಯಗಳ, ಮಾಹಿತಿಗಳ ಕಣಜವನ್ನೇ ನಮ್ಮೆದುರಿಗೆ ತೆರೆದಿಡುತ್ತಾ ಹೋಗುತ್ತದೆ. ಆದ್ದರಿಂದ ಇದು ಬರೀ ಪ್ರೇಮ ಕತೆ ಖಂಡಿತಾ ಅಲ್ಲ, ಇದೊಂದು ಅತ್ಯಂತ ಅಪರೂಪದ ಮನೋವಿಜ್ಞಾನ ಹಾಗೂ ವನ್ಯಜೀವಿ ವಿಜ್ಞಾನದ ಅಧ್ಯಯನಯೋಗ್ಯ ಕೃತಿ. ಇದರಲ್ಲಿ ಎಲ್ಲವೂ ಇದೆ.
ಪ್ರೇಮಕತೆಯನ್ನು ಹೇಳುತ್ತಾ ಕೊಡಗಿನ ಕಾಡಿನ ಬಗ್ಗೆ, ಅಲ್ಲಿನ ಜೀವನ ಹಾಗೂ ಅಲ್ಲಿ ನಡೆಯುತ್ತಿರುವ ಆನೆ-ಮಾನವ ಸಂಘರ್ಷದ ಬಗ್ಗೆ ಉತ್ತಪ್ಪ ವಿವರಿಸಿದ್ದಾರೆ. ಮನುಷ್ಯ ಹೇಗೆ ತನ್ನ ಜಾಗಕ್ಕೆ ಬೇಲಿ ಹಾಕಿಕೊಂಡಿರುತ್ತಾನೆಯೋ ಅದೇ ರೀತಿ ಆನೆಗಳೂ ತಂತಮ್ಮ ಜಾಗ (ಕಾಡು) ಕ್ಕೆ ಬೇಲಿ ಹಾಕಿಕೊಳ್ಳಬಹುದೇ ಎನ್ನುವ ಮೂಲಕ ಸಂಘರ್ಷದ ಪರಾಕಾಷ್ಟೆಯ ಆತಂಕ ವ್ಯಕ್ತಪಡಿಸುತ್ತಾರೆ. ಆನೆಯ ಸೂಕ್ಷ್ಮ ಭಾಗ ಎಂದರೆ ಅದರ ಕಣ್ಣು, ಸೊಂಡಿಯು ಹಾಗೂ ತಲೆ. ಮಾವುತರು ಆನೆಗಳನ್ನು ಹೆದರಿಸಲು ಈ ಭಾಗಗಳಿಗೆ ಆಗಾಗ ಪೆಟ್ಟು ಕೊಡುತ್ತಾರೆ ಎನ್ನುವ ಮೂಲಕ ದೈತ್ಯ ದೇಹಿಯ ಸೂಕ್ಷ್ಮ ವಿಚಾರಗಳ ಮಾಹಿತಿ ಕೊಡುತ್ತಾರೆ. ಸಾಕಾನೆ ಶಿಬಿರದಲ್ಲಿ ಇರುವ ಒಂದೊಂದು ಆನೆಯದ್ದೂ ಒಂದೊಂದು ಕತೆ ಎನ್ನುತ್ತಾ ಸೆರೆ ಸಿಕ್ಕಿರುವ ಆನೆಗಳ ನಡುವೆ ಯಾವ ರೀತಿಯ ಮಾತುಕತೆ ನಡೆಯುತ್ತಿರಬಹುದು ಎಂದು ನಾವೂ ತಲೆಕೆಡಿಸಿಕೊಳ್ಳುವಂತೆ ವಿಷಯ ಕಟ್ಟಿಕೊಡುತ್ತಾರೆ. ದಸರಾ ವೈಭೋಗದ ಬಗ್ಗೆ, ಅಲ್ಲಿ ಆನೆಗಳಿಗೆ ಸಿಗುವ ರಾಜೋಪಚಾರದ ಬಗ್ಗೆ ವಿವರಿಸುತ್ತಲೇ ಆನೆಗಳಿಗೆ ಕಾಂಕ್ರೀಟ್ ರಸ್ತೆಯಲ್ಲಿ ನಡೆಯುವ ಸಂಕಟವನ್ನೂ ಬರೆಯುತ್ತಾರೆ. ದೇವಸ್ಥಾನದಲ್ಲಿ ದೇವರು ಎಂದು ಕೈಮುಗಿಯುವ ಭಕ್ತರ ನಡುವೆಯೇ ಅವರು ಕೊಡುವ ಬಾಳೆ, ತೆಂಗಿನ ಕಾಯಿ ತಿಂದು ಆಗುವ ಅಜೀರ್ಣವನ್ನೂ, ಕೀಟಾಣುಗಳು ಹೊಟ್ಟೆಗೆ ಸೇರುವ ಸಂಕಟವನ್ನೂ ಓದುಗರಿಗೆ ತೆರೆದಿಡುತ್ತಾರೆ.”
ಲೇಖಕರಾದ ರಮೇಶ್ ಉತ್ತಪ್ಪ ಅವರು “ಕುಶನನ್ನು ಆನೆ ಎಂದು ನೋಡಬೇಡಿ. ಅದನ್ನು ಹೊರತುಪಡಿಸಿದರೆ ಆತನ ಪ್ರೀತಿ, ಅದಕ್ಕೆ ಆತ ಪಟ್ಟ ಪಡಿಪಾಟಲು, ಆತ ಅನುಭವಿಸಿದ ನೋವು, ವಿರಹವೇದನೆ, ಆತನ ಪರ ಮೂಡಿದ ಅನುಕಂಪ, ಮನೇಕಾ ಗಾಂಧಿಯ ತನಕ ಹೋದ ಪ್ರಕರಣ, ಕೊನೆಗೆ ಮರು ಸೆರೆ ಹಿಡಿದ ಅರಣ್ಯ ಇಲಾಖೆಯವರೇ ಕಾಡಿಗೆ ಬಿಡುವಂತೆ ಸೃಷ್ಟಿಯಾದ ಒತ್ತಡವನ್ನು ಗಮನಿಸಿದಾಗ ನಿಜವಾಗಿಯೂ ಅಚ್ಚರಿಯಾಗುತ್ತದೆ.” ಎಂದಿದ್ದಾರೆ.
೯೦ ಪುಟಗಳ ಈ ಪುಟ್ಟ ಪುಸ್ತಕದ ತುಂಬೆಲ್ಲಾ ಆನೆಗಳ ಚಿತ್ರಗಳಿವೆ. ಕುಶ ತನ್ನ ಪ್ರೇಮವನ್ನು ತನ್ನದೇ ಮಾತುಗಳಲ್ಲಿ ಹೇಳುವಂತೆ ಈ ಕಾದಂಬರಿಯನ್ನು ಹೆಣೆದಿದ್ದಾರೆ ಲೇಖಕರಾದ ರಮೇಶ್ ಉತ್ತಪ್ಪ. ಅವರು ತಮ್ಮ ಕಾದಂಬರಿಯನ್ನು ‘ಕುಶನಂತಹ ಭಗ್ನ ಪ್ರೇಮಿಗಳಿಗೆ’ ಅರ್ಪಣೆ ಮಾಡಿದ್ದು ಸೂಕ್ತವಾಗಿಯೇ ಇದೆ ಎಂದು ಇದನ್ನು ಓದುವಾಗ ನಮಗೆ ಅರಿವಾಗುತ್ತದೆ.