ಕೃಷಿಗೂ "ಸೈ" ಎಂದ ಮಹಿಳೆಯರು

ಪಂಜಾಬಿನ ಜಲಂಧರ ಜಿಲ್ಲೆಯ ಮನಾ ತಲ್‌ವಂಡಿ ಗ್ರಾಮ. ಅಲ್ಲಿ ರಸ್ತೆಯಲ್ಲೊಂದು ಟ್ರಾಕ್ಟರ್ ಸದ್ದು ಮಾಡುತ್ತಾ ಸಾಗುತ್ತದೆ. ಅಲ್ಲಿನ ಜನರು ಅದನ್ನು ಅಚ್ಚರಿಯಿಂದ ನೋಡುತ್ತಾ ನಿಲ್ಲುತ್ತಾರೆ - ಕಳೆದ 20 ವರುಷಗಳಿಂದಲೂ. ಯಾಕೆಂದರೆ ಅದನ್ನು ಚಲಾಯಿಸುತ್ತಿರುವುದು ಓರ್ವ ಮಹಿಳೆ - 60 ವರುಷ ವಯಸ್ಸಿನ ಗುರ್ ಮೀತ್ ಕೌರ್.
ಭಾರೀ ತೂಕದ ಆ ಟ್ರಾಕ್ಟರನ್ನು ಏರುತಗ್ಗಿನ ನೆಲದಲ್ಲೂ ಹೊಲಗಳಲ್ಲಿಯೂ ಲೀಲಾಜಾಲವಾಗಿ ಓಡಿಸುವ ಗುರ್ ಮೀತ್ ಕೌರ್, ಅಲ್ಲಿ ಶತಮಾನಗಳಿಂದ ಚಾಲ್ತಿಯಲ್ಲಿದ್ದ ಭಾವನೆಯೊಂದನ್ನು ಸುಳ್ಳು ಮಾಡಿದ್ದಾರೆ: ಕೃಷಿಯ ಕಠಿಣ ಕೆಲಸಗಳಿಗೆ ಗಂಡಸರೇ "ಸೈ" ಎಂಬುದನ್ನು.
“ಇದೆಲ್ಲ ಶುರುವಾದದ್ದು 20 ವರುಷಗಳ ಮುಂಚೆ ಒಂದು ದಿನ. ನನ್ನ ಸಂಬಂಧಿಕನೊಬ್ಬ ನಮ್ಮ ಮನೆಗೆ ಬಂದಿದ್ದ. ನಮ್ಮ ೧೫ ಎಕ್ರೆ ಹೊಲವನ್ನು ಟ್ರಾಕ್ಟರಿನಿಂದ ಉಳುಮೆ ಮಾಡಿದರೆ, ಒಳ್ಳೇ ಇಳುವರಿ ಬರುತ್ತದೆಂದು ಹೇಳಿದ. ಸರಿ ಅಂತ ನಾವು ಟ್ರಾಕ್ಟರ್ ಖರೀದಿಸಿಯೇ ಬಿಟ್ಟೆವು. ನನ್ನ ಗಂಡನಿಗೆ ಆ ಭೂತಾಕಾರದ ಯಂತ್ರ ಚಲಾಯಿಸಲು ಆರಂಭದಿಂದಲೂ ಆತಂಕ. ಕೆಲವು ವಾರ ಅದನ್ನು ಓಡಿಸಿದ ನಂತರ ತನ್ನಿಂದಾಗದೆಂದು ಅವರು ಕೈಚೆಲ್ಲಿದರು" ಎಂದು ನೆನೆಯುತ್ತಾರೆ ಕೌರ್.
ತಮ್ಮ ಟ್ರಾಕ್ಟರನ್ನು ಬಾಡಿಗೆಗೆ ಕೊಡೋಣ ಎಂಬುದು ಅವರ ಗಂಡನ ಸಲಹೆ. ಟ್ರಾಕ್ಟರ್ ಓಡಿಸಲಿಕ್ಕಾಗಿ ಯಾರನ್ನೋ ಅವಲಂಬಿಸುವುದು ಗುರ್ ಮೀತ್ ಕೌರ್ ಅವರಿಗೆ ಸುತಾರಾಂ ಇಷ್ಟವಿರಲಿಲ್ಲ. ಅದೊಂದು ದಿನ ಟ್ರಾಕ್ಟರಿನ ಚಾಲಕನ ಸೀಟಿನಲ್ಲಿ ಕೂತು, ಇಂಜಿನ್ ಚಾಲೂ ಮಾಡಿದರು ಕೌರ್. “ನನ್ನೊಂದಿಗಿದ್ದ ಆ ಸಂಬಂಧಿಕ ಟ್ರಾಕ್ಟರ್ ಚಲಾಯಿಸುವುದನ್ನು ಇಡೀ ದಿನ ಕಲಿಸಿದ. ಅವತ್ತು ಸಂಜೆ ಟ್ರಾಕ್ಟರನ್ನು ನಾನೇ ಚಲಾಯಿಸಿಕೊಂಡು ಮನೆಗೆ ತಂದೆ" ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಕೌರ್.
