ಕುಹೂ ಕುಹೂ ಕೋಗಿಲೆ ಹಾಡಿತಲ್ಲ ಈಗಲೇ

ಕುಹೂ ಕುಹೂ ಕೋಗಿಲೆ ಹಾಡಿತಲ್ಲ ಈಗಲೇ

ಬರಹ

    ಮ್ಮೆ ಮಕ್ಕಳ ಸಾಹಿತ್ಯಕ್ಕೆ ಸಂಬಂಧಪಟ್ಟ ಒಂದು ಪುಸ್ತಕ ಓದುತ್ತಿದ್ದಾಗ ಒಂದು ಅರ್ಧ ಪುಟದ ಸಣ್ಣ ಕಥೆ ಓದಿದೆ. ತುಂಬಾ ಚೆನ್ನಾಗಿದೆ ಎನ್ನಿಸಿತು. ಅದನ್ನು ನಾಟಕ ರೂಪಕ್ಕೆ ಇಳಿಸಿ  ಒಂದು ಮತ್ತು ಎರಡನೆಯ ತರಗತಿ ಮಕ್ಕಳಿಂದ ಮಾಡಿಸಿದಾಗ ಅವುಗಳ ಮುದ್ದು ಮಾತಿನ ನಾಟಕ ನೋಡಲು ಮೋಜೆನಿಸಿತು. ಈ ಕಥೆ ಕೋಗಿಲೆಯೊಂದು ಹಾಡು ಹೇಳುವುದನ್ನು ಕಲಿತ ಬಗೆಯದು. ಹಂಸ, ಕೊಕ್ಕರೆ, ನವಿಲು, ಗಿಣಿ ಎಲ್ಲವೂ ಅಹಂಕಾರದಲ್ಲಿ ಇದಕ್ಕೆ ಹಾಡು ಹೇಳಿಕೊಡಲು ನಿರಾಕರಿಸುತ್ತವೆ. ಆಗ ಪ್ರಕೃತಿ ಮಾತೆ ಅಳುತ್ತಾ ಕುಳಿತಿದ್ದ ಕೋಗಿಲೆಗೆ ತಾನೇ ಹಾಡು ಹೇಳಿಕೊಟ್ಟು ಸಂತಸಪಡಿಸಿದಳು ಎಂಬ ಒಂದು ಸಣ್ಣ ಕಥೆ ಅದು. ನಾನು ಸ್ವಲ್ಪ ಬದಲಾವಣೆಗಳನ್ನು ಮಾಡಿ ಹಂಸ ಹಾಗೂ ಕೊಕ್ಕರೆಯನ್ನು ಇರುವ ಸ್ವಲ್ಪ ಪ್ರತಿಭೆಗೆ, ತಮ್ಮ ರೂಪಿಗೆ ಜಂಬದಿ ಮೆರೆಯುವವರ ಪ್ರತಿನಿಧಿಗಳಾಗಿಸಿ, ನವಿಲು ಮತ್ತು ಗಿಣಿಗಳನ್ನು ತಮ್ಮ ಮಿತಿ ತಿಳಿದು ತಮ್ಮ ಪ್ರತಿಭೆಯ ಬಗ್ಗೆ ಅರಿವಿರುವ ಸ್ನೇಹಜೀವಿಗಳ ಪ್ರತಿನಿಧಿಗಳಾಗಿಸಿ ನಾಟಕ ರೂಪಿಸಿದೆ. ಕೊನೆಗೆ ಪ್ರಕೃತಿ ಮಾತೆಯ ಸನಿಹದಲ್ಲೇ ಕೋಗಿಲೆ ಸಂಗೀತ ಕಲಿತು ಕೊಳ್ಳುತ್ತದೆ. ಈ ನಾಟಕವನ್ನು ನಿಮ್ಮ ಮುಂದಿಡುವ ಮನಸ್ಸಾಯಿತು.  ಇನ್ನು ನಾಟಕ “ಕುಹೂ ಕುಹೂ ಕೋಗಿಲೆ ಹಾಡಿತಲ್ಲ ಈಗಲೇ”:

ಅಂಕ 1
ಸೂತ್ರಧಾರ:-  ಒಂದಾನೊಂದು ಕಾಲದಲ್ಲಿ
                     ಅಂದದ ಚಂದದ
                     ಮರಗಳ ಹೊಂದಿದ
                     ಸುಂದರ ಕಾಡಿತ್ತು.
                      ಕಾಡಲಿ ಮೆರೆದ
                     ಹಕ್ಕಿಗಳಿಂಚರ
                     ಕಲಕಲ ನಾದವು
                     ಎಲ್ಲೆಡೆ ಹರಡಿತ್ತು.
