ಕೃತಕ ಬುದ್ದಿಮತ್ತೆಗೆ ಒತ್ತು

ಕೃತಕ ಬುದ್ದಿಮತ್ತೆಗೆ ಒತ್ತು

ಚೀನಾ ಗಡಿಯಲ್ಲಿ ಯಾವುದೇ ಅನಿಶ್ಚಿತತೆಯನ್ನು ಎದುರಿಸಲು ಸೇನೆ ಸಿದ್ಧವಿದೆ. ಉತ್ತರ ಗಡಿ ಪ್ರದೇಶಗಳಲ್ಲಿ ಪರಿಸ್ಥಿತಿ ಸಾಮಾನ್ಯವಾಗಿದೆ. ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎಲ್ ಎ ಸಿ) ಬಲವಾದ ಕಾವಲನ್ನು ಕಾಯ್ದುಕೊಂಡಿದ್ದು, ಚೀನಾ ಸೇನೆಯನ್ನು ಸಮರ್ಥವಾಗಿ ಎದುರಿಸುತ್ತೇವೆ. ನಮ್ಮ ಪೂರ್ವ ಕಮಾಂಡ್ ಎದುರು ಚೀನಾ ಸೈನಿಕರ ಸಂಖ್ಯೆಯಲ್ಲಿ ಹೆಚ್ಚಳವಿದ್ದು, ಅದರ ಮೇಲೆ ನಾವು ನಿಗಾ ಹೊಂದಿದ್ದೇವೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರು ೭೫ನೇ ಭೂಸೇನಾ ದಿನಾಚರಣೆ ಕಾರ್ಯಕ್ರಮದಲ್ಲಿ ಹೇಳುವ ಮೂಲಕ ಗಡಿ ಪ್ರದೇಶಗಳಲ್ಲಿನ ಸ್ಥಿತಿಗತಿ ಮೇಲೆ ಬೆಳಕು ಚೆಲ್ಲಿದ್ದಾರೆ. ಜಮ್ಮು ಮತ್ತು ಪಂಜಾಬ್ ನಲ್ಲಿ ಅಂತರಾಷ್ಟ್ರೀಯ ಗಡಿ ವಲಯದಲ್ಲಿ ಶಸ್ತ್ರಾಸ್ತ್ರಗಳು ಮತ್ತು ಮಾದಕವಸ್ತುಗಳ ಕಳ್ಳ ಸಾಗಾಣಿಕೆ ಮುಂದುವರೆದಿದೆ. ಜಮ್ಮು-ಕಾಶ್ಮೀರದ ಪರಿಸ್ಥಿತಿಗೆ ಸಂಬಂಧಿಸಿದಂತೆ, ಫೆಬ್ರವರಿ ೨೦೨೧ರಲ್ಲಿ ಮಾಡಿಕೊಂಡ ಕದನ ವಿರಾಮ ಒಪ್ಪಂದವು ಉತ್ತಮವಾಗಿದೆ. ಆದರೆ, ಭಯೋತ್ಪಾದನೆ ಮತ್ತು ಭಯೋತ್ಪಾದಕ ಮೂಲಸೌಕರ್ಯಕ್ಕೆ ಗಡಿಯಾಚೆಗಿನ ಬೆಂಬಲ ಮುಂದುವರೆದಿದೆ. ಗಡಿಯುದ್ದಕ್ಕೂ ಭಯೋತ್ಪಾದಕ ಮೂಲಸೌಕರ್ಯ ಇನ್ನೂ ಉಳಿದಿದೆ ಎಂದು ಹೇಳುವ ಮೂಲಕ ವಾಸ್ತವವನ್ನು ಕೂಡಾ ಅವರು ತೆರೆದಿಟ್ಟಿದ್ದಾರೆ. ಭಾರತದ ಗಡಿ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಭೂಸೇನೆಯ ದಿನ ಕಾರ್ಯಕ್ರಮವು ಇದೇ ಮೊದಲ ಬಾರಿಗೆ ದೆಹಲಿ ಹೊರತು ಪಡಿಸಿ ಬೇರೆ ನಗರದಲ್ಲಿ ಭಾನುವಾರ ಆಯೋಜನೆಗೊಂಡಿತ್ತು. ಈ ಕಾರ್ಯಕ್ರಮ ಜರುಗಿದ್ದು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಎಂಬುದು ವಿಶೇಷವಾಗಿತ್ತು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಸೇನೆ ಸಾಮರ್ಥ್ಯ ಹಾಗೂ ದಕ್ಷತೆಯನ್ನು ಅತ್ಯಾಧುನಿಕ ಶಸ್ತ್ರಾಸ್ತ್ರ ಹಾಗೂ ತಂತ್ರಜ್ಞಾನದ ಮೂಲಕ ನಿರಂತರವಾಗಿ ಹೆಚ್ಚಿಸಬೇಕಾದ ಅಗತ್ಯವನ್ನು ಪ್ರತಿಪಾದಿಸಿದ್ದಾರೆ. 

ವಿಶ್ವದ ದೊಡ್ಡ ಸೈನ್ಯಗಳು ಹೊಸ ಆಲೋಚನೆಗಳು, ತಂತ್ರಜ್ಞಾನಗಳ ಮೂಲಕ ಕಾರ್ಯನಿರ್ವಹಿಸಲು ಮುಂದಾಗಿವೆ. ಹೆಚ್ಚಿನ ಶಸ್ತ್ರಾಸ್ತ್ರಗಳನ್ನು ಕೃತಕ ಬುದ್ಧಿಮತ್ತೆಯ ಮೂಲಕ ನಿರ್ವಹಿಸಲಾಗುತ್ತದೆ. ಇದರಿಂದಾಗಿ ಮಾನವ ಉಪಸ್ಥಿತಿಯ ಅಗತ್ಯ ತಗ್ಗಿಸಲಾಗುತ್ತದೆ. ತಂತ್ರಜ್ಞಾನದ ಬಳಕೆ ತೀವ್ರವಾಗುತ್ತಿರುವ ಈ ಕಾಲದಲ್ಲಿ ಸೈನಿಕರು ಕೂಡ ತಂತ್ರಜ್ಞಾನದ ಸಮ್ಮಿಲನವಾಗಿದ್ದಾರೆ ಎಂದು ರಕ್ಷಣಾ ಸಚಿವರು ಹೇಳಿದ್ದು ಚೀನಾದತ್ತ ಬೊಟ್ಟು ಮಾಡಿದಂತಿತ್ತು. ವಂಶವಾಹಿಯಲ್ಲಿ ಬದಲಾವಣೆ ಮಾಡುವ ಮೂಲಕ ಸೂಪರ್ ಸೈನಿಕರನ್ನು ತಯಾರಿಸಲು ಚೀನಾ ಮುಂದಾಗಿದೆ ಎಂದು ಅಮೇರಿಕಾದ ಬೇಹುಗಾರಿಕಾ ಸಂಸ್ಥೆಗಳು ವರದಿ ನೀಡಿದ್ದು, ಈ ಹಿನ್ನಲೆಯಲ್ಲಿಯೇ ರಕ್ಷಣಾ ಸಚಿವರು ನೀಡಿರುವ ಮುನ್ನೆಚ್ಚರಿಕೆ ಇದಾಗಿದೆ ಎಂದು ಪರಿಗಣಿಸಬಹುದಾಗಿದೆ. ೧೨ ಲಕ್ಷ ೩೭ ಸಾವಿರ ಸಕ್ರಿಯ ಯೋಧರು ಹಾಗೂ ೯ ಲಕ್ಷ ೬೦ ಸಾವಿರ ಸಂಖ್ಯೆಯ ಮೀಸಲು ಪಡೆಯ ಯೋಧರನ್ನು ಭಾರತೀಯ ಭೂಸೇನೆ ಹೊಂದಿದೆ. ೨೦ ಲಕ್ಷ ಸೈನಿಕರನ್ನು ಹೊಂದಿರುವ ಚೀನಾದ ನಂತರ ಅತಿ ದೊಡ್ಡ ಭೂಸೇನೆ ಭಾರತದ್ದಾಗಿದೆ. ಕೇಂದ್ರ ಸರ್ಕಾರವು ಸೈನಿಕರ ಸಂಖ್ಯೆಯನ್ನು ೨ ಲಕ್ಷದಷ್ಟು ಕಡಿತಗೊಳಿಸುವ ಆಲೋಚನೆ ಹೊಂದಿದ್ದು, ಇನ್ನಷ್ಟು ಆಧುನಿಕ ತಂತ್ರಜ್ಞಾನ ಮತ್ತು ಶಸ್ತ್ರಾಸ್ತ್ರಗಳನ್ನು ಒದಗಿಸಲು ಮುಂದಾಗಿದೆ. ಈ ಚಿಂತನೆಗಳಿಗೆ ಅನುಗುಣವಾಗಿಯೇ ರಕ್ಷಣಾ ಸಚಿವರ ಅಭಿಪ್ರಾಯಗಳು ಮೂಡಿಬಂದಿವೆ ಎನ್ನಬಹುದಾಗಿದೆ. ಒಟ್ಟಿನಲ್ಲಿ, ಆಧುನಿಕ ಕಾಲದ ಅಗತ್ಯಕ್ಕೆ ತಕ್ಕಂತೆ ಸಜ್ಜಾಗುವ ಮೂಲಕ ದೇಶದ ಸುರಕ್ಷತೆಯನ್ನು ನಮ್ಮ ಸೇನೆ ಖಾತ್ರಿ ಪಡಿಸುತ್ತದೆ ಎಂದು ವಿಶ್ವಾಸವಿಡಬಹುದಾಗಿದೆ.

ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೧೬-೦೧-೨೦೨೩ 

ಚಿತ್ರ ಕೃಪೆ: ಅಂತರ್ಜಾಲ ತಾಣ