ಕೂಡ್ಲಿಗಿಯ ಮಿಮಿಕ್ರಿ ಕಲಾವಿದ ಕೋಗಳಿ ಕೊಟ್ರೇಶ್ ಥೈಲ್ಯಾಂಡ್‌ನಲ್ಲಿ
ಗೆಳೆಯರ ಗುಂಪಿನಲ್ಲಿ ಆಗಾಗ ಖುಷಿಯಿಂದ ಪ್ರಾಣಿಗಳ ಧ್ವನಿಯನ್ನು ಅನುಕರಣೆ ಮಾಡುತ್ತ ಚಿಂವ್ ಚಿಂವ್, ಗುರ್ರ್ ಎನ್ನುತ್ತ, ಚಿತ್ರನಟರ ಅನುಕರಣೆ ಮಾಡುತ್ತಿದ್ದ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯ ಕೋಗಳಿ ಕೊಟ್ರೇಶ್ ಇತ್ತೀಚೆಗೆ ಕಾರ್ಯಕ್ರಮ ನೀಡಲು ಥೈಲ್ಯಾಂಡ್‌ಗೆ ಹಾರಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿತು.
ಕೊಟ್ರೇಶ್ ಕೂಡ್ಲಿಗಿಯಿಂದ ಥೈಲ್ಯಾಂಡ್‌ಗೆ ಹಾರಿದ ಮಾರ್ಗ ಅಷ್ಟು ಸುಲಭದ್ದಾಗಿರಲಿಲ್ಲ. ಅದರ ಹಿಂದೆ ಸಾಕಷ್ಟು ಶ್ರಮ, ಸಾಧನೆಯಿದೆ. ಪ್ರಾಥಮಿಕ ತರಗತಿಯಿಂದಲೇ ಮಿಮಿಕ್ರಿಯಲ್ಲಿ ಆಸಕ್ತಿ ಹೊಂದಿದ್ದ ಕೊಟ್ರೇಶ್ ತಮ್ಮ ತಂದೆಯವರಾದ ಕೋಗಳಿ ವೀರಣ್ಣನವರು ತಬಲಾ ನುಡಿಸುತ್ತಿದ್ದಾಗ, ಅದನ್ನೇ ಬಾಯಲ್ಲಿ ಹೇಳಿದರೆ ಹೇಗೆ ಬರಬಹುದೆಂಬುದರಿಂದ ಇವರ ಮಿಮಿಕ್ರಿ ಸಾಹಸಗಾಥೆ ಆರಂಭಗೊಳ್ಳುತ್ತದೆ. ನಂತರ ಅದೇ ಹವ್ಯಾಸವಾಗಿ, ಪ್ರಾಣಿ, ಪಕ್ಷಿ, ನಟರ, ವ್ಯಕ್ತಿಗಳ ಅನುಕರಣೆ ಮಾಡತೊಡಗಿದರು.
ಪ್ರೌಢಶಾಲಾ ಹಂತದ ವೇಳೆಗಾಗಲೇ ಕಾರ್ಯಕ್ರಮಗಳಲ್ಲಿ ತನ್ನ ಪ್ರತಿಭೆಯನ್ನು ತೋರುವಷ್ಟರ ಮಟ್ಟಿಗೆ ಅದರಲ್ಲಿ ಹಿಡಿತ ಸಾಧಿಸಿದ ಕೊಟ್ರೇಶ್ ನಂತರ ಮರಳಿ ನೋಡಿಲ್ಲ. ಕೊಟ್ರೇಶ್‌ರ ಮಿಮಿಕ್ರಿಯ ವಿಶೇಷತೆಯೆಂದರೆ, ವಿವಿಧ ಪ್ರಾಣಿಗಳ ಧ್ವನಿಯ ಅನುಕರಣೆ, ನಟರ, ರಾಜಕಾರಣಿಗಳ ಅನುಕರಣೆ, ಧ್ವನಿಯ ಮೂಲಕ ತಬಲಾ, ಕ್ಯಾಸಿಯೋ, ವಿದೇಶಿ ಸಂಗೀತವನ್ನು ಹೊಮ್ಮಿಸುವುದು. ಕೇವಲ ಧ್ವನಿಯ ಏರಿಳಿತಗಳ ಮೂಲಕ ವಿದೇಶಿ ಸಂಗೀತವನ್ನು ನುಡಿಸುವುದು