                    ಆ ಕಾಡಿಗೆ ಬಂದಿತು
                   ಪುಟಾಣಿ ಹಕ್ಕಿತಾನೊಂದು
                  ಸುತ್ತಲು ನೆರೆದಿಹ ಹಕ್ಕಿಗಳಾಟವ
                  ನೋಡುತ ನಲಿದಿತ್ತು.
                 ಹಾಡುವ ಆಸೆ ತನಗಾಯ್ತೆಂದು
                ಕೂಗಲು ಬಾಯ್ತೆರೆದಿತ್ತು.
               ಆದರೆ……………………..

ಕೋಗಿಲೆ:- ಅಯ್ಯೋ, ಧ್ವನಿಯೆತ್ತಿ ಹಾಡಲು ಬರುತ್ತಿಲ್ಲ. ಹೇಗೆ  ಹಾಡಲಿ ನಾನು?
ಸೂತ್ರಧಾರ:- ಚಿಂತಿಸದಿರು ಪುಟ್ಟ ಹಕ್ಕಿ. ಈ ಕಾಡಿನಲ್ಲಿರುವ ಎಲ್ಲಾ ಹಕ್ಕಿಗಳೂ ಹಾಡಬಲ್ಲವು. ಯಾರ ಬಳಿಯಾದರೂ ಹೋಗಿ ಕಲಿಯಬಹುದು.                        
ಕೋಗಿಲೆ:- ಹೌದೇ ನನ್ನಾಸೆ ಈಡೇರುವುದೇ?
ಸೂತ್ರಧಾರ:- ಖಂಡಿತ ನಿನ್ನ ಧ್ವನಿ ಅತಿ ಮಧುರವಾಗಿದೆ. ನೀ ಹಾಡು ಕಲಿತೆಯಾದರೆ ಈ ವನವೆಲ್ಲಾ   ಸಂತಸದಿಂದ ನಲಿವುದು. ಸಂಭ್ರಮದಿಂದ ಹೂವುಗಳು  ಅರಳುವವು.
ಕೋಗಿಲೆ:- ನನಗೆ ಹಾಡು ಕಲಿಸುವವರಾರು? ತಿಳಿಸುವೆಯಾ?
ಸೂತ್ರಧಾರ:- ಕಾಡೆಲ್ಲಾ ಸುತ್ತಿ ಹಾಕು. ಯಾವ ಪಕ್ಷಿಯಾದರೂ ನಿನಗೆ ಹೇಳಿಕೊಡಬಹುದು.
ಕೋಗಿಲೆ:- ಹಾಗೆಯೇ ಆಗಲಿ. ಧನ್ಯವಾದಗಳು ಸೂತ್ರಧಾರನೆ.

ಅಂಕ 2
    [ಕೋಗಿಲೆ ಹಾರುತ್ತಾ ಹಾರುತ್ತಾ ರಂಗದ ಸುತ್ತಲೂ ಹುಡುಕುತ್ತಿದೆ]
ಸೂತ್ರಧಾರ:- ವನವೆಲ್ಲಾ ಸುತ್ತಿ ಸುತ್ತಿ ಅಲೆಯುತಿದೆ
                ಪುಟ್ಟ ಕೋಗಿಲೆ ಗಾನ ಕಲಿಸುವ ಗುರುವಿಗಾಗಿ              
                 ಅರಸುತ್ತ ಹುಡುಕುತ್ತ ಅಲೆಯುತ್ತ  ದಣಿಯುತಿದೆ
                 ಯಾರು ಕಲಿಸುವರು ಗಾನ ಕೋಗಿಲೆಗೆ?
                 ಯಾರು ಕಲಿಸುವರು ಗಾನ ಕೋಗಿಲೆಗೆ?

ಕೋಗಿಲೆ:- ಆಹಾ ಆ ಸರೋವರದಲ್ಲಿ ತೇಲಾಡುತ್ತಿರುವ ಹಂಸಗಳು ಬೆಳ್ಳಗೆ ಎಷ್ಟು ಮುದ್ದಾಗಿವೆ. ಅವುಗಳನ್ನು ಕೇಳಿ ನೋಡುತ್ತೇನೆ. ಹಂಸ ಹಂಸ ನನಗೆ ಹಾಡು ಕಲಿಯಲು ಬಲು ಆಸೆ. ದಯವಿಟ್ಟು ಹೇಳಿಕೊಡುವೆಯಾ?
ಹಂಸ:- (ಗರ್ವದಿಂದ) ಥೂ ನಿನ್ನಂತ ಕಪ್ಪು ಹಕ್ಕಿಗೆ ಹಾಡು ಬೇರೆ ದಂಡ.
ಕೋಗಿಲೆ:- (ದುಃಖದಿಂದ) ನನ್ನ ಬಣ್ಣ ಕಪ್ಪಾದರೇನು? ಧ್ವನಿ ಮಧುರವಾಗಿಲ್ಲವೇ? ಅದು ಸಾಲದೇನು? ಹಾಡು ಕಲಿಯಲು ದೇಹದ ಬಣ್ಣ ಮುಖ್ಯವೇನು?
