ಕುಸಿದ ರಾಜಕೀಯ ಮೌಲ್ಯಗಳು

ಕುಸಿದ ರಾಜಕೀಯ ಮೌಲ್ಯಗಳು

ಕರ್ನಾಟಕದ ರಾಜಕಾರಣದ ಮೌಲ್ಯ ದಿನದಿಂದ ದಿನಕ್ಕೆ ಕುಸಿಯುತ್ತಿರುವುದು ಪ್ರಜ್ಞಾವಂತ ಜನರ ಈ ನಾಡಿನಲ್ಲಿ ತೀವ್ರ ಕಳವಳವನ್ನು ಸೃಷ್ಟಿಸಿದೆ. ಒಂದೆಡೆ ಪೆನ್ ಡ್ರೈವ್ ಪ್ರಕರಣದ ಅಪಕೀರ್ತಿಯಿಂದ ಇಡೀ ರಾಜ್ಯ ತಲೆತಗ್ಗಿಸುವಂತಹ ವಾತಾವರಣ ಸೃಷ್ಟಿಯಾದ ಬೆನ್ನಲ್ಲೇ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ನಿಗಮದಲ್ಲಿ ನಡೆದಿರುವ ೯೪ ಕೋಟಿ ರೂ. ಗಳ ಹಗರಣ ಇಲ್ಲಿನ ರಾಜಕೀಯ ರಂಗದ ಮೇಲಿನ ಗೌರವವನ್ನು ಇನ್ನಷ್ಟು ಕುಸಿಯುವಂತೆ ಮಾಡಿರುವುದು ವಿಪರ್ಯಾಸ.

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರನ್, ಶಿವಮೊಗ್ಗದಲ್ಲಿ ಸಾವಿಗೆ ಶರಣಾಗುವ ಮೊದಲು ಬರೆದಿರುವ ಆರು ಪುಟಗಳ ಡೆತ್ ನೋಟ್ ಆಘಾತಕಾರಿ ಸಂಗತಿಗಳನ್ನೇ ಬಯಲು ಮಾಡಿದೆ. ನಿಗಮದ ೧೮೭ ಕೋಟಿ ರೂ. ಅನುದಾನ ಪೈಕಿ ೯೪ ಕೋಟಿ ರೂ. ಗಳನ್ನು ಇಲಾಖೆ ಸಚಿವರ ಮೌಖಿಕ ಆದೇಶದ ಮೇರೆಗೆ ಇನ್ನೊಂದು ಖಾತೆಗೆ ವರ್ಗಾವಣೆ ಮಾಡಿಸಲಾಗಿತ್ತು ಎಂದು ಪತ್ರದಲ್ಲಿ ಆರೋಪಿಸಲಾಗಿತ್ತು. ಆದರೆ, ಈ ಎಲ್ಲ ಆರೋಪಗಳಿಂದ ಮೈಕೊಡವಿಕೊಂಡಿರುವ ಸಚಿವರು ವಿಧಾನಸೌಧದಲ್ಲಿ ತುರ್ತು ಸುದ್ದಿಗೋಷ್ಟಿ ನಡೆಸಿ, “ಹಣ ವರ್ಗಾವಣೆಯಾಗಿರುವುದು, ಅಕ್ರಮ ನಡೆದಿರುವುದು ನಿಜ. ಆದರೆ ಈ ಯಾವ ಸಂಗತಿ ಬಗ್ಗೆ ನನಗೆ ಮಾಹಿತಿಯೇ ಇಲ್ಲ. ಇದರಲ್ಲಿ ನನ್ನ ಪಾತ್ರ ಇಲ್ಲವೇ ಇಲ್ಲ.”ಎಂದು ನುಣುಚಿಕೊಂಡಿದ್ದಾರೆ.

