ಕೃಷಿಯಲ್ಲಿ ಹಸಿರು ಮನೆಯ ಉಪಯುಕ್ತತೆ

ಕೃಷಿಯಲ್ಲಿ ಹಸಿರು ಮನೆಯ ಉಪಯುಕ್ತತೆ

ಕೃಷಿಯಲ್ಲಿ ಉನ್ನತ ಆಧುನಿಕ ತಂತ್ರಜ್ಞಾನಗಳ ಬಳಕೆ ಇತ್ತೀಚಿನ ದಿನಗಳಲ್ಲಿ ಪ್ರಾಮುಖ್ಯತೆ ಪಡೆದಿದೆ. ಈ ಆಧುನಿಕ ತಂತ್ರಜ್ಞಾನ ಹವಾಮಾನದ ಮೇಲೆ ಕಡಿಮೆ ಅವಲಂಬಿತವೂ ಹಾಗೂ ಉತ್ಪಾದನೆ ಮತ್ತು ಗುಣಮಟ್ಟ ಹೆಚ್ಚಿಸುವಲ್ಲಿ ಹೆಚ್ಚು ಸಹಕಾರಿಯೂ ಆಗಿರುವುದರಿಂದ ಅಧಿಕ ಮೂಲ ಬಂಡವಾಳ ಮತ್ತು ಖರ್ಚಿನಿಂದ ಕೂಡಿರುತ್ತದೆ. ಹಸಿರು ಮನೆ ತಂತ್ರಜ್ಞಾನ ಈ ಎಲ್ಲ ಅಂಶಗಳನ್ನು ಒಳಗೊಂಡಿದೆ.

ಹಸಿರು ಮನೆಯ ಉಪಯುಕ್ತತೆಗಳು: ಕಡಿಮೆ ವೆಚ್ಚದ ಹಸಿರು ಮನೆಗಳಲ್ಲಿ ಉತ್ತಮ ಗುಣಮಟ್ಟದ ಹೂವಿನ ಬೆಳೆಗಳಾದ ಜರ್ಬೇರಾ, ಕಾರ್ನೆಷನ್, ಗುಲಾಬಿ ಹಾಗೂ ಅಂಥೋರಿಯಂ ಹೂಗಳನ್ನು ಲಾಭದಾಯಕವಾಗಿ ಬೆಳೆಯಬಹುದು, ಈ ರೀತಿ ಹಸಿರುಮನೆ ತಾಂತ್ರಿಕತೆಯನ್ನು ಅಳವಡಿಸಿಕೊಂಡು ಸೂಕ್ತವಾದ ವಾಣಿಜ್ಯ ಹೂಗಳನ್ನು ಉತ್ಪಾದಿಸಿ ಲಾಭ ಪಡೆಯಲು ಸಾಧ್ಯ. ಹೂಗಳ ಅನುವಂಶಿಕ ಉತ್ಪಾದನಾ ಸಾಮರ್ಥ್ಯವನ್ನು ಬಳಸಿಕೊಂಡು ಅತ್ಯಧಿಕ ಉತ್ಪಾದನೆ ಮಾಡಬಹುದು.

* ವರ್ಷದ ಎಲ್ಲಾ ಕಾಲದಲ್ಲಿಯೂ ಮಾರುಕಟ್ಟೆಯ ಅವಶ್ಯಕತೆಗೆ ತಕ್ಕಂತೆ ಹೂಗಳನ್ನು ಮತ್ತು ತರಕಾರಿಗಳನ್ನೂ ಬೆಳೆಯಬಹುದು.

* ಅತ್ಯುತ್ತಮ ಗುಣಮಟ್ಟದ ಬೆಳೆಗಳನ್ನು ಬೆಳೆಯಲು ಸಾಧ್ಯ. 

* ನೀರಿನ ಹಾಗೂ ಕೆಲಸಗಾರರ ಅವಶ್ಯಕತೆ ಕಡಿಮೆ. 

* ಅಕಾಲದಲ್ಲೇ ಬೆಳೆಗಳನ್ನು ಬೆಳೆಯಲು ಸಾಧ್ಯವಿರುವುದರಿಂದ ಹೆಚ್ಚಿನ ಆದಾಯ ಪಡೆಯಬಹುದು. 