“ಮೊದಮೊದಲು ನಾನು ಟ್ರಾಕ್ಟರ್ ಚಲಾಯಿಸಿಕೊಂಡು ರಸ್ತೆಯಲ್ಲಿ ಹೋದಾಗೆಲ್ಲ ಜನರು ಕುತೂಹಲದಿಂದ ನೋಡ್ತಾ ನಿಲ್ಲುತ್ತಿದ್ದರು. ಆದರೆ ನನಗೇನೂ ಮುಜುಗರ ಆಗುತ್ತಿರಲಿಲ್ಲ. ಜನರ ಟೀಕೆಗಳಿಗೆ ನಾನು ತಲೆ ಕೆಡಿಸಿಕೊಂಡವಳೇ ಅಲ್ಲ. ದಿನಗಳೆದಂತೆ ಹಳ್ಳಿಗರ ವಿಚಿತ್ರ ನೋಟಗಳು ಗೌರವದ ನೋಟಗಳಾಗಿ ಬದಲಾದವು” ಎಂದು ತನ್ನ ಅಂದಿನ ದಿನಗಳ ಅನುಭವ ಹಂಚಿಕೊಳ್ಳುತ್ತಾರೆ ಗುರ್ ಮೀತ್ ಕೌರ್.
ಆಕೆ ಮೂರು ಹೆಣ್ಣು ಮಕ್ಕಳ ತಾಯಿ (ಮೂವರಿಗೂ ಮದುವೆಯಾಗಿ ವಿದೇಶದಲ್ಲಿದ್ದಾರೆ.) ಈಗ ಗ್ರಾಮ ಪಂಚಾಯತ್ ಮತ್ತು ಮಹಿಳಾ ಮಂಡಲದ ಸದಸ್ಯೆ. ಅಲ್ಲಿನ "ಹಾಲು ಸೊಸೈಟೆ"ಯಲ್ಲಿಯೂ ಅವರದು ಪ್ರಮುಖ ಪಾತ್ರ. ಹನ್ನೆರಡು ಹಸುಗಳನ್ನು ಗಂಡ ಹಾಗೂ ಮಗನ ಸಹಾಯದಿಂದ ಸಾಕುತ್ತಾ ಯಶಸ್ವಿಯಾಗಿ ಡೈರಿ ನಿರ್ವಹಿಸುತ್ತಿದ್ದಾರೆ. ಅವರ ಕುಟುಂಬ ತಮ್ಮ ಕೆಲಸಗಳಿಗಾಗಿ ಕೂಲಿಕಾರರನ್ನು ಅವಲಂಬಿಸಿಲ್ಲ; ಎಲ್ಲ ಕೆಲಸಗಳನ್ನೂ ಮನೆಯವರೇ ಮಾಡುತ್ತಾರೆ.
ಹಲವು ಬಾರಿ ವಿದೇಶಗಳಿಗೆ ಮಗಳಂದಿರ ಮನೆಗಳಿಗೆ ಹೋಗಿ ಬಂದಿರುವ ಗುರ್ ಮೀತ್ ಕೌರ್ ಅವರಿಗೆ ತನ್ನ ಮನೆ, ಡೈರಿ, ಹೊಲಗಳೇ ಅಚ್ಚುಮೆಚ್ಚು. “ಮಹಿಳೆಯರ ಯಶೋಗಾಥೆಗಳನ್ನು ಸರಕಾರವು ಜನಸಾಮಾನ್ಯರಿಗೆ ತಿಳಿಸಬೇಕು. ನಮ್ಮ ರಾಜ್ಯದಲ್ಲಿ ಟ್ರಾಕ್ಟರ್ ಚಲಾಯಿಸುತ್ತಿರುವ ಮಹಿಳೆ ನಾನೊಬ್ಬಳೇ ಅಲ್ಲ. ವಾರ್ತಾಪತ್ರಿಕೆಗಳು ಮತ್ತು ಟೆಲಿವಿಷನ್ ಮೂಲಕ ಮಹಿಳಾ ಸಾಧಕರ ಸಾಧನೆಗಳಿಗೆ ಪ್ರಚಾರ ನೀಡಬೇಕು. ಆಗ ಇತರ ಮಹಿಳೆಯರಿಗೂ ಹುಮ್ಮಸ್ಸು ಬರ್ತದೆ" ಎನ್ನುವುದು ಅವರ ಆಗ್ರಹ.