ಮುಂತಾದವು. ಇದುವರೆಗೂ ರಾಜ್ಯಾದ್ಯಂತ ೩,೦೦೦ದಷ್ಟು ಕಾರ್ಯಕ್ರಮಗಳನ್ನು ನೀಡಿದ ಹಿರಿಮೆ ಇವರದು. ಹಂಪಿ ಉತ್ಸವ, ದಸರಾ ಉತ್ಸವ, ಕನ್ನಡ ಸಾಹಿತ್ಯ ಸಮ್ಮೇಳನಗಳು, ಮೂಡುಬಿದ್ರೆಯ ಆಳ್ವಾಸ್ ನುಡಿಸಿರಿ, ಜಿಲ್ಲಾ ಕಾರ್ಯಕ್ರವಗಳು, ದೂರದರ್ಶನ ಹೀಗೇ ಸಾಗುತ್ತದೆ ಇವರ ಪಯಣ. ಇವರ ಪ್ರತಿಭೆಯನ್ನು ಕಂಡ ಥೈಲ್ಯಾಂಡ್‌ನ ಥಾಯ್ ಕನ್ನಡ ಬಳಗದ ಅಧ್ಯಕ್ಷ ಮೋಹನದಾಸ್ ಕೊಟ್ರೇಶ್‌ರನ್ನು ಥೈಲ್ಯಾಂಡ್‌ಗೆ ಆಹ್ವಾನಿಸಿದರು. ಕೇವಲ ಕೊಟ್ರೇಶ್‌ರದೇ ಕಾರ್ಯಕ್ರಮವೆಂಬುದೇ ಇದರ ವಿಶೇಷ. ಮಿಮಿಕ್ರಿ ಕಲೆಯನ್ನು ಗಂಟೆಗಟ್ಟಲೆ ಒಂದು ಕಾರ್ಯಕ್ರಮವೆಂಬಂತೆ ಕೊಡುವುದು ಕಷ್ಟ. ಆರ್ಕೆಸ್ಟ್ರಾ ತಂಡಗಳಲ್ಲಿ ಆಗಾಗ ಬಂದು ಹೋಗುವ ಮಿಮಿಕ್ರಿ ಕಲಾವಿದರೇ ಹೆಚ್ಚು, ಆದರೆ ಕೇವಲ ಇದನ್ನೇ ಒಂದು ಕಾರ್ಯಕ್ರಮವನ್ನಾಗಿ ಕೊಡುವುದು ಸುಲಭವಲ್ಲ ಎಂಬುದು ಕೊಟ್ರೇಶ್ ಅಭಿಪ್ರಾಯ.
ಇತ್ತೀಚೆಗೆ ಅಮೆರಿಕದಲ್ಲಿ ಅಕ್ಕ ಬಳಗದಿಂದ ನಡೆದ ಕಾರ್ಯಕ್ರಮದಲ್ಲಿ ಕೊಟ್ರೇಶ್ ಪಾಲ್ಗೊಳ್ಳಬೇಕಾಗಿತ್ತು. ಆದರೆ ಕೊನೆಯ ಗಳಿಗೆಯಲ್ಲಿ ಇವರ ಬದಲಾಗಿ ರಾಜಕಾರಣಿಯೊಬ್ಬರ ಹೆಸರು ಪಟ್ಟಿಯಲ್ಲಿ ಸೆರ್ಪಡೆಗೊಂಡಿದ್ದರಿಂದ ಇವರಿಗೆ ಅವಕಾಶ ತಪ್ಪಿಹೋಯಿತು. ಆದರೂ ಚಿಂತೆಯೇನಿಲ್ಲ, ಥೈಲ್ಯಾಂಡ್‌ಗೆ ಹೋಗುವ ಅವಕಾಶ ದೊರೆಯಿತಲ್ಲ ಎಂಬುದೇ ಇವರ ಸಂತೋಷ. ಕೂಡ್ಲಿಗಿಯಿಂದ ಥೈಲ್ಯಾಂಡ್‌ಗೆ ಹಾರಿದ ಕೊಟ್ರೇಶ್ ಅದು ತಮ್ಮ ಜೀವನದಲ್ಲಿಯೇ ಮರೆಯಲಾರದ ಕಾರ್ಯಕ್ರಮ ಎಂದು ನೆನಪಿಸಿಕೊಳ್ಳುತ್ತಾರೆ. ಥೈಲ್ಯಾಂಡ್‌ನಲ್ಲಿ ನಿರಂತರ ಒಂದೂವರೆ ಗಂಟೆಯಷ್ಟು ಕಾಲ ಕಾರ್ಯಕ್ರಮ ನೀಡಿದ ಕೊಟ್ರೇಶ್‌ರನ್ನು ಅಲ್ಲಿನ ಕನ್ನಡಿಗರು ತುಂಬು ಮನದಿಂದ ಅಭಿನಂದಿಸಿದರಂತೆ.
