ಕೃಷಿಕನ ಕೆಮರಾ ನಂಟು

ಕೃಷಿಕನ ಕೆಮರಾ ನಂಟು

ಮಡಿಕೇರಿಯ ಆಕಾಶವಾಣಿ ನಿಲಯಕ್ಕೆ ಕಾಲಿಡುತ್ತಿದ್ದಂತೆ ಗಮನ ಸೆಳೆದದ್ದು ಗೋಡೆಗಳಿಗೆ ತೂಗ ಹಾಕಿದ್ದ ವಾರಪತ್ರಿಕೆ ಅಳತೆಯ ಫೋಟೋಗಳು - ಅಬ್ಬಿ ಜಲಪಾತ, ರಾಜಾ ಸೀಟು, ಕೋಟೆ, ಹೂ ಬಿಟ್ಟ/ ಹಣ್ಣುತುಂಬಿದ ಕಾಫಿ ಗಿಡಗಳು, ಸಾಂಪ್ರದಾಯಿಕ ಉಡುಗೆ ತೊಟ್ಟ ಕೊಡವರು, ಹುತ್ತರಿ ಹಬ್ಬ ಇತ್ಯಾದಿ. ಪಳಗಿದ ಫೋಟೋಗ್ರಾಫರನ ಕೈಚಳಕ ಎದ್ದು ಕಾಣಿಸುತ್ತಿತ್ತು.

ಯಾರು ತೆಗೆದ ಫೋಟೋಗಳು ಇವು? ಎಂಬ ನನ್ನ ಪ್ರಶ್ನೆಗೆ ಆಕಾಶವಾಣಿಯ ಶ್ಯಾಮ್ ಭಟ್ಟರ ಉತ್ತರ, “ಅದು ನಮ್ಮ ಕುಮಾರಣ್ಣ ತೆಗೆದದ್ದು.” ನನ್ನ ಪ್ರಶ್ನಾರ್ಥಕ ನೋಟಕ್ಕೆ ಉತ್ತರವಾಗಿ, “ಎನ್.ಎಮ್. ಕುಮಾರ್, ನೀರ್ಕಜೆ ಎಸ್ಟೇಟಿನವರು" ಎಂದರು.

ಮುಂದಿನ ಸಲ ಮಡಿಕೇರಿಗೆ ಹೋದಾಗ, ಒಂದು ಮುಂಜಾನೆ ನೀರ್ಕಜೆ ಎಸ್ಟೇಟಿಗೆ ಹೊರಟೆ. ಮಡಿಕೇರಿಯಿಂದ ಬಿಳಿಗೇರಿಗೆ ೨೦ ನಿಮಿಷಗಳ ಬಸ್ ಪ್ರಯಾಣ. ಅನಂತರ ೨೦ ನಿಮಿಷ ನಡಿಗೆ. ನೀರ್ಕಜೆ ಎಸ್ಟೇಟಿನ ವಿಶಾಲ ಮನೆಗೆ ಕಾಲಿಟ್ಟಾಗ ಎದುರಾದವರು ಕೃಶಕಾಯದ ಕನ್ನಡಕಧಾರಿ ಕುಮಾರಣ್ಣ.

ತುಸು ಹೊತ್ತಿನಲ್ಲೇ ಅವರೊಂದಿಗೆ ಎಸ್ಟೇಟಿನಲ್ಲಿ ಹೆಜ್ಜೆ ಹಾಕುತ್ತಿದ್ದೆ. ಅದು ಅವರ ತಂದೆಯವರು ಅಭಿವೃದ್ಧಿ ಪಡಿಸಿದ ೭೦ ಎಕ್ರೆ ತೋಟ. ೧೯೮೫ರಿಂದೀಚೆಗೆ ಅದರ ನಿರ್ವಹಣೆ ಕುಮಾರಣ್ಣನದು. ಸುಮಾರು ೬೦ ಎಕ್ರೆಗಳಲ್ಲಿ ರೊಬಸ್ಟ ಹಾಗೂ ಅರಾಬಿಕಾ ಕಾಫಿ ತೋಟ. ಉಳಿದ ಜಮೀನಿನಲ್ಲಿ ಅಡಿಕೆ, ಭತ್ತ , ಬಾಳೆ ಕೃಷಿ.

