ಕೂಡುಮನೆ
ಲೇಖಕ, ತಾಳಮದ್ದಳೆ ಅರ್ಥಧಾರಿ, ಉಪನ್ಯಾಸಕ ಹೀಗೆ ಹಲವು ಮುಖಗಳಿಂದ ಪ್ರಸಿದ್ಧರಾಗಿರುವವರು ರಾಧಾಕೃಷ್ಣ ಕಲ್ಚಾರ್. ಅವರ ಹಲವು ಕೃತಿಗಳು ಈಗಾಗಲೇ ಪ್ರಕಟವಾಗಿದ್ದು ಜನಪ್ರಿಯತೆ ಗಳಿಸಿವೆ. ತನ್ನದೇ ಆದ ಓದುಗರನ್ನು ಪಡೆದುಕೊಂಡ ಕಲ್ಚಾರ್ ಅವರು ಅಂಕಣಕಾರರಾಗಿಯೂ ಜನಪ್ರಿಯರು. ‘ಕೂಡುಮನೆ' ಎಂಬ ಈ ಪುಟ್ಟ ಕಾದಂಬರಿ ಸುಮಾರು ಮೂರು ದಶಕಗಳ ಹಿಂದೆ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿತ್ತು. ಸದ್ಯ ಮುದ್ರಿತ ಪ್ರತಿಗಳೆಲ್ಲ ಮುಗಿದಿರುವುದರಿಂದ ಎರಡನೆಯ ಬಾರಿಗೆ ಪ್ರಕಟವಾಗುತ್ತಿದೆ.
ಒಂದು ಹಳ್ಳಿಯ ಕೂಡು ಕುಟುಂಬದ ಕಥೆ ಇದು. ಮನಸ್ಸು ಒಡೆದುದರ ಪರಿಣಾಮ ಮನೆಯೂ ಒಡೆದು ಛಿದ್ರವಾದ ಕಥೆ. ಆದರೆ ಒಂದು ತಲೆಮಾರಿನ ಬಳಿಕ ಮತ್ತೆ ಮನಸ್ಸುಗಳು ಕೂಡಿಕೊಂಡು ಮನೆಯೂ ಒಂದಾಗುವ ಮಧುರ ಕಲ್ಪನೆಯಿಲ್ಲಿ ಅರಳಿದೆ. ಮೇಲ್ನೋಟಕ್ಕೆ ‘ಕೂಡುಮನೆ' ಹಳ್ಳಿಯ ಮನೆಯೊಂದರ ಚಿತ್ರಣವಾದರೂ, ಒಳನೋಟಕ್ಕೆ ವಿಸ್ತಾರವಾದ ಜಾಗತಿಕ ಬೆಳವಣಿಗೆಯ ಸೂಕ್ಸ್ಮವನ್ನು ಹೊಳೆಯಿಸುವುದು ಈ ಕಾದಂಬರಿಯ ವೈಶಿಷ್ಟ್ಯ.
ಈ ಕಾದಂಬರಿಯ ಬಗ್ಗೆ ರಾಧಾಕೃಷ್ಣ ಕಲ್ಚಾರ್ ತಮ್ಮ ‘ವಿಜ್ಞಾಪನೆ'ಯಲ್ಲಿ ಹೇಳಿರುವುದು ಹೀಗೆ - “‘ಕೂಡು ಮನೆ' ಎಂಬ ಈ ಪುಟ್ಟ ಕಾದಂಬರಿ ನನ್ನ ಪ್ರಾರಂಭಿಕ ಕೃತಿ. ಇಪ್ಪತ್ತೆಂಟು ವರ್ಷಗಳ ಹಿಂದೆ ಅನಂತ ಪ್ರಕಾಶ ಸಂಸ್ಥೆ ರಾಜ್ಯಮಟ್ಟದಲ್ಲಿ ಏರ್ಪಡಿಸಿದ ಕಾದಂಬರಿ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಗಳಿಸಿತ್ತು. ಮೂರು ದಶಕಗಳ ಹಿಂದಿನ ಕಾದಂಬರಿಯಿದು ಎಂದೆನಲ್ಲ. ಆಗ ಚಿಂತನೆಗಳು ಪಕ್ವಗೊಂಡಿರದ ಕಾರಣ ಸಾಕಷ್ಟು ಮಿತಿಗಳು ಇದ್ದೇ ಇರುತ್ತವೆ. ಆ ದೋಷಗಳನ್ನು ಗಣಿಸದೆ ಹಲವು ಮಂದಿ ಹಿರಿಯರು ಮೆಚ್ಚುನುಡಿಗಳನ್ನು ಆಡಿದ್ದರು.
