ಕೃಪಾಂಕದ ಅವಕೃಪೆ
ರಾಜ್ಯ ಶಿಕ್ಷಣ ಇಲಾಖೆ 2024ನೇ ಏಪ್ರಿಲ್ ಮಾಹೆಯಲ್ಲಿ ಜರಗಿದ ಎಸ್.ಎಸ್.ಎಲ್.ಸಿ ಮೊದಲ ಪರೀಕ್ಷೆಯ ಫಲಿತಾಂಶವನ್ನು ಉನ್ನತಿಗೇರಿಸಲು ವಿದ್ಯಾರ್ಥಿಗಳಿಗೆ 20%ರಷ್ಟು ಗಣನೀಯ ಪ್ರಮಾಣದಲ್ಲಿ ಕೃಪಾಂಕಗಳನ್ನು ನೀಡಿರುವುದನ್ನು ತಿಳಿದಿದ್ದೇವೆ. ಪೂರಕ ಪರೀಕ್ಷೆಯ ಹೆಸರನ್ನು ಪರೀಕ್ಷೆ ಎರಡು ಮತ್ತು ಮೂರು ಎಂದು ಹೆಸರಿಸಿ ವಿದ್ಯಾರ್ಥಿಗಳ ಮನೋಬಲ ಹೆಚ್ಚಿಸುವ, ಅವರಲ್ಲಿ ತಳವೂರಬಹುದಾದ ಕೀಳರಿಮೆಯನ್ನು ತೊಲಗಿಸುವ ಶ್ಲಾಘನೀಯ ಕೆಲಸವನ್ನೂ ಮಾಡಿದೆ. ಇದರಿಂದಾಗಿ ಬಹುತೇಕ ವಿದ್ಯಾರ್ಥಿಗಳಿಗೆ ಶಿಕ್ಷಣವಾಹಿನಿಯಲ್ಲಿ ಮುಂದುವರಿಯುವ ಸದಾವಕಾಶ ಒದಗಿರುವುದು ಸಂತಸದಾಯಕ. ಈಗಾಗಲೇ ಪರೀಕ್ಷೆ ಒಂದು ಮತ್ತು ಎರಡು ಮುಗಿದು ಮೂರನೆಯದೂ ನಡೆಯುತ್ತಿದೆ. ತರಗತಿ ಒಂದರಿಂದ ಹತ್ತರ ತನಕ ಅನುತ್ತೀರ್ಣತೆಯೂ ಇಲ್ಲವಾಗಿರುವುದರಿಂದ ಶಾಲೆ ಬಿಡುವವರ ಸಂಖ್ಯೆ ಗಣನೀಯವಾಗಿ ಇಳಿದಿದೆ. ವಿಶ್ವವಿದ್ಯಾನಿಲಯ ಹಂತದ ಕಲಿಕೆ ಮುಗಿದು ಫಲಿತಾಂಶ ಬಂದ ಮೇಲೆ ಪದವೀಧರ ಎಂಬ ಪ್ರಮಾಣ ಪತ್ರ ಪಡೆದವರ ಕಲಿಕೆ ಮತ್ತು ಜ್ಞಾನದ ಆಳವನ್ನು ಗಮನಿಸುವಾಗ ಶೇಕಡಾ ಐವತ್ತಕ್ಕೂ ಹೆಚ್ಚು ಮಂದಿಯ ಜ್ಞಾನದ ಆಳ ಅಗಲಗಳು ಬಹಳ ಕಡಿಮೆಯೇ ಇರುತ್ತದೆ. ಬರೆಯುವ, ಮಾತನಾಡುವ, ಸಂವಹನ ಮಾಡುವ ಎಲ್ಲ ಕ್ಷೇತ್ರಗಳಲ್ಲೂ ನಮ್ಮ ಅಸಂಖ್ಯ ಪದವೀಧರರು ಬಹಳ ಹಿಂದೆ ಉಳಿಯುತ್ತಾರೆ. ಅಂತಹವರಲ್ಲಿ ಕೆಲವು ಸಾಹಸಿಗಳು ಮಾತ್ರ ಬಯಲು ಶಾಲೆಯಲ್ಲಿ ತಮ್ಮಲ್ಲಿರುವ ಸೀಮಿತ ಜ್ಞಾನವನ್ನು ವಿಸ್ತರಿಸಿಕೊಂಡು ಬದುಕು ಕಟ್ಟಿ ಕೊಳ್ಳುವರು. ಉಳಿದವರು ಪದವೀಧರ ಎಂಬ ಹಣೆ ಪಟ್ಟಿಯೊಂದಿಗೆ ಬದುಕಿನಲ್ಲಿ ವಿಫಲರೂ ಆಗುತ್ತಾರೆ. ಶಿಕ್ಷಣವಾಹಿನಿಯಲ್ಲಿ ಜೀವಮಾನದ ಕಾಲಂಶವನ್ನು ಸವೆಸಿದರೂ ಬದುಕಿನಲ್ಲಿ ಸೋಲಾಗಿದೆಯೆಂದರೆ ಅವರ ಬದುಕು ಕಟ್ಟುವ ಕೆಲಸ ಶಿಕ್ಷಣದಿಂದ ಆಗಲಿಲ್ಲ ಎಂಬ ಕ್ರೂರ ಸತ್ಯ ಬೋಧಕವಲಯ ಮತ್ತು ಶಿಕ್ಷಣ ಇಲಾಖೆಗೆ ಎಚ್ಚರಿಕೆಯ ಘಂಟೆಯಲ್ಲವೇ?