ಹಂಸ:- ಸುಂದರವಾದ ಹಕ್ಕಿ ಹಾಡುವಾಗ ನೋಡಲು ಚಂದ. ಹಾಡು ಕೇಳಲು ಚಂದ. ನಿನ್ನಂತಹ ಕಪ್ಪು ಹಕ್ಕಿ ಹಾಡಿದರೆ ಖಂಡಿತ ಯಾರೂ ಕೇಳಲಾರರು, ನೋಡಲಾರರು.
            [ಹಂಸವೂ ತಿರಸ್ಕಾರದ ನಗೆಯೊಂದಿಗೆ ಏನೋ ಹಾಡು ಗುನುಗುತ್ತಾ ಹೋಗುವುದು.]
ಕೋಗಿಲೆ:- ಅಬ್ಭ! ಅಷ್ಟು ಸೊಗಸಲ್ಲದ ಧ್ವನಿಯಿಟ್ಟುಕೊಂಡೇ ಇಷ್ಟು ಗರ್ವವಿದೆಯಲ್ಲ ಈ ಹಂಸಕ್ಕೆ, ಈ ಹಂಸದ ಅಂದವನ್ನು ನೋಡಿ ಆನಂದಿಸಬಹುದೇ ವಿನಹ ಇದರ ಹಾಡನ್ನು ಯಾರು ತಾನೇ ಕೇಳಲು ಸಾಧ್ಯ?
           [ಅಲ್ಲಿಂದ ಮತ್ತೆ ಹಾರಿತು ಕೋಗಿಲೆ]
ಸೂತ್ರಧಾರ:-       ಹಂಸವು ಜಂಬದಿ ಮೆರೆದರೂ
                      ಕೋಗಿಲೆ ಕೊರಗಲೇ ಇಲ್ಲ.
                      ಕಲಿಸುವ ಗುರುವೇ ಅರಿಯದೆ ಇರುವ
                      ಸಂಗೀತದಿ ಮನವು ಅರಳುವುದೇ?
                      ಹಂಸದ ಶ್ರುತಿಯಿಲ್ಲದ ನಾದವು
                      ಮನಸಿಗೆ ಮುದವನು ನೀಡುವುದೇ?
                      ಗಾನವನರಿತ ಗುರುವನು ಅರಸುತ
                      ಮತ್ತೆ ಹಾರಿತು ಕೋಗಿಲೆ
                      ಹುಡುಕಿ ಅಲೆಯಿತು ಕೋಗಿಲೆ.

ಕೋಗಿಲೆ:- ಕೆರೆಯ ಬಳಿ ಕೊಕ್ಕರೆಯೊಂದು ಮೀನು ಹಿಡಿಯುತಿದೆ. ಇದೂ ಸಹಾ ಬೆಳ್ಳಗಿದೆ.ಇದಕ್ಕೆ ಹಾಡಲು ಬರಬಹುದೇ? ಬಂದರೂ ನಾನು ಕಪ್ಪೆಂದು ಜರಿಯದೇ ಹೇಳಿಕೊಡಬಹುದೇ?
ಕೊಕ್ಕರೆ:- ಅಬ್ಭ! ನೀನು ಯಾವ ಹಕ್ಕಿ? ಕಾಗೆಯಷ್ಟೇ ಕಪ್ಪಗಿರುವೆಯಲ್ಲ. ಎಲ್ಲಿಂದ ಬಂದೆ ಇಲ್ಲಿಗೆ?
ಕೋಗಿಲೆ:- (ನೊಂದಧ್ವನಿಯಿಂದ) ದೇಹದ ಬಣ್ಣ ಕಪ್ಪಾದರೇನು? ಮನಸ್ಸು ಕಪ್ಪೇ? ಕಪ್ಪು ದೇಹದಲ್ಲಿರುವ ಪ್ರತಿಭೆ ಕಪ್ಪೇ? ಕಪ್ಪೆಂದ ಮಾತ್ರಕ್ಕೆ ಜರಿಯುವುದು ಎಷ್ಟರ ಮಟ್ಟಿಗೆ ಸರಿ?
ಕೊಕ್ಕರೆ:- ನೋಡಿದಕೂಡಲೇ ಮೊದಲು ಕಣ್ಣಿಗೆ ಕಾಣುವುದು ಅಂದ. ಅಂದವಿಲ್ಲದಿದ್ದರೆ ಗೆಳೆಯರು ಸಿಗುವುದಿಲ್ಲ. ಎಲ್ಲರೊಂದಿಗೆ ಬೆರೆಯಲು ಸಾಧ್ಯವಿಲ್ಲ. ಹಾಗೆ ಬೆರೆಯದೇ ಇದ್ದಾಗ  ಮನಸ್ಸು ತಿಳಿಯುವುದಾದರೂ ಹೇಗೆ? ಪ್ರತಿಭೆ ಹೊರಗೆ ಬರುವುದಾದರೂ ಹೇಗೆ?