ಒಂದು ಕೂಡು ಕುಟುಂಬದ ಆಗುಹೋಗುಗಳು ಆ ವ್ಯಾಪ್ತಿಯಲ್ಲಷ್ಟೇ ಉಳಿಯದೆ ಸಾಂಕೇತಿಕವಾಗಿ ವ್ಯಾಪಕತೆಯನ್ನು ಹೊಂದಿದೆ ಎಂಬ ಪರಿಕಲ್ಪನೆಯಿಂದ ಇದನ್ನು ಬರೆದಿದ್ದೆ. ಈಗ ಮತ್ತೊಮ್ಮೆ ಬರೆದರೆ ಇದಕ್ಕೆ ಬೇರೆಯೇ ಸ್ವರೂಪ ಬಂದೀತು. ಆದರೆ ಅದು ನನಗೆ ಸಮ್ಮತವಲ್ಲ. ಹೇಗಿತ್ತೋ ಹಾಗೆಯೇ ಪ್ರಕಟವಾಗುತ್ತಿದೆ.”
ಈ ಕೃತಿ ಮೊದಲ ಮುದ್ರಣ ಕಂಡದ್ದು ೧೯೯೪ರಲ್ಲಿ. ಸುಮಾರು ಮೂರು ದಶಕಗಳ ಬಳಿಕ ಈ ಕಾದಂಬರಿಯನ್ನು ಓದುವಾಗ ಓದುಗನ ಮನಸ್ಸಲ್ಲೂ ಕೆಲವೊಂದು ಪ್ರಶ್ನೆಗಳು ಕಾಡುವುದು ಸಹಜ. ಮೊದಲ ಮುದ್ರಣದ ಸಮಯದಲ್ಲಿ ಈ ಕೃತಿಗೆ ಮುನ್ನುಡಿಯನ್ನು ಬರೆದವರು ಖ್ಯಾತ ಸಾಹಿತಿ ಮುರಳೀಧರ ಉಪಾಧ್ಯ ಹಿರಿಯಡ್ಕ ಇವರು. ಅವರು ಈ ಕಾದಂಬರಿಯನ್ನು ಪರಿಚಯಿಸುತ್ತಾ ‘ಕೂಡುಮನೆ'ಲಿ ನಾಂದಿ ಎಂದು ಬರೆದಿದ್ದಾರೆ. ಅದರಲ್ಲಿ “ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಆಸುಪಾಸಿನ ಗ್ರಾಮೀಣ ಪರಿಸರದ ಅಡಿಕೆ ತೋಟದ ಬ್ರಾಹ್ಮಣ ಕುಟುಂಬವೊಂದರ ಕತೆ ಕಲ್ಚಾರರ ‘ಕೂಡುಮನೆ'ಯಲ್ಲಿದೆ. ಶಂಭಟ್ಟರ ಕೂಡುಮನೆ ಒಡೆಯುವುದು, ಅವರ ಮೊಮ್ಮಗನ ಕಾಲದಲ್ಲಿ ಮತ್ತೊಮ್ಮೆ ಕೂಡುಮನೆಯಾಗುವುದು ಈ ಕಾದಂಬರಿಯ ವಸ್ತು. ದುಡ್ಡಿನ ಲೆಕ್ಕಾಚಾರಕ್ಕೆ ಸಂಬಂಧಿಸಿ ಅಣ್ಣ-ತಮ್ಮಂದಿರಾದ ನಾರಾಯಣ-ಶಂಕರರಲ್ಲಿ ಉಂಟಾಗುವ ಮನಸ್ತಾಪವೇ ಕೂಡುಮನೆ ಒಡೆಯಲು ಕಾರಣವಾಗುತ್ತದೆ. ಬೆಂಗಳೂರಿನ ಕೃಷಿ ಕಾಲೇಜಿನಲ್ಲಿ ಪದವೀಧರನಾಗಿ ಮಹಾನಗರದ ಆಕರ್ಷಣೆಗಳಿಗೆ ಸಿಲುಕದೆ ಹಳ್ಳಿಗೆ ಹಿಂದಿರುಗುವ ಶ್ರೀಧರನ (ಶಂಭಟ್ಟರ ಮೊಮ್ಮಗ) ಕಣ್ಣೆದುರಿನಲ್ಲಿಯೇ ಕೂಡುಮನೆ ಪಾಲಾಗುತ್ತದೆ. ಮುಂದೆ ಕೂಡುಮನೆ ಹಿಸೆಯಾಗಲು ಕಾರಣನಾದ ನಾರಾಯಣ (ಶ್ರೀಧರನ ತಂದೆ) ಪಶ್ಚಾತ್ತಾಪ ಪಡುತ್ತಾನೆ.
ಮನೆ ಮಂದಿಯ ಸಂಬಂಧ ಗಾಢವಾಗಿ ಉಳಿದಿದೆಯೇ? ಅಥವಾ ಅದೂ ಬದಲಾಗಿದೆಯೇ? ಮನುಷ್ಯನ ಬುದ್ಧಿ ಬೆಳೆದರೆ ಸಾಲದೇ? ಹೃದಯದ ಭಾವನೆಗಳೂ ಏಕೆ ಬದಲಾಗಬೇಕು? ಅಮ್ಮ, ಅಪ್ಪ, ಅಣ್ಣ, ತಂಗಿ ಇತ್ಯಾದಿ ಸಂಬಂಧಗಳೂ ಬದಲಾಗುತ್ತಿವೆಯೋ? ಈ ಪ್ರಶ್ನೆಗಳು ಶಂಭಟ್ಟರಿಗೆ ಬಿಡಿಸಲಾಗದ ಒಗಟಾಗುತ್ತವೆ. ಮನುಷ್ಯ ಸಂಬಂಧಗಳನ್ನು ಕುರಿತ ನಿಗೂಢ ಒಗಟುಗಳನ್ನು ಬಿಡಿಸುವುದರಲ್ಲಿ ಕಾದಂಬರಿಕಾರ ರಾಧಾಕೃಷ್ಣ ಕಲ್ಚಾರರಿಗೆ ಆಸಕ್ತಿ ಇದೆ.
ಅವಿಭಕ್ತ ಕುಟುಂಬವೊಂದು ತಿರುಗಿ ಒಡೆದ ಮೇಲೆ, ತಿರುಗಿ ಕೂಡುಮನೆಯಾಗಬೇಕೆಂಬುದು ಒಂದು ಅಸಾಧ್ಯ ಆದರ್ಶವಲ್ಲವೇ? ಈ ಪ್ರಶ್ನೆ ಕಾದಂಬರಿಕಾರನನ್ನು ಕಾಡಿದೆ. ‘ಈಗ ಮತ್ತೆ ಒಟ್ಟಾಗುವುದು ಹೇಳಿದಷ್ಟು ಸುಲಭವೇ?’ ಎಂದು ಶ್ರೀಧರನ ಚಿಕ್ಕಪ್ಪ ರಾಜಾರಾಮ ಪ್ರಶ್ನಿಸುತ್ತಾನೆ. ಕೂಡುಮನೆ ಭಗ್ನಗೊಳ್ಳದ ಸ್ಥಾವರವಾಗಿ ಉಳಿಯಲು ಸಾಧ್ಯವೇ? ಈ ಕಾದಂಬರಿಯ ಕೊನೆಯ ಸಾಲುಗಳು ಹೀಗಿವೆ ‘ಅಂತೂ ಅಜ್ಜನ ಆಸೆ ಈಡೇರುವ ಲಕ್ಷಣ ಕಾಣುತ್ತದೆ. ಇನ್ನು ನನ್ನ ಮಕ್ಕಳೋ, ರಾಮನೋ ಪಾಲು ಕೇಳುವವರೆಗೆ ಹೀಗೇ ನಡೆದೀತು. ಆಮೇಲೆ ಮತ್ತೊಮ್ಮೆ ಪಾಲಿಗೆ ಜಗಳ' ಎನ್ನುತ್ತ ಶ್ರೀಧರ ನಕ್ಕ.