ಥೈಲ್ಯಾಂಡ್ ಪ್ರಯಾಣ, ಅಲ್ಲಿನ ಪರಿಸರದ ಬಗ್ಗೆ ಕೊಟ್ರೇಶ್‌ರನ್ನು ಕೇಳಿದಾಗ, ಅಲ್ಲಿನ ಜನ ಶ್ರಮ ಜೀವಿಗಳು. ತಾವು ನೋಡಿದಂತೆ ಅಲ್ಲಿ ಸೋಮಾರಿಗಳಾಗಿ ಕಾಲ ಕಳೆಯುವವರನ್ನು ನೋಡಲೇ ಇಲ್ಲ ಎಂದು ಅವರು ತಿಳಿಸಿದರು. ಥೈಲ್ಯಾಂಡ್ ಜನರ ವಿಶೇಷವೆಂದರೆ ಅವರು ತಮ್ಮ ಸಂಸ್ಕೃತಿಯನ್ನು ಎಲ್ಲೂ ಬಿಟ್ಟುಕೊಟ್ಟಿಲ್ಲ. ಇಂದಿಗೂ ಅವರು ತಮ್ಮ ವೇಷಭೂಷಣದಲ್ಲಿ, ಮಾತಿನಲ್ಲಿ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿದ್ದಾರೆ. ಇಂಗ್ಲೀಷ ವ್ಯಾಮೋಹ ಇಲ್ಲವೆಂದೇ ಹೇಳಬೇಕು, ಥಾಯ್ ಭಾಷೆಯೇ ಅಲ್ಲಿನ ಅಧಿಕೃತ ಭಾಷೆ, ಹೀಗಾಗಿ ನಾವು ಏನೇ ಮಾತನಾಡಿದರು ಒಬ್ಬರು ದುಭಾಷಿ ಬೇಕೇ ಬೇಕು ಎಂದರು. ಪರಿಸರಕ್ಕೆ ಅತ್ಯಂತ ಪ್ರಾಮುಖ್ಯತೆ ಕೊಡುವ ಥಾಯ್ ಜನ ಸದಾ ಶಿಸ್ತಿನಿಂದಿರುತ್ತಾರೆ ಎಂದರು. ನೀರು ಪೋಲಾಗದಂತೆ ಅತ್ಯಂತ ಕಾಳಜಿ ವಹಿಸುತ್ತಾರೆ, ವಿದ್ಯುತ್ ಉಳಿತಾಯದ ಬಗ್ಗೆಯೂ ಹೆಚ್ಚಿನ ಗಮನ ನೀಡುತ್ತಾರೆ. ಹಾಗೆಂದೇ ಅಲ್ಲಿನ ಪ್ರತಿ ಶೌಚಾಲಯದಲ್ಲೂ ನೀರು ಹಾಗೂ ವಿದ್ಯುತ್‌ನ್ನು ಮಿತವ್ಯಯವಾಗಿ ಬಳಸಬೇಕೆಂಬ ನಾಮಫಲಕಗಳಿರುತ್ತವೆ ಎಂದು ಕೊಟ್ರೇಶ್ ತಿಳಿಸಿದರು. ಥಾಯ್ ಜನರ ಮುಖ್ಯ ಆಹಾರ ನೂಡಲ್ಸ್. ಅದನ್ನು ಹೊರತುಪಡಿಸಿದರೆ ಅವರು ಮಾಂಸಾಹಾರಿಗಳು. ಏಡಿ, ಕಪ್ಪೆಚಿಪ್ಪುಗಳನ್ನು ಸವಿಯುತ್ತಾರೆ. ತರಕಾರಿ, ಹಣ್ಣುಗಳನ್ನೂ ಅಡಿಗೆಗೆ ಬಳಸುತ್ತಾರೆ ಎಂದರು. ಥೈಲ್ಯಾಂಡ್ ಆನೆಗಳು ಹಾಗೂ ಮರದ ಕೆತ್ತನೆಗಳಿಗೆ ಹೆಸರುವಾಸಿ ಎಂದು ಅವರು ತಿಳಿಸಿದರು. ತಮ್ಮ ಪ್ರಥಮ ವಿದೇಶ ಪ್ರಯಾಣ ಜೀವನದಲ್ಲಿಯೇ ಮರೆಯಲಾರದಂಥದ್ದು ಎಂದು ಅವರು ನೆನೆದರು. ಹಿಂದೆ ಗೇಲಿ ಮಾಡುತ್ತ್ದಿದವರೇ ಇಂದು ಬೆರಗುಗೊಳ್ಳುವಂತೆ ನಾನು ಸಾಧನೆ ಮಾಡಿರುವೆ. ಇದಕ್ಕೆ ಎಲ್ಲರ ಪ್ರೋತ್ಸಾಹ, ಸಹಕಾರವೂ ಕಾರಣ ಎಂದು ಕೊಟ್ರೇಶ್ ಸ್ನೇಹಿತರನ್ನು, ಹಿರಿಯರನ್ನು ಕೃತಜ್ಞತೆಯಿಂದ ನೆನೆಯುತ್ತಾರೆ. ತಮ್ಮ ಯಶಸ್ಸಿಗೆ ಹಾಸ್ಯ ಕಲಾವಿದ ಕೃಷ್ಣೇಗೌಡರು ಕಾರಣ ಎಂದರು. ಅಂದಹಾಗೆ ಕೊಟ್ರೇಶ್ ಸದ್ಯ ಕೂಡ್ಲಿಗಿ ತಾಲ್ಲೂಕಿನ ಚೌಡಾಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
-ಸಿದ್ಧರಾಮ ಹಿರೇಮಠ. ಕೂಡ್ಲಿಗಿ