ಅವರ ಜೊತೆ ನಡೆಯುತ್ತಾ ಎಸ್ಟೇಟಿನ ವಿದ್ಯಮಾನಗಳ ಮಾತುಕತೆ. ಎಸ್ಟೇಟಿನಲ್ಲಿ ಕಟ್ಟೆರೋಗದಿಂದಾದ ಅನಾಹುತ ಕೃಷಿಯ ಕಷ್ಟನಷ್ಟಗಳ ಸೂಚಿ. ೧೯೬೦ರಿಂದ ೧೯೮೦ರ ವರೆಗೆ ನೀರ್ಕಜೆ ಎಸ್ಟೇಟಿನಲ್ಲಿ ಏಲಕ್ಕಿಯ ಸುಗ್ಗಿ. ಆ ಎಸ್ಟೇಟಿಗೆ ಏಲಕ್ಕಿ ಉತ್ಪಾದನೆಯಲ್ಲಿ ಕೊಡಗಿನಲ್ಲೇ ಮೊದಲ ಸ್ಥಾನ. ೧೯೮೦ರ ದಶಕದ ಕೊನೆಯಲ್ಲಿ ಏಲಕ್ಕಿ ಗಿಡಗಳಿಗೆ ಕಟ್ಟೆರೋಗದ ಧಾಳಿ. ಕೊನೆಗೆ ಹಳೆ ಸಸಿಗಳನ್ನೆಲ್ಲ ಕಿತ್ತು ಹೊಸದಾಗಿ ನೆಟ್ಟರು. ಆದರೂ ಪ್ರಯೋಜನವಾಗಲಿಲ್ಲ. ಹೊಸಸಸಿಗಳೂ ಕಟ್ಟೆರೋಗಕ್ಕೆ ಬಲಿಯಾದವು. ಈಗ ಉಳಿದಿರುವುದು ಕೇವಲ ೫೦೦ ಸಸಿಗಳು.

ಕಾಫಿ ತೋಟದಲ್ಲಿ ಹಲವು ಮರಗಳು ಸತ್ತು ಮಣ್ಣಾಗುತ್ತಿದ್ದ ನೋಟ. ಯಾಕೆಂದು ಕೇಳಿದಾಗ ಕುಮಾರಣ್ಣನ ವಿವರಣೆ: "ಈಗ ಮರಗಸಿಯಲ್ಲಿ ಪಳಗಿದ ಕೆಲಸಗಾರರು ಸಿಗೋದಿಲ್ಲ. ಮರಗಸಿ ಮಾಡುವಾಗ ಮರದ ನೆತ್ತಿಯನ್ನೇ ಕಡಿದು ಹಾಕ್ತಾರೆ. ಮಳೆಗಾಲದಲ್ಲಿ ಹಾಗೆ ಕಡಿದ ನೆತ್ತಿಯ ಬಿರುಕಿನಿಂದ ಮಳೆನೀರು ಕಾಂಡದೊಳಗೆ ಇಳೀತದೆ. ಕ್ರಮೇಣ ಮರದ ಕಾಂಡ ಒಳಗೇ ಕೊಳೆತು ಗೆದ್ದಲಿಗೆ ಬಲಿಯಾಗ್ತವೆ.”

ಕೃಷಿಯಲ್ಲಿಯೂ ಕೆಮರಾದಲ್ಲಿಯೂ ಪ್ರಕೃತಿಯ ವೈಚಿತ್ರ್ಯಗಳನ್ನು ಗಮನಿಸಿ ದಾಖಲಿಸುವುದರಲ್ಲಿ ಪಳಗಿದವರು ಕುಮಾರಣ್ಣ. ೭ ಮಾರ್ಚ್ ೨೦೦೫ರಂದು ತಮ್ಮ ಪರಿಸರದಲ್ಲಿ ಸುರಿದ ಮಳೆಯ ವಿವರ ಬಿಚ್ಚಿಟ್ಟರು, “ಅವತ್ತು ನಮ್ಮ ತೋಟದಲ್ಲಿ ೯೦ ಸೆಂಟಿಮೀಟರ್ ಮಳೆ ಆಯ್ತು. ಪಕ್ಕದ ಗುಡ್ಡದಲ್ಲಿ ಸ್ವಲ್ಪ ಕಡಿಮೆ, ೬೦ ಸೆಂಟಿಮೀಟರ್ ಮಳೆ ಬಿತ್ತು. ಆದರೆ ಮಡಿಕೇರಿಯಲ್ಲಿ ೧೬ ಸೆಂಟಿಮೀಟರ್ ಮಳೆ ಮಾತ್ರ. ಒಂದು ಕಿಲೋಮೀಟರ್ ವ್ಯಾಸದ ಜಾಗದಲ್ಲಿ ಒಂದೇ ದಿನ ಬಿದ್ದ ಮಳೆಯಲ್ಲಿ ಇಷ್ಟು ವ್ಯತ್ಯಾಸ.”