ಅನುತ್ತೀರ್ಣತೆ ಇರಬಾರದು ಎಂದಾಗ ಎಲ್ಲರನ್ನೂ ಉತ್ತೀರ್ಣಗೊಳಿಸಬೇಕೆಂಬ ಸುಲಭ ಮತ್ತು ಸರಳ ಸಂದೇಶ ಶಿಕ್ಷಕರಿಗೆ, ಪಾಲಕರಿಗೆ ಮತ್ತು ವಿದ್ಯಾರ್ಥಿಗಳಿಗೆ ರವಾನೆಯಾಗುವುದು ಸಹಜ. ಅನುತ್ತೀರ್ಣತೆ ಇರಬಾರದೆಂದರೆ ಪ್ರತಿಯೊಬ್ಬರೂ ಉತ್ತೀರ್ಣರಾಗುವಷ್ಟು ಸಾಮರ್ಥ್ಯವನ್ನು ಪಡೆದೇ ತೀರಬೆಕೇಂಬ ಒಳ ಸಂದೇಶ ಯಾರಿಗೂ ರವಾನೆಯಾಗಲಿಲ್ಲ; ರವಾನಿಸುವ ಕಾಯಕವನ್ನೂ ಇಲಾಖೆ ಮಾಡಲಿಲ್ಲ. ತಪಾಸಣೆಗೆ ಬಂದಾಗ ಅಧಿಕಾರಿಗಳು ಅನುತ್ತೀರ್ಣರಾದವರನ್ನು ಉತ್ತೀರ್ಣಗೊಳಿಸದೇ ಇರುವ ಬಗ್ಗೆ ತಗಾದೆ ಮಾಡುವರೇ ಹೊರತು ಉತ್ತೀರ್ಣರಾದವರ ಕಲಿಕಾ ಗುಣ ಮಟ್ಟದ ಏರುಪೇರುಗಳನ್ನು ಪರಿಶೀಲಿಸುವುದು ಕಡಿಮೆಯಾಗುತ್ತಿದೆ. ಕಲಿಕಾ ನ್ಯೂನತೆ ಮತ್ತು ಗೈರುಹಾಜರಿಗಳು ಪ್ರೌಢ ಹಂತದಲ್ಲಾದರೂ ಉತ್ತೀರ್ಣತೆಗೆ ಮಾನದಂಡವಾಗಬೇಕು. ಸುಲಭ ಉತ್ತೀರ್ಣತೆ ಸೋಮಾರಿತನಕ್ಕೆ ಹೇತುವಾಗುತ್ತದೆ. ಒಂದರಿಂದ ಒಂಭತ್ತು ಜೊತೆಗೆ ಹತ್ತನೆ ತರಗತಿಯ ಕೃಪಾಂಕದ ಕೊಡುಗೆಗಳು ಬೌದ್ಧಿಕ ವಿಕಸನವನ್ನು ಹಿನ್ನಡೆಗೊಳಿಸುತ್ತವೆ. ಶ್ರಮವಿರದೆ ಉತ್ತೀರ್ಣರಾಗುವ ಭರವಸೆಯು ಕಲಿಯಬೇಕೆಂಬ ಮತ್ತು ಕಲಿಸಬೇಕೆಂಬ ತುಮುಲದಿಂದ ಎಲ್ಲರನ್ನೂ ವಿಮುಖಗೊಳಿಸುತ್ತದೆ. ವಿದ್ಯಾರ್ಥಿಗಳ ಭವಿಷ್ಯದ ಬದುಕಿನ ಸೋಲು ಇಲ್ಲಿಂದ ಆರಂಭಗೊಂಡಿದೆ. ಶಿಕ್ಷಣದ ಬುನಾದಿಯೇ ಬಲವಾಗಿರದಿರುವಾಗ ಪದವಿ ವಿಷಯಗಳು ಎಷ್ಟೇ ಬಲವಾಗಿದ್ದರೂ ಫಲ ಗೌಣವಲ್ಲವೇ? ದುರ್ಬಲ ಪಂಚಾಗದ ಮೇಲೆ ನಿಲ್ಲಿಸುವ ಸೌಧದ ಆಯುಷ್ಯವಾದರೂ ನಿರೀಕ್ಷಿಸಿದಂತಿರಲು ಸಾಧ್ಯವಿಲ್ಲ.
