ಕೃಷಿತೋ ಜಾಸ್ತಿ ದುರ್ಭಿಕ್ಷಮ್

ಕೃಷಿತೋ ಜಾಸ್ತಿ ದುರ್ಭಿಕ್ಷಮ್

ಮೂಡಿಗೆರೆಯಲ್ಲಿ ತಮ್ಮ ಜಮೀನಿನಲ್ಲಿ ಕೃಷಿ ಮಾಡುತ್ತ ಕೃಷಿಯ ಏಳುಬೀಳುಗಳನ್ನೆಲ್ಲ ಚೆನ್ನಾಗಿ ತಿಳಿದಿದ್ದ ದಿ. ಪೂರ್ಣಚಂದ್ರ ತೇಜಸ್ವಿಯವರು ಕೃಷಿಕರ ಭವಿಷ್ಯದ ಬಗ್ಗೆ ಹಲವು ದಶಕಗಳ ಮುಂಚೆಯೇ ಹೇಳಿದ್ದ ಮಾತು ಮತ್ತೆಮತ್ತೆ ನೆನಪಾಗುತ್ತದೆ. ಅವರು ಆಗಲೇ ಹೇಳಿದ್ದರು, “ಈ ದೇಶದಿಂದ ಕೃಷಿಕರೆಂಬ ವರ್ಗವೇ ಮಾಯವಾಗುವ ದಿನಗಳು ದೂರವಿಲ್ಲ.”
ಭಾರತದ 2011ರ ಜನಗಣತಿಯ ಪ್ರಕಾರ, 2001ರಿಂದ 2011ರ ವರೆಗಿನ 10 ವರುಷಗಳ ಅವಧಿಯಲ್ಲಿ ದೇಶದ ರೈತರ ಸಂಖ್ಯೆಯಲ್ಲಿ 90 ಲಕ್ಷ ಇಳಿಕೆಯಾಗಿದೆ. ಕಳೆದ ನಾಲ್ಕು ದಶಕಗಳಲ್ಲಿ ಇದೇ ಮೊದಲ ಬಾರಿ ಕೃಷಿಕರ ಸಂಖ್ಯೆಯಲ್ಲಿ ಇಳಿಕೆ ದಾಖಲಾಗಿದೆ.
ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ ಭಾರತದ ಜನಸಂಖ್ಯೆಯ ವಿವಿಧ ಅಂಕೆಸಂಖ್ಯೆಗಳನ್ನು ಮೇ 2013ರಲ್ಲಿ ಬಿಡುಗಡೆಗೊಳಿಸಿದಾಗ ಈ ಮಾಹಿತಿ ಬಹಿರಂಗವಾಗಿತ್ತು. ಅದರ ಪ್ರಕಾರ, ಕಾರ್ಮಿಕರನ್ನು ನಾಲ್ಕು ಗುಂಪುಗಳಾಗಿ ವಿಭಾಗಿಸಲಾಗಿತ್ತು: ಕೃಷಿಕರು, ಕೃಷಿಕಾರ್ಮಿಕರು, ಗೃಹೋದ್ಯಮ ಕಾರ್ಮಿಕರು ಮತ್ತು ಇತರ ಕಾರ್ಮಿಕರು. ಒಟ್ಟು ಜನಸಂಖ್ಯೆ 121 ಕೋಟಿಯಲ್ಲಿ ಮೊದಲ ಸ್ಥಾನದಲ್ಲಿ ಇತರ ಕಾರ್ಮಿಕರಿದ್ದು, ಎರಡನೇ ಸ್ಥಾನದಲ್ಲಿರುವ ಕೃಷಿಕರ ಸಂಖ್ಯೆ 11 ಕೋಟಿ 90 ಲಕ್ಷ ಎಂದು ಘೋಷಿಸಲಾಗಿತ್ತು.