ಆ ದಿನ ಬಿದ್ದ ಸಮೃದ್ಧ ಮಳೆಯಿಂದಾಗಿ ಇವರ ತೋಟದ ಕಾಫಿ ಗಿಡಗಳ ಗೆಲ್ಲುಗೆಲ್ಲುಗಳ ತುಂಬ ಹೂ ಅರಳಿದ್ದವು. ಒಂದು ವಾರದ ನಂತರ ಇವರ ಎಸ್ಟೇಟಿನಲ್ಲಿ ಪುನಃ ೨೦ ಸೆಂಟಿಮೀಟರ್ ಮಳೆ. "ನಾನು ಬಚಾವ್. ವಾರದ ನಂತರ ಜಾಸ್ತಿ ಮಳೆ ಬಂದಿದ್ದರೆ ಕಾಫಿ ಹೂವೆಲ್ಲ ಉದುರಿ ಹೋಗ್ತಿತ್ತು. ಹಾಗಾಗಲಿಲ್ಲ. ಅದೇ ಪಕ್ಕದ ಎಸ್ಟೇಟಿನಲ್ಲಿ ಎರಡನೇ ಸಲ ೬೦ ಸೆಂಟಿಮೀಟರ್ ಮಳೆ ಹೊಡೆಯಿತು. ಅದರಿಂದಾಗಿ, ಮೊದಲ ಮಳೆಗೆ ಚಿಗುರಿದ್ದ ಕಾಫಿ ಹೂಗಳೆಲ್ಲ ಉದುರಿ ನೆಲಕ್ಕೆ ಬಿದ್ದವು. ಪ್ರಕೃತಿ ಹೇಗೆ ಆಟವಾಡಿಸ್ತದೆ ನೋಡಿ” ಎಂದು ವಿವರಿಸಿದರು ಕುಮಾರಣ್ಣ.

ತನ್ನ ಎಸ್ಟೇಟಿನ ಬದಲಾವಣೆಗಳನ್ನೆಲ್ಲ ಇಷ್ಟು ಸೂಕ್ಷ್ಮವಾಗಿ ಗಮನಿಸುವ ಕುಮಾರಣ್ಣ ಆಗಾಗ ಕೆಮರಾ ಹೆಗಲಿಗೇರಿಸಿ ಹೊರಟು ಬಿಡುತ್ತಾರೆ - ಹೊಸ ಅನುಭವಕ್ಕಾಗಿ. ಅವರ ನೋಟಗಳು ಫೋಟೋಗಳಲ್ಲಿ ಮತ್ತು ಅನುಭವಗಳು ಬರಹಗಳಲ್ಲಿ ದಾಖಲಾಗುತ್ತವೆ. ಕೊಡಗಿನ ದಿನಪತ್ರಿಕೆಗಳಲ್ಲಿ ಹಾಗೂ ಕನ್ನಡದ ವಾರಪತ್ರಿಕೆಗಳಲ್ಲಿ ಅವರ ಐವತ್ತು ಲೇಖನಗಳು ಪ್ರಕಟವಾಗಿವೆ. ಆ ಲೇಖನಗಳ ವಿಶೇಷತೆ - ಅವರು ತೆಗೆದ ಅದ್ಭುತ ಫೋಟೋಗಳು. ಕೃಷಿಯಲ್ಲೂ ಕೆಮರಾ ನಂಟಿನಲ್ಲೂ ಪತ್ನಿ ಗಾಯತ್ರಿ ಅವರಿಗೆ ಒತ್ತಾಸೆ.

ದಶಕಗಳ ಹಿಂದಿನ ಮಡಿಕೇರಿಯ ಗುಡ್ಡಬೆಟ್ಟಗಳ ಚಿತ್ರಗಳು ಕುಮಾರಣ್ಣನ ಫೋಟೋಗಳಲ್ಲಿ ಮಾತ್ರ ಉಳಿದಿವೆ. ಯಾಕೆಂದರೆ, ಈಗ ಆ ಹಸುರುಗುಡ್ಡಗಳಲ್ಲಿ ಮನೆಗಳು ಮತ್ತು ಕಟ್ಟಡಗಳು ಮಚ್ಚೆಗಳಂತೆ ತುಂಬಿವೆ. ಅಬ್ಬಿ ಜಲಪಾತದಲ್ಲಿ ಅಖಂಡವಾಗಿ ನೀರು ಧುಮುಕುವುದನ್ನು ನೋಡಬೇಕಾದರೆ, ಕುಮಾರಣ್ಣನ ಫೋಟೋ ಆಲ್ಬಮ್ ತೆರೆಯಬೇಕು. ಯಾಕೆಂದರೆ, ಈಗ ಹುಲ್ಲು ಬೆಳೆದ ಕಾರಣ ಅಬ್ಬಿ ಎರಡು ಸೀಳಾಗಿದೆ.