“ಉದ್ಯಮಶೀಲ ಕೃಷಿಮಹಿಳೆ” ಎಂದು ಪಂಜಾಬಿನಲ್ಲಿ ಹೆಸರು ಗಳಿಸಿರುವವರಲ್ಲಿ ಜಲಂಧರ ಜಿಲ್ಲೆಯ ಧನಾಲ್ ಹಳ್ಳಿಯ ಸಂಗೀತಾ ದಿಯೋಲ್ ಪ್ರಮುಖರು. ಪಂಜಾಬಿನಲ್ಲಿ “ಜೇನುಸಾಕಣೆ" ಆರಂಭಿಸಿದವರಲ್ಲಿ ಒಬ್ಬರಾದ ಸಂಗೀತಾ ಅವರ ವಯಸ್ಸು ಐವತ್ತು ದಾಟಿದೆ. ಪೋಲಿಯೋ ಬಾಧಿತಳಾಗಿರುವ ಸಂಗೀತಾ ತನ್ನ ದೈಹಿಕ ದೌರ್ಬಲ್ಯವನ್ನೇ ಮೆಟ್ಟಿ ನಿಂತಿದ್ದಾರೆ. ಅಷ್ಟೇ ಅಲ್ಲ, ಕೃಷಿಕಾಯಕಕ್ಕೆ ಕೈಹಾಕುವ ಮಹಿಳೆಯರನ್ನು ನಿರುತ್ಸಾಹಗೊಳಿಸುವ ಸಾಮಾಜಿಕ ಒತ್ತಡಗಳನ್ನೂ ಜಯಿಸಿದ್ದಾರೆ. ಈಗ ಅವರು ಜಲಂಧರ್ ಜೇನು ಸಾಕಣೆದಾರರ ಸಂಘದ ಅಧ್ಯಕ್ಷೆ.
ಸಂಗೀತಾ ಅವರ ಸಾಹಸಗಾಥೆ ರೋಚಕ. ಅಡ್ಡಿಆತಂಕಗಳಿಗೆ ಸಡ್ಡು ಹೊಡೆದೇ ಗೆದ್ದು ಬಂದವರು ಸಂಗೀತಾ. ಖಾಸಗಿಯಾಗಿ ಪದವಿ ಶಿಕ್ಷಣ ಮುಗಿಸಬೇಕಾಯಿತು ಸಂಗೀತಾ. ಯಾಕೆ ಗೊತ್ತೇ? "ವಿದ್ಯಾರ್ಥಿಗಳು ನಾನು ಕಾಲೇಜಿಗೆ ಹೋಗುವಾಗೆಲ್ಲ “ಕುಂಟು ಬಾತುಕೋಳಿ" ಎಂದು ಗೇಲಿ ಮಾಡುತ್ತಿದ್ದರು” ಎನ್ನುತ್ತಾರೆ ಆಕೆ.
ಯಾವುದೇ ಅನುಭವವಿಲ್ಲದೆ 1972ರಲ್ಲಿ ಕೋಳಿ ಸಾಕಣೆ ಶುರು ಮಾಡಿದರು. ಮೂರು ವರುಷಗಳ ನಂತರ ಕೋಳಿಗಳನ್ನು ಖರೀದಿಸಿದ ಸೈನಿಕರು ಅವನ್ನು ಅಡುಗೆಗಾಗಿ ಕೊಲ್ಲುವುದನ್ನು ಒಮ್ಮೆ ಕಂಡಾಗ ಮನನೊಂದು ಕೋಳಿಸಾಕಣೆ ತೊರೆದರು.
ಅನಂತರ ಕೃಷಿಕಾಯಕಕ್ಕೆ ಕೈ ಹಾಕಿದ ಸಂಗೀತಾ ಅದಕ್ಕಾಗಿ ಹಲವಾರು ವರುಷ ಟ್ರಾಕ್ಟರನ್ನೂ ಚಲಾಯಿಸಿದ್ದರು. ಸೇನೆಯ ಸೇವೆ ತೊರೆದು ಬಂದಿದ್ದ ಅವರ ಪತಿ, ಆಟೋ ಮೊಬೈಲ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದರೆ, ಸಂಗೀತಾ ಕೃಷಿಯಲ್ಲಿ ಮುನ್ನಡೆದರು.
1980ರ ಆರಂಭದಲ್ಲಿ ಸಂಗೀತಾ ತೊಡಗಿದ್ದು ಅಣಬೆ ಕೃಷಿಯಲ್ಲಿ. ಆಗ ಆಹಾರವಾಗಿ ಅಣಬೆ ಜನಪ್ರಿಯವಾಗಿರಲಿಲ್ಲ. ಅಂತಹ ಸನ್ನಿವೇಶದಲ್ಲಿ, ಸುಮಾರು ನಾಲ್ಕು ವರುಷಗಳಲ್ಲಿ ತಲಾ ಮೂರು ತಿಂಗಳು ದೂರದ ಢೆಲ್ಲಿಗೆ ರಾತ್ರಿ ರೈಲಿನಲ್ಲಿ ಹೋಗುತ್ತಿದ್ದರು; ಅಲ್ಲಿ ಅಣಬೆ ಮಾರಾಟ ಮಾಡಿ ಮನೆಗೆ ಮರಳುತ್ತಿದ್ದರು!
