ಕೃತಕ ಬುದ್ಧಿಮತ್ತೆ ಸೃಷ್ಟಿಸಿದ “ಅಮ್ಮ”
ದಿನದಿನವೂ ಕೃತಕ ಬುದ್ಧಿಮತ್ತೆಯ ಬಗ್ಗೆ ಹೊಸಹೊಸ ಸುದ್ದಿಗಳನ್ನು ಕೇಳುತ್ತಲೇ ಇದ್ದೇವೆ. ಕೃತಕ ಬುದ್ಧಿಮತ್ತೆಯಿಂದ ಕೆಲಸ ಮಾಡುವ ರೋಬೋಟುಗಳು ಹಲವು ಕ್ಷೇತ್ರಗಳಿಗೆ ಪ್ರವೇಶಿಸಿವೆ.
ಹೋಟೆಲುಗಳಲ್ಲಿ ತಿಂಡಿ-ತಿನಿಸು ತಂದು ಕೊಡಲು; ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಲು - ಅಂತಹ ರೋಬೋಟುಗಳ ಬಳಕೆ ಬಗ್ಗೆ ಕೇಳಿದ್ದೇವೆ. ಮನೆಕೆಲಸಗಳಿಗಾಗಿಯೂ ರೋಬೋಟುಗಳ ಬಳಕೆ ಸುದ್ದಿಯಾಗಿದೆ. ಅದೇ ರೀತಿಯಲ್ಲಿ, ವಿಮಾನ ನಿಲ್ದಾಣಗಳಲ್ಲಿ ಧ್ವನಿವರ್ಧಕಗಳ ಮೂಲಕ ವಿಷಯ ಘೋಷಿಸಲು; ಸುದ್ದಿ ಚಾನೆಲುಗಳಲ್ಲಿ ವಾರ್ತೆಗಳನ್ನು ಓದಲು (ವಾರ್ತಾ ವಾಚಕಿಯರಾಗಿ) ಕೃತಕ ಬುದ್ಧಿಮತ್ತೆಯ ಬಲದಿಂದ ಕೆಲಸ ಮಾಡುವ “ಪರದೆಯಲ್ಲಿ ಮೂಡುವ ವ್ಯಕ್ತಿ”ಗಳನ್ನೂ ಕಂಡಿದ್ದೇವೆ.
ಇದೀಗ ಅಂತಹ “ವ್ಯಕ್ತಿ”ಗಳ ಜಗತ್ತಿಗೆ ಭಾರತದ ಪ್ರಪ್ರಥಮ ಕಾಲ್ಪನಿಕ “ಅಮ್ಮ”ನ ಪ್ರವೇಶವಾಗಿದೆ. ಆಕೆಗೆ ಕಾವ್ಯಾ ಮೆಹ್ರಾ ಎಂದು ಹೆಸರಿಡಲಾಗಿದೆ. ಇದೇನು ಕೇವಲ ಪರದೆಯ ಮೂಡುವ ಸುಂದರ ಆಕೃತಿ ಎಂದು ಭಾವಿಸಬೇಡಿ. ಆಕೆ ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲ ಒಂದು ಸುಸಜ್ಜಿತ “ವರ್ಚುವಲ್ ವ್ಯಕ್ತಿ”.
ಕಾವ್ಯಾ ಮೆಹ್ರಾ ಸಾಮಾನ್ಯ ತಾಯಿಯಲ್ಲ. ಕೃತಕ ಬುದ್ಧಿಮತ್ತೆ ವಿನ್ಯಾಸಗೊಳಿಸಿದ ಮಾಡೆಲ್. ತಾಯ್ತನದ ಎಲ್ಲ ಸಂಗತಿಗಳನ್ನೂ ಕಲಿತಿದ್ದಾಳೆ. ವಾತ್ಸಲ್ಯ ತುಂಬಿದ ತಾಯಿ ಹೋದಿರಬೇಕಾದ ಎಲ್ಲ ಸದ್ಗುಣಗಳು ಮತ್ತು ಜವಾಬ್ದಾರಿಗಳು ಆಕೆಗೆ ಚೆನ್ನಾಗಿ ಗೊತ್ತು.