* ಕೀಟಗಳಿಂದ ಹಾಗೂ ರೋಗಗಳಿಂದ ಬೆಳೆಗಳನ್ನು ಸಂರಕ್ಷಣೆ ಮಾಡಬಹುದು.

ಆಧುನಿಕ ತೋಟಗಾರಿಕೆಯಲ್ಲಿ ಹಸಿರುಮನೆ ತಂತ್ರಜ್ಞಾನ ಬಳಕೆ: ಆಧುನಿಕ ತೋಟಗಾರಿಕೆಯಲ್ಲಿ ತಾಂತ್ರಿಕತೆಯ ಮೂಲಕ ಉತ್ತಮ ಗುಣಮಟ್ಟದ ಅಧಿಕ ಇಳುವರಿ ಪಡೆಯಲು ಕೈಕೊಳ್ಳಲಾಗುವ  ಎಲ್ಲ ಪದ್ಧತಿಗಳಲ್ಲಿ ಹಸಿರುಮನೆ ತಾಂತ್ರಿಕತೆ ಮೇಲ್ಮಟ್ಟದ್ದಾಗಿದೆ. ಅಲ್ಲದೇ ಕಡಿಮೆ ವೆಚ್ಚದ್ದೂ ಆಗಿದೆ. ಹಸಿರುಮನೆ ತಂತ್ರಜ್ಞಾನವನ್ನು ನಮ್ಮ ದೇಶದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಬಳಸಬಹುದಾಗಿದೆ.

ರಫ್ತು ಮಾರುಕಟ್ಟೆಗೆ ಗುಣಮಟ್ಟದ ಉತ್ಪಾದನೆ: ಭಾರತದಲ್ಲಿ ಉತ್ಪಾದಿಸುವ ಅನೇಕ ತೋಟಗಾರಿಕೆ ಉತ್ಪನ್ನಗಳಿಗೆ ವಿದೇಶಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇರುತ್ತದೆ. ವಿದೇಶಿ ಮಾರುಕಟ್ಟೆಗಳಲ್ಲಿ ನಮ್ಮ ಉತ್ಪನ್ನಗಳಿಗೆ ಹೆಚ್ಚಿನ ಪೈಪೋಟಿ ಸಾಮರ್ಥ್ಯ ಕಲ್ಪಿಸಿಕೊಡಬೇಕಾದರೆ, ಈ ಬೆಳೆಗಳ ಉತ್ಪಾದಕತೆ ಮತ್ತು ಗುಣಮಟ್ಟಗಳನ್ನು ಹೆಚ್ಚಿಸಬೇಕಾಗುತ್ತದೆ ಹಾಗೂ ಅವುಗಳ ಉತ್ಪಾದನಾ ವೆಚ್ಚವನ್ನು ತಗ್ಗಿಸಬೇಕಾಗುವುದು. ಇದು ಹೊರಗಿನ ಅನಿಶ್ಚಿತ ವಾತವರಣದಲ್ಲಿ ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಹಸಿರುಮನೆ ತಾಂತ್ರಿಕತೆ ಸಹಕಾರಿಯಾಗುತ್ತದೆ. ಈ ಹಸಿರುಮನೆ ತಾಂತ್ರಿಕತೆಯಲ್ಲಿ ಹೂ-ಹಣ್ಣು-ತರಕಾರಿಗಳನ್ನು ಸಮರ್ಥವಾಗಿ ಮತ್ತು ಸಮರ್ಪಕವಾಗಿ ಬೆಳೆಯಬಹುದು.

ನಗರ ಮತ್ತು ಪಟ್ಟಣಗಳ ಬೇಡಿಕೆ: ದೊಡ್ಡ ದೊಡ್ಡ ನಗರ ಮತ್ತು ಪಟ್ಟಣಗಳಲ್ಲಿ ತಾಜಾ ತರಕಾರಿ, ಹೂ, ಹಣ್ಣು ಮತ್ತು ಅಲಂಕಾರಿಕ ಗಿಡಗಳಿಗೆ ಬೇಡಿಕೆ ಸದಾ ಇರುತ್ತದೆ. ಆದರೆ ಸಾಕಷ್ಟು ಭೂಮಿಯ ಲಭ್ಯತೆ ಮತ್ತು ಸೂಕ್ತ ವಾತಾವರಣ ಇರುವುದಿಲ್ಲ. ಇಂಥ ಸನ್ನಿವೇಶಗಳಲ್ಲಿ ಲಭ್ಯವಿರುವ ಭೂಮಿಯಲ್ಲಿಯೇ ಹಸಿರುಮನೆ ತಾಂತ್ರಿಕತೆಯ ಮೂಲಕ ಸೂಕ್ತ ವಾತಾವರಣವನ್ನು ನಿರ್ಮಿಸಿಕೊಂಡು ಬೇಡಿಕೆಗೆ ಅನುಗುಣವಾಗಿ ತೋಟಗಾರಿಕೆಯ ಉತ್ಪನ್ನಗಳನ್ನು ಬೆಳೆದು, ಲಾಭವನ್ನು ಹೆಚ್ಚಿಸಿಕೊಳ್ಳಬಹುದು. ಈ ದಿಶೆಯಲ್ಲಿ ಹಸಿರುಮನೆ ತಾಂತ್ರಿಕತೆ ಬಹಳ ಸಹಾಯಕವಾಗಿದೆ.

ಔಷಧಿ ಮತ್ತು ಸುಗಂಧ ಬೆಳೆಗಳ ಬಳಕೆ: ಭಾರತ ಸಾವಿರಾರು ಔಷಧಿ ಮತ್ತು ಸುಗಂಧ ಬೆಳೆಗಳ ತಾಯ್ನಾಡು, ಈ ಬೆಳೆಗಳನ್ನು ಬೆಳೆಯಲು ಅವುಗಳಿಗೆ ಬೇಕಾಗುವ ವಾತಾವರಣವನ್ನು ಸೃಷ್ಟಿಸಿ ಅವುಗಳನ್ನು ಬೆಳೆಯಬೇಕಾಗುತ್ತದೆ. ಇಂಥ ಸಂದರ್ಭಗಳಲ್ಲಿ ಹಸಿರುಮನೆ ತಾಂತ್ರಿಕತೆ ಬಹಳ ಉಪಯುಕ್ತವಾಗುತ್ತದೆ ಅಲ್ಲದೇ ಲಾಭದಾಯಕವೂ ಆಗಿದೆ.

ಹಸಿರು ಮನೆಗಳ ನಿರ್ವಹಣೆ: ಹಸಿರು ಮನೆಗಳಲ್ಲಿ ಉಷ್ಣತೆಯು ಹೊರಗಿನ ಉಷ್ಣತೆಗಿಂತ ೩೦-೧೦೦ ಸೆಂ. ಕಡಿಮೆ ಇರುತ್ತದೆ. ಬೇಸಿಗೆಯಲ್ಲಿ ಹಸಿರುಮನೆಗಳಲ್ಲಿ ಉಷ್ಣತೆಯನ್ನು ಕಡಿಮೆ ಮಾಡುವುದು ನಿರ್ವಹಣೆಯ ಒಂದು ಮುಖ್ಯ ಅಂಶ. ಕಡಿಮೆ ವೆಚ್ಚದ ಹಸಿರು ಮನೆಗಳಲ್ಲಿ ನೈಸರ್ಗಿಕ ಗಾಳಿಯಾಡುವಂತೆ ಮಾಡುವುದರಿಂದ ಉಷ್ಣತೆ ಮತ್ತು ತೇವಾಂಶಗಳನ್ನು ಅವಶ್ಯಕತೆಗೆ ತಕ್ಕಂತೆ ಮಾರ್ಪಡಿಸಲು ಅನುಕೂಲವಾಗುವುದು. ಹಸಿರು ಮನೆಗಳ ಒಳಗೆ ಅಥವಾ ಹೊರಗೆ ನೆರಳಿನ ಪರದೆಯನ್ನು ಉಪಯೋಗಿಸಬಹುದು. ಬೇಸಿಗೆ ಕಾಲದಲ್ಲಿ ತಾಪಮಾನವನ್ನು ಕಡಿಮೆ ಮಾಡಲು ಆಗಾಗ ಬೆಳೆಗಳಿಗೆ ಹನಿ ನೀರಾವರಿ ಮೂಲಕ ನೀರನ್ನು ಕೊಡಬಹುದು ಅಥವಾ ತುಂತುರ ನೀರಾವರಿ ಜೊತೆಗೆ ನೈಸರ್ಗಿಕವಾಗಿ ಗಾಲಿಯಾಡುವಂತೆ ಮಾಡಬೇಕು. ಇದರಿಂದ ಹಸಿರು ಮನೆಗಳಲ್ಲಿ  ತೇವಾಂಶ ಸಹ ಹೆಚ್ಚಾಗಿ, ಉಷ್ಣತಾಪಮಾನವೂ ಕಡಿಮೆಯಾಗುವುದು.

ಹಸಿರುಮನೆಗಳಲ್ಲಿ ವಾಣಿಜ್ಯ ಹೂ-ಹಣ್ಣು-ತರಕಾರಿಗಳನ್ನು ಬೆಳೆಸಲು ಅನುಸರಿಸಬೇಕಾದ ನೀರಾವರಿ ಪದ್ಧತಿ ಹನಿ ನೀರಾವರಿ. ಈ ಪದ್ಧತಿಯಿಂದ ಬೆಳೆಗಳ ಅಗತ್ಯ ಮತ್ತು ಕಾಲಮಾನಕ್ಕೆ ತಕ್ಕಂತೆ ನೀರನ್ನು ಕೊಡಬಹುದು ಮತ್ತು ಹವಾಮಾನದ ವೈಪರೀತ್ಯಗಳನ್ನು ನಿಯಂತ್ರಿಸಬಹುದು. ಅಲ್ಲದೇ ಪೋಷಕಾಂಶಗಳನ್ನು ಪೂರೈಸಬಹುದು. ನೀರನ್ನು ಮಿತವಾಗಿ ಬಳಸಬಹುದು ಮತ್ತು ಅಗತ್ಯವಾದ ಸಸ್ಯ ಪೌಷ್ಠಿಕಾಂಶಗಳ ಸಮತೋಲನವನ್ನೂ ಕಾಯ್ದುಕೊಳ್ಳಬಹುದು. ಅಲ್ಲದೇ ಹೆಚ್ಚು ಇಳುವರಿಯನ್ನು ಪಡೆಯಬಹುದು.

ಹಸಿರು ಮನೆಗಳಲ್ಲಿ ಕೀಟಗಳ ಮತ್ತು ರೋಗಗಳ ಬಾಧೆಯಿಂದ ಬೆಳೆಗಳನ್ನು ಸುಲಭವಾಗಿ ರಕ್ಷಿಸಬಹುದು. ಸಕಾಲದಲ್ಲಿ ಕೀಟನಾಶಕ ಮತ್ತು ರೋಗನಾಶಕ ಔಷಧಿಗಳನ್ನು ಸುಲಭವಾಗಿ ಸಿಂಪಡಿಸಬಹುದು. ಇದರಿಂದ ಗುಣಮಟ್ಟದ ಹಾಗೂ ಅಧಿಕ ಇಳುವರಿಯನ್ನು ಪಡೆಯಲು ಅನುಕೂಲವಾಗುವುದು. ಹೀಗೆ ಹಸಿರುಮನೆ ತಾಂತ್ರಿಕತೆಯ ಮೂಲಕ ಉತ್ಕೃಷ್ಟ ಗುಣಮಟ್ಟದ ಫಸಲು ಮತ್ತು ಅಧಿಕ ಉತ್ಪನ್ನಗಳನ್ನು ಪಡೆಯಬಹುದಾಗಿದೆ. ಅಲ್ಲದೇ ಹೆಚ್ಚು ಲಾಭವನ್ನು ಗಳಿಸಬಹುದು.

ಮಾಹಿತಿ: ರಾಧಾಕೃಷ್ಣ ಹೊಳ್ಳ