ಕೃತಕ ಸುಗಂಧ ಇರಲಿ ಎಚ್ಚರ ! (ಭಾಗ ೧)
ಈ ಕಂಪ್ಯೂಟರ್ ಯುಗದಲ್ಲಿ ಮಾನವನ ಜೀವನಶೈಲಿ ವೇಗವಾಗಿ ಬದಲಾಗುತ್ತಿದೆ. ಫ್ಯಾಶನ್ ಯುಗ ಸಂಪೂರ್ಣ ಕೃತಕ ಜೀವನಕ್ಕೆ ನಾಂದಿ ಹಾಡಿದೆ ಇಂದು ನೈಸರ್ಗಿಕ ಸಂಪನ್ಮೂಲಗಳು ಮೂಲೆಗುಂಪಾಗಿ ಅವುಗಳ ಸ್ಥಾನದಲ್ಲಿ ಕೃತಕ ವಸ್ತುಗಳು ಝಗಮಗಿಸುತ್ತಿವೆ. ಇಂದು ಕಂಪ್ಯೂಟರ್ ಮಾದರಿಗಳು, ರೋಬೋ ತಂತ್ರಜ್ಞಾನ, ಗ್ರಾಫಿಕ್ ತಂತ್ರಜ್ಞಾನ, ಜೀವರಸಾಯನ ಶಾಸ್ತ್ರಗಳೇ ಇಂಥ ಬದಲಾವಣೆಗೆ ಕಾರಣ. ಹೀಗಾಗಿ ನಮ್ಮ ಮನೆಗಳಲ್ಲಿ ಕೃತಕ ಬಣ್ಣಗಳು, ದೀಪಗಳು, ಏರ್ ಕಂಡೀಶನರ್ ಗಳು ಮತ್ತು ಕೃತಕ ಸುಗಂಧ ದ್ರವ್ಯಗಳಿಂದ ತುಂಬಿ ನಿರ್ಜೀವಗೊಂಡಿವೆ. ನೆನಪಿಡಿ, ಈ ಕೃತಕ ವಾತಾವರಣ ನಮ್ಮ ಆರೋಗ್ಯವನ್ನು ಖಂಡಿತ ಹಾಳು ಮಾಡುತ್ತಿದೆ. ದುರದೃಷ್ಟವೆಂದರೆ, ಕೃತಕ ಸುಗಂಧ ದ್ರವ್ಯಗಳು ಬಿಡಲಾರದ ವಸ್ತುವಾಗಿ ಬಿಟ್ಟಿದೆ.
ಕೃತಕ ಸುವಾಸನೆಯ ವಸ್ತುಗಳು: ನಾವು ನಮ್ಮ ಜೀವನವನ್ನು ಹೆಚ್ಚು ಹೆಚ್ಚು ವೈಭವಿಕರಿಸಿಕೊಳ್ಳುತ್ತಿದ್ದೇವೆ. ಇಡೀ ಜೀವನವೇ ಸುವಾಸನೆಯಿಂದ ಆಗಿರಬೇಕೆಂಬುದು ನಮ್ಮ ಆಸೆಯಾಗಿದೆ. ಆಧುನಿಕ ಮಾನವನ ಜೀವನ ಕೃತಕ ಸುಗಂಧ ದ್ರವ್ಯಗಳಿಂದ ದಾಳಿಗೆ ಒಳಗಾಗಿದೆ ಎಂದರೆ ತಪ್ಪಲ್ಲ. ಕೇವಲ ಸುಗಂಧ ದ್ರವ್ಯಗಳೇ ಅಲ್ಲ, ನಾವು ಬಳಸುವ ಪ್ರತಿಯೊಂದು ವಸ್ತುವೂ ಪ್ರತಿಯೊಂದು ವಾತಾವರಣವೂ ಸುಗಂಧಪೂರಿತ ಆಗಿರಬೇಕೆಂದು ಬಯಸುತ್ತಿದ್ದೇವೆ. ಇಂದು ವ್ಯಾಪಾರಿ ಕ್ಷೇತ್ರ ಹೆಚ್ಚು ಹೆಚ್ಚು ಲಾಭಕ್ಕೆ ಈ ಸುಗಂಧ ದ್ರವ್ಯಗಳನ್ನು ಅಸ್ತ್ರಗಳನ್ನಾಗಿ ಬಳಸುತ್ತಿದೆ. ಈ ಸುಗಂಧ ದ್ರವ್ಯಗಳ ತಯಾರಿಕೆಗಾಗಿ ಅಪಾಯಕಾರಿ ರಾಸಾಯನಿಕಗಳನ್ನು ಬಳಸಲಾಗುತ್ತಿದೆ ಎಂಬುದು ಗೊತ್ತಿರಲಿ.