ಕೋಗಿಲೆ:- ಅಂದವಿರುವವರೆಲ್ಲಾ ಅಹಂಕಾರದಿಂದ ಅಂದವಿಲ್ಲದವರನ್ನು ದೂರವಿಡುತ್ತಲೇ ಹೋದರೆ ಬೆರೆಯುವುದೆಂತು? ನಿನ್ನ ದೇಹ ಬೆಳ್ಳಗಿದ್ದರೇನು? ಮನಸು ಕಪ್ಪೆಂದು ನನಗೀಗ ತಿಳಿಯಿತು. ನಿನ್ನ ವಿಶ್ವಾಸ ಗಳಿಸಿ ಸಂಗೀತ ಕಲಿಯೋಣವೆಂದು ಬಂದೆ. ನಿನ್ನ ಈ ಕಂಠವೇ ಸಾರುತಿದೆ ನಿನಗೆ ಸಂಗೀತ ಬರುವುದಿಲ್ಲವೆಂದು. ಈಗ ಅಂದವಿಲ್ಲದಿದ್ದರೂ ಶುದ್ಧ ಮನಸ್ಸಿರುವವರ ಬಳಿ ನಾನು ತೆರಳುತ್ತೇನೆ.
                   [ಅಲ್ಲಿಂದ ಮತ್ತೆ ಹಾರಿತು ಕೋಗಿಲೆ]
ಸೂತ್ರಧಾರ:-            ದುರಹಂಕಾರದಿ ಮೆರೆಯಿತು ಕೊಕ್ಕರೆಯು
                           ಮನದಲೇ ಕೊರಗಿತು ಕೋಗಿಲೆಯು
                           ರೂಪವದೇನು ತಾಮಾಡಿದ ಸಾಧನೆಯೇ?
                           ದೇವರು ಇತ್ತ ವರವದಲ್ಲವೇ?
                           ಸುಂದರ ದೇಹದಿ ರಕ್ಕಸ ಮನಸು
                           ಇದ್ದರೆ ಅಲ್ಲೇನಿದೆ ಸೊಗಸು
                           ತನುವು ಸುಂದರ ಮನವು ಸುಂದರ
                           ಎಂತಾದರೆ ಎನಿತು ಸುಂದರ.

ಕೋಗಿಲೆ:- ಒಂದುವೇಳೆ ತನುವು ಸುಂದರವಲ್ಲದಿದ್ದರೂ ಮನವು ಸುಂದರವಾದರೆ ಸಾಕಲ್ಲವೇ. ಬದುಕು ಸುಂದರವಾಗಲಾರದೇ?
              [ಹಾರುತ್ತಾ ಹಾರುತ್ತಾ ಅಲ್ಲೊಂದು ನವಿಲು ನಾಟ್ಯವಾಡುವುದನ್ನು ನೋಡಿ ಮೈಮರೆಯುತ್ತದೆ ಕೋಗಿಲೆ]
[ನವಿಲು ನಾಟ್ಯವಾಡುತ್ತಿದೆ, ಹಿನ್ನೆಲೆಯಲ್ಲಿ ಹಾಡು]
ಸೂತ್ರಧಾರ:-      ಮೋಡ ಕವಿದಿದೆ ತಂಗಾಳಿ ಬೀಸಿದೆ
                     ಮಳೆಯು ಬರುವುದೆಂದು ಕಾತುರದಿ
                      ಗರಿಗೆದರಿ ನವಿಲು ನಾಟ್ಯವಾಡುತಿದೆ.
                      ಮನದಣಿಯೆ ಆಗಸವ ನೋಡುತಿದೆ
                       ನಾಟ್ಯ ಮಯೂರಿಯ ನಡೆ ಚಂದ
                       ಕೆದರಿದ ಗರಿ ಚಂದ
                       ಕುಣಿಯುವ ಪರಿ ಚಂದ
                       ಮೈಮರೆಯಿತು ಕೋಗಿಲೆ
                       ಮನದೊಳಗೆ ಈ ನವಿಲೇ
                       ಗುರುವೆಂದೆಣಿಸಿತು ಆಗಲೇ

ಕೋಗಿಲೆ:- ಆಹಾ ಎಂಥ ಸುಂದರ ಪಕ್ಷಿ. ಎಂತಹಾ ಅಮೋಘ ನೃತ್ಯ. ಇಂತಹಾ ಸುಂದರ ಪಕ್ಷಿಯ ಕಂಠವೂ ಇಂಪಾಗಿರಬಹುದು ಅಲ್ಲವೇ? [ನವಿಲಿನ ಹತ್ತಿರ ಬಂದು] ನವಿಲೇ ನವಿಲೇ ನಮಸ್ಕಾರ.