ಇದೊಂದು ರಾಜಕೀಯ ಹೇಳಿಕೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ಅಕ್ರಮ ನಡೆದಿದೆ ಎಂಬುದನ್ನು ಒಪ್ಪಿಕೊಂಡೇ ಅವರು ಆಡಿರುವ ಇನ್ನೊಂದು ಮಾತನ್ನು ಇಲ್ಲಿ ಉಲ್ಲೇಖಿಸಲೇಬೇಕು. “ಇಲಾಖೆ ಮೇಲೆ ನನಗೆ ಹಿಡಿತವಿಲ್ಲ ಎಂಬ ಅಂಶವೂ ಸೇರಿದಂತೆ ನೀವು ಏನಾದರೂ ಅಂದುಕೊಳ್ಳಿ. ನಾನಂತೂ ರಾಜೀನಾಮೆ ಕೊಡುವುದಿಲ್ಲ.” ಎಂದಿದ್ದಾರೆ. ನೀತಿ ಸಂಹಿತೆ ಜಾರಿಯಾಗಿದ್ದಂಥ ಅವಧಿಯಲ್ಲಿ ಇಷ್ಟು ದೊಡ್ಡ ಮಟ್ಟದ ವರ್ಗಾವಣೆ ನನ್ನ ಗಮನಕ್ಕೆ ಬಂದಿಲ್ಲ ಎಂಬುದನ್ನು ವಾದಕ್ಕಾಗಿ ಒಪ್ಪಿಕೊಂಡರೂ, ಇದೆಲ್ಲವನ್ನೂ ಬಹಿರಂಗವಾಗಿ ಹೇಳುವುದು ಹೊಸ ರಾಜಕೀಯ ವರಸೆಯೇ ಸರಿ ಎನ್ನಬಹುದು. ಸರಳ ಭಾಷೆಯಲ್ಲಿ ಹೇಳಬೇಕು ಎಂದಾದರೆ, “ಹೌದು ತಪ್ಪಾಗಿದೆ. ಏನೀಗ?” ಎಂಬುದನ್ನು ಈ ಮಾತುಗಳು ಧ್ವನಿಸುತ್ತವೆ. ಇದು ಆರೋಗ್ಯಕರ ನಡೆಯಲ್ಲ. ಇಡೀ ಪ್ರಕರಣವನ್ನು ತನಿಖೆ ನಡೆಸಿದಾಗ ದೋಷಿತರು ಯಾರು ಎಂಬುದು ಗೊತ್ತಾಗುತ್ತದೆ. ಸಚಿವರ ಪಾತ್ರ ಇಲ್ಲದೆಯೂ ಇರಬಹುದು. ಆದರೆ, ಅಲ್ಲಿಯವರೆಗೂ ಇದರ ನೈತಿಕ ಜವಾಬ್ದಾರಿಯನ್ನು ಸಚಿವರೇ ಹೊರಬೇಕು.

ಆಯಾ ಇಲಾಖೆಗೆ ಸಂಬಂಧಪಟ್ಟ ಸಚಿವರೇ ಯಜಮಾನ ಇದ್ದಂತೆ. ೧೯೫೬ರಲ್ಲಿ ರೈಲ್ವೇ ಅಪಘಾತ ಸಂಭವಿಸಿದಾಗ, ನೈತಿಕ ಹೊಣೆ ಹೊತ್ತು ಲಾಲ್ ಬಹದ್ದೂರ್ ಶಾಸ್ತ್ರಿ ರಾಜೀನಾಮೆ ರವಾನಿಸಿದ್ದರು. ೨೦೦೧ರಲ್ಲಿ ತೆಹಲ್ಕಾ ಹರಗರಣದಲ್ಲಿ ತಮ್ಮ ಹೆಸರು ಕೇಳಿ ಬಂದಾಗ ತಾವು ದೋಷಿ ಅಲ್ಲದಿದ್ದರೂ ಜಾರ್ಜ್ ಫೆರ್ನಾಂಡೀಸ್ ತನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ರವಾನಿಸಿದ್ದರು. ವಿಚಾರಣೆ ಬಳಿಕ ದೋಷಮುಕ್ತರಾಗಿ ಪುನಃ ರಕ್ಷಣಾ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದರು. ಕಂಟ್ರ್ಯಾಕ್ಟರ್ ಆತ್ಮಹತ್ಯೆ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿಬಂದಾಗ ಗ್ರಾಮೀಣಾಭಿವೃದ್ಢಿ ಸಚಿವರಾಗಿದ್ದ ಕೆ ಎಸ್ ಈಶ್ವರಪ್ಪನವರೂ ಪ್ರತಿಪಕ್ಷಗಳ ಒತ್ತಾಯದ ಮೇರೆಗೆ ಸಚಿವ ಹುದ್ದೆಯಿಂದ ನಿರ್ಗಮಿಸಿದ್ದರು. ಕಡೆಗೆ ನ್ಯಾಯಾಲಯ ಇವರನ್ನು ದೋಷಮುಕ್ತಗೊಳಿಸಿತ್ತು. ಇದೆಲ್ಲವನ್ನೂ ನೆನಪಿಸಿಕೊಳ್ಳಬೇಕಿದೆ. ಒಟ್ಟಾರೆ, ಈ ಪ್ರಕರಣದ ತನಿಖೆ ನಿಷ್ಪಕ್ಷವಾಗಿ ಸಾಗಲಿ. ಹಗರಣದಲ್ಲಿ ಸಿಲುಕಿರುವವರು, ರೂವಾರಿಯಾದವರು ಎಷ್ಟೇ ಪ್ರಭಾವಿಯಾಗಿದ್ದರೂ ಕಾನೂನು ಅವರಿಗೆ ವಿನಾಯತಿ ನೀಡಬಾರದು. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ಆದಷ್ಟು ಶ್ರೀಘ್ರವಾಗಿ ಸತ್ಯಾಂಶ ಹೊರಬೀಳಲಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ.

ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೩೦-೦೫-೨೦೨೪

ಚಿತ್ರ ಕೃಪೆ: ಅಂತರ್ಜಾಲ ತಾಣ