ಈ ಇಳಿಕೆ ಅಚಾನಕ್ ಆಗಿ ನಡೆದ ಬೆಳವಣಿಗೆಯಲ್ಲ. 1970ರಿಂದೀಚೆಗೆ ನಡೆಯುತ್ತಿರುವ ವಿದ್ಯಮಾನಕ್ಕೆ ಜನಗಣತಿಯಿಂದಾಗಿ ಅಧಿಕೃತ ಮುದ್ರೆ ಬಿದ್ದಿದೆ. ಯಾವುದೇ ಹಳ್ಳಿಗೆ ಹೋದರೂ, ಅಲ್ಲಿ ಉಳಿದಿರುವವರು ವಯಸ್ಸು ಸುಮಾರು 50 ದಾಟಿದವರು ಮಾತ್ರ. ಹೊಲಗಳಲ್ಲಿ, ತೋಟಗಳಲ್ಲಿ ಈಗ ಕೆಲಸಕ್ಕೆ ಬರುವವರೆಲ್ಲ ಒಂದೆರಡು ತಲೆಮಾರು ಹಿಂದಿನವರು. ಹೊಸ ತಲೆಮಾರಿನವರೆಲ್ಲ ನಗರಗಳಿಗೆ ವಲಸೆ ಹೋಗಿದ್ದಾರೆ ಅಥವಾ ಹೋಗುತ್ತಿದ್ದಾರೆ.
ಮುಂದೇನು? ಎಂಬುದರ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ. ಆಹಾರಧಾನ್ಯಗಳು, ಎಣ್ಣೆಕಾಳುಗಳು, ಹಣ್ಣುತರಕಾರಿಗಳು, ಸಾಂಬಾರಜೀನಸುಗಳು – ಇವನ್ನೆಲ್ಲ ಯಾರಾದರೂ ಬೆಳೆಸಲೇ ಬೇಕು. ಯಾಕೆಂದರೆ, ನಮ್ಮ ಊಟದ ತಟ್ಟೆಯಲ್ಲಿ ತಿನ್ನಲು ಏನಾದರೂ ಬೇಕು. ಹಸಿವಾದಾಗ ಬಂಗಾರವನ್ನು, ಅಥವಾ ಹಣದ ನೋಟುಗಳನ್ನು ತಿನ್ನಲು ಸಾಧ್ಯವೇ?
ಯಾಕೆ ಹೀಗಾಗಿದೆ? ಯುವ ಜನಾಂಗ ಕೃಷಿಯಿಂದ ವಿಮುಖವಾಗಲು ಪ್ರಧಾನ ಕಾರಣ: ಕೃಷಿಕರೆಂದರೆ ಸಮಾಜದ ಬಹುಪಾಲು ಜನರಿಗೆ ಇರುವ ಅಸಡ್ಡೆ. ಅದರಿಂದಾಗಿ ಬಹುಪಾಲು ಕೃಷಿಕರಲ್ಲಿಯೂ ಆತ್ಮಗೌರವದ ಕೊರತೆ.
ಈಗ, ಪಂಚೆ ಅಥವಾ ಪೈಜಾಮ ಧರಿಸಿದ ಕೃಷಿಕನೊಬ್ಬ ಯಾವುದೇ ಸರಕಾರಿ ಕಚೇರಿಗೆ ಹೋದರೆ ಆತನನ್ನು ಹೇಗೆ ನಡೆಸಿಕೊಳ್ಳಲಾಗುತ್ತದೆ? ಆತನನ್ನು ಸಿಬ್ಬಂದಿ ಮುಖವೆತ್ತಿ ಸರಿಯಾಗಿ ಮಾತನಾಡಿಸುವುದಿಲ್ಲ. ಯಾವುದೇ ಮಾಹಿತಿಯನ್ನೂ ಆತನಿಗೆ ಅರ್ಥವಾಗುವಂತೆ ತಿಳಿಸುವುದಿಲ್ಲ. ಹಲವು ಸರಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೃಷಿಕರನ್ನು ಸತಾಯಿಸಿ, ಹೈರಾಣ ಮಾಡುತ್ತಾರೆ. ಇದರಿಂದಾಗಿ, ತಾನು ಈ ದೇಶದಲ್ಲಿ ಹುಟ್ಟಿದ್ದು ಮೊದಲನೇ ತಪ್ಪು, ಕೃಷಿಕನಾದದ್ದು ಎರಡನೇ ತಪ್ಪು ಎಂದು ಕೃಷಿಕನಿಗೆ ಅನಿಸುತ್ತದೆ.
