ಕೃತಿಚೌರ್ಯ ಖಂಡಿತಾ ಬೇಡ!
‘ಸ್ವಂತಿಕೆ’ ಎಂದರೆ ಸ್ವಂತದ್ದು, ನಮ್ಮದೇ ಆದ ಆಲೋಚನೆಗಳು, ಬುದ್ಧಿಮಟ್ಟ, ಭಾವನೆಗಳು, ಯೋಚನಾಲಹರಿ, ಕೈಗೊಳ್ಳುವ ಯೋಜನೆಗಳು ಹೀಗೆ ಹಲವಾರು ರೀತಿಯ ವ್ಯಾಖ್ಯೆ ಕೊಡಬಹುದು. ಸ್ವತಂತ್ರ -ಪರತಂತ್ರ ಇದ್ದಂತೆ. ಸ್ವತಂತ್ರ ನಮ್ಮದು, ಪರತಂತ್ರ ಬೇರೆಯವರದು ಸೂಕ್ಷ್ಮವಾಗಿ ಹೇಳಿದಾಗ.
ಹಾಗಾದರೆ ಸ್ವಂತಿಕೆ ಎಲ್ಲೆಲ್ಲಾ ಉಪಯೋಗಿಸಬಹುದು? ನಾವು ಮಾಡುವ ಕೆಲಸಗಳಲ್ಲಿ ಸ್ವಂತಿಕೆ ಇರಲೇಬೇಕು. ಇತರರ ಮಾತುಗಳನ್ನು, ಅಭಿಪ್ರಾಯಗಳನ್ನು ಆಲಿಸೋಣ. ಅದರಲ್ಲಿ ಹುರುಳಿದೆಯೋ ಎಂದು ಆಲೋಚಿಸುವಾಗ ನಮ್ಮ ಸ್ವಂತಿಕೆ ಬೇಕು. ಒಳ್ಳೆಯದಾದರೆ ಸ್ವೀಕರಿಸೋಣ.
ಇತ್ತೀಚೆಗೆ ವಾಟ್ಸಾಪ್, ಫೇಸ್ಬುಕ್ ಬರಹಗಳನ್ನು, ರಚನೆಗಳನ್ನು ಓದುವಾಗ ಮನಸ್ಸಿಗೆ ಅನಿಸಿದ ಒಂದು ವಿಚಾರ. ಎಷ್ಟೋ ಗೊತ್ತಿಲ್ಲದ ವಿಷಯಗಳನ್ನು ಅರಿಯಲು ಸಹಕಾರಿ ಖಂಡಿತ. ಆದರೆ ಒಳ್ಳೆಯದು -ಕೆಟ್ಟದು ಎರಡೂ ಕಂಡು ಬರುತ್ತಿದೆ.
ಒಬ್ಬ/ಳು ತಾನು ಏನನ್ನು ಬರೆಯಬೇಕು ಎಂಬುದನ್ನು ಯೋಚಿಸಿಯೇ ಬರೆಯಲು ಆರಂಭಿಸುವರು. ಮೊದಲೇ ಎಲ್ಲಾ ಸಂಗ್ರಹಿಸಿಟ್ಟು ಬರೆಯುವುದು, ಮಸ್ತಕದಿಂದಿಳಿಸಿ ಟೈಪ್ ಮಾಡುತ್ತಾ ಹೋಗುವುದು ಎರಡು ವಿಧಾನವಿರಬಹುದು.
ಬಹಳಷ್ಟು ಬರಹಗಳು, ರಚನೆಗಳು ಓದುವಾಗ ‘ಸ್ವಂತಿಕೆ’ ಯಾವುದು? ಎಷ್ಟು? ಏನು? ಎಂಬುದು ಓರ್ವ ನಿಜವಾದ ಓದುಗನಿಗೆ ಅರ್ಥೈಸಿಕೊಳ್ಳುವುದು ಕಷ್ಟವೇನಲ್ಲ. ಓದುತ್ತಾ ಹೋದಂತೆ ‘ಅಯ್ಯೋ, ಇದನ್ನೆಲ್ಲಿಯೋ ಓದಿದ್ದೇನಲ್ಲ’ ಅಂಥ ಮನಸ್ಸಿಗೆ ಕಾಣುವುದಿದೆ. ಹಾಗೆ ಕಂಡಾಗ ಎಲ್ಲಿಂದ ಎಂದು ಯೋಚಿಸಿದಾಗ ಒಮ್ಮೊಮ್ಮೆ ಗೊತ್ತಾಗುವುದು. ಕೆಲವು ಸಲ ಇಲ್ಲ. ಸ್ವಲ್ಪ ವಯಸ್ಸಾದವರು, ಹಿರಿಯ ಬರಹಗಾರರು ಇದ್ದವರಿಗೆ ಬೇಗ ತಿಳಿಯುತ್ತದೆ. ಈಗಿನ ಯುವ ಜನಾಂಗಕ್ಕೆ ಹಿಂದಿನ ಕೆಲವು ಪದ್ಯಗಳು, ರಚನೆಗಳು ತಕ್ಷಣ ನೆನಪಿಗೆ ಬಾರದಿರಬಹುದು.
ಪರರ ಕೃತಿಗಳಿಂದ ಮುಚ್ಚುಮರೆಯಿಲ್ಲದೆ ಒಂದಷ್ಟು ತೆಗೆದುಕೊಂಡು (ಎಗರಿಸಿ) ಬರೆದು ತನ್ನ ಪ್ರತಿಭೆ ತೋರುವ ಅವಶ್ಯಕತೆ ಇದೆಯೇ? ಸಾಹಿತ್ಯ ಅಂತರಾಳದಿಂದ ಹೊರಹೊಮ್ಮಿದಾಗ ಅದರಲ್ಲಿ ಲಾಲಿತ್ಯ ಕಾಣಬಹುದು. ಆ ಕೆಲಸ ಬರವಣಿಗೆಯ ಶೈಲಿಯಲ್ಲಿ ಸ್ವಂತದ್ದಾಗಿರಲಿ. ಅನುಕರಣೆ ಮಾಡಲಿ, ಆದರೆ ಯೋಚನೆ ತನ್ನದ್ದಾಗಿರಲಿ. ಯಾರಿಗೋ ತಿಳಿದು ವಾದ-ವಿವಾದಗಳೇಕೆ?
ಒಂದು ರಚನೆಯನ್ನು ಉರಿಯುವ ದೀಪಕ್ಕೆ ಹೋಲಿಸಬಹುದು. ನಾಲ್ಕು ಜನರಿಗೆ ಬೆಳಕು ಬೀರಲಿ. ಯಾವುದರಲ್ಲಿ ಸಹ ನಮ್ಮ ಸ್ವಂತಿಕೆ ಎದ್ದು ಕಾಣುವಂತಿರಲಿ, ಪರಹಿತ ಬೇಕು,ಆದರೆ ಸ್ವಂತ ವಿವೇಚನೆ, ಕಾಳಜಿ, ಬುದ್ಧಿ ಎಲ್ಲವೂ ಸಮ್ಮಿಳಿತವಾದ ‘ಬದುಕು ಬರಹ’ ಎರಡನ್ನೂ ಅಳವಡಿಸಿಕೊಳ್ಳೋಣ.
-ರತ್ನಾ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