ಕೃಷಿಯಲ್ಲೇ ಬದುಕು ಕಂಡ ಶತಾಯುಷಿ ಪಾಪಮ್ಮಾಳ್
ಈ ವರ್ಷದ ಪದ್ಮ ಪ್ರಶಸ್ತಿಗಳು ಘೋಷಣೆಯಾಗಿವೆ. ಹಲವಾರು ಮಂದಿ ಎಲೆ ಮರೆಯ ಕಾಯಿಗಳನ್ನು ಈ ವರ್ಷವೂ ಆಯ್ಕೆ ಸಮಿತಿಯವರು ಹುಡುಕಿ ತೆಗೆದಿದ್ದಾರೆ. ಕರ್ನಾಟಕದ ಖ್ಯಾತ ವೈದ್ಯ, ಲೇಖಕ ಡಾ.ಬಿ.ಎಂ. ಹೆಗ್ಡೆಯವರಿಗೆ ಪದ್ಮ ವಿಭೂಷಣ, ಡಾ. ಚಂದ್ರಶೇಖರ ಕಂಬಾರರಿಗೆ ಪದ್ಮ ಭೂಷಣ, ಜಾನಪದ ಕಲಾವಿದೆ ಮಂಜಮ್ಮ ಜೋಗತಿ, ಸಾಹಿತ್ಯ ಮತ್ತು ಶಿಕ್ಷಣಕ್ಕಾಗಿ ರಂಗಸ್ವಾಮಿ ಕಶ್ಯಪ್, ಕ್ರೀಡೆಯಲ್ಲಿ ತೋರಿದ ಸಾಧನೆಗಾಗಿ ಕೆ.ವೈ.ವೆಂಕಟೇಶ್ ಇವರಿಗೆಲ್ಲಾ ಪ್ರಶಸ್ತಿ ಘೋಷಣೆಯಾಗಿದೆ. ಇಡೀ ಪಟ್ಟಿಯಲ್ಲಿ ಕೆಲವು ರಾಜಕಾರಣಿಗಳನ್ನು ಹೊರತುಪಡಿಸಿದರೆ ಬಹುತೇಕರ ಹೆಸರುಗಳನ್ನು ನಾವು ಕೇಳಿಯೇ ಇರಲಿಲ್ಲ. ಭೋಪಾಲದ ಭೂರಿ ಬಾಯಿ, ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಶ್ರಮಿಸಿದ ಕಲ್ಬೇ ಸಾದಿಕ್, ಎವರೆಸ್ಟ್ ಏರಿದ ಪರ್ವತಾರೋಹಿ ಅನ್ಶು ಜಂಪ್ಸೇನಾ, ಶತಾಯುಷಿ ಕೃಷಿಕ ಮಹಿಳೆ ಪಾಪಮ್ಮಾಳ್, ರಾಜಸ್ಥಾನದ ಸಂಗೀತ ಸಿರಿ ಲಾಖಾ ಖಾನ್, ಉತ್ತರ ಪ್ರದೇಶದ ಹಿರಿಯ ವಿಧ್ವಾಂಸ ಆಚಾರ್ಯ ರಾಮಯತ್ನ ಶುಕ್ಲ, ರಾಜಸ್ಥಾನದ ಜನರ ವೈದ್ಯ ಡಾ.ದಿಲೀಪ್ ಕುಮಾರ್ ಸಿಂಗ್.. ಹೀಗೆ ಪಟ್ಟಿ ಮುಂದುವರೆಯುತ್ತಾ ಹೋಗುತ್ತದೆ.
ನಾವಿಲ್ಲಿ ತಮಿಳುನಾಡು ರಾಜ್ಯದ ಕೃಷಿಕ ಮಹಿಳೆ ಪಾಪಮ್ಮಾಳ್ ಅವರ ಸಾಧನೆಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ತಮಿಳುನಾಡು ರಾಜ್ಯದ ಕೊಯಮುತ್ತೂರಿನ ಬಳಿಯ ತೆಕ್ಕಮಪಟ್ಟಿ ಗ್ರಾಮದ ಮಹಿಳೆ ಪಾಪಮ್ಮಾಳ್. ೧೯೧೪ರಲ್ಲಿ ಜನಿಸಿದ ಪಾಪಮ್ಮಾಳ್ ಬಾಲ್ಯದಲ್ಲೇ ತನ್ನ ತಂದೆ ತಾಯಿಯನ್ನು ಕಳೆದುಕೊಂಡ ನತದೃಷ್ಟೆ. ಆದರೆ ಅವರ ಅಗಲುವಿಕೆಯ ಕೊರತೆಯಾಗದಂತೆ ಇವರನ್ನು ಬೆಳೆಸಿದ್ದು ಅಜ್ಜಿ. ಅಜ್ಜಿಯ ಆಶ್ರಯದಲ್ಲಿ ಬೆಳೆದ ಪಾಪಮ್ಮಾಳ್ ಎರಡನೇ ತರಗತಿಯವರೆಗೆ ಮಾತ್ರ ವಿದ್ಯಾರ್ಜನೆ ಮಾಡಿದ್ದಾರೆ. ಅಜ್ಜಿಯ ನಿಧನದ ನಂತರ ಪಾಪಮ್ಮಾಳ್ ಜೀವನೋಪಾಯಕ್ಕಾಗಿ ಒಂದು ಸಣ್ಣ ಅಂಗಡಿಯನ್ನು ತೆರೆಯುತ್ತಾರೆ. ಅದರಲ್ಲಿ ಬಂದ ಆದಾಯವನ್ನು ಕೂಡಿಟ್ಟು, ಹತ್ತು ಎಕರೆ ಜಾಗವನ್ನು ಖರೀದಿಸುತ್ತಾರೆ. ಪಾಪಮ್ಮಾಳ್ ಅವರಿಗೆ ಮೊದಲಿಂದಲೂ ಕೃಷಿ ಮಾಡಬೇಕೆಂಬ ಆಶೆ ಇತ್ತು. ಅದಕ್ಕಾಗಿ ಈ ಜಮೀನನ್ನು ಮೀಸಲಾಗಿಡುತ್ತಾರೆ. ಮೊದಲಿಗೆ ಹಣ್ಣು, ತರಕಾರಿ ಬೆಳೆದ ಪಾಪಮ್ಮಾಳ್ ನಂತರದ ದಿನಗಳಲ್ಲಿ ಸಾವಯವ ಕೃಷಿಯತ್ತ ಆಕರ್ಷಿತರಾಗುತ್ತಾರೆ.
ತಮಿಳುನಾಡು ಕೃಷಿ ವಿಶ್ವವಿದ್ಯಾನಿಲಯದಿಂದ ಸಾವಯವ ಕೃಷಿಯ ಬಗ್ಗೆ ಅಧಿಕ ಜ್ಞಾನವನ್ನು ಪಡೆದ ಪಾಪಮ್ಮಾಳ್ ಅವುಗಳನ್ನು ತಮ್ಮ ಜಮೀನಿನಲ್ಲಿ ಅಳವಡಿಸಿಕೊಳ್ಳುತ್ತಾರೆ. ಕಳೆದ ೬೦ ವರ್ಷಗಳಿಂದ ಸಾವಯವ ಕೃಷಿಯನ್ನೇ ನಂಬಿಕೊಂಡಿರುವ ಇವರು ತಮ್ಮ ಹೊಲದಲ್ಲಿ ಜೋಳ, ತರಕಾರಿ, ಸಿರಿಧಾನ್ಯಗಳು, ಬೇಳೆ ಕಾಳುಗಳನ್ನು ಬೆಳೆಸುತ್ತಾರೆ. ಇತ್ತೀಚೆಗೆ ವಯೋ ಸಹಜ ಕಾರಣಗಳಿಂದ ಹತ್ತು ಎಕರೆಯನ್ನು ನಿರ್ವಹಿಸುವುದು ಕಷ್ಟಕರ ಎಂದು ಸ್ವಲ್ಪ ಜಾಗವನ್ನು ಮಾರಾಟ ಮಾಡಿದ್ದಾರೆ. ಈಗ ಉಳಿದಿರುವ ಎರಡುವರೆ ಎಕರೆ ಪ್ರದೇಶದಲ್ಲಿ ಕೃಷಿ ಕಾರ್ಯ ನಡೆಯುವುದು ಪಾಪಮ್ಮಾಳ್ ಅವರ ನಿರ್ದೇಶನದಂತೆಯೇ. ಈಗಲೂ ಬೆಳಿಗ್ಗೆ ೫.೩೦ ಏಳುವ ಇವರು ೬ ಗಂಟೆಗೆ ಹೊಲದಲ್ಲಿರುತ್ತಾರಂತೆ. ಈ ದಿನಚರಿಯನ್ನು ಅವರು ಸುಮಾರು ಐದು ದಶಕಗಳಿಂದ ವೃತದಂತೆ ಪಾಲಿಸುತ್ತಾ ಬಂದಿದ್ದಾರೆ.
೧೯೫೮ರಲ್ಲಿ ಪಂಚಾಯತಿ ಕಾಯ್ದೆ ಜಾರಿ ಆದ ಬಳಿಕ ೧೯೫೯ರಲ್ಲಿ ಪಾಪಮ್ಮಾಳ್ ಅವರು ಪಂಚಾಯತಿ ಸದಸ್ಯರಾಗಿಯೂ ಕಾರ್ಯನಿರ್ವಹಣೆ ಮಾಡಿದ್ದಾರೆ. ತಮಿಳುನಾಡು ಕೃಷಿ ವಿವಿಯ ಕಾರ್ಯಕ್ರಮಗಳಲ್ಲಿ ಇವರು ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಅತಿಥಿಯಾಗಿಯೂ ಹಲವಾರು ಸಮಾರಂಭಗಳಲ್ಲಿ ಭಾಗವಹಿಸಿದ್ದಾರೆ. ಸುಮಾರು ಹತ್ತು ವರ್ಷಗಳ ಹಿಂದೆ ಇವರು ತಮ್ಮ ಪತಿಯನ್ನು ಕಳೆದುಕೊಂಡಿದ್ದಾರೆ. ಇವರಿಗೆ ಮೂರು ಮಂದಿ ಹೆಣ್ಣು ಮಕ್ಕಳು ಇದ್ದಾರೆ. ಮೊಮ್ಮಕ್ಕಳೂ ಇದ್ದಾರೆ. ಈಗ ಪಾಪಮ್ಮಾಳ್ ಅವರಿಗೆ ೧೦೫ ವರ್ಷ. ಇವರನ್ನು ತಮಿಳುನಾಡಿನ ಕೃಷಿಯ ದಂತಕಥೆ (ಲೆಜೆಂಡ್) ಎಂದೇ ಕರೆಯುತ್ತಾರೆ. ಇವರಿಗೆ ನೂರು ವರ್ಷ ತುಂಬಿದಾಗ ಇವರ ಜನ್ಮ ಶತಮಾನೋತ್ಸವವನ್ನು ಇಡೀ ಊರೇ ಸಂಭ್ರಮದಿಂದ ಆಚರಿಸಿತ್ತು. ಸುಮಾರು ಮೂರು ಸಾವಿರ ಜನರು ಸೇರಿದ್ದರು.
ಈಗಲೂ ತಮ್ಮ ಇಳಿ ವಯಸ್ಸಿನಲ್ಲಿ ಹೊಲಕ್ಕೆ ತೆರಳುವ ಪಾಪಮ್ಮಾಳ್ ಸಕ್ರಿಯವಾಗಿ ಕೃಷಿ ಕೆಲಸದಲ್ಲಿ ಭಾಗವಹಿಸುತ್ತಾರೆ. ನಿಮ್ಮ ಈ ಲವಲವಿಕೆಗೆ ಕಾರಣವೇನೆಂದು ಕೇಳಿದರೆ ಅವರು ಹೇಳುವುದು ಹೀಗೆ ‘ ನಾನು ಬಾಲ್ಯದಿಂದಲೂ ಮಟನ್ ಕರಿ (ಕುರಿಯ ಪದಾರ್ಥ) ಮತ್ತು ರಾಗಿ ಮುದ್ದೆಯನ್ನು ತಿನ್ನುತ್ತಾ ಬಂದಿದ್ದೇನೆ. ಅದೇ ನನ್ನ ಆರೋಗ್ಯದ ಗುಟ್ಟು’ ಎಂದು ನಗುತ್ತಾ ಹೇಳುತ್ತಾರೆ. ಈಗಲೂ ಈ ಅಜ್ಜಿ ಕನ್ನಡಕ ಬಳಸುವುದಿಲ್ಲ. ಊಟಕ್ಕೆ ಬಾಳೆ ಎಲೆಯನ್ನೇ ಬಳಸುತ್ತಾರೆ. ತಮ್ಮ ಬಟ್ಟೆಯನ್ನು ತಾವೇ ಒಗೆಯುತ್ತಾರೆ, ಪಾತ್ರೆಯನ್ನು ತೊಳೆಯುತ್ತಾರೆ. ಬಹುತೇಕ ಮನೆಯ ಕೆಲಸವನ್ನೆಲ್ಲಾ ತಾವೇ ಸ್ವತಃ ಮಾಡುತ್ತಾರೆ.
ಸಾವಯವ ಕೃಷಿಯಲ್ಲಿಯ ಇವರ ಸಾಧನೆಯನ್ನು ಗಮನಿಸಿದ ಕೇಂದ್ರ ಸರಕಾರ ಇವರಿಗೆ ೨೦೨೧ರ ಸಾಲಿನ ಪದ್ಮಶ್ರೀ ಪ್ರಶಸ್ತಿಯನ್ನು ಘೋಷಿಸಿದೆ. ಶತಾಯುಷಿ ಪಾಪಮ್ಮಾಳ್ ಇನ್ನೂ ಹಲವಾರು ವರ್ಷ ಬದುಕಲಿ, ತಮ್ಮ ಸಾವಯವ ಕೃಷಿ ಜ್ಞಾನವನ್ನು ಇನ್ನಷ್ಟು ಹರಡಲಿ ಎಂಬುದೇ ನಮ್ಮ ಹಾರೈಕೆ.
ಚಿತ್ರ ಕೃಪೆ: ಅಂತರ್ಜಾಲ ತಾಣ 'ದಿ ಬೆಟರ್ ಇಂಡಿಯಾ’