ಕೃಷಿ ಉದ್ಯಮಿಯ ವಾರ್ಷಿಕ ವ್ಯವಹಾರ ರೂ.9 ಕೋಟಿ



ಪಂಜಾಬಿನ ಬಟಾಲದ ಜಗಮೋಹನ್ ಸಿಂಗ್ ನಾಗಿ (66 ವರುಷ) ಅವರಿಗೆ ಬಾಲ್ಯದಿಂದಲೂ ಕೃಷಿಯಲ್ಲಿ ಆಸಕ್ತಿ. ಅದರಿಂದಾಗಿ ಪದವೀಧರರಾದ ನಂತರ ಅವರು ಕೃಷಿಯಲ್ಲೇ ತೊಡಗಿದರು. ಆರಂಭದಲ್ಲಿ ಕೆಲವೇ ಎಕರೆಗಳಲ್ಲಿ ಜೋಳ ಬೆಳೆಯುತ್ತಿದ್ದ ಅವರೀಗ "ಒಪ್ಪಂದ ಕೃಷಿ”ಯಲ್ಲಿ 300 ಎಕರೆಯಲ್ಲಿ ಜೋಳ, ಸಾಸಿವೆ ಮತ್ತು ಗೋಧಿ ಬೆಳೆಯುತ್ತಿದ್ದಾರೆ. ಜೊತೆಗೆ, ಕ್ಯಾರೆಟ್, ಬೀಟ್‌ರೂಟ್, ಟೊಮೆಟೋ ಮತ್ತು ಹೂಕೋಸು ತರಕಾರಿಗಳನ್ನೂ ಬೆಳೆಯುತ್ತಿದ್ದಾರೆ.
ಮುನ್ನೂರು ರೈತರ ಜಮೀನಿನಲ್ಲಿ ಒಪ್ಪಂದದ ಮೂಲಕ ಬೆಳೆಸುತ್ತಿರುವ ಬೆಳೆಗಳ ಫಸಲಿನ ಖರೀದಿ; ಫಸಲನ್ನು ಸಂಸ್ಕರಿಸಿ, ಪೆಪ್ಸಿಕೋ, ಕೆಲ್ಲೋಗ್ಸ್ ಮತ್ತು ಡೊಮಿನೋಸ್ ಪಿಝಾ ಕಂಪೆನಿಗಳಿಗೆ ಮಾರಾಟ. ಇಂಗ್ಲೆಂಡ್, ನ್ಯೂಝಿಲೆಂಡ್, ದುಬೈ ಮತ್ತು ಹಾಂಕಾಂಗ್‌ಗಳಿಗೆ ಸಂಸ್ಕರಿತ ಉತ್ಪನ್ನಗಳ ರಫ್ತು. ಇವೆಲ್ಲದರಿಂದಾಗಿ, ಅವರ “ಕುಲವಂತ್ ನ್ಯೂಟ್ರಿಷನ್” ಕಂಪೆನಿಗೆ ಈಗ ವಾರ್ಷಿಕ ರೂ.9 ಕೋಟಿ ವ್ಯವಹಾರ ದಾಖಲಿಸಲು ಸಾಧ್ಯವಾಗಿದೆ.
ಬ್ರಿಟನಿನ ಬರ್ಮಿಂಗ್‌ಹ್ಯಾಮ್ ವಿಶ್ವವಿದ್ಯಾಲಯದಲ್ಲಿ ಏಕದಳ ಧಾನ್ಯಗಳ ಮಿಲ್ಲಿಂಗ್ ಮತ್ತು ಇಂಜಿನಿಯರಿಂಗ್‌ನಲ್ಲಿ ಪದವಿ ಗಳಿಸಿ ತನ್ನೂರಿಗೆ ಮರಳಿದರು ಜಗಮೋಹನ್ ಸಿಂಗ್. 1989ರಲ್ಲಿ ಕುಲವಂತ್ ನ್ಯೂಟ್ರಿಷನ್ ಎಂಬ ಕೃಷಿ ಆಧಾರಿತ ಉದ್ಯಮ ಸ್ಥಾಪಿಸಿ ಜೋಳದ ಸಂಸ್ಕರಣೆಗೆ ಶುರುವಿಟ್ಟರು.