ನವಿಲು:- ಯಾರದು? ಎಲ್ಲಿರುವೆ? ಓಹ್ ಇಲ್ಲಿರುವೆಯಾ? ಕಣ್ಣಿಗೆ ಕಾಣದಷ್ಟು ಪುಟ್ಟದಾಗಿರುವ ಹಕ್ಕಿಯೇ ನಿನಗೂ ನಮಸ್ಕಾರ.
ಕೋಗಿಲೆ:- ನಿನ್ನ ಚಂದದ ನೃತ್ಯ ನೋಡಿ ಮೈಮರೆತು ಹೋದೆ ನವಿಲೇ.
ನವಿಲು:- ಮಳೆಗಾಲ ಬಂತೆಂದರೆ ನನಗೆ ಸಂಭ್ರಮ. ಕಾರ್ಮೋಡ ನೋಡಿದಕೂಡಲೇ ತಾನಾಗಿಯೇ ನನ್ನ ಗರಿಗಳು ಕೆದರಿಕೊಳ್ಳುತ್ತವೆ. ಕಾಲುಗಳು ಹೆಜ್ಜೆ ಹಾಕಲು ಪ್ರಾರಂಭಿಸುತ್ತವೆ.
ಕೋಗಿಲೆ:- ಇಷ್ಟು ಚಂದ ನಾಟ್ಯವಾಡುವ ನಿನ್ನ ಧ್ವನಿ ಮಧುರವಾಗಿರಬಹುದೆಂದು ತಿಳಿದಿದ್ದೆ.
ನವಿಲು:- (ಬೇಸರದಿಂದ) ಇಲ್ಲ ಪುಟ್ಟ ಹಕ್ಕಿ. ಆ ವರವನ್ನು ದೇವರು ನನಗೆ ದಯಪಾಲಿಸಲಿಲ್ಲ. ನಾನು ಹಾಡಲು ಹೊರಟರೆ ನನ್ನ ಧ್ವನಿ ಕರ್ಕಷವಾಗಿ ಹೊರಡುತ್ತದೆ. ಅಂದ ಹಾಗೆ ನಿನ್ನ ಧ್ವನಿ ಎಷ್ಟು ಮಧುರವಾಗಿದೆ. ನಿನಗೆ ಹಾಡಲು ಬರುವುದೇನು?
ಕೋಗಿಲೆ:- ಇಲ್ಲ ನನಗೆ ಹಾಡಲು ಬರುವುದಿಲ್ಲ. ಆದರೆ ಹಾಡು ಕಲಿಯುವಾಸೆ  ಮಾತ್ರ ನನಗೆ ಬೆಟ್ಟದಷ್ಟಿದೆ. ಅದಕ್ಕಾಗಿ ನನಗೆ ಹಾಡು ಕಲಿಸುವ ಗುರುವನ್ನು ಅರಸುತ್ತಾ ಹೊರಟಿರುವೆ. ನೀನು ಹೇಳಿಕೊಡಬಹುದೇನೋ ಎಂದು ನಿನ್ನ ಬಳಿ ಬಂದೆ.
ನವಿಲು:- (ನಿಟ್ಟುಸಿರಿನೊಂದಿಗೆ) ಆ ಅದೃಷ್ಟ ನನಗಿಲ್ಲ ಪುಟ್ಟ ಹಕ್ಕಿ. ನೃತ್ಯ ಬೇಕಾದರೆ ಹೇಳಿಕೊಡಬಲ್ಲೆ.
ಕೋಗಿಲೆ:- ಆದರೆ ನೃತ್ಯ ಕಲಿಯಲು ಬೇಕಾದ ಮೈಮಾಟ ನನಗಿಲ್ಲ ನವಿಲೆ. ಹೀಗಾಗಿ ಹಾಡು ಕಲಿಯುವ ಬಯಕೆ ಮಾತ್ರ ಹೆಚ್ಚಾಗಿದೆ. ನಿನ್ನ ಸ್ನೇಹ ದೊರಕಿದ್ದಕ್ಕೆ ನನಗೆ ಸಂತೋಷವಾಗಿದೆ ನವಿಲೆ.
ನವಿಲು:- ಹೌದು ಪುಟ್ಟ ಹಕ್ಕಿ. ನಿನ್ನಂತಹ ಒಂದು ಪುಟ್ಟ ಹಕ್ಕಿ ನನ್ನ ಗೆಳೆಯ ಎಂದು ಹೇಳಿಕೊಳ್ಳಲು ನನಗೂ ಸಂತೋಷವಾಗುತ್ತಿದೆ. ಅಂದಹಾಗೆ ನಿನ್ನ ಹೆಸರೇನು ಪುಟ್ಟ ಹಕ್ಕಿ?