ನಮ್ಮ ಸುತ್ತಲಿನ ವಾಸನೆ: ಪ್ರತಿಯೊಂದು ಜೀವಿಯೂ ಉಸಿರಾಟದಿಂದಲೇ ಬದುಕಿರುವುದು ಎಂಬುದು ವಾಸ್ತವ ಸತ್ಯ. ನಮ್ಮ ಜೀವನದ ಪ್ರತಿಕ್ಷಣವೂ ಉಸಿರಾಟಕ್ಕೆ ಸಾಕ್ಷಿಯಾಗಿದೆ. ಉಸಿರಾಟದಿಂದಲೇ ನಮಗೆ ವಾಸನೆಯನ್ನು ಗ್ರಹಿಸುವ ಶಕ್ತಿ ಬಂದಿದೆ. ಈ ವಾಸನೆ ನಮ್ಮ ಜೀವನದಲ್ಲಿ ಅತ್ಯಂತ ಮಹತ್ತರ ಪಾತ್ರ ವಹಿಸಿದೆ. ನಮ್ಮ ದೇಹವೂ ತನ್ನದೇ ಆದ ವಾಸನೆಯನ್ನು ಹೊಂದಿದೆ. ನಾವು ಕೂಡ ದಿನನಿತ್ಯ ಅಡುಗೆಮನೆಯಿಂದ ಬರುವ ವಾಸನೆ, ಆಹಾರಗಳನ್ನು ಬೇಯಿಸಿದಾಗ ಬರುವ ಪರಿಮಳ, ಮೊದಲ ಮಳೆಗೆ ಭೂಮಿಯಿಂದ ಬರುವ ಸುವಾಸನೆ, ದುರ್ಗಂಧ ಇತ್ಯಾದಿಗಳ ವಾಸನೆಗಳನ್ನು ಗ್ರಹಿಸುತ್ತಲೇ ಇರುತ್ತೇವೆ. ಪ್ರತಿಯೊಂದು ವಸ್ತು ತನ್ನದೇ ಆದ ವಿಶಿಷ್ಟ ವಾಸನೆಯನ್ನು ಹೊಂದಿರುತ್ತದೆ. ವಸ್ತುಗಳು ಕಣ್ಣಿಗೆ ಕಾಣಿಸದಿದ್ದರೂ ಅವುಗಳ ವಾಸನೆಯಿಂದಲೇ ನಾವು ವಸ್ತುಗಳನ್ನು ಪತ್ತೆ ಹಚ್ಚಿ ಬಿಡುತ್ತೇವೆ. ಪೊಲೀಸ್ ನಾಯಿಗಳು ಕೇವಲ ವಾಸನೆಯಿಂದಲೇ ಅಪರಾಧಿಗಳನ್ನು ಪತ್ತೆ ಹಚ್ಚುತ್ತವೆ.. ಈ ವಾಸನೆಗಳನ್ನು ನಾವು ಮೂಗಿನಿಂದ ಗ್ರಹಿಸಿದಾಗ ಮೆದುಳನ್ನು ತಲುಪಿ ಸುಮಧುರ ಭಾವನೆಗಳನ್ನೋ ಕಿರಿಕಿರಿಯನ್ನೋ ಉಂಟು ಮಾಡಿ ನಾವು ಪ್ರತಿಕ್ರಿಯಿಸುವಂತೆ ಮಾಡುತ್ತವೆ.
ನಾವೇಕೆ ಸುಗಂಧ ದ್ರವ್ಯ ಬಳಸುತ್ತೇವೆ? : ಈ ವಾಸನೆಗಳು ನೇರವಾಗಿ ನಮ್ಮ ಮೆದುಳು ಹಾಗೂ ಗ್ರಹಣ ಶಕ್ತಿಯ ಮೇಲೆ ಪ್ರಭಾವ ಬೀರುತ್ತವೆ. ಅದರಲ್ಲೂ ಈ ಸುವಾಸನಾ ದ್ರವ್ಯಗಳು ಬಹುಬೇಗ ನಮ್ಮ ಪ್ರಭಾವ ಬೀರಿ ನಮ್ಮನ್ನು ಉಲ್ಲಸಿತವಾಗಿಸುತ್ತವೆ. ಇವು ಸ್ವಾಭಾವಿಕ ವಸ್ತುಗಳಿಂದ ಬಂದರೆ ಭಯಪಡಬೇಕಾಗಿಲ್ಲ. ಆದರೆ ಕೃತಕ ರಾಸಾಯನಿಕಗಳಿಂದ ಬಂದರೆ ಖಂಡಿತ ಆರೋಗ್ಯಕ್ಕೆ ಮಾರಕ. ಈ ಆಧುನಿಕ ಯುಗದಲ್ಲಿ ವ್ಯಾಪಾರ ಮತ್ತು ಲಾಭಕ್ಕೆ ಪ್ರಥಮ ಆದ್ಯತೆ. ಮನುಷ್ಯನ ಆರೋಗ್ಯಕ್ಕೆ ಕವಡೆಯಷ್ಟೂ ಕಿಮ್ಮತ್ತಿಲ್ಲ. ಇದು ಏರ್ ಕಂಡೀಶನರ್ ಗಳಿಂದ ಹಿಡಿದು ಬಟ್ಟೆಗಳವರೆಗೆ ಪ್ರತಿಯೊಂದಕ್ಕೂ ಕೃತಕ ಸುಗಂಧ ದ್ರವ್ಯಗಳು ಬಳಕೆಯಾಗುತ್ತಿವೆ. ಇಂದು ವಸ್ತುಗಳ ಪ್ಯಾಕೇಜ್ ಗಳಲ್ಲಿ ಕೂಡ ಈ ಕೃತಕ ಸುಗಂಧಗಳು ಬಳಕೆಯಾಗುತ್ತಿವೆ.
( ಕೊನೆಯ ಭಾಗ ಮುಂದಿನ ವಾರ)
-ಕೆ. ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