ಆದರೆ ಆಗ ಪಂಜಾಬಿನಲ್ಲಿ ಒಳ್ಳೆಯ ಗುಣಮಟ್ಟದ ಜೋಳದ ಫಸಲು ಖರೀದಿಗೆ ಸಿಗುತ್ತಿರಲಿಲ್ಲ. ಹಾಗಾಗಿ ಅವರು ಹಿಮಾಚಲ ಪ್ರದೇಶದಿಂದ ಜೋಳ ಖರೀದಿಸಲು ಶುರು ಮಾಡಿದರು. ಆದರೆ ಜೋಳದ ಸಾಗಾಟ ವೆಚ್ಚ ದುಬಾರಿಯಾಯಿತು. ಆದ್ದರಿಂದ ಅವರು ಪಂಜಾಬ್ ಕೃಷಿ ವಿಶ್ವವಿದ್ಯಾಲಯದ ಸಹಕಾರದಿಂದ ಪಂಜಾಬಿನಲ್ಲೇ ಜೋಳ ಬೆಳೆಸುವ ಯೋಜನೆಗೆ ಚಾಲನೆ ನೀಡಿದರು. ಇದರ ಅನುಸಾರ, ಕೃಷಿ ವಿಶ್ವವಿದ್ಯಾಲಯವು ರೈತರಿಗೆ ಉತ್ತಮ ಗುಣಮಟ್ಟದ ಜೋಳದ ಬೀಜ ಒದಗಿಸುತ್ತದೆ ಮತ್ತು ಅದನ್ನು ಬಿತ್ತಿ ಬೆಳೆಸಿದ ರೈತರಿಂದ ಜಗಮೋಹನ್ ಸಿಂಗ್ ಫಸಲು ಖರೀದಿಸ ತೊಡಗಿದರು. ಅನಂತರ, ತಾನೇ ಜೋಳ ಬೆಳೆಸಲು ನಿರ್ಧರಿಸಿದರು; ಅದಕ್ಕಾಗಿ 1991ರಿಂದ ಒಪ್ಪಂದ ಕೃಷಿ ಮೂಲಕ ಇತರ ರೈತರ ಜಮೀನಿನಲ್ಲಿ ಜೋಳದ ಕೃಷಿ ಶುರು ಮಾಡಿ, ಕ್ರಮೇಣ ತನಗೆ ಬೇಕಷ್ಟು ಜೋಳ ತಾನೇ ಬೆಳೆಯತೊಡಗಿದರು.
ಅವರ ಕಂಪೆನಿಯ ಮೊದಲ ಗ್ರಾಹಕ ಕೆಲ್ಲೋಗ್ಸ್. 1992ರಲ್ಲಿ ಪೆಪ್ಸಿಕೋ ಜೊತೆ ಒಡಂಬಡಿಕೆ ಮಾಡಿಕೊಂಡು, ಅದರ “ಕುರ್-ಕುರೆ" ತಿನಿಸಿಗಾಗಿ ಜೋಳ ಸರಬರಾಜು ಮಾಡತೊಡಗಿದರು. ಆಗ ತಿಂಗಳಿಗೆ ಒಂದು ಸಾವಿರ ಟನ್ ಜೋಳಕ್ಕೆ ಬೇಡಿಕೆಯಿತ್ತು ಎಂದು ತಿಳಿಸುತ್ತಾರೆ ಜಗಮೋಹನ್ ಸಿಂಗ್. 1994ರಿಂದ ಡೊಮಿನೋಸ್ ಪಿಝಾಕ್ಕೆ ಕೂಡ ಅವರ ಜೋಳ ಮಾರಾಟ ಶುರು. ತದನಂತರ, 2013ರಿಂದ ಡಬ್ಬಗಳಲ್ಲಿ ಸಂಸ್ಕರಿತ ಆಹಾರ ಮಾರಲು ಆರಂಭಿಸಿದರು ಮತ್ತು ತರಕಾರಿಗಳನ್ನೂ ಬೆಳೆಯತೊಡಗಿದರು.
ಅವರ ಕೃಷಿ ಆಧಾರಿತ ಉದ್ಯಮವು ವೇಗವಾಗಿ ಬೆಳೆಯುತ್ತಿದ್ದಾಗ, 2020ರಲ್ಲಿ ಕೊರೋನಾ ವೈರಸ್ ನಮ್ಮ ದೇಶಕ್ಕೆ ಧಾಳಿ ಮಾಡಿತು. ಇದರಿಂದಾಗಿ ಅವರು ಹಲವಾರು ಸವಾಲುಗಳನ್ನು ಎದುರಿಸಬೇಕಾಯಿತು.
ಕೊರೋನಾ ವೈರಸಿನ ಧಾಳಿಯ ಸಂದರ್ಭದಲ್ಲಿ ತಾನು ಗಮನಿಸಿದ ಒಂದು ಸಂಗತಿಯನ್ನು ಜಗಮೋಹನ್ ಸಿಂಗ್ ಹೀಗೆಂದು ತಿಳಿಸುತ್ತಾರೆ: "ಆ ಸಮಯದಲ್ಲಿ ಹಲವು ಕಾರ್ಖಾನೆಗಳು ಮತ್ತು ವ್ಯವಹಾರ ಮಳಿಗೆಗಳು ಮುಚ್ಚಿದವು. ಆದರೆ, ದಿನಸಿ ಮಳಿಗೆಗಳು ತಮ್ಮ ವ್ಯಾಪಾರ ಮುಂದುವರಿಸಿದವು. ಯಾಕೆಂದರೆ ಅವು ಜೀವನಾವಶ್ಯಕ ವಸ್ತುಗಳನ್ನು ಜನರಿಗೆ ಪೂರೈಸುತ್ತಿದ್ದವು. ಆದ್ದರಿಂದ ಆ ಸಮಯದಲ್ಲಿ ನಾನು ಸಾವಯವ ಗೋಧಿ ಹುಡಿ ಮತ್ತು ಸಾವಯವ ಜೋಳದ ಹುಡಿಯ ಪೂರೈಕೆಯನ್ನು ಹೆಚ್ಚಿಸುವುದಕ್ಕೆ ಗಮನ ಹರಿಸಿದೆ.” ಭತ್ತ ಬೆಳೆದು, ಅದರ ಅಕ್ಕಿಯ ಮಾರಾಟ ಮತ್ತು ಸಾಸಿವೆ ಸಂಸ್ಕರಿಸಿ ಸಾಸಿವೆ ಎಣ್ಣೆಯ ಮಾರಾಟ - ಇವು ತಮ್ಮ ಮುಂದಿನ ಯೋಜನೆಗಳು ಎಂದು ಅವರು ಮಾಹಿತಿ ನೀಡುತ್ತಾರೆ.