ಕೋಗಿಲೆ:- ನನ್ನ ಹೆಸರು ಕೋಗಿಲೆ
ನವಿಲು:- ನಾನು ನೀನು ಇಂದಿನಿಂದ ಸ್ನೇಹಿತರು. ನೀನು ಒಳ್ಳೆಯ ಗುರುವ ಪಡೆದು ಹಾಡು ಕಲಿತು ಬಾ ಗಾನ ನೃತ್ಯ ಪರಸ್ಪರ ಪೂರಕವಾಗಿರುವಂತೆ ನಾವು ಪರಸ್ಪರ ಪ್ರೀತಿ ಸ್ನೇಹ ಹೊಂದೋಣ.
ಕೋಗಿಲೆ:- ಹಾಗೆಯೇ ಆಗಲಿ. ನಿನ್ನ ಬಾಯ್ಹರಕೆಯಿಂದ ನಾನು ಗಾನ ಕಲಿತು ನೀನು ನಾಟ್ಯ ಮಯೂರಿಯಾದಂತೆ ನಾನು ಗಾನ ಕೋಗಿಲೆಯಾಗುತ್ತೇನೆ. ಹೋಗಿಬರುತ್ತೇನೆ.
                     [ಮತ್ತೆ ಹಾರಿತು ಕೋಗಿಲೆ]
ಸೂತ್ರಧಾರ:-     ಸುಂದರ ಗೆಳೆಯನ ಹೊಂದಿದ ಸಂತಸ
                    ಕಂಡಿತು ಕೋಗಿಲೆ ಕಣ್ಣಿನ ಹೊಳಪಲ್ಲೇ
                    ನಕ್ಕಿತು ನಲಿಯಿತು ನವಿಲಿನ ನೆನಪಲ್ಲೇ
                    ಸೊಕ್ಕಿನ ಹಂಸ ಕೊಕ್ಕರೆ ನೀಡಿದ
                    ನೋವನು ಮರೆತು ಹಾರಿತು ಕೋಗಿಲೆ
                    ಹಾಡನು ಕಲಿಯುವ ಹುರುಪಲ್ಲೇ
                    ಗಿಣಿರಾಮನ ದರುಶನವಾಯ್ತಲ್ಲೇ.
ಕೋಗಿಲೆ:- ನನ್ನಂತೆಯೇ ಪುಟ್ಟ ಹಕ್ಕಿ. ಆದರೆ ಅಂದವಾದ ಹಕ್ಕಿ. ಇದರ ಧ್ವನಿ ಹೇಗಿದೆಯೋ, ಸ್ವಭಾವ ಹೇಗೋ ಹುಂ! ಹೋಗಿ ಮಾತನಾಡಿಸಿ ನೋಡೋಣ. [ಗಿಣಿಯ ಹತ್ತಿರ ಬಂದು] ನಮಸ್ಕಾರ ಗೆಳೆಯ. ನಾನು ಕೋಗಿಲೆ. ಹಾಡು ಕಲಿಯುವ ಬಯಕೆಯಿಂದ ಕಾಡೆಲ್ಲಾ ಅಲೆಯುತ್ತಿರುವೆ. ಕಲಿಸುವ ಗುರುವನ್ನು ಅರಸುತ್ತಿರುವೆ. ನೀನು ಕಲಿಸಬಲ್ಲೆಯಾ ಗಾನವನೆನಗೆ?
ಗಿಣಿ:- ನನ್ನಲ್ಲಿರುವುದು ಅಣಕವಿದ್ಯೆಯೇ ಹೊರತು ಗಾನ ವಿದ್ಯೆಯಲ್ಲ. ಹೇಗೆ ಕಲಿಸಲಿ ನಾನು ನಿನಗೆ?
ಕೋಗಿಲೆ:- (ಸಂಶಯದಿಂದ) ಅಣಕ ವಿದ್ಯೆ ಎಂದರೆ ಇತರರನ್ನು ಆಡಿಕೊಳ್ಳುವ ವಿದ್ಯೆಯೇ?
ಗಿಣಿ:- ಛೆ! ಛೆ! ತಪ್ಪು ತಿಳಿಯಬೇಡ. ಯಾರ ಮನಸ್ಸನ್ನೂ ನೋಯಿಸದೇ ಮನಸ್ಸು ಹಗುರಾಗಿ ನಗಿಸುವಂತಹಾ ವಿದ್ಯೆ. ಇತರರು ಹೇಗೆ ನಡೆಯುತ್ತಾರೋ ಮಾತನಾಡುತ್ತಾರೋ ಅದನ್ನು ಅನುಸರಿಸಿ ಅಭಿನಯಿಸಿ ತೋರಿಸುವ ಕಲೆ ನನ್ನದು. ಈ ಕಾಡಿನಲ್ಲಿರುವ ಅನೇಕ ಪ್ರಾಣಿ ಪಕ್ಷಿಗಳು ನನ್ನ ಬಳಿ ಬಂದು ತಮ್ಮಂತೆ ನಡೆದು ತೋರಿಸು ಕೂಗಿ ತೋರಿಸು ಎಂದು ಕೇಳುತ್ತವೆ. ನಾನು ಅವರಂತೆ ಅಭಿನಯಿಸಿದಾಗ ಸಂತಸದಿಂದ ಹೃದಯ ತುಂಬಿ ನಗುತ್ತವೆ.