ಹಾಗಿರುವಾಗ, ತಮ್ಮ ಮಕ್ಕಳು ಕೃಷಿಕರಾಗಲು ಅವರು ಯಾವತ್ತೂ ಪ್ರೋತ್ಸಾಹಿಸುವುದಿಲ್ಲ. “ನಾನು ಕೃಷಿಯಲ್ಲಿ ಬೆಂದುನೊಂದದ್ದು ಸಾಕು. ನೀವು ನಗರಕ್ಕೆ ಹೋಗಿ ಹಾಯಾಗಿರಿ” ಎಂದು ಮಕ್ಕಳನ್ನು ವಲಸೆಗೆ ಬಾಲ್ಯದಿಂದಲೇ ತಯಾರು ಮಾಡುತ್ತಾರೆ. ಕೊನೆಗೆ “ಕೃಷಿಜಮೀನು ಮಾರಿ, ನನ್ನ ಪಾಲು ಕೊಡಿ. ನೀವೂ ನಗರಕ್ಕೆ ಬನ್ನಿ” ಎಂದು ಮಕ್ಕಳು ಬಲವಂತ ಮಾಡುವಾಗ ಕೃಷಿಕರ ಸಂಖ್ಯೆಯ ಕುಸಿತ ಸಹಜ.
ಕೃಷಿಯ ಬಗ್ಗೆ ಗೌರವ ಹುಟ್ಟಿಸುವ ಕೆಲಸವನ್ನು ಸರಕಾರ ಮಾಡಿದ್ದು ತೀರಾ ವಿರಳ. “ಕೃಷಿ ಪಂಡಿತ” ಪ್ರಶಸ್ತಿಯನ್ನು ಸಹಜಕೃಷಿಯ ಹರಿಕಾರ ದಿ. ಚೇರ್ಕಾಡಿ ರಾಮಚಂದ್ರರಾಯರಿಗೆ ನೀಡುವ ಮುನ್ನ ಕೃಷಿ ಇಲಾಖೆ ಮಾಡಿದ ಅವಮಾನವನ್ನು ಅವರು ಹಲವು ಬಾರಿ ನೋವಿನಿಂದ ಹೇಳಿಕೊಂಡದ್ದಿದೆ.
ಕೆಲವು ಸರಕಾರೇತರ ಸಂಸ್ಥೆಗಳು ಈ ನಿಟ್ಟಿನಲ್ಲಿ ಒಳ್ಳೆಯ ಕೆಲಸ ಮಾಡಿವೆ. ಉದಾಹರಣೆಗೆ, ಸಿಂಡಿಕೇಟ್ ಬ್ಯಾಂಕ್ ಪ್ರವರ್ತಿಸಿದ “ಸಿಂಡಿಕೇಟ್ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ”. ಐದು ದಶಕಗಳ ಮುಂಚೆ ಈ ಸಂಸ್ಥೆ ನೂರಾರು ಕೃಷಿ ವಿಚಾರ ವಿನಿಮಯ ಕೇಂದ್ರಗಳನ್ನು ಸ್ಥಾಪಿಸಿತ್ತು - ಕೃಷಿಕರಲ್ಲಿ ವಿಚಾರ ವಿನಿಮಯಕ್ಕಾಗಿ ಮತ್ತು ಪ್ರಗತಿಪರ ಮನೋಭಾವ ಬೆಳೆಸಲಿಕ್ಕಾಗಿ. ಹಾಗೆಯೇ ನೂರಾರು ಹೈಸ್ಕೂಲು / ಜೂನಿಯರ್ ಕಾಲೇಜುಗಳಲ್ಲಿ ವಿದ್ಯಾರ್ಥಿ ಕೃಷಿಕ ಸಂಘ ಸ್ಥಾಪಿಸಿ, ವಿದ್ಯಾರ್ಥಿಗಳು ಶಾಲಾವಠಾರದಲ್ಲಿ ಕೃಷಿ ಚಟುವಟಿಕೆ ಕೈಗೆತ್ತಿಕೊಳಲು ಪ್ರೋತ್ಸಾಹ ನೀಡಿತ್ತು. ಅಂತಹ ಪ್ರಯತ್ನಗಳು ಹೆಚ್ಚೆಚ್ಚು ನಡೆಯಬೇಕಾಗಿದೆ.