ವಿದ್ಯಾರ್ಥಿಗಳ ಮನೋಬಲ ಗಟ್ಟಿಗೊಳಿಸುವ ಎಲ್ಲ ಕ್ರಮಗಳೂ ಬೇಕು. ಅವರಿಗೆ ಎಲ್ಲ ಅವಕಾಶಗಳನ್ನೂ ಕೊಡಬೇಕು. ಆದರೆ ಶೈಕ್ಷಣಿಕ ಉದ್ದೇಶಗಳಾದ ಕಲಿಕೆ ಮತ್ತು ಮೌಲ್ಯದ ವಿಚಾರದಲ್ಲಿ ವಿಷಮ ಹೆಜ್ಜೆಗಳಿರಲೇ ಬಾರದು. ಪಠ್ಯ ಮತ್ತು ಬೋಧನೆಗಳನ್ನು ಬಲಗೊಳಿಸದೆ ಇದ್ದರೆ, ಪರೀಕ್ಷೆಯಲ್ಲಿ ಓದಿ ಬರೆಯುವ ಕ್ರಮವಿದ್ದರೂ ಮಕ್ಕಳ ಕಲಿಕೆ ಗ್ರೇಸ್ ಅಂಕ ನೀಡಿದರೂ ಉತ್ತೀರ್ಣರಾಗದ ಪ್ರಸ್ತುತ ಶೋಚನೀಯ ಸ್ಥಿತಿ ಇದೇ ರೀತಿ ಮುಂದುವರಿಯುತ್ತದೆ. ವಿಕಸಿತ ಭಾರತಕ್ಕೆ ದೊಡ್ಡ ಸವಾಲಿದು.
ಒಟ್ಟಾಗಿ ಅವಲೋಕಿಸಿದಾಗ ಪಠ್ಯವು 100 ಅಂಶಗಳನ್ನು ಒಳಗೊಂಡರೆ ಉತ್ತೀರ್ಣರಾಗಲು 35 ಅಂಕ ಸಾಕು. 100 ಅಂಕದ ಪ್ರಶ್ನೆ ಪತ್ರಿಕೆಯಲ್ಲಿರುವ ಪಠ್ಯವಸ್ತುವಿನ ವ್ಯಾಪ್ತಿ ಬಲು ಚಿಕ್ಕದು. ಪಠ್ಯದ ಈ ಚಿಕ್ಕ ಭಾಗದಲ್ಲಿ ಮೂವತ್ತೈದು ಅಂಕ ಪಡೆಯಲಾಗದ ಸ್ಥಿತಿಯು ಶಿಕ್ಷಣ ವ್ಯವಸ್ಥೆಯನ್ನೇ ಪ್ರಶ್ನಾರ್ಹಗೊಳಿಸಿದೆ. ಶಿಕ್ಷಣದಲ್ಲಿ ಕೃಪಾಂಕ ವಿದ್ಯಾರ್ಥಿಯನ್ನು ಇನ್ನೂ ಆಲಸಿಯನ್ನಾಗಿಸುತ್ತಿದೆಯೇ? ಕೃಪಾಂಕವು ಅವಕೃಪೆಯಾಗುತ್ತಲಿದೆಯೋ ಎಂಬ ಸಂದೇಹವೇಳುವುದಲ್ಲವೇ....?
-ರಮೇಶ ಎಂ. ಬಾಯಾರು, ಬಂಟ್ವಾಳ
ಚಿತ್ರ ಕೃಪೆ: ಇಂಟರ್ನೆಟ್ ತಾಣ