ಕೋಗಿಲೆ:- ಇತರರ ಮನಸ್ಸನ್ನು ನೋಯಿಸುವಂತಿಲ್ಲದಿದ್ದರೆ ಸರಿ.
ಗಿಣಿ:- ಖಂಡಿತ ಹೌದು. ಅಣಕ ವಿದ್ಯೆ ಕಲಿಯಲು ನಿನಗೆ ಇಚ್ಚೆ ಇದೆಯೇ? ಅದನ್ನು ಬೇಕಾದರೆ ಕಲಿಸಬಲ್ಲೆ ನಾನು ನಿನಗೆ.
ಕೋಗಿಲೆ:- ಇಲ್ಲ ಗಿಣಿರಾಮ. ನನಗೆ ಹೇಳಿ ಮಾಡಿಸಿದ ಕಲೆ ಅದಲ್ಲ. ನನ್ನನ್ನು ಗಾನ ಕೋಗಿಲೆಯಾಗಿ ಕಾಣುವ ಹೆಬ್ಬಯಕೆ ಮಾತ್ರ ನನ್ನ ಮನದಲ್ಲಿ ತುಂಬಿದೆ. ಅವರವರ ಪ್ರತಿಭೆ ಅವರವರಿಗೆ. ನವಿಲಿನ ನೃತ್ಯ ಅರಗಿಣಿಯ ಮಾತು ಹೇಗೆ ಎಲ್ಲರ ಮನಸ್ಸನ್ನು ಒಲಿಸಬಲ್ಲದೋ ಹಾಗೆ ಕೋಗಿಲೆಯ ಗಾನ ಎಂದಿರಬೇಕು ಎಂಬುದೇ ನನ್ನ ಮನದಾಸೆ.
ಗಿಣಿ:- ನಿನ್ನಾಸೆ ಕೈಗೂಡಲಿ ಎಂದು ಆ ದೇವರನ್ನು ಪ್ರಾರ್ಥಿಸುತ್ತೇನೆ. ಆದರೆ ಗುರು ಎಂದು ನಿನಗೆ ಪ್ರಾಣಿ ಪಕ್ಷಿಗಳ ಆಸರೆ ಏಕೆ? ನಿನ್ನಲ್ಲಿ ಹಾಡು ಕಲಿಯುವ ಉತ್ಕಟಾಪೇಕ್ಷೆ ಇದೆ. ಹಾಗೆಯೇ ಮಧುರವಾದ ಧ್ವನಿಯೂ ಇದೆ. ಪ್ರಕೃತಿ ಮಾತೆಗಿಂತ ಒಳ್ಳೆಯ ಗುರು ಬೇಕೆ? ನಾವೆಲ್ಲಾ ನಮ್ಮ ವಿದ್ಯೆಯನ್ನು ಕಲಿತದ್ದು ಪ್ರಕೃತಿ ಮಾತೆಯಿಂದಲೇ ತಾನೇ. ನೀನು ನಾನು ಹೇಳಿದ ಹಾಗೆ ಮಾಡು. ಒಂಟಿಯಾಗಿ ಯಾವುದಾದರೂ ತೋಪಿನಲ್ಲಿ ಕುಳಿತುಕೊ. ಪ್ರಕೃತಿಯ ವಿಸ್ಮಯಗಳನ್ನು ಗಮನದಿಂದ ನೋಡು. ಸ್ವಯಂಶಕ್ತಿಯಿಂದ ಗಾನವಿದ್ಯೆಯನ್ನು ನಿನ್ನದಾಗಿಸಿಕೊಳ್ಳಬಲ್ಲೆ ನೀನು.
ಕೋಗಿಲೆ:- ಹಾಗೆನ್ನುವೆಯಾ ಗೆಳೆಯ. ಧನ್ಯವಾದಗಳು ನಿನಗೆ. ನೀ ಹೇಳಿದಂತೆ ಪ್ರಕೃತಿ ಮಾತೆಯನ್ನೇ ಪೂಜಿಸುತ್ತೇನೆ. ಅವಳಿಂದಲೇ ಗಾನವಿದ್ಯೆ ಪಡೆಯುತ್ತೇನೆ.