ಕೂಡುಮನೆಯವರು ಮತ್ತು ಅವರ ನೆರೆಹೊರೆಯ ಸ್ವಜಾತಿ ಬಾಂಧವರಲ್ಲದೆ ಅನ್ಯಜಾತಿಯವರಾರೂ ಇಲ್ಲಿ ಕಾಣಿಸುವುದಿಲ್ಲ. ಹೀಗೆ ಸ್ವಜಾತಿಯಾ ದ್ವೀಪದಲ್ಲಿ ಬದುಕುವುದು ಈ ಕಾಲದಲ್ಲಿ ಸಾಧ್ಯವೇ? ಇದು ಲೇಖಕರ ಅಖಂಡ ದೃಷ್ಟಿಗೆ ಸಂಬಂಧಿಸಿದ ಪ್ರಶ್ನೆಯೂ ಹೌದು. ‘ಕೂಡು ಮನೆ' ಯಲ್ಲಿ ನಾವು ಚಿಂತಿಸುವಂತೆ ಮಾಡುವ ಇನ್ನೊಂದು ಚಿಕ್ಕ ಪಾತ್ರ -ಶ್ರೀಹರಿ. ಈತನ ಅಂತರ್ ಜಾತೀಯ ವಿವಾಹದಿಂದಾಗಿ ಇವನ ತಂದೆ ನಾರಾಯಣನಿಗೆ ಮಾನಸಿಕ ಆಘಾತವಾಗುತ್ತದೆ. ಶ್ರೀಧರನ ಕೂಡುಮನೆಯಲ್ಲಿ ಶ್ರೀಹರಿ ದಂಪತಿಗಳಿಗೆ ಸ್ವಾಗತವಿದೆಯೇ? ಕಾದಂಬರಿಕಾರನ ನಿಲುವು ಅಸ್ಪಷ್ಟವಾಗಿದೆ.” ಎಂದಿದ್ದಾರೆ.
ಈ ಕಾದಂಬರಿಯು ಲೇಖಕರ ಚೊಚ್ಚಲ ಕಾದಂಬರಿಯಾಗಿರುವ ಕಾರಣ ಕೆಲವು ಕಡೆ ಗೋಜಲಗಳು, ಸಂದೇಹಗಳು ಮೂಡಿ ಹಾಗೆಯೇ ಉಳಿದು ಬಿಡುತ್ತವೆ. ಆದರೂ ಕೂಡು ಕುಟುಂಬವನ್ನು ಒಟ್ಟು ಮಾಡುವ ಕಥಾಹಂದರ ಹೊಂದಿರುವ ಕಾದಂಬರಿ ಓದಲು ತುಂಬಾ ಚೆನ್ನಾಗಿದೆ. ಖ್ಯಾತ ಕಲಾವಿದ ದಿನೇಶ್ ಹೊಳ್ಳ ಇವರು ಚಿತ್ರಿಸಿರುವ ಮುಖಪುಟದೊಂದಿಗೆ ಮೂಡಿಬಂದಿರುವ ಕಾದಂಬರಿ ಸುಮಾರು ೭೦ ಪುಟಗಳಷ್ಟಿದೆ.