ಅವರ ಇನ್ನೆರಡು ಸಾಧನೆಗಳು: ತಮ್ಮ ಕಂಪೆನಿಯಲ್ಲಿ 70 ಜನರಿಗೆ ಉದ್ಯೋಗ ನೀಡಿರುವುದು ಹಾಗೂ ರೈತರು ಮತ್ತು ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡುತ್ತಿರುವುದು. ಅದಲ್ಲದೆ, ರೈತರಿಗೆ ಸುಧಾರಿತ ಕೃಷಿ ವಿಧಾನಗಳ ಮತ್ತು ಫಸಲನ್ನು ಲಾಭದಾಯಕವಾಗಿ ಮಾರಾಟ ಮಾಡುವ ಬಗ್ಗೆ ಮಾಹಿತಿಯನ್ನೂ ಒದಗಿಸುತ್ತಿದ್ದಾರೆ.
ಸತ್‌ಬೀರ್ ಸಿಂಗ್ ಎಂಬ ರೈತ ತನ್ನ ಅನುಭವವನ್ನು ಹೀಗೆಂದು ಹಂಚಿಕೊಳ್ಳುತ್ತಾರೆ: “ಜಗಮೋಹನ್ ಸಿಂಗ್ ಜೊತೆ ನಾನು ಹಲವಾರು ವರುಷಗಳಿಂದ ವ್ಯವಹಾರ ಮಾಡುತ್ತಿದ್ದೇನೆ. ನನ್ನ ಕೃಷಿ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡಿ ಮಾರಾಟ ಮಾಡುವುದು ಹೇಗೆಂದು ನನಗೆ ಅವರು ಕಲಿಸಿದ್ದಾರೆ. ಉದಾಹರಣೆಗೆ, ಹಾಲನ್ನು ಮಾರುವ ಬದಲು ಅದನ್ನು ತುಪ್ಪ ಮತ್ತು ಮೊಸರಾಗಿ ಪರಿವರ್ತಿಸಿ ಮಾರಿದರೆ ಹೆಚ್ಚು ಲಾಭ ಎಂಬುದು ಅವರ ಸಲಹೆ. ಅವರ ದಿನಸಿ ವ್ಯವಹಾರಕ್ಕಾಗಿ ನನ್ನಿಂದ ಕೃಷಿ ಉತ್ಪನ್ನಗಳನ್ನು ಅವರು ಖರೀದಿಸುತ್ತಿದ್ದಾರೆ."
ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಕೃಷಿ ಆಧಾರಿತ ಉದ್ಯಮಗಳನ್ನು ಸ್ಥಾಪಿಸಲು ಸರಕಾರ ಪ್ರೋತ್ಸಾಹ ನೀಡಬೇಕೆಂಬುದು ಜಗಮೋಹನ್ ಸಿಂಗ್ ನಾಗಿ ಅವರ ಆಶಯ. ತಮ್ಮ ಜಮೀನಿಗೆ ಸೂಕ್ತವಲ್ಲದ ಬೆಳೆ ಬೆಳೆಯುವ ಈಗಿನ “ಟ್ರೆಂಡ್" ಅನುಸರಿಸುವ ಬದಲಾಗಿ, ತಮ್ಮ ಜಮೀನಿಗೆ ಸೂಕ್ತವಾದ ಬೆಳೆಯನ್ನೇ ಬೆಳೆಯಬೇಕೆಂಬುದು ರೈತರಿಗೆ ಅವರ ಕಿವಿಮಾತು.
ಫೋಟೋ 1: ಜಗಮೋಹನ್ ಸಿಂಗ್ ನಾಗಿ
ಫೋಟೋ 2: “ಕುಲವಂತ್ ನ್ಯೂಟ್ರಿಷನ್” ಕಂಪೆನಿಯ ಕ್ಯಾನ್ಡ್ ಉತ್ಪನ್ನಗಳು
ಫೋಟೋ 3: ಉಪನ್ಯಾಸ ನೀಡುತ್ತಿರುವ ಜಗಮೋಹನ್ ಸಿಂಗ್ ನಾಗಿ
ಫೋಟೋ ಕೃಪೆ: “ದ ಬೆಟರ್ ಇಂಡಿಯಾ” ಅಂತರ್ಜಾಲ ತಾಣ