ಕೃಷಿರಂಗದ ತಳಮಳ: ಮೂಲ ಕಾರಣ - ಪರಿಹಾರ

ಕೃಷಿರಂಗದ ತಳಮಳ: ಮೂಲ ಕಾರಣ - ಪರಿಹಾರ

ರೈತರ ಆತ್ಮಹತ್ಯಾ ಸರಣಿ ಎಲ್ಲರನ್ನೂ ಬೆಚ್ಚಿ ಬೀಳಿಸುತ್ತಿದೆ. “ಇದ್ಯಾಕೆ ಇಷ್ಟೊಂದು ಅನ್ನದಾತರು ತಮ್ಮ ಜೀವ ಬಲಿಗೊಡುತ್ತಿದ್ದಾರೆ?” ಎಂಬ ಪ್ರಶ್ನೆಗೆ ಯಾರಲ್ಲಿಯೂ ಸರಿಯಾದ ಉತ್ತರವಿಲ್ಲ.
ರಾಜ್ಯಗಳ ವಿಧಾನಮಂಡಲಗಳಲ್ಲಿ ಮತ್ತು ಸಂಸತ್ತಿನಲ್ಲಿ ರೈತರ ಬಲಿದಾನದ ಬಗ್ಗೆ ನಡೆಯುತ್ತಿರುವ ಚರ್ಚೆಗಳನ್ನು ಗಮನಿಸಿದ್ದೀರಾ? ಅದರಿಂದ ಮೂಡಿ ಬರುವ ಎರಡು ಅಂಶಗಳು: ಒಂದನೆಯದು, ತಾವು ರೈತರ ಪರ ಎಂದು ತೋರಿಸಿಕೊಳ್ಳಲು ಎಲ್ಲ ರಾಜಕೀಯ ಪಕ್ಷಗಳ ತರಾತುರಿ. ಎರಡನೆಯದು, ಜನಪ್ರತಿನಿಧಿಗಳು “ಸುಲಭ ಪರಿಹಾರ”ಗಳನ್ನು ಸೂಚಿಸುತ್ತಿದ್ದಾರೆ ವಿನಃ ಕೃಷಿರಂಗದ ತಳಮಳಗಳ ಮೂಲ ಕಾರಣಗಳಿಗೆ ಉತ್ತರ ಹುಡುಕಲು ಉತ್ಸಾಹ ತೋರುತ್ತಿಲ್ಲ.
ಮಹಾ ಜನಗಣತಿ ೨೦೧೧ರ ಅನುಸಾರ, ಭಾರತದಲ್ಲಿ ಒಟ್ಟು ೨೪.೩೯ ಕುಟುಂಬಗಳಿದ್ದು, ಅವುಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿರುವ ಕುಟುಂಬಗಳ ಸಂಖ್ಯೆ ೧೭.೯೧ ಕೋಟಿ. ಈ ಹಿನ್ನೆಲೆಯಲ್ಲಿ, ಡಿಸೆಂಬರ್ ೨೦೧೪ರಲ್ಲಿ ಪ್ರಕಟವಾದ “ರಾಷ್ಟ್ರೀಯ ಸ್ಯಾಂಪಲ್ ಸರ್ವೆ ಸಂಸ್ಥೆ”ಯ ೭೦ನೇ ಸುತ್ತಿನ “ಕೃಷಿ ಕುಟುಂಬಗಳ ಪರಿಸ್ಥಿತಿಯ ಮೌಲ್ಯಮಾಪನ ಸಮೀಕ್ಷೆ”ಯ ಅಂಕೆಸಂಖ್ಯೆಗಳು ಗಮನಾರ್ಹ. ಇದರ ಪ್ರಕಾರ, ಸುಮಾರು ೯ ಕೋಟಿ ಗ್ರಾಮೀಣ ಕುಟುಂಬಗಳು ಮಾತ್ರ ಲಾಭದಾಯಕ ಕೃಷಿ ಚಟುವಟಿಕೆಗಳಲ್ಲಿ ತೊಡಗಿವೆ. ಈ ಸರ್ವೆ (ಸಮೀಕ್ಷೆ) ಅನುಸಾರ, ಎರಡು ಹೆಕ್ಟೇರ್ ತನಕ ಜಮೀನು ಹೊಂದಿರುವ ರೈತರು (ಸಣ್ಣ ಮತ್ತು ಅತಿಸಣ್ಣ ರೈತರು) ಕೃಷಿಯ (ಬೆಳೆ ಬೆಳೆಸುವಿಕೆ ಮತ್ತು ಹೈನುಗಾರಿಕೆ) ಆದಾಯದಿಂದ, ತಮ್ಮ ಸರಾಸರಿ ತಿಂಗಳ ವೆಚ್ಚವನ್ನೂ ಸರಿದೂಗಿಸಲು ಸಾಧ್ಯವಿಲ್ಲ. ಅಂದರೆ, ೭.೮ ಕೋಟಿ ಕುಟುಂಬಗಳು (ಶೇಕಡಾ ೮೬.೬) ತಮ್ಮ ತಿಂಗಳ ವೆಚ್ಚ ಭರಿಸುವಷ್ಟು ಆದಾಯ ಗಳಿಸುತ್ತಿಲ್ಲ. ಕೃಷಿರಂಗದ ಬಿಕ್ಕಟ್ಟಿನ ಮೂಲ ಇಲ್ಲಿದೆ, ಅಲ್ಲವೇ?
ಬಹುಪಾಲು ಕೃಷಿಕುಟುಂಬಗಳು, ತಮ್ಮ ಆದಾಯ ಹೆಚ್ಚಿಸಿಕೊಳ್ಳಲಿಕ್ಕಾಗಿ ಯಾವುದಾದರೂ ದಿನಗೂಲಿಯ ಕೆಲಸ ಮಾಡುತ್ತಾರೆ ಅಥವಾ ಕೃಷಿಯೇತರ ವ್ಯವಹಾರದಲ್ಲಿ ತೊಡಗುತ್ತಾರೆ. ಆ ಸರ್ವೆ ಬಹಿರಂಗ ಪಡಿಸಿದ ಇನ್ನೊಂದು ವಿಷಯ: ಅವುಗಳಲ್ಲಿ ಒಂದು ಹೆಕ್ಟೇರಿಗಿಂತ ಕಡಿಮೆ ಜಮೀನು ಹೊಂದಿರುವ ೬.೨೬ ಕೋಟಿ ರೈತ ಕುಟುಂಬಗಳಿಗೆ (ಶೇಕಡಾ ೭೦) ಈ ಪೂರಕ ಆದಾಯದಿಂದಲೂ ತಮ್ಮ ತಿಂಗಳ ವೆಚ್ಚ ಸರಿದೂಗಿಸಲು ಸಾಧ್ಯವಾಗುತ್ತಿಲ್ಲ.
ಕೃಷಿರಂಗದ ಸವಾಲುಗಳಿಗೆ ಒಂದು ಉತ್ತರವನ್ನು ಆ ಸರ್ವೆಯ ಫಲಿತಾಂಶಗಳೇ ಸೂಚಿಸುತ್ತಿವೆ. ಎರಡು ಹೆಕ್ಟೇರಿಗಿಂತ ಜಾಸ್ತಿ ಜಮೀನು ಹೊಂದಿರುವ ಕುಟುಂಬಗಳಿಗೆ ಮಾತ್ರ ತಮ್ಮ ತಿಂಗಳ ವೆಚ್ಚಕ್ಕಿಂತ ಹೆಚ್ಚು ಆದಾಯ ಗಳಿಸಲು ಸಾಧ್ಯವಾಗುತ್ತಿದೆ. ಫೆಬ್ರವರಿ ೨೦೧೪ರಲ್ಲಿ ನಬಾರ್ಡ್ ಬಿಡುಗಡೆ ಮಾಡಿದ ಅಧ್ಯಯನ ಪ್ರಬಂಧವೂ ಇದನ್ನೇ ಸೂಚಿಸಿದೆ. ಕಳೆದ ೪೦ ವರುಷಗಳಲ್ಲಿ (೧೯೭೦-೭೧ರಿಂದ ೨೦೧೦-೧೧) ಕೃಷಿ ಜಮೀನಿನ ಸರಾಸರಿ ವಿಸ್ತೀರ್ಣ ೨.೨೮ ಹೆಕ್ಟೇರಿನಿಂದ ೧.೧೬ ಹೆಕ್ಟೇರಿಗೆ ಕುಸಿದಿದೆ. ಇದರಿಂದಾಗಿ ಸಣ್ಣರೈತರ ಸಂಖ್ಯೆ ೫.೬ ಕೋಟಿ ಜಾಸ್ತಿಯಾಗಿದ್ದರೆ ಅತಿಸಣ್ಣ ರೈತರ ಸಂಖ್ಯೆ ೧.೧ ಕೋಟಿ ಜಾಸ್ತಿಯಾಗಿದೆ. ಸಣ್ಣ ಹಿಡುವಳಿಗಳು ಲಾಭದಾಯಕವಲ್ಲ ಎಂಬ ನಬಾರ್ಡ್ ಅಧ್ಯಯನದ ಸೂಚನೆಯನ್ನು ರಾಷ್ಟ್ರೀಯ ಸ್ಯಾಂಪಲ್ ಸರ್ವೆ ಸಂಸ್ಥೆಯ ಸಮೀಕ್ಷೆಯ ಫಲಿತಾಂಶಗಳೂ ಪುಷ್ಟೀಕರಿಸಿವೆ.
ಈಗ ಆಗಬೇಕಾಗಿರುವುದು ಏನು? ಸಣ್ಣ ಹಿಡುವಳಿಗಳನ್ನು ಒಟ್ಟುಗೂಡಿಸಿ, ದೊಡ್ಡ ಹಿಡುವಳಿಗಳನ್ನಾಗಿ ಮಾಡುವುದು. ಆದರೆ, ಇದಕ್ಕೆ ಬೇಕಾದ ರಾಜಕೀಯ ಇಚ್ಛಾಶಕ್ತಿ ಎಲ್ಲಿದೆ? ಆದ್ದರಿಂದ, ರೈತರೇ ಒಟ್ಟುಗೂಡಿ, “ರೈತ ಉತ್ಪಾದಕರ ಕಂಪೆನಿ”ಗಳನ್ನು ಸ್ಥಾಪಿಸುವುದೇ ಈ ಸಮಸ್ಯೆಗೆ ಪರಿಹಾರ ಎನ್ನುತ್ತಾರೆ ಕೃಷಿ ಆರ್ಥಿಕ ತಜ್ನ ವೈ.ಕೆ. ಅಲಗ್. ಹೀಗೆ ಮಾಡಿದಾಗ, ಕೃಷಿ ಭೂಮಿಯ ಒಡೆತನ ರೈತರಲ್ಲೇ ಉಳಿಯುತ್ತದೆ; ಆದರೆ ಒಳಸುರಿಗಳ ಖರೀದಿ ಮತ್ತು ಕೃಷಿ ಉತ್ಪನ್ನಗಳ ಮಾರಾಟದಲ್ಲಿ ರೈತರಿಗೆ ತಮ್ಮ ಸಂಘಟನೆಯಿಂದಾಗಿ ಅನುಕೂಲ.
ಅದೇ ಸರ್ವೆಯ ಫಲಿತಾಂಶಗಳು ಸೂಚಿಸಿದ ಇನ್ನೊಂದು ಪ್ರಧಾನ ಅಂಶ: ಕೃಷಿಕುಟುಂಬಗಳು ಬೆಳೆವಿಮೆ ಮಾಡಿಸಬೇಕಾದ ಜರೂರು. ಯಾರಿಗೂ ಪ್ರಕೃತಿಯ ಮೇಲೆ ನಿಯಂತ್ರಣವಿಲ್ಲ. ಈ ವರುಷದ ಆರಂಭದಲ್ಲಿ ಅಕಾಲಿಕ ಮಳೆಯಿಂದಾದ ಬೆಳೆನಾಶ ವಿಪರೀತ. ಕೆಲವೇ ಕೆಲವು ರೈತರಿಗೆ ಬೆಳೆನಷ್ಟದ ಪರಿಹಾರ ಸಿಕ್ಕಿದೆ. ಉಳಿದವರು ಕಂಗಾಲು. ಈಗ ಪ್ರತಿ ನೂರು ರೈತರಲ್ಲಿ ಇಬ್ಬರು ಮಾತ್ರ ಬೆಳೆವಿಮೆದಾರರೆಂದು ಅಂದಾಜು. ಆದ್ದರಿಂದ, ಹೆಚ್ಚೆಚ್ಚು ರೈತರು ಬೆಳೆವಿಮೆ ಮಾಡಿಸಿಕೊಳ್ಳುವುದು ಸಮಸ್ಯೆ ಎದುರಿಸುವ ಇನ್ನೊಂದು ದಾರಿ. ಅತಿಸಣ್ಣ ರೈತರ ಬೆಳೆ ವಿಮಾ ಕಂತುಗಳಿಗೆ ಸರಕಾರದ ಸಹಾಯಧನವೂ ಅಗತ್ಯ.
ಕೃಷಿರಂಗದ ತಳಮಳಗಳನ್ನು ಪರಿಶೀಲಿಸಿದಾಗ ಎದ್ದು ಕಾಣುವ ಅಂಶ: ಇಂದಿಗೂ ರೈತರು ಕೃಷಿಯ ಒಳಸುರಿಗಳಾದ ಬೀಜ, ಗೊಬ್ಬರ, ನೀರಾವರಿ, ವಿದ್ಯುತ್ ಮತ್ತು ಸಾಲ – ಇವುಗಳಿಗಾಗಿ ಹೆಣಗಬೇಕಾಗಿದೆ. ಈ ನಿಟ್ಟಿನಲ್ಲಿ ಗಮನಿಸ ಬೇಕಾದ ವಿಷಯ: ರೈತರಿಗೆ ನೀರಾವರಿ ಒದಗಿಸಲಿಕ್ಕಾಗಿ ಮಧ್ಯಪ್ರದೇಶ ಪರಿಣಾಮಕಾರಿ ಕೆಲಸ ಮಾಡಿದೆ. ಹಾಗೆಯೇ ರೈತರಿಗೆ ಕೃಷಿಗಾಗಿ ವಿದ್ಯುತ್ ಒದಗಿಸುವಲ್ಲಿ ಹಲವು ರಾಜ್ಯಗಳೂ ಯಶಸ್ವಿಯಾಗಿವೆ. ಅಂದರೆ, ಎಲ್ಲ ಸಮಸ್ಯೆಗಳನ್ನೂ ಪರಿಹರಿಸುವ ದಾರಿಗಳಿವೆ. ಈಗ ಬೇಕಾಗಿರುವುದು: ಸೂಕ್ತ ಯೋಜನೆಗಳು ಮತ್ತು ಅವನ್ನು ಕಾರ್ಯಗತಗೊಳಿಸುವ ವ್ಯವಸ್ಥೆ.
ಸಾವಿರಾರು ಅಸಹಾಯಕ ರೈತರ ಬಲಿದಾನದ ಬಳಿಕವಾದರೂ ನಮ್ಮ ಸರಕಾರ ಮತ್ತು ಆಡಳಿತವರ್ಗ ಈ ನಿಟ್ಟಿನಲ್ಲಿ ಫಲಿತಾಂಶ ನಿರ್ದೇಶಿತ ಕ್ರಮಗಳನ್ನು ಕೈಗೊಳ್ಳುವಂತಾಗಲಿ.