ಜೂನ್ ೨೦೦೫ರ ಕೊನೆಯ ವಾರವಿಡೀ ಮಡಿಕೇರಿಯಲ್ಲಿ ಅಬ್ಬರದ ಮಳೆ. ಅಬ್ಬಿ ಜಲಪಾತ ನೋಡಲು ಜುಲಾಯಿ ೧ರಂದು ಹೋಗುತ್ತೇನೆಂದು ಕುಮಾರಣ್ಣನಿಗೆ ಫೋನ್ ಮಾಡಿದೆ. ಹತ್ತಾರು ಬಾರಿ ಹೋಗಿ, ಅಬ್ಬಿ ಜಲಪಾತವನ್ನು ಕೆಮರಾದಲ್ಲಿ ಸೆರೆ ಹಿಡಿದಿದ್ದರೂ, ಅವತ್ತು ಮುಂಜಾನೆ ಕುಮಾರಣ್ಣ ಕೆಮರಾ ಬಗಲಿಗೇರಿಸಿ ಮಡಿಕೇರಿಯಲ್ಲಿ ಹಾಜರ್.

“ಮಡಿಕೇರಿಯಿಂದ ಅಬ್ಬಿಗೆ ಐದು ಕಿಲೋಮೀಟರ್ ನಡೆದೇ ಹೋಗೋಣ" ಎಂದು ಹುರಿದುಂಬಿಸಿದರು. ಜೊತೆಯಾಗಿ ಸಾಗಿದೆವು. ಕೃಷಿಯ ಜಂಜಾಟದಲ್ಲಿ ಮುಳುಗುವವರು ಜೀವನೋತ್ಸಾಹ ತುಂಬಿಕೊಳ್ಳಬೇಕಾದರೆ ಕುಮಾರಣ್ಣನ ಜೊತೆ ಹೆಜ್ಜೆ ಹಾಕಬೇಕು.

ಫೋಟೋ ೧: ಕೆಮರಾದೊಂದಿಗೆ ಎನ್.ಎಮ್. ಕುಮಾರ್
ಫೋಟೋ ೨: ಕಾಫಿ ಗಿಡದ ಪಕ್ಕದಲ್ಲಿ ಎನ್.ಎಮ್. ಕುಮಾರ್
ಫೋಟೋ ೩: ನೀರ್ಕಜೆ ಎಸ್ಟೇಟಿನಲ್ಲಿ ಕಾಫಿ ಗಿಡದಲ್ಲಿ ಕಾಫಿಹಣ್ಣುಗಳು
ಫೋಟೋ ೪: ನೀರ್ಕಜೆ ಎಸ್ಟೇಟಿನ ಏರು ಹಾದಿ

Comments

Submitted by Ashwin Rao K P Tue, 09/21/2021 - 09:21

ತೋಟ ಸುತ್ತಾಡಿಸಿದ ಲೇಖನ !

ಮಡಿಕೇರಿಯ ಕೃಷಿಕ ಕುಮಾರಣ್ಣರ ಕೆಮರಾ ನಂಟು ಬಗ್ಗೆ ಶ್ರೀಯುತ ಅಡ್ಡೂರು ಇವರು ಬರೆದ ಲೇಖನ ಒಂದು ರೀತಿಯಲ್ಲಿ ತೋಟದ ಒಳಗೆ ಪ್ರವಾಸ ಮಾಡಿದಂತಿತ್ತು. ಕುಮಾರಣ್ಣನವರ ಕ್ಯಾಮರಾ ಕೈಚಳಕವೂ ಸೊಗಸಾಗಿದೆ. ಕೃಷಿಯ ಬಗ್ಗೆ ಅವರ ಅಪಾರ ಜ್ಞಾನದ ಬಗ್ಗೆಯೂ ಈ ಲೇಖನದಿಂದ ತಿಳಿದು ಬಂತು. ಮೊಬೈಲ್ ಬಂದ ಬಳಿಕ ಕ್ಯಾಮರಾ ಹೊತ್ತುಕೊಂಡು ಫೋಟೋ ತೆಗೆಯುವವರ ಸಂಖ್ಯೆ ಬಹಳ ಕಮ್ಮಿಯಾಗಿದೆ. ಎಲ್ಲಾ ಮೊಬೈಲ್ ನಲ್ಲೇ ಇರುವಾಗ ಮತ್ತೇಕೆ ಕೆಮರಾ ಹಂಗು? ಎಂದಾಗಿದೆ ಪರಿಸ್ಥಿತಿ. 

ಏನಾದರಾಗಲಿ ಕುಮಾರಣ್ಣನವರ ಬಗ್ಗೆ ಇರುವ ಈ ಲೇಖನ ಚೆನ್ನಾಗಿದೆ. ಕೃಷಿಕನ ಕಷ್ಟ, ಪ್ರಕೃತಿಯ ಚೆಲ್ಲಾಟದ ಬಗ್ಗೆ ತಿಳಿದುಕೊಂಡಾಗ ಮಾತ್ರ ಬೇಸರವಾಗುತ್ತದೆ. ಮಾಹಿತಿ ಪೂರ್ಣ ಲೇಖನ...