ಎಲ್ಲದಕ್ಕಿಂತ ಮುಖ್ಯವಾಗಿ, ಆಹಾರಧಾನ್ಯಗಳ ಹಾಗೂ ಕಬ್ಬು ಇತ್ಯಾದಿ ನಗದು ಬೆಳೆಗಳ ಬೆಂಬಲ ಬೆಲೆ ನಿಗದಿಪಡಿಸುವಲ್ಲಿ ಸರಕಾರವು ನ್ಯಾಯಪರ ಧೋರಣೆ ವಹಿಸಬೇಕಾಗಿದೆ. ಇಂದು ಅವುಗಳ ಬೆಂಬಲ ಬೆಲೆಯು ಅವನ್ನು ಬೆಳೆಸಲು ಮಾಡಿದ ವೆಚ್ಚಕ್ಕಿಂತ ಕಡಿಮೆ ಇದೆ. ಹಾಗಾದರೆ ಕೃಷಿಕ ಹಾಗೂ ಆತನ ಕುಟುಂಬದವರು ತಮ್ಮ ಜಮೀನಿನಲ್ಲಿ ಬೆವರು ಸುರಿಸಿ ದುಡಿದದ್ದಕ್ಕೆ ಯಾವ ಪ್ರತಿಫಲವೂ ಇಲ್ಲವೇ? ಹೀಗಾದರೆ ಯಾರು ತಾನೇ ಕೃಷಿಯನ್ನು ಮುಂದುವರಿಸಲು ಸಾಧ್ಯ?
ಹೀಗೆಯೇ ಸಾಗಿದರೆ, ದಿ. ಪೂರ್ಣಚಂದ್ರ ತೇಜಸ್ವಿಯವರು ಹೇಳಿದ ಭವಿಷ್ಯವಾಣಿ ನಿಜವಾಗುವ ದಿನಗಳು ದೂರವಿಲ್ಲ, ಅಲ್ಲವೇ?
ಫೋಟೋ ಕೃಪೆ: ರೂಟರ್ಸ್ ಜಾಲತಾಣ

Comments

Submitted by ಬರಹಗಾರರ ಬಳಗ Wed, 12/07/2022 - 10:59

ಕೃಷಿ ನೀಡುವ ಖುಷಿಯೇ ಬೇರೆ
ಈ ಮೇಲಿನ ಲೇಖನ ಓದಿ ನಿಜಕ್ಕೂ ನನ್ನ ಹಳ್ಳಿಯ ದಿನಗಳು ನೆನಪಿಗೆ ಬಂದುವು. ನಾನು ಶಿಕ್ಷಕಿಯಾಗಿ ನಂತರ ಮುಖ್ಯೋಪಾದ್ಯಾಯಿನಿಯಾಗಿ ಕೆಲಸ ಮಾಡಿದ್ದು ದ.ಕ. ಜಿಲ್ಲೆಯ ವಿಟ್ಲದ ಸಮೀಪದ ಒಂದು ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಯಲ್ಲಿ. ಮನೆಯಲ್ಲಿ ಕೃಷಿ ಇತ್ತು. ಶಾಲೆಯಿಂದ ಬಂದ ಬಳಿಕ ಕೃಷಿ ಕೆಲಸಗಳು ಇದ್ದೇ ಇರುತ್ತಿದ್ದುವು. ಸಮಯ ಹೇಗೆ ಹೋಗುತ್ತಿತ್ತು ಗೊತ್ತೇ ಆಗುತ್ತಿರಲಿಲ್ಲ.
ಆದರೆ ಈಗ ಮಕ್ಕಳು ಬೆಳೆದು ದೊಡ್ದವರಾಗಿ ಬೇರೆ ಬೇರೆ ಊರುಗಳಲ್ಲಿದ್ದಾರೆ. ನನಗೂ ನನ್ನ ಗಂಡನಿಗೂ ಆಗಾಗ ಕಾಡುವ ಅಲ್ಪ-ಸ್ವಲ್ಪ ಅನಾರೋಗ್ಯ. ಹಾಗೆ ಅನಿವಾರ್ಯ ಪರಿಸ್ಥಿತಿಯಲ್ಲಿ ಬೆಂಗಳೂರಿಗೆ ಬಂದು ಮಗನ ಮನೆಯಲ್ಲಿದ್ದೇವೆ. ಆಗಾಗ ಊರಿಗೆ ಹೋಗಿ ಅಲ್ಲಿಯ ಕೃಷಿಯ ವಾತಾವರಣವನ್ನು ನೋಡುವುದು ನನಗೆ ಈಗಲೂ ಬಹಳ ಇಷ್ಟ. ಕೃಷಿ ಕೊಡುವ ಖುಷಿಯೇ ಬೇರೆ. ಅದಕ್ಕೆ ಅನ್ಯ ಪರ್ಯಾಯವಿಲ್ಲ.
-ರತ್ನಾ ಕೆ ಭಟ್, ತಲಂಜೇರಿ