ಗಿಣಿ:- ನಾವೆಲ್ಲಾ ಪ್ರಕೃತಿ ಮಾತೆಯ ಮಡಿಲ ಮಕ್ಕಳಲ್ಲವೇ? ಅವಳಿಗೆ ಗೊತ್ತು ನಮಗೇನು ಕೊಡಬೇಕೆಂದು. ಅವಳ ಅನುಗ್ರಹ ಪಡೆದರೆ ನೀನು ಗಾನ ಕೋಗಿಲೆಯಾಗುವುದರಲ್ಲಿ ಸಂಶಯವೇ ಇಲ್ಲ.
ಕೋಗಿಲೆ:- ಹೌದು ನೀನಂದುದೇ ಸರಿ. ನಿನ್ನ ಈ ಉತ್ತಮ ಸಲಹೆಗೆ ನನ್ನ ಧನ್ಯವಾದಗಳು ಗೆಳೆಯ. ನಿನ್ನ ಗೆಳೆತನ ಸ್ಥಿರವಾಗಿರಲಿ ಎನಗೆ.
ಗಿಣಿ:- ಖಂಡಿತ ಇನ್ನುಮುಂದೆ ನಾವಿಬ್ಬರೂ ಸದಾ ಗೆಳೆಯರು.
ಕೋಗಿಲೆ:- ನಾನು ಪ್ರಕೃತಿ ಮಾತೆಯನ್ನು ಒಲಿಸಿಕೊಂಡು ಗಾನಕೋಗಿಲೆಯಾದಮೇಲೆ  ನಿನ್ನ ಬಳಿಗೆ ಬರುವೆ.
ಗಿಣಿ:- ಹಾಗೆಯೇ ಮಾಡು ಗೆಳೆಯ. ದೇವರು ನಿನಗೆ ಒಳ್ಳೆಯದನ್ನು ಮಾಡಲಿ.
                       [ಮತ್ತೆ ಹಾರಿತು ಕೋಗಿಲೆ]
ಸೂತ್ರಧಾರ:-    ದೂರ ಗಗನದಿ ಹಾರಿ ಹೋಯಿತು ಕೋಗಿಲೆ
                   ಕಾಡು ಮೇಡು ದಾಟಿ ಹೋಯಿತು ಕೋಗಿಲೆ
                   ನದಿಯ ದಂಡೆಯ ಮೇಲೆ ನಿಂತಿಹ ತೋಪಲಿ
                   ಮಾವು ಚಿಗುರಿತು ಮನವು ನಲಿಯಿತು ಆಗಲೇ
                   ಬಂದ ಋತುರಾಜ ಹೊಸ ಕಾವ್ಯ ಬರೆದ
                   ಎಲ್ಲೆಲ್ಲು ಜೀವ ತುಂಬಿಹಳು ಪ್ರಕೃತಿಮಾತೆ.
ಕೋಗಿಲೆ:-
ಆಹಾ! ಎಂತಹಾ ಸೌಂದರ್ಯ! ನದಿಯ ಕಡೆಯಿಂದ ಮಧುರವಾದ ಜುಳುಜುಳು ನಾದ. ಮಾವಿನ ಮರಗಳ ಮರ್ಮರ ಧ್ವನಿ. ತಂಗಾಳಿಯ ಇಂಪಾದ ನಾದ. ಆಹಾ! ಇದಲ್ಲವೇ ಸಂಗೀತ!
                    [ಹಾಡ ತೊಡಗಿತು ಕೋಗಿಲೆ ಕೂ…ಊ…ಕೂ…ಊ…ಊ]
ಸೂತ್ರಧಾರ:- ಕುಹೂ ಕುಹೂ ಕೋಗಿಲೆ
                   ಹಾಡ ತೊಡಗಿತು ಆಗಲೇ
                   ನದಿ ಕಲಿಸಿತು ಜುಳುಜುಳು ನಾದವಾ
                   ತಂಗಾಳಿಯು ಕಲಕಲ ನಾದವಾ
                   ಮರಗಳ ಮರಮರ ಮರ್ಮರ
                   ಹುಲ್ಲು ಗಾವಲಿನ ಸುಯ್ಯೆನ್ನುವಾ ಗಾಳಿ    ||ಕುಹೂ||
                   ಕಲಿಯಿತು ಕೋಗಿಲೆ
                  ಇಂಪಾದ ಸವಿಗಾನ
                  ವಸಂತನಋತುಗಾನ
                  ಹಾಡಿತು ನಲಿಯಿತು       ||ಕುಹೂ||
                 ಆ ಗಾನಕೆ ಕಾಡೆ ಮರುಳಾಯಿತು
                ಲೋಕಕೆಲ್ಲ ಮುದ ನೀಡಿತು.
               ಕೋಗಿಲೆಯ ಸಾಧನೆಗೆ ಮೆಚ್ಚಿ
               ಚಂದದಿ ಬಾಳಿರೆಂದೆನುತ
               ನಸುನಕ್ಕಳಾ ವನದೇವಿ.