ಅದಾದ ನಂತರ, 1984ರಲ್ಲಿ ಜೇನುಸಾಕಣೆ ಶುರು ಮಾಡಿದರು - ಕೇವಲ ಹತ್ತು ಜೇನು ಪೆಟ್ಟಿಗೆಗಳಲ್ಲಿ. ಆರು ವರುಷಗಳ ನಂತರ, 1990ರಲ್ಲಿ ಅವರು ಸಾಕುತ್ತಿದ್ದ ಜೇನು ಕುಟುಂಬಗಳ ಸಂಖ್ಯೆ 3,500! ಇಂತಹ ಸಾಧಕಿಗೆ 1988ರಲ್ಲಿ ಪಂಜಾಬ್ ಸರಕಾರದ "ಉತ್ತಮ ಕೃಷಿಕ ಮಹಿಳೆ" ಪ್ರಶಸ್ತಿ ಮತ್ತು 1999ರಲ್ಲಿ ಜೇನು ಸಾಕಣೆದಾರರ ಫೆಡರೇಷನಿನ ಪ್ರಶಸ್ತಿ ಸಿಕ್ಕಿದ್ದು ಆಶ್ಚರ್ಯವೇನಲ್ಲ.
ಕೃಷಿಯಲ್ಲಿ ಅನುಶೋಧನೆಗಳನ್ನು ಅಳವಡಿಸಿಕೊಳ್ಳುವ ಮಹಿಳೆಯರಿಗೆ ಸರಕಾರ ಪ್ರೋತ್ಸಾಹ ನೀಡಬೇಕೆಂಬುದು ಸಂಗೀತಾ ಅವರ ಒತ್ತಾಯ. "ನಮ್ಮ ರಾಜ್ಯದಲ್ಲಿ ಯುವಜನರು ಎದುರಿಸುತ್ತಿರುವ ದೊಡ್ಡ ಸಮಸ್ಯೆ ನಿರುದ್ಯೋಗದ್ದು. ನನ್ನ ಹಾಗೆ ಹಲವಾರು ಮಹಿಳೆಯರು ತಮ್ಮತಮ್ಮ ಕುಟುಂಬಗಳಿಗೆ ಕೃಷಿ ಮೂಲಕ ಉದ್ಯೋಗ ಒದಗಿಸಿದ್ದಾರೆ. ಇಂಥವರಿಗೆ ಮತ್ತು ಸಾವಯವ ಕೃಷಿಯಲ್ಲಿ ತೊಡಗುವವರಿಗೆ ಸರಕಾರ ಬೆಂಬಲ ನೀಡಬೇಕು" ಎನ್ನುತ್ತಾರೆ ಆಕೆ.
ಕಳೆದ ವರುಷ, ಫಜಿಲ್ಕಾ ಜಿಲ್ಲೆಯ ಅಲ್ಲಿಯಾನಾ ಗ್ರಾಮದ ಪ್ರಮುಖ ಹತ್ತಿ ಬೆಳೆಗಾರ ಕರ್-ನೇಯಿಲ್ ಸಿಂಗ್ ಅವರ ಹೆಸರನ್ನು ಕರೆಯಲಾಯಿತು - ರಾಜ್ಯ ಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ. ಆ ಪ್ರಶಸ್ತಿಯನ್ನು ಮುಖ್ಯಮಂತ್ರಿಯಿಂದ ಸ್ವೀಕರಿಸಲು ತನ್ನ ಹೆಂಡತಿ ಅಮರ್ ಜೀತ್ ಕೌರ್ ಅವರನ್ನೂ ವೇದಿಕೆಗೆ ಸಿಂಗ್ ಕರೆಸಿಕೊಂಡರು. ಈ ರೀತಿಯಲ್ಲಿ ಮಹಿಳೆಯರು "ಸೈ" ಅನ್ನಿಸಿಕೊಂಡಿರುವುದು ಅಭಿಮಾನದ ಸಂಗತಿ.
ಫೋಟೋ: ಟ್ರಾಕ್ಟರ್ ಚಲಾಯಿಸುತ್ತಿರುವ ಮಹಿಳೆ - ಪ್ರಾತಿನಿಧಿಕ ಫೋಟೋ ಕೃಪೆ: ಅಲಾಮಿ.ಕೋಮ್