“ಭಾರತದ ಮೊಟ್ಟಮೊದಲ ತಾಯಿ, ನಿಜವಾದ ಅಮ್ಮಂದಿರಿಂದ ನಡೆಸಲ್ಪಡುತ್ತಿದೆ” ಎಂಬ ಹೆಗ್ಗಳಿಕೆಯ ಕಾವ್ಯಾ ಮೆಹ್ರಾಳನ್ನು “ಕಲೆಕ್ಟಿವ್ ಆರ್ಟಿಸ್ಟ್ಸ್ ನೆಟ್-ವರ್ಕ್” ಎಂಬ ಸಂಸ್ಥೆ ಸೃಷ್ಟಿಸಿದೆ. ಆಕೆಯ ವಿವರಗಳನ್ನು ಇನ್-ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ನಿಜಜೀವನದ ತಾಯಂದಿರ ಅನುಭವಗಳನ್ನು ತಿಳಿದಿರುವ ಕಾವ್ಯಾ ಮೆಹ್ರಾ “ಡಿಜಿಟಲ್ ವ್ಯಕ್ತಿತ್ವ” ಹೊಂದಿರುವ ತಾಯಿ. ಕೌಟುಂಬಿಕ ಬದುಕು, ಆರೋಗ್ಯ, ಅಡುಗೆ - ಅಮ್ಮಂದಿರು ತಿಳಿದಿರಲೇ ಬೇಕಾದ ಇಂತಹ ಹತ್ತುಹಲವು ಸಂಗತಿಗಳು ಈ ಡಿಜಿಟಲ್ ತಾಯಿಗೆ ನಿಜವಾದ ಅಮ್ಮಂದಿರಿಗಿಂತ ಚೆನ್ನಾಗಿ ತಿಳಿದಿದೆ. ಮಕ್ಕಳಿಗೆ ಅಮ್ಮಂದಿರು ನೀಡಬೇಕಾದ ತಾಯ್ತನದ ಎಲ್ಲ ವಿಷಯಗಳಲ್ಲೂ ಕಾವ್ಯಾ ಮೆಹ್ರಾ ನಿಜವಾದ ಅಮ್ಮಂದಿರಿಗಿಂತ ಒಂದು ಹೆಜ್ಜೆ ಮುಂದೆ ಎಂದು ಹೇಳಲಾಗಿದೆ.
ಮಕ್ಕಳ ಲಾಲನೆಪಾಲನೆಯ ಸಲಹೆಗಳ ಜೊತೆಗೆ ಮಕ್ಕಳ ಬುದ್ಧಿಮಟ್ಟ ಹೆಚ್ಚಳಕ್ಕೂ ಆಕೆ ಸಲಹೆ ನೀಡಲಿದ್ದಾಳಂತೆ! ಮಕ್ಕಳ ವಯಸ್ಸನ್ನು ಆಧರಿಸಿ, ಅವರಿಗೆ ಅಗತ್ಯವಾದ ಕಲಿಕೆ ಯಾವುದು? ಮಕ್ಕಳ ದೈಹಿಕ ಮತ್ತು ಮಾನಸಿಕ ವಯಸ್ಸನ್ನು ಆಧರಿಸಿ, ಅದಕ್ಕೆ ಅನುಗುಣವಾಗಿ ಯಾವ್ಯಾವ ಮಾಹಿತಿಗಳನ್ನು ಅವರೊಂದಿಗೆ ಹಂಚಿಕೊಳ್ಳಬೇಕು? ಇಂತಹ ಹತ್ತುಹಲವು ಪ್ರೋಗ್ರಾಮಿಂಗ್ ಮೂಲಕ ಕಾವ್ಯಾ ಮೆಹ್ರಾ ಎಂಬ ಈ ಕೃತಕ ಬುದ್ಧಿಮತ್ತೆಯ ಅಮ್ಮ ಗಮನ ಸೆಳೆಯುತ್ತಿದ್ದಾಳೆ.
ದಿನದಿನದ ಆಗುಹೋಗುಗಳು; ವಿವಿಧ ಖಾದ್ಯಗಳ ತಯಾರಿ; ದೀಪಾವಳಿ ಇತ್ಯಾದಿ ಹಬ್ಬಗಳ ಆಚರಣೆಯ ವಿಧಿವಿಧಾನಗಳು - ಇಂತಹ ಹಲವಾರು ವಿಷಯಗಳು ಆಕೆಯ ಇನ್-ಸ್ಟಾಗ್ರಾಮ್ ಪೋಸ್ಟುಗಳಲ್ಲಿ ತುಂಬಿರುತ್ತವೆ. ತಾನು ಗರ್ಭಿಣಿ ಆಗಿದ್ದಾಗಿನ ಅನುಭವಗಳು, ತಾನು ಎಂತಹ ತಾಯಿ ಆಗಬೇಕೆಂಬ ಕನಸುಗಳು - ಇವನ್ನೂ ಕಾವ್ಯಾ ಮೆಹ್ರಾ ಪ್ರಾಮಾಣಿಕವಾಗಿ ಹಂಚಿಕೊಳ್ಳುತ್ತಾಳೆ.
ಭಾರತೀಯ ಕೃತಕ ಬುದ್ಧಿಮತ್ತೆ ಆಧರಿಸಿದ ಇನ್-ಫ್ಲುಯೆನ್ಸರ್ ಆಗಿ ಕಾವ್ಯಾ ಮೆಹ್ರಾ ಎಂಬ “ಅಮ್ಮ”ನನ್ನು ಅಭಿವೃದ್ಧಿ ಪಡಿಸಲಾಗಿದೆ. ಇನ್-ಸ್ಟಾಗ್ರಾಮಿನಲ್ಲಿ ಈಗಾಗಲೇ ಈಕೆಗೆ ಹಲವಾರು ಫಾಲೋವರ್ಸ್ ಇದ್ದಾರೆ! ಈ ಇನ್-ಸ್ಟಾಗ್ರಾಮ್ ಖಾತೆಯಲ್ಲಿ ಮಕ್ಕಳು, ತಾಯಂದಿರು, ಹೆತ್ತವರು ಮತ್ತು ಪೋಷಕರಿಗೆ ಅತ್ಯಗತ್ಯವಾದ ಮಾಹಿತಿಗಳನ್ನು ಪ್ರಕಟಿಸಲಾಗುತ್ತಿದೆ.
ಇದು ಆರಂಭ. ಇನ್ನು ಮುಂದೆ ಯಾವ್ಯಾವ ಡಿಜಿಟಲ್ ವ್ಯಕ್ತಿಗಳು ನಮ್ಮ ಜೀವನದಲ್ಲಿ ಪ್ರವೇಶಿಸಿ, ನಮ್ಮ ಯೋಚನಾಲಹರಿ, ನಮ್ಮ ಪ್ರತಿಕ್ರಿಯೆಗಳು ಮತ್ತು ನಮ್ಮ ವರ್ತನೆಗಳ ಮೇಲೆ ಪ್ರಭಾವ ಬೀರುತ್ತಾರೆ ಎಂಬುದನ್ನು ಕಾದು ನೋಡಬೇಕು. ಇವೆಲ್ಲದರಲ್ಲಿ ಒಳ್ಳೆಯದೂ ಇದೆ ಮತ್ತು ಕೆಟ್ಟದೂ ಇದೆ ಎಂಬ ಎಚ್ಚರ ನಮಗೆ ಇರಲೇ ಬೇಕು, ಅಲ್ಲವೇ?
ಫೋಟೋ ಕೃಪೆ: ಇನ್-ಸ್ಟಾಗ